ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ಸಂಸ್ಕರಣ ಘಟಕ ಆರಂಭಕ್ಕೆ ತಾಕೀತು

Last Updated 10 ಜುಲೈ 2012, 7:40 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಡೆಂಗೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ರಕ್ತದ ಕಣ ಬೇರ್ಪಡಿಸಿ ಪ್ಲೆಟ್‌ಲೆಟ್‌ಗಳ ಸಂಗ್ರಹಿಸಿ ಇಡುವ ಇನ್‌ಕ್ಯುಬೇಟರ್ ಘಟಕ ಇಲ್ಲದೇ ಇರುವುದರಿಂದ ಜನತೆ ತೊಂದರೆ ಪಡುವಂತಾಗಿದೆ.
 
ಈ ಘಟಕ ಸ್ಥಾಪನೆಗೆ ಬಿಆರ್‌ಜಿಎಫ್ ಅನುದಾನ ಕಲ್ಪಿಸಿದ್ದರೂ ಸಹ ಆರಂಭಿಸಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ಹಾಗೂ ಜಿಲ್ಲಾ ಯೋಜನಾ ಸಮಿತಿ ಸದಸ್ಯ ಶಾಂತಪ್ಪ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜಿ.ಪಂ ಅಧ್ಯಕ್ಷೆ ತನ್ವೀರಾ ಬಷಿರುದ್ದಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಅನುದಾನ ನಿಧಿ( ಬಿಆರ್‌ಜಿಎಫ್) ಯೋಜನೆಯಡಿ ದೊರಕಿಸಿದ ಅನುದಾನ ಮತ್ತು ಅಭಿವೃದ್ಧಿ ಕೆಲಸಗಳ ಕುರಿತ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಡೆಂಗೆಯಿಂದ ಜನ ನರಳುವುದು ತಪ್ಪಬೇಕು. ತುರ್ತು ಅವರಿಗೆ ಚಿಕಿತ್ಸೆ ದೊರಕಿ ಗುಣಮುಖರಾಗಬೇಕು ಎಂಬ ಉದ್ದೇಶದಿಂದ ಅನುದಾನ ದೊರಕಿಸಲಾಗಿದೆ. ಆದರೆ ಈವರೆಗೂ ರಕ್ತದ ಕಣ ಬೇರ್ಪಡಿಸುವ ಘಟಕ ಆರಂಭಗೊಂಡಿಲ್ಲ. ತಾಂತ್ರಿಕ ಕಾರಣಗಳನ್ನು ಪ್ರಸ್ತಾಪಿಸುತ್ತ ಕಟ್ಟಡ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬೀಳುವಂತೆ ಮಾಡಲಾಗಿದೆ. 4-5 ತಿಂಗಳಾದರೂ ಈ ಸಮಸ್ಯೆಗೆ ಪರಿಹಾರ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮಾತನಾಡಿ, ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಶೀಘ್ರ ಈ ಘಟಕ ಆರಂಭಿಸಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ಈ ರೀತಿಯ ಘಟಕ ನವೋದಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮೇ ತಿಂಗಳಲ್ಲಿ ಆರಂಭಿಸಲಾಗಿದೆ.
 
ಹೀಗಾಗಿ ಡೆಂಗೆ ರೋಗ ಲಕ್ಷ್ಣ ಕಂಡು ಬಂದಲ್ಲಿ ಅಂಥವರಿಗೆ ತಕ್ಷಣ ಚಿಕಿತ್ಸೆ ದೊರಕಿಸಲು ಈ ಘಟಕದಿಂದ ಸಹಾಯ ಆಗುತ್ತಿದೆ. ಈ ಮೊದಲು ಡೆಂಗೆ ಲಕ್ಷಣ ಕಂಡು ಬಂದಾಗ ಬಳ್ಳಾರಿ, ಹೈದರಾಬಾದ್ ಸೇರಿದಂತೆ ಬೇರೆ ಕಡೆ ಹೋಗಬೇಕಾಗುತ್ತಿತ್ತು. ಈಗ ಆ ಸಮಸ್ಯೆ ಇಲ್ಲ ಎಂದು ವಿವರಣೆ ನೀಡಿದರು.

ಕೆಲ ದಿನಗಳಲ್ಲಿ ಭಾರತೀಯ ವೈದ್ಯರ ಸಂಘ, ರಿಮ್ಸ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ರಕ್ತದ ಕಣ ಬೇರ್ಪಡಿಸಿ ಪ್ಲೆಟ್‌ಲೆಟ್ ಸಂಗ್ರಹ ಮಾಡಿಡುವ ಘಟಕ ಸ್ಥಾಪನೆ ಆಗಲಿವೆ ಎಂದು ಭರವಸೆ ನೀಡಿದರು.
ನಮ್ಮೂರು ರಾಯಚೂರು ಕಲ್ಪನೆಗೆ ಸರ್ಕಾರದ ಪ್ರಶಂಸೆ:  ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನ, ಸಮಗ್ರ ಮಾಹಿತಿ, ಅಭಿವೃದ್ಧಿ ಕೆಲಸ ಕಾರ್ಯಗಳ ಪ್ರತಿ ಹಂತದ ವಿವರ ದೊರಕಿಸುವಂಥ `ನಮ್ಮೂರು ರಾಯಚೂರು~ ಎಂಬ ಪರಿಕಲ್ಪನೆಯ ಯೋಜನೆಯನ್ನು ಜಿ.ಪಂ ಸಿದ್ಧಪಡಿಸಿದೆ. ಇದಕ್ಕೆ ರಾಜ್ಯ ಸರ್ಕಾರವು ಪ್ರಶಂಸೆ ವ್ಯಕ್ತಪಡಿಸಿದೆ.

ಅಲ್ಲದೇ ಕೇಂದ್ರ ಗ್ರಾಮೀಣ ಅಭಿವೃದ್ಧಿ ಇಲಾಖೆಗೆ ಈ ಯೋಜನೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟು ಪ್ರಶಸ್ತಿಗೆ ಆಯ್ಕೆಗೆ ಕಳುಹಿಸಲು ಶಿಫಾರಸ್ಸು ಮಾಡಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಜೈನ್ ಹೇಳಿದರು.

ನಮ್ಮೂರು ರಾಯಚೂರು ಯೋಜನೆಯಡಿ ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂಗಳಲ್ಲಿ ಕೈಗೊಳ್ಳಲಾದ ಕಾಮಗಾರಿ ಬಗ್ಗೆ ಛಾಯಾಚಿತ್ರ ಸಮೇತ ವಿವರ ಲಭ್ಯ. ನಕ್ಷೆ, ಸರ್ವೆ, ಹೋಬಳಿ, ತಾಲ್ಲೂಕು, ಗ್ರಾಮ, ಸೇತುವೆ ಹೀಗೆ ಏನೆಲ್ಲ ಮಾಹಿತಿ ಲಭ್ಯವಾಗಲಿದೆ.

ಜಿ.ಪಂನ 32 ಇಲಾಖೆಯಲ್ಲಿ ಯಾವುದೇ ಇಲಾಖೆಗೆ ಸಂಬಂಧಪಟ್ಟ ಕಾಮಗಾರಿ, ಮಾತಿ ಬಗ್ಗೆ ಬೇರೆ ಯಾವುದೇ ಇಲಾಖೆಯು ಮಾಹಿತಿ ಪಡೆಯಬಹುದು. ಈಗ ಈ ಒಂದು ಪ್ರಯತ್ನ ಮಾಡಲಾಗಿದೆ. ಇದು ಮುಂದುವರಿಯಬೇಕು ಎಂಬುದು ತಮ್ಮ ಅಶಯ. ಇಷ್ಟರಲ್ಲಿಯೇ ಈ ಬಗ್ಗೆ ಕಾರ್ಯಾಗಾರ, ವಾಕಿಟಾಕಿ ಕಾರ್ಯವಿಧಾನದ ಬಗ್ಗೆ ತಿಳಿಸಿ ಕೊಡುವುದಾಗಿ ಸಭೆಯಲ್ಲಿ ಸದಸ್ಯರಿಗೆ ಹೇಳಿದರು.

ಸದಸ್ಯ ಅಸ್ಲಂ ಪಾಷಾ ಹಾಗೂ ಕೆಲ ಸದಸ್ಯರು ಜಿಪಂ ಸಿಇಓ ಕಾರ್ಯಕ್ಕೆ ಅಭಿನಂದಿಸಿದರು ಸದಸ್ಯ ಎಚ್.ಬಿ ಮುರಾರಿ ಅವರು, ಈ ಯೋಜನೆ ಬಗ್ಗೆ ಇನ್ನೂ ಪರಿಪೂರ್ಣ ಮಾಹಿತಿ ಮತ್ತು ಕಾರ್ಯವಿಧಾನದ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT