ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಇವರ ಹವ್ಯಾಸ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದುಬಾರಿ ಕಾರು, ಬೈಕ್, ಷೋಕಿ ಬಟ್ಟೆ, ಹೊಸ ಸೌಲಭ್ಯಗಳ ಮೊಬೈಲ್ ಇವುಗಳಲ್ಲೇ ಮುಳುಗಿ ಹೋಗದೇ ಈ ಕಾಲೇಜು ವಿದ್ಯಾರ್ಥಿಗಳು ಸಮಾಜದ ಕುರಿತು ಬದ್ಧತೆ ಪ್ರದರ್ಶಿಸಿದ್ದಾರೆ. ಆರು ತಿಂಗಳಿಗೊಮ್ಮೆ  ಸಾಮೂಹಿಕ ರಕ್ತದಾನ ಮಾಡುತ್ತ ಇತರರಿಗೆ ಮಾದರಿಯಾಗಿದ್ದಾರೆ.
ಅಪ್ಪ- ಅಮ್ಮ ಕೊಡಿಸಿದ ಬೈಕ್, ಸ್ಕೂಟಿಯಲ್ಲಿ ಓಡಾಟ. ಕ್ಲಾಸ್ ಬೋರಾದರೆ ಕಾಲೇಜಿಗೆ ಬಂಕ್... ಸಂಜೆಯಾದೊಡನೆ ಮಾಲ್, ಸಿನಿಮಾ ಹಾಲ್‌ಗೆ ಸುತ್ತಾಟ.

ಇದು ಬೆಂಗಳೂರಿನ ಬಹುಪಾಲು ಕಾಲೇಜು ಹುಡುಗ, ಹುಡುಗಿಯರ ಮೆಚ್ಚಿನ ಹವ್ಯಾಸ. ಇನ್ನು ಕೆಲವರು ಕ್ರಿಕೆಟ್, ಫುಟ್‌ಬಾಲ್, ಟೆನಿಸ್‌ನಂತಹ ಕ್ರೀಡೆಗಳ ಗುಂಗು ಹತ್ತಿಸಿಕೊಂಡಿರುತ್ತಾರೆ. ಮತ್ತೆ ಕೆಲವರು ಪಾಶ್ಚಿಮಾತ್ಯ ಸಂಗೀತ, ಛಾಯಾಗ್ರಹಣ, ಕಲೆಯಂತಹ ಸೃಜನಶೀಲ ಹವ್ಯಾಸಗಳಿಗೆ ಅಂಟಿಕೊಂಡಿರುತ್ತಾರೆ.

 ಆದರೆ, ಬೆಂಗಳೂರು ಹೊರವಲಯದ ಬಿದರಹಳ್ಳಿಯಲ್ಲಿರುವ ಈಸ್ಟ್ ಪಾಯಿಂಟ್ ವಿದ್ಯಾ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಹವ್ಯಾಸವೇ ವಿಭಿನ್ನ. ಅದೇನೆಂದರೆ ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡುವುದು. ಇದೂ ಒಂದು ಹವ್ಯಾಸವೇ ಎಂಬ ಅಚ್ಚರಿ ಮೂಡಬಹುದು.
 
ನಿಜ, ಈ ವಿದ್ಯಾರ್ಥಿಗಳಿಗೆ ರಕ್ತದಾನ ಮಾಡುವುದೆಂದರೆ ಹೆಮ್ಮೆ. ಅಷ್ಟೇ ಖುಷಿ ಕೂಡ. ಇವರು ಐದು ವರ್ಷಗಳಿಂದಲೂ ಕಾಲೇಜಿನ ಆವರಣದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತ ಬಂದಿದ್ದಾರೆ. ವರ್ಷದಲ್ಲಿ ಎರಡು ಬಾರಿ ಶಿಬಿರ ನಡೆಯುತ್ತದೆ.

ಆ ಸಂದರ್ಭಧಲ್ಲಿ ಪಿಯು, ಮತ್ತು ಪದವಿ ವಿದ್ಯಾರ್ಥಿಗಳನ್ನು ಸಹ ತಮ್ಮಂದಿಗೆ ಸೇರಿಸಿಕೊಳ್ಳುತ್ತಾರೆ. ಇವರ ಶಿಬಿರದ ಮುಖ್ಯ ಗುರಿಯೆಂದರೆ ಪ್ರತಿ ಬಾರಿಯೂ 500 ಲೀಟರ್‌ಗಳಿಗೂ ಹೆಚ್ಚು ರಕ್ತವನ್ನು ಸಂಗ್ರಹಿಸುವುದು.

ಕೆಲದಿನಗಳ ಹಿಂದೆ ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ರಕ್ತದಾನ ಶಿಬಿರ ನಡೆಯಿತು. ಎಂ.ಜಿ. ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಸ್.ಎಂ.ವೆಂಕಟಪತಿ ಉದ್ಘಾಟಿಸಿ ಶುಭ ಹಾರೈಸಿದರು.

ಬಳಿಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬಂದು ರಕ್ತ ನೀಡಿದರು. ಕಾಲೇಜಿಗೆ ಹೊಸದಾಗಿ ನೊಂದಣಿಯಾದ ವಿದ್ಯಾರ್ಥಿಗಳು ಮೊದಲು ತಮ್ಮ ತಮ್ಮ ರಕ್ತದ ಗುಂಪನ್ನು ಪರೀಕ್ಷಿಸಿಕೊಂಡರು.

ಅದಕ್ಕೆಂದೇ ಅಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ಅಲ್ಲದೇ ರಕ್ತವನ್ನು ನೀಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಹಣ್ಣು ಮತ್ತು ತಂಪು ಪಾನೀಯ ನೀಡಿ ಪ್ರೋತ್ಸಾಹಿಸಿದರು.

ರಕ್ತವನ್ನು ರೋಟರಿ ಟಿಟಿಕೆ ಬ್ಲಡ್ ಬ್ಯಾಂಕ್ ಮತ್ತು ಬೌರಿಂಗ್ ಆಸ್ಪತ್ರೆ ರಕ್ತನಿಧಿಗೆ ನೀಡಲಾಯಿತು. ಈಸ್ಟ್ ಪಾಯಿಂಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಈ ಹವ್ಯಾಸ ನಿಜಕ್ಕೂ ನಗರದ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT