ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದೊತ್ತಡದ ಕೌತುಕ...

Last Updated 11 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ


 

ನಾ ವೀಗ ನಮ್ಮ ಸಮಾಜದಲ್ಲಿ ಸಾಕಷ್ಟು ಜನ ಬಿಪಿ ಇರುವ ವರನ್ನು ನೋಡುತ್ತಿದ್ದೇವೆ. ಆದರೂ ನಾವು ನೋಡುತ್ತಿರುವುದು ವಾಸ್ತವದ ಮೇಲಂಶ ಮಾತ್ರ. ವಿಜ್ಞಾನಿಗಳ ಪ್ರಕಾರ ಜಗತ್ತಿನ ಜನಸಂಖ್ಯೆಯಲ್ಲಿ  ಅರ್ಧದಷ್ಟು ಜನರಿಗೆ ಬಿಪಿ ಇರುತ್ತದೆ.

- ಬಿಪಿ ಇರುವವರಲ್ಲಿ ಅರ್ಧದಷ್ಟು ರೋಗಿಗಳಿಗೆ ಮಾತ್ರ ಅವರ ಕಾಯಿಲೆ ಬಗ್ಗೆ ತಿಳಿದಿರುತ್ತದೆ.
-ಬಿಪಿ ಇದೆ ಎಂದು ಗೊತ್ತಾಗಿರುವ ಜನರಲ್ಲಿ ಅರ್ಧದಷ್ಟು ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
-ಚಿಕಿತ್ಸೆ ಪಡೆಯುತ್ತಿರುವರಲ್ಲಿ  ಕೇವಲ ಅರ್ಧದಷ್ಟು ರೋಗಿಗಳು ಸರಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಅರ್ಧಂಬರ್ಧ ಚಿಕಿತ್ಸೆ ಪಡೆದು ನಿಲ್ಲಿಸುತ್ತಾರೆ.

ಹೀಗೆ ಬಿಪಿಯ ಬಗ್ಗೆ ಮಾನವನ ಸ್ಪಂದನ ಅಪರಿಪೂರ್ಣ ವಾಗಿರುವುದರಿಂದಲೇ ಬಹಳಷ್ಟು ಜನರು ಏಕಾಏಕಿ ಲಕ್ವ, ಹೃದಯಾಘಾತ, ಮೂತ್ರಪಿಂಡದ ವೈಫಲ್ಯ, ದೃಷ್ಟಿಹೀನತೆ ಮುಂತಾದ ಗಂಭೀರ ತೊಂದರೆಗಳಿಗೆ ತುತ್ತಾಗುತ್ತಿದ್ದಾರೆ.

‘ಬಿಪಿ’ಯ ಬಗ್ಗೆ ಮತ್ತಷ್ಟು ವಿಸ್ಮಯದ ಸಂಗತಿಗಳು ಹೊರಬಿದ್ದಿವೆ. ಅವೇನೆಂದರೆ:
-ಅಪ್ಪನಿಗೆ ಇಲ್ಲದ ಬಿಪಿ ಮಕ್ಕಳಿಗೆ ಇರುತ್ತದೆ.
-ಜಗತ್ತಿನ ಜಂಜಡಗಳಿಂದ ಹೊರ ಉಳಿದ ಸನ್ಯಾಸಿ ಸಾಧು ಸಂತರಿಗೂ ಬಿಪಿ ಇರುತ್ತದೆ.
-ಹಸುಳೆಯನ್ನೂ ಬಿಪಿ ಬಿಟ್ಟಿಲ್ಲ.
-ತೆಳುಮೈನವರಿಗೂ ಬಿಪಿ ಇರುತ್ತದೆ.

ಹೀಗೆ ಬಿಪಿಯ ವಿಸ್ಮಯಗಳನ್ನು ವಿಶ್ಲೇಷಿಸುತ್ತಾ ಹೋದ ಹಾಗೆ ಮತ್ತಷ್ಟು ಅಚ್ಚರಿ ಎದುರಾಗುತ್ತದೆ. ಹೀಗಾಗಿ ನಾವು ಬಿಪಿ ಯಾರಿ ಗಾದರೂ ಯಾವ ವಯಸ್ಸಿನಲ್ಲಿ ಯಾದರೂ ಬರಬಹುದು ಎಂಬ ಅಂಶವನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು. ಪುರಾತನ ಸಂಸ್ಕೃತಿಯನ್ನು ಅನುಸರಿಸುತ್ತಿ ರುವ ಮೂಲನಿವಾಸಿಗಳಲ್ಲಿ ಬಿಪಿ ಸಮಸ್ಯೆ ಬಹಳ ಕನಿಷ್ಠವಾಗಿದೆ.

ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಔದ್ಯೋಗಿಕವಾಗಿ ಬಹಳಷ್ಟು ಮುಂದುವರೆದಿರುವ ದೇಶಗಳಲ್ಲಿ ಪ್ರತಿ ನೂರು ಜನ ವಯಸ್ಕರಲ್ಲಿ ಹತ್ತರಿಂದ ಇಪ್ಪತ್ತು ಜನರಿಗೆ ಬಿಪಿ ಇರುತ್ತದೆ. ಭಾರತದ ಪಟ್ಟಣವಾಸಿ ಪ್ರತಿ ಸಾವಿರ ಮಹಿಳೆಯರಲ್ಲಿ ಎಪ್ಪತ್ತು ಜನ ಮಹಿಳೆಯರಿಗೆ ಬಿಪಿ ಬರುತ್ತದೆ. ಗ್ರಾಮೀಣ ಪ್ರದೇಶದ ಪ್ರತಿ ಸಾವಿರ ಜನರಲ್ಲಿ 30-35 ಜನರಿಗೆ ಬಿಪಿ ಇರುತ್ತದೆ ಎಂದು ಅಧ್ಯಯನದಿಂದ ದೃಢಪಟ್ಟಿದೆ. ಒಂದು ದಿನ ಆಸ್ಪತ್ರೆಯಲ್ಲಿ ಸುಮ್ಮನೆ ಕುಳಿತು ಪೇಪರ್ ಓದುತ್ತಿದ್ದಾಗ ನನ್ನ ಬಾಲ್ಯ ಗೆಳೆಯ, ಅವರ ತಂದೆಯನ್ನು ಕರೆದುಕೊಂಡು ಬಂದ. ‘ಅಪ್ಪಾಜಿ ಆಗಾಗ್ಯೆ ತಲೆಸುತ್ತು ಅಂತಾ ಹೇಳ್ತಿರ್ತಾರೆ.

ಅದ್ಕೆ ಕರೆದುಕೊಂಡು ಬಂದೆ’ ಎಂದು ಹೇಳಿದ. ಬಿಪಿ ಇದ್ದರೂ ಇರಬಹುದೆಂದುಕೊಂಡು ಪರೀಕ್ಷಿಸಿದೆ. ಅವರ ‘ಬಿ. ಪಿ.’ ಸರಿಯಾಗಿಯೇ ಇತ್ತು. ವಿವರವಾಗಿ ಪರೀಕ್ಷಿಸಿದಾಗ ಆ ವೃದ್ಧರಿಗೆ ರಕ್ತಹೀನತೆ ಇರುವುದು ಗೊತ್ತಾಯಿತು. ಇದರಿಂದಲೇ ಅವರಿಗೆ ತಲೆ ಸುತ್ತು ಬರುತ್ತಿದೆ ಎಂದು ಪತ್ತೆ ಹಚ್ಚಿ ಯುಕ್ತ ಔಷಧಿಯನ್ನು ಬರೆದುಕೊಟ್ಟೆ. ಗೆಳೆಯನೊಂದಿಗೆ ಹರಟೆ ಹೊಡೆಯುತ್ತಾ ಹೊಡೆಯುತ್ತಾ ‘ನಿನ್ನ ಬಿ. ಪಿ.ಯನ್ನೂ ನೋಡಿ ಬಿಡ್ತೇನೆ ಬಾ’ ಎಂದು ಕರೆದೆ.

ನನಗೆ ಬಿ.ಪಿ. ಇಲ್ಲ, ಎಂದು ಬಿ.ಪಿ. ಪರೀಕ್ಷೆಯನ್ನು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟ. ಹಾಗೆಲ್ಲಾ ಅಲಕ್ಷ್ಯ ಮಾಡಬಾರದು. ವಯಸ್ಸು ನಲವತ್ತು ಆಯಿತೆಂದರೆ ಆಗಾಗ್ಯೆ ಬಿ. ಪಿ. ಪರೀಕ್ಷೆಯಾಗುವುದು ಉತ್ತಮ ಎಂದು ಪರಿಪರಿಯಾಗಿ ಹೇಳಿ ಬಲವಂತವಾಗಿ ಅವನ ತೋಳಿಗೆ ಬಿ.ಪಿ. ಉಪಕರಣದ ಪಟ್ಟಿಯನ್ನು ಕಟ್ಟೇ ಬಿಟ್ಟೆ. ಅವನ ಬಿ.ಪಿ. ಹೆಚ್ಚಿತ್ತು. ನಾನೇ ಚಕಿತಗೊಳ್ಳುವಷ್ಟು ಹೆಚ್ಚಾಗಿತ್ತು. ಆಗ ಅವನಿಗೆ ಅದನ್ನು ಹೇಳಲಿಲ್ಲ. ದುಂಬಾಲು ಬಿದ್ದು ಅವನ ಬೆನ್ನುಹತ್ತಿ ಮತ್ತೆ ಎರಡು ಸಂದರ್ಭದಲ್ಲಿ ಅವನ ತೋಳಿಗೆ ಬಿ.ಪಿ. ಉಪಕರಣದ ಪಟ್ಟಿಬಿಗಿದು ಅಧಿಕ ರಕ್ತದೊತ್ತಡ ಇರುವುದನ್ನು ಖಚಿತ ಮಾಡಿಕೊಂಡೆ.

ಬೆಳೆವ ಸಿರಿ ಮೊಳಕೆಯಲ್ಲಿ
ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತು ಬಿ.ಪಿ.ಗೆ ಹೆಚ್ಚು ಅನ್ವಯವಾಗುವುದನ್ನು ನಾವು ನೋಡಬಹುದು. ವೈದ್ಯ ಸಂಶೋಧಕರು ಅನೇಕ ಸಾವಿರ ಮಕ್ಕಳ ರಕ್ತದೊತ್ತಡವನ್ನು ನಿಗದಿತ ಕಾಲಕಾಲಕ್ಕೆ ಅಳೆದು ದಾಖಲಿಸಿಕೊಳ್ಳುತ್ತಾ ಬಂದಿದ್ದಾರೆ.

ಮಕ್ಕಳೆಲ್ಲಾ ಬೆಳೆದು ಯುವಕರಾಗಿ ಮುದುಕರಾಗಿ ಸಾಯುವವರೆಗೂ ಈ ಅಧ್ಯಯನ ಮುಂದುವರೆದಿದೆ. ಈ ಅಧ್ಯಯನದಿಂದ ಕಂಡುಬಂದಿರುವ ಅಂಶ ಬಹಳ ಕುತೂಹಲಕಾರಿಯಾಗಿದೆ.

ಬಾಲ್ಯಾವಸ್ಥೆಯಲ್ಲಿ ರಕ್ತದೊತ್ತಡ ಸ್ವಲ್ಪ ಹೆಚ್ಚಾಗಿದ್ದರೆ ಅಂತಹ ಮಕ್ಕಳು ಬೆಳೆದು ದೊಡ್ಡವಾಗುತ್ತಿರುವಂತೆ ರಕ್ತದೊತ್ತಡವು ಹೆಚ್ಚು ಹೆಚ್ಚಾಗುತ್ತಾ ಬರುತ್ತದೆ. ಕೊನೆಗೊಮ್ಮೆ ಇವರು ಅಧಿಕ ರಕ್ತದೊತ್ತಡದ ರೋಗಿಗಳಾಗಿ ಬಿಡುತ್ತಾರೆ.

ಬಾಲ್ಯದಲ್ಲಿ ಬಿ.ಪಿ. ಕಡಿಮೆ ಇದ್ದರೆ ಜೀವಮಾನವಿಡೀ ಇದು ಇದೇ ಜಾಡಿಯಲ್ಲಿ ಮುಂದುವರೆಯುತ್ತದೆ. ಹೀಗೆ ನಾವು ದೊಡ್ಡವರಾದಾಗ ಬರುವ ಬಿಪಿ ಕಾಯಿಲೆಯ ಅಂಬೆಗಾಲಿನ ಗುರುತನ್ನು ಬಾಲ್ಯದಲ್ಲೆ ಕಾಣಬಹುದು. ಈ ಭವಿಷ್ಯ ಜ್ಞಾನದ ಪ್ರಯೋಜನ ಪಡೆದು ನಾವು ಬಾಲ್ಯದಿಂದಲೇ ಮುಂಬರುವ ಬಿಪಿಗೆ ಕಡಿವಾಣ ಹಾಕಿಕೊಳ್ಳಬಹುದು.

ಸಣ್ಣ ವಯಸ್ಸಿನಲ್ಲಿ ಬಿಪಿ ಹೆಚ್ಚಾಗಿದ್ದರೆ ಅದು ಜೀವನದಾದ್ಯಂತ ಹೆಚ್ಚುತ್ತಲೇ ಹೋಗುತ್ತದೆ. ಈ ವಿದ್ಯಮಾನಕ್ಕೆ ಬಿ.ಪಿ.ಯ ಜಾಡು (ಪಥ) ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT