ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆಗಾಗಿ ಕಾದ `ರಕ್ಕಸ'

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

`ಥೇಟ್ ನಿಮ್ಮನ್ನೇ ಹೋಲುವ ನಮಗೆ ರಕ್ಕಸನೆಂಬ ಹೆಸರು. ಇರಲಿ, ಎಂದು ಸುಮ್ಮನಿದ್ದರೆ ಇಷ್ಟು ಉದಾಸೀನವೇ? ಭಾರತದಲ್ಲಿಯೇ ಮೊದಲ ಬಾರಿಗೆ ಬೃಹತ್ ಶಿಲಾಯುಗಕ್ಕೆ ಸೇರಿದ ಮಾನವಾಕೃತಿಯ ಏಕಶಿಲಾ ಸಮುಚ್ಚಯವೆಂದು ಕರೆಯಲಾಗುವ ನಮ್ಮ ಕುಟುಂಬದ ಏಳು ಮಂದಿ ಈಗಾಗಲೇ ಸೂಕ್ತ ರಕ್ಷಣೆ ಇಲ್ಲದೇ ನೆಲಕಚ್ಚಿದ್ದಾರೆ. ಈಗ ಇರುವುದು ಮೂರು ಸಮುಚ್ಚಯ ಮಾತ್ರ. ದಯವಿಟ್ಟು ನಮ್ಮನ್ನು ರಕ್ಷಿಸಿ...'

ಹೀಗೆಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕುಮತಿ ಹಾಗೂ ಹುಲಿಕುಂಟೆ ಗ್ರಾಮಗಳಲ್ಲಿ ಇರುವ `ರಕ್ಕಸ ಕಲ್ಲುಗಳು' ಗೋಗರೆಯುತ್ತಿವೆ. ದಕ್ಷಿಣ ಭಾರತದ ಕೆಲವು ಕಡೆಗಳಲ್ಲಿ ದೊರೆಯುವ ನಿಲುಸುಗಲ್ಲು ಮಾನವಾಕೃತಿ ಹೋಲುವ ಈ ಕಲ್ಲುಗಳಿಗೆ ಸಮಗಟ್ಟಲಾರವು ಎಂಬುದು ಪುರಾತತ್ವ ಇಲಾಖೆಯ ತಜ್ಞರ ಅಭಿಪ್ರಾಯ. ಆದರೆ ಇಂತಹ ಅಪರೂಪದ ಮಾನವಾಕೃತಿಯ ಏಕ ಶಿಲಾ ಸಮುಚ್ಚಯಗಳು ಉಪೇಕ್ಷೆಗೆ ಒಳಗಾಗಿದೆ. ಇದೇ ಕಾರಣಕ್ಕೆ ಈಗಾಗಲೇ ಏಳು ಸಮುಚ್ಚಯಗಳು ನೆಲಕಚ್ಚಿವೆ.

ಕುಮತಿ ಗ್ರಾಮದ ಕೆರೆ ದಂಡೆಯ ಉತ್ತರಕ್ಕೆ ಅರ್ಧ ಕಿ.ಮೀ ದೂರದ ಕೆ.ಎಂ ತಿಪ್ಪೇರುದ್ರಯ್ಯ ಎಂಬುವರ ಜಮೀನಿನಲ್ಲಿ ಎರಡು ಹಾಗೂ ಪಕ್ಕದ ಹುಲಿಕುಂಟೆ ಗ್ರಾಮದ ವಾಯುವ್ಯ ಭಾಗಕ್ಕೆ ಸುಮಾರು 2 ಕಿ.ಮೀ ದೂರದಲ್ಲಿರುವ ಹರಿಜನ ಬೋರಕ್ಕ ಎಂಬುವವರ ಜಮೀನಿನಲ್ಲಿ ಒಂದು ಮಾನವಾಕೃತಿಯ ಏಕಶಿಲಾ ಸಮುಚ್ಚಯಗಳು ಸುಸ್ಥಿತಿಯಲ್ಲಿವೆ. ಇವುಗಳನ್ನು ಸ್ಥಳೀಯವಾಗಿ ದೊರೆಯುವ ಗ್ರಾನೈಟ್ ಶಿಲೆಯ ಅಗಲವಾದ ಶಿಲಾಫಲಕವನ್ನು ಉಪಯೋಗಿಸಿ ಮಾಡಲಾಗಿದೆ.

ಸುಸ್ಥಿತಿಯಲ್ಲಿರುವ ಶಿಲ್ಪಗಳಲ್ಲಿ ಎಡಭಾಗದ ಶಿಲ್ಪದ ಸೊಂಟ ಭಾಗ ಚಿಕ್ಕದಾಗಿದ್ದು, ಅದರ ಕೆಳಗಿನ ಭಾಗ ದಪ್ಪವಾಗಿದೆ. ಬಲಭಾಗದ ಶಿಲ್ಪಕ್ಕಿಂತ ಇದು ಎತ್ತರದಲ್ಲಿ ಕಡಿಮೆ ಇದೆ. ಆದರೆ ಬಲಭಾಗದ ಶಿಲ್ಪವು ಎತ್ತರವಾಗಿದ್ದು, ಸೊಂಟದ ಭಾಗ ದಪ್ಪವಾಗಿದೆ. ಹೀಗಾಗಿ ಇವು ಸ್ತ್ರೀ ಪುರುಷರ ಮಾನವಾಕೃತಿಗಳಿರಬಹುದೆಂಬ ನಿರ್ಧಾರಕ್ಕೆ ಬರಬಹುದಾಗಿದೆ. ಈ ಶಿಲ್ಪಗಳ ಅಳತೆಗಳತ್ತ ಗಮನ ಹರಿಸಿದರೆ ಎಡಭಾಗದ ಶಿಲ್ಪವು 3.02 ಮೀ ಎತ್ತರವಿದ್ದು, ಅದರ ಎದೆ ಭಾಗದ ಅಗಲ 2.42 ಮೀ ಇದೆ. ಅಗಲ ಅಲ್ಲದೆ ಇದರ ತಳಭಾಗ 1.46 ಮೀ ಅಳತೆ ಹೊಂದಿದೆ. ಅದೇ ರೀತಿ ಬಲಭಾಗದ ಶಿಲ್ಪದ ಎತ್ತರ 3.07 ಮೀ ಅಗಲ 3.36 ಮೀ ಇರುತ್ತದೆ.

ಜನಪದ ನಂಬಿಕೆ
ಸ್ಥಳೀಯರು ಇವುಗಳನ್ನು ರಕ್ಷಸ ಕಲ್ಲು, ರಾಕ್ಷಸ ಕಲ್ಲು, ರಕ್ಷಿಸಿ ಕಲ್ಲುಗಳೆಂದೂ, ಇವುಗಳಿರುವ ಸ್ಥಳವನ್ನು ರಕ್ಷಸ ಮಟ್ಟಿ, ರಕ್ಷಿಸಿಮಟ್ಟಿ ಎನ್ನುತ್ತಾರೆ. ಕುಮತಿ ಜನರು ಹಬ್ಬದ ದಿನಗಳಲ್ಲಿ ಎಡೆ ಇಟ್ಟು ಪೂಜಿಸುವ ಪರಿಪಾಠವಿದೆ. ಅನ್ನಸಂತರ್ಪಣೆಯೂ ನಡೆಯುತ್ತದೆ.
`ಶ್ರಿ ನುಂಕೇಮಲೆ ಸಿದ್ದೇಶ್ವರ ಎಂಬ ದೇವತಾ ಪುರುಷ ಈ ಮಾರ್ಗವಾಗಿ ಬೇಟೆಗಾಗಿ ಬಂದಾಗ ರಕ್ಕಸರು ಅಡ್ಡಿಪಡಿಸಿದರು. ಸಿಟ್ಟಿಗೆದ್ದ ನುಂಕಪ್ಪ ಅವರನ್ನು ಕಲ್ಲುಗಳಾಗುವಂತೆ ಶಾಪ ಕೊಟ್ಟ. ಹಾಗಾಗಿ ಅವರೆಲ್ಲಾ ಕಲ್ಲುಗಳಾದರು. ಇದರಿಂದ ಇದು ರಕ್ಕಸಕಲ್ಲು ಆಯಿತು' ಎನ್ನುವುದು ಜನಪದ ಮಾತು.

ನುಂಕಪ್ಪ ಬೃಹತ್ ಶಿಲಾಯುಗದ ಪ್ರಮುಖ ವ್ಯಕ್ತಿಯಾಗಿರಬಹುದು, ಕುಮತಿ, ಹುಲಿಕುಂಟೆ ಪ್ರದೇಶಗಳಲ್ಲಿ ಆತ ಬೇಟೆಗಾಗಿ ಬಂದಿರಬೇಕು, ಅಲ್ಲಿರುವ ಜನರು ಹೊಸ ಮನುಷ್ಯರೊಂದಿಗೆ ಹೋರಾಟಕ್ಕೆ ಇಳಿದಿರಬೇಕು, ಬಲಿಷ್ಠನಾದ ನುಂಕೇಶ್ವರ ಎಲ್ಲರನ್ನೂ ಕೊಂದಿರಬೇಕು, ಎಷ್ಟು ಜನ ಸತ್ತರೋ ಅವರೆಲ್ಲರ ಸ್ಮರಣೆಗೆ ಮಾನವಾಕಾರದ ಶಿಲ್ಪಗಳನ್ನು ನಿಲ್ಲಿಸಿರಬೇಕು' ಎನ್ನುವುದು ಇನ್ನು ಕೆಲವರ ಮಾತು.

`ಬೃಹತ್ ಶಿಲಾಯುಗ ಕಾಲದ ಜನರು ಸತ್ತಾಗ ಸಮಾಧಿ ಮಾಡುವ ವಿಧಾನಗಳಲ್ಲಿ ಇದೊಂದಾಗಿದೆ. ತಮ್ಮ ಗುಂಪಿನ ಹಿರಿಯರು ಸತ್ತಾಗ ಅವರ ನೆನಪಿನಲ್ಲಿ ಸ್ಮಾರಕವಾಗಿ ಅದೇ ಆಕಾರದಲ್ಲಿ ನಿಲ್ಲಿಸಿರಬೇಕು. ಇದು ಕಬ್ಬಿಣ ಯುಗದ ಧಾರ್ಮಿಕ ಹಾಗೂ ಸಾಮಾಜಿಕ ನಂಬಿಕೆಗಳಲ್ಲಿ ಒಂದಾಗಿರಬೇಕು' ಎನ್ನುತ್ತಾರೆ ಸಂಶೋಧಕ ಡಾ.ಹೆಚ್ ತಿಪ್ಪೆಸ್ವಾಮಿ. ಇದನ್ನು 1996ರಲ್ಲಿ ಪುರಾತತ್ವ ಇಲಾಖೆಯ ಬೆಂಗಳೂರು ಶಾಖೆಯ ಕೆ.ವಿ ಪೂಣಚ್ಚ, ಎಂ.ನರಸಿಂಹನ್‌ರವರ ನೇತೃತ್ವದಲ್ಲಿನ ತಂಡ ಹಮ್ಮಿಕೊಂಡಿದ್ದ ಸಮೀಕ್ಷೆಯಲ್ಲಿ ಬೆಳಕಿಗೆ ತರಲಾಗಿದೆ.

1998ರಲ್ಲಿ ಡಾ.ಎಚ್. ತಿಪ್ಪೆಸ್ವಾಮಿ ಮತ್ತು ಭೀಮಸಮುದ್ರ ರಂಗನಾಥ್ ನೇತೃತ್ವದ ತಂಡ ಹುಲಿಕುಂಟೆಯಲ್ಲಿ ನಡೆಸಿದ ಅನ್ವೇಷಣೆ ವೇಳೆ ಈ ನೆಲೆಗಳನ್ನು ಜಗತ್ತಿಗೆ ಪರಿಚಯಿಸಿದರು. ಅಂದೇ ಈ ನೆಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ದುರದೃಷ್ಟವಶಾತ್ ವರ್ಷಗಳೇ ಕಳೆದರೂ ಇವುಗಳನ್ನು ಸಂರಕ್ಷಿಸುವತ್ತ ಯಾವ ಪ್ರಯತ್ನವೂ ನಡೆದಿಲ್ಲ. ಉಪೇಕ್ಷೆಗೆ ಒಳಗಾಗಿ, ಅಳಿದು ಉಳಿದ ಈ ರಕ್ಷಸ ಕಲ್ಲುಗಳಿಗೆ ರಕ್ಷಣೆ ನೀಡುವ ಕೆಲಸವಾಗಬೇಕೆಂಬುವುದು ಹಲವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT