ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜಾಕಾರರ ದಬ್ಬಾಳಿಕೆ ‘ಆಪರೇಷನ್‌ ಪೋಲೊ’

Last Updated 17 ಸೆಪ್ಟೆಂಬರ್ 2013, 6:40 IST
ಅಕ್ಷರ ಗಾತ್ರ

ಬಸವಕಲ್ಯಾಣ: ಹೈದರಾಬಾದ್‌ ಕರ್ನಾಟಕ ಭಾಗದಲ್ಲಿನ ವೃದ್ಧರಿಗೆ ವಯಸ್ಸು ಎಷ್ಟೆಂದು ಕೇಳಿದರೆ ‘ಪೊಲೀಸ್ ಯಾಕ್ಶನ್‌ದಾಗ ನಾನು ಇಪ್ಪತ್ತು ವರ್ಷಿನಾವ ಇದ್ದ ನೋಡ್ರಿ’ ಎಂದು ಸಹಜವಾಗಿ ಹೇಳುತ್ತಾರೆ. ಇಂದಿನವರಿಗೆ ಈ ಯಾಕ್ಶನ್‌ ಬಗ್ಗೆ ಅಷ್ಟೊಂದು ಗೊತ್ತಿರದಿದ್ದರೂ ಭಾರತೀಯ ಸೇನೆಯು ಹೈದರಾಬಾದ್‌ ನಿಜಾಮನ ವಿರುದ್ಧ ನಡೆಸಿದ ‘ಆಪರೇಷನ್‌ ಪೋಲೊ’ ಎಂಬ ಕಾರ್ಯಾಚರಣೆ ಹಿರಿಯರ ಮನಸ್ಸಿನಲ್ಲಿ ಮಾತ್ರ ಅಚ್ಚಳಿಯದೆ ಉಳಿದಿದೆ.

ಭಾರತಕ್ಕೆ 1947ರಲ್ಲಿ  ಸ್ವಾತಂತ್ರ್ಯ ದೊರೆತರೂ  ಹೈದರಾಬಾದ್‌ ಸಂಸ್ಥಾನದ ನಿಜಾಮ ಮಾತ್ರ ಒಕ್ಕೂಟ­ದಲ್ಲಿ ವಿಲೀನಗೊಳ್ಳಲು ಒಪ್ಪಲಿಲ್ಲ. ಈ ಕಾರಣ  ಕರ್ನಾಟಕದ ಗುಲ್ಬರ್ಗ ವಿಭಾಗದ ಜಿಲ್ಲೆಗಳು, ಮಹಾರಾಷ್ಟ್ರದ ಲಾತೂರ್‌, ಉಸ್ಮಾನಾಬಾದ್‌, ಆಂಧ್ರದ ತೆಲಂಗಾಣಾ ನಿಜಾಮ ಆಡಳಿತ­ದಲ್ಲಿಯೇ ಉಳಿಯಿತು. ಮೇಲಾಗಿ ಪಾಕಿಸ್ತಾನದಂತೆ ಹೈದರಾಬಾದ್‌ನ್ನು ಪ್ರತ್ಯೇಕಗೊಳಿಸಲು ಪಟ್ಟು ಹಿಡಿದಿದ್ದ ವಕೀಲ ಕಾಸಿಂ ರಜ್ವಿ ರಜಾ­ಕಾರರ ಸಂಘಟನೆ ಮೂಲಕ ದಬ್ಬಾಳಿಕೆ ಆರಂಭಿಸಿದ. ಪರ­ಧರ್ಮೀಯರ ಕೊಲೆ, ಸುಲಿಗೆ ನಡೆಯುವುದು ಹೆಚ್ಚಿತು.

ಈ ಅನ್ಯಾಯ ಕೆಲವರಿಗೆ ಸಹಿಸಲಾಗಲಿಲ್ಲ. ಹೀಗೆ ವಿರೋಧಿಸಿದ ಕಾರಣಕ್ಕಾಗಿಯೇ ಗುಂಜೇಟಿಯ ವೇದ­ಪ್ರಕಾಶ ಮತ್ತು ಬಸವಕಲ್ಯಾಣದ ಧರ್ಮಪ್ರಕಾಶ ಎಂಬ ಆರ್ಯ ಸಮಾಜದ ಅನುಯಾಯಿಗಳನ್ನು ರಜಾ­ಕಾರರು ಕೊಂದರು. ಗೋರಟಾದಲ್ಲಿನ ಹತ್ಯಾಕಾಂಡದ ಬಗ್ಗೆ ಕೇಂದ್ರದ ಗೃಹ ಮಂತ್ರಿಗಳಿಗೆ ವರದಿ ಕಳುಹಿಸಲಾಗಿತ್ತು. ಹೈದರಾಬಾದ್‌ನಲ್ಲಿ ಭಾರತ ಸರ್ಕಾರ ನೇಮಿಸಿದ್ದ  ಏಜೆಂಟ್‌ ಜನರಲ್‌ ಕೆ.ಎಂ.ಮುನ್ಶಿಯವರು ಸ್ವತಃ ಗೋರಟಾ ಗ್ರಾಮಕ್ಕೆ ಭೇಟಿ ನೀಡಿ ತನ್ನೆದುರಲ್ಲಿಯೇ ‘ಪೊಲೀಸ್‌ ಪಂಚನಾಮೆ’ ಮಾಡಿ­ಸಿದ್ದರು.

‘17 ಮೇ 1948ರಂದು ಬೆಳಿಗ್ಗೆ 11ಕ್ಕೆ ಗ್ರಾಮಕ್ಕೆ ಹೋಗಿದ್ದಾಗ ಲಕ್ಷ್ಮಿ ಮಂದಿರದ ಎದುರು ಮತ್ತು ಇತರೆಡೆ  ಮೃತದೇಹಗಳು ಬಿದ್ದಿದ್ದವು. ಆಸ್ತಿ ಪಾಸ್ತಿಗೆ ಹಾನಿ ಮಾಡಲಾಗಿತ್ತು. ಬದುಕುಳಿದವರು ಊರು ಬಿಟ್ಟು ಹೋಗಿದ್ದರು. 400 ಮನೆಗಳ ಊರಲ್ಲಿ ಕೇವಲ ಮೂವರು ವೃದ್ಧ ಮಹಿಳೆಯರು ಮಾತ್ರ ರೋದಿಸುತ್ತ ಕುಳಿತಿರುವುದು ಕಂಡು ಬಂತು. ಇಲ್ಲಿ  200 ಜನ ಮೃತಪಟ್ಟಿರುವ ಮತ್ತು 70 ಲಕ್ಷ ರೂಪಾಯಿ ಹಾನಿ ಆಗಿರುವ ಬಗ್ಗೆ ಅಂದಾಜು ಮಾಡಲಾಯಿತು’ ಎಂದು ಮುನ್ಶಿಯವರು  ‘ದಿ ಎಂಡ್‌ ಆಫ್‌ ಅನ್‌ ಇರಾ’ ಎನ್ನುವ ತಾವು ಬರೆದ ಪುಸ್ತಕದಲ್ಲಿ ನಮೂದಿಸಿದ್ದಾರೆ.

ಇಂಥ ಅನ್ಯಾಯ ಕಂಡು ರೋಸಿ ಹೋಗಿದ್ದ ಮುನ್ಶಿಯವರು ರಜಾಕಾರರ ಹಾವಳಿ ತಡೆಗೆ ಏನಾದರೂ ಮಾಡಲೇಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ದರಿಂದಲೇ ‘ಅಪರೇಷನ್‌ ಪೋಲೊ’ ನಡೆಯಿತು. ಹೈದರಾಬಾದ್ ಮೇಲೆ ಸೇನೆಯು ಎಂಟು ಸ್ಥಳಗಳಿಂದ ಏಕಕಾಲಕ್ಕೆ ದಾಳಿ ನಡೆಸಿತಾದರೂ ಮುಖ್ಯ ಕಾರ್ಯಾ­ಚರಣೆಗಾಗಿ ಸೊಲ್ಲಾಪುರ, ಉಮರ್ಗಾ, ಚಂಡಿಕಾಪುರ, ಬಸವಕಲ್ಯಾಣ, ಹುಮನಾಬಾದ್‌ ಮೂಲಕ ಹೋಗುವ ಹೆದ್ದಾರಿ ಆಯ್ಕೆ ಮಾಡಿ­ಕೊಳ್ಳಲಾಯಿತು.

ಹೀಗಾಗಿ ಹೆದ್ದಾರಿ ಪಕ್ಕದ ಊರುಗಳ ಜನರು ಕಣ್ಣೆದುರಲ್ಲಿಯೇ ತೋಫು, ಬಂದೂಕಿನ ಸದ್ದು ಕೇಳುವುದಲ್ಲದೆ ಯುದ್ಧದ ಅನುಭವ ಪಡೆದರು. ಸೇನೆ ಮತ್ತು ರಜಾಕಾರರ ಮಧ್ಯೆ ಗುಂಡಿನ ಕಾಳಗ ನಡೆದು ಎಲ್ಲೆಂದರಲ್ಲಿ ರಾಶಿ ರಾಶಿ ಹೆಣಗಳು ಬಿದ್ದಿರುವುದನ್ನು ನೋಡಿದರು. ‘ಇಡೀ ಒಂದು ದಿನ ರಸ್ತೆಯಿಂದ ರಣಗಾಡಿಗಳು, ಸೈನಿಕರ ವಾಹನಗಳು ಹೋಗಿರುವುದನ್ನು ನಾನು ಮತ್ತು ಗ್ರಾಮಸ್ಥರು ಕಣ್ಣಾರೆ ಕಂಡಿದ್ದೇವೆ’ ಎಂದು ಹೆದ್ದಾರಿ ಪಕ್ಕದ ಚಂಡಿಕಾಪುರದ ಹಿರಿಯರಾದ ತುಳಸಿರಾಮ ಕಾರಬಾರಿ ಹೇಳುತ್ತಾರೆ.

ಸೊಲ್ಲಾಪುರದಿಂದ ಹೊರಟ ಮೇಜರ್‌ ಜನರಲ್‌ ಜೆ.ಎನ್‌.ಚೌಧರಿ ನೇತೃತ್ವದ ಸೇನೆ 13 ಸೆಪ್ಟೆಂಬರ್‌ 1948  ರಂದು ನಿಜಾಮನ ಪ್ರಮುಖ ಕೋಟೆಯಾದ ನಳದುರ್ಗವನ್ನು ವಶಪಡಿಸಿಕೊಂಡಿತು. ನಂತರ ಎರಡು ದಿನ ಮಹಾರಾಷ್ಟ್ರದ ಅಣದೂರ, ಉಮರ್ಗಾ, ತಳಮೋಡ, ತುರೋರಿ, ಮತ್ತು ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಕ್ರಾಸ್‌, ಕಲ್ಯಾಣಿ (ಬಸವಕಲ್ಯಾಣ), ರಾಜೇಶ್ವರ ಮತ್ತು ಹುಮನಾಬಾದ್‌ಗಳಲ್ಲಿ ಭಾರತೀಯ ಸೇನೆಯು ನಿಜಾಮನ ಸೈನ್ಯ ಮತ್ತು ರಜಾಕಾರರಿಂದ ವಿರೋಧ ಎದುರಿ­ಸಬೇಕಾಯಿತು. ಆದರೂ ಭಾರತೀಯ ಸೇನೆಯ ಹತ್ತಿರ ಆಧುನಿಕ ಶಸ್ತ್ರಾಸ್ತ್ರಗಳಿದ್ದ ಕಾರಣ ನಿಜಾಮನ ಪರವಾಗಿದ್ದ ಸಾವಿರಾರು ಜನರು ಪ್ರಾಣ  ತೆತ್ತರು ಎಂದು ಇತಿಹಾಸಕಾರ ಡಾ.ಆನಂದರಾಜ ವರ್ಮಾ ಘಟನೆ­ಯನ್ನು ದಾಖಲಿಸಿದ್ದಾರೆ.

ನೆಲ ಬಾಂಬ್‌ಗಳನ್ನು ಇಟ್ಟು ರಸ್ತೆಯಲ್ಲಿನ ಸೇತುವೆಗಳಿಗೆ ಹಾನಿ ಮಾಡಿ ಯುದ್ಧದ ಟ್ಯಾಂಕರ್‌ಗಳಿಗೆ ಹೋಗಲು ಅಡೆತಡೆ ಸೃಷ್ಟಿಸಿದ್ದರೂ ಭಾರತೀಯ ಸೇನೆ ಕೊನೆಗೆ ಸೆಪ್ಟೆಂಬರ್‌ 17ರಂದು ಹೈದರಾಬಾದ್‌ನ್ನು ಪ್ರವೇಶಿಸಿ ತನ್ನ ಕಾರ್ಯಾಚರಣೆ ಯಶಸ್ವಿಯಾಗಿ ಪೊರೈಸಿತು. ತತ್ಪರಿಣಾಮವಾಗಿ ಹೈದರಾಬಾದ್‌ ಸಂಸ್ಥಾನ ಭಾರತದಲ್ಲಿ ವಿಲೀನ­ಗೊಂಡಿತು.
–ಮಾಣಿಕ ಆರ್‌.ಭುರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT