ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆ ದಿನಗಳಲ್ಲೂ ಕೆಲಸಕ್ಕೆ ಬನ್ನಿ...

Last Updated 3 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಶಹಾಪುರ: ಪ್ರಸಕ್ತ ಬಾರಿ ಕೃಷ್ಣಾ ಭಾಗ್ಯ ಜಲ ನಿಗಮದ ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್ ವಿಭಾಗದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಮಹಾಲಯ ಅಮಾವಾಸ್ಯೆ ಹಾಗೂ ವಿಜಯದಶಮಿ ಕರಾಳ ದಿನವಾಗಿ ಪರಿಣಮಿಸಿದೆ.

ಅ. 5ಹಾಗೂ 6ರಂದು ಸರ್ಕಾರಿ ರಜೆಯಿದ್ದರೂ ಎರಡು ದಿನ  ಕಡ್ಡಾಯವಾಗಿ ಕಚೇರಿಯ ಕೆಲಸಕ್ಕೆ ಆಗಮಿಸಬೇಕೆಂದು  ಭೀಮರಾಯನಗುಡಿಯ ಮುಖ್ಯ ಎಂಜಿನಿಯರ್ ಬಿ.ವೈ.ಜುಮ್ಮಾಳ ವಲಯ ಅಧೀನದ ವೃತ್ತ, ವಿಭಾಗ ಮತ್ತು ಉಪವಿಭಾಗದ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಕಟ್ಟುನಿಟ್ಟಾಗಿ ಸೂಚನೆ ನೀಡುವುದರ ಮೂಲಕ ಸುತ್ತೋಲೆ ಹೊರಡಿಸಿದ್ದಾರೆ.

ಪವಿತ್ರ ಹಬ್ಬವಾಗಿರುವ ವಿಜಯ ದಶಮಿಯನ್ನು ಕುಟುಂಬ ಸಮೇತ ಆಚರಿಸಲು ಬೇರೆ ಜಿಲ್ಲೆ ಹಾಗೂ ತಾಲ್ಲೂಕಿನ ನಿಗಮದ ಸಿಬ್ಬಂದಿ ಪೂರ್ವ ಸಿದ್ಧತೆ ಮಾಡಿಕೊಂಡು ಕೇಂದ್ರಸ್ಥಾನದಿಂದ ರಜೆಯಲ್ಲಿ ತೆರಳಬೇಕು ಎಂದರೆ ಅನಾವಶ್ಯಕವಾಗಿ ಮುಖ್ಯ ಎಂಜಿನಿಯರ್ ಸಿಬ್ಬಂದಿಗೆ ಕಿರುಕುಳ ನೀಡುವ ಸಲುವಾಗಿ ಇಂತಹ ಸುತ್ತೋಲೆಯ ಕ್ರಮದ ಬಗ್ಗೆ  ನಿಗಮದ ಎಂಜಿನಿಯರ್ ಹಾಗೂ ಸಿಬ್ಬಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಹಲವಾರು ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿದ್ದಾರೆ. 36.85ಲಕ್ಷ ವೆಚ್ಚದಲ್ಲಿ ಲ್ಯಾಟರಲ್‌ಗಳಿಗೆ ಗೇಟ್ ಅಳವಡಿಸದೆ ಗುಳುಂ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಷ್ಣಾಪೂರ ಪಾಲನೆ ಪೋಷಣೆ ವಿಭಾಗದ ಪ್ರಬಾರ ಸಹಾಯಕ ಎಂಜಿನಿಯರ್ ಬಸವರಾಜ ವಲ್ಯಾಪುರೆ ಅವರನ್ನು ಅಮಾನತುಗೊಳಿಸಲಾಗಿದೆ.

ಅಲ್ಲದೆ ಕ್ಲೋಜರ್ ಅವಧಿಯ ಸಮಯದಲ್ಲಿ ಕಾಲುವೆ ಕಾಮಗಾರಿಯ ದುರಸ್ಥಿ ಹಾಗೂ ರಿಪೇರಿ ನೆಪದಲ್ಲಿ ಅರೆ ಬರೆ ಕೆಲಸ ಹಾಗೂ ಅಕ್ರಮ ಎಸಗಲಾಗಿದೆ. ಕಚೇರಿಯ ಪೀಠೋಪಕರಣ ಖರೀದಿಯಲ್ಲಿ ಅವ್ಯವಹಾರದ ವಾಸನೆ ಮೂಗಿಗೆ ಬಡಿಯುತ್ತಲಿದೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆಗಾಗಿ ಪ್ರಾಂತ ರೈತ ಸಂಘದ ಅಧ್ಯಕ್ಷ ಎಸ್.ಎಂ.ಸಾಗರ ಹಾಗೂ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ ಲೋಕಾಯುಕ್ತರಿಗೆ ದೂರು ನೀಡಿದ್ದರು ತನಿಖೆ ಚುರುಕುಗೊಂಡ ಕಾರಣ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲೂ ರಜೆಯ ದಿನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ರೈತ ಮುಖಂಡ ಮಲ್ಲಯ್ಯ ಪೊಲ್ಲಂಪಲ್ಲಿ ಆರೋಪಿಸಿದ್ದಾರೆ.

ಒತ್ತಡ: ಕಡ್ಡಾಯವಾಗಿ ರಜೆಯಲ್ಲಿಯೂ ಕರ್ತವ್ಯಕ್ಕೆ ಹಾಜರಾಗಬೇಕೆಂದು ಒತ್ತಡ ಹಾಕಿರುವ ನಿಗಮದ ಮುಖ್ಯ ಎಂಜಿನಿಯರ್ ಕ್ರಮ ಸರಿಯಲ್ಲ. ತಾವು ಮಾಡಿದ ಅಕ್ರಮದ ಕೆಲಸಗಳಿಗೆ ನಾವು ಯಾಕೆ ರಜೆಯಲ್ಲಿ ಕೆಲಸ ನಿರ್ವಹಿಸಬೇಕು. ಅನಾವಶ್ಯಕವಾಗಿ ಸಿಬ್ಬಂದಿಗೆ ತೊಂದರೆ ನೀಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ನಾವು ಕೆಲಸ ನಿರ್ವಹಿಸಲು ಸಿದ್ದರಾಗಿದ್ದೇವೆ. ಮುಖ್ಯ ಎಂಜಿನಿಯರ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಕೆಬಿಜೆಎನ್‌ಎಲ್ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಭೀಮರಾಯನಗುಡಿ ಕೆಲ ಅಧಿಕಾರಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT