ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಕಹಿ ನೆನಪಿನಲ್ಲಿ ಸಿಹಿ ಹುಡುಕುತ್ತಾ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಹಿಂದಿನ ನಾಲ್ಕು ರಣಜಿ ಋತುಗಳಲ್ಲಿ ಕರ್ನಾಟಕ ತಂಡ ನಾಕೌಟ್‌ ಹಂತದಲ್ಲಿ ಸೋಲು ಕಂಡಿತ್ತು ಎಂಬುದನ್ನು ಈ ಮೇಲಿನ ವಿವರಗಳಿಂದ ತಿಳಿಯಬಹುದು. ಈ ಸಲದ ಲೀಗ್‌ ಪಂದ್ಯಗಳಲ್ಲಿ ಸತತ ಐದು ಗೆಲುವು ಪಡೆದು ಕರ್ನಾಟಕ ಉತ್ಸಾಹದಲ್ಲಿದೆ. ಜೊತೆಗೆ ಹೊಸ ವರ್ಷದ ಖುಷಿ.

ಲೀಗ್‌ ಹಂತದಿಂದ ಸರಾಗವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ರಾಜ್ಯ ತಂಡ ಪ್ರಮುಖ ಘಟ್ಟದಲ್ಲಿ ಪದೇ ಪದೇ ಎಡವುತ್ತಿದೆ. ಆದ್ದರಿಂದ 15 ವರ್ಷಗಳಿಂದ ಟ್ರೋಫಿ ಗೆಲ್ಲುವ ಕನಸು ಕನಸಾಗಿಯೇ ಉಳಿದಿದೆ. 2010ರಲ್ಲಿ  ಟ್ರೋಫಿ ಗೆದ್ದೇ ಬಿಟ್ಟರು ಎನ್ನುವ ಆಸೆ ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌್ ಅಂಗಳದಲ್ಲಿ ಮೂಡಿತ್ತು. ಆದರೆ, ಮುಂಬೈ ತಂಡ ಕರ್ನಾಟಕದ ಆಸೆಯನ್ನು ನುಚ್ಚುನೂರು ಮಾಡಿತು. ಇದೇ ರೀತಿ ವಡೋದರ, ಬೆಂಗಳೂರು, ರಾಜಕೋಟ್‌ ಅಂಗಳದಲ್ಲಿಯೂ ಪ್ರಶಸ್ತಿಯ ಸನಿಹ ಬಂದು ರಾಜ್ಯ ತಂಡದವರು ಮುಗ್ಗರಿಸಿದ್ದಾರೆ. ಹಿಂದೆಯೂ ಅನೇಕ ಸಲ ಪ್ರಶಸ್ತಿ ಘಟ್ಟದ ಹಂತದಲ್ಲಿ ಎಡವಿದ ಉದಾಹರಣೆಗಳಿವೆ.

ಕಾಡದಿರಲಿ ನಿರಾಸೆ
ಕ್ರಿಕೆಟ್‌ನಲ್ಲಿನ ಸೋಲು ಗೆಲುವಿನ ಇತಿಹಾಸ, ಭವಿಷ್ಯದ ಸಾಧನೆಗೆ ಅಡ್ಡಿಯಾಗುವುದಿಲ್ಲ. ಅಂಕಿಅಂಶಗಳೇನಿದ್ದರೂ ಆಯಾ ಪಂದ್ಯಕ್ಕಷ್ಟೇ ಸೀಮಿತ ಎನ್ನುವ ಮಾತಿದೆ. ಈ ಮಾತು ಕರ್ನಾಟಕದ ಪಾಲಿಗೆ ನಿಜವಾಗಲಿ. ಒಂದೂವರೆ ದಶಕದಿಂದ ಕೈಗೂಡದ ಕನಸು ನನಸಾಗಲಿ. ಈ ಸಲ ಒಡಿಶಾ, ಹರಿಯಾಣ, ಪಂಜಾಬ್‌, ಮುಂಬೈ ಮತ್ತು ದೆಹಲಿ ಎದುರು ಗೆಲುವು ಪಡೆದಿರುವ ರಾಜ್ಯ ತಂಡ ಜಾರ್ಖಂಡ್‌, ಗುಜರಾತ್‌ ಮತ್ತು ವಿದರ್ಭ ವಿರುದ್ಧ ಡ್ರಾ ಸಾಧಿಸಿತ್ತು. ಒಂದೂ ಪಂದ್ಯದಲ್ಲಿ ಸೋಲು ಕಾಣದೆ ರಾಜ್ಯ ತಂಡ ಎಂಟರ ಘಟ್ಟ ಪ್ರವೇಶಿಸಿದೆ. 1998ರ ರಣಜಿ ಋತುವಿನಲ್ಲಿಯೂ ಕರ್ನಾಟಕ ಸತತ ಐದು ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.

ರಾಜ್ಯ ತಂಡದ ಪಾಲಿಗೆ ಪದೇ ಪದೇ ಕಾಡುತ್ತಿರುವ ಕ್ವಾರ್ಟರ್‌ ಫೈನಲ್‌ ಎಂಬ ಗುಮ್ಮ ಈ ಸಲ ಕಾಡದಿರಲಿ. ಕಳೆದ ವರ್ಷ ಮೀರತ್‌ನಲ್ಲಿ ನಡೆದ ಲೀಗ್‌ ಪಂದ್ಯದಲ್ಲಿ ಉತ್ತರ ಪ್ರದೇಶ ಎದುರು ಕರ್ನಾಟಕ ಡ್ರಾ ಸಾಧಿಸಿತ್ತು. ಈ ಸಲ ಉತ್ತರ ಪ್ರದೇಶದ ವಿರುದ್ಧವೇ ಬೆಂಗಳೂರಿನಲ್ಲಿ  ಕ್ವಾರ್ಟರ್‌್ ಫೈನಲ್‌.

ಮರುಕಳಿಸದಿರಲಿ ಇತಿಹಾಸ
ಎರಡು ವರ್ಷಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹರಿಯಾಣ ಎದುರು ಕ್ವಾರ್ಟರ್‌ ಫೈನಲ್‌ ಪಂದ್ಯ ನಡೆದಿತ್ತು. ಗೆಲ್ಲಲು ಅವಕಾಶವಿದ್ದ ಪಂದ್ಯವನ್ನು ರಾಜ್ಯ ತಂಡದವರು ಕೈಚೆಲ್ಲಿ ಮುಖಭಂಗ ಅನುಭವಿಸಿದ್ದರು. ಆದರೆ, ಈಗ ರಾಜ್ಯ ತಂಡ ಮೊದಲಿಗಿಂತಲೂ ಬಲಿಷ್ಠವಾಗಿದೆ. ಕೆ.ಎಲ್‌. ರಾಹುಲ್‌, ಆರ್‌. ಸಮರ್ಥ್‌, ಶ್ರೇಯಸ್‌ ಗೋಪಾಲ್‌, ರೋನಿತ್‌್ ಮೋರೆ ಅವರಂಥ ಪ್ರತಿಭೆಗಳು ಅರಳಿದ್ದಾರೆ. ಹೋದ ವರ್ಷ ಉತ್ತರ ಪ್ರದೇಶದ ಎದುರು ಪಂದ್ಯವನ್ನಾಡುವ ಮೂಲಕ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಚ್‌.ಎಸ್‌. ಶರತ್‌್ ಒಂದು ವರ್ಷದಲ್ಲಿ ಸಾಕಷ್ಟು ಪಳಗಿದ್ದಾರೆ. ಈ ಎಲ್ಲಾ ಅಂಶಗಳು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಯಶಸ್ಸು ಕಾಣಲು ರಾಜ್ಯ ತಂಡಕ್ಕೆ ಸಹಕಾರಿಯಾಗಬಲ್ಲದು.

ಹೋದ ವರ್ಷ ಲೀಗ್‌ ಹಂತದಲ್ಲಿ ಕರ್ನಾಟಕ ತಂಡಕ್ಕೆ ಎದುರಾಗಿದ್ದ ಕಹಿ ಈ ಸಲ ಕಾಡಲಿಲ್ಲ. ಕಳೆದ ಋತುವಿನಲ್ಲಿ ಕೊನೆಯ ಲೀಗ್‌ ಪಂದ್ಯದಲ್ಲಿ ಮಹಾರಾಷ್ಟ್ರ ಎದುರು ಗೆಲುವು ಪಡೆಯುವವರೆಗೂ ರಾಜ್ಯ ತಂಡ ಎಂಟರ ಘಟ್ಟ ತಲುಪುವುದು ಖಚಿತವಾಗಿರಲಿಲ್ಲ. ಸಾಕಷ್ಟು ಒತ್ತಡ ಎದುರಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತ್ತು. ಆದರೆ, ಈ ಋತುವಿನಲ್ಲಿ ‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಮಹತ್ವದ ಘಟ್ಟ ತಲುಪಿದೆ.

ಬಿಸಿಸಿಐ ‘ಆಟ’
ರಣಜಿ ನಡೆಯುವ ವೇಳೆ ಬಲಿಷ್ಠ ತಂಡದ ಒಂದಿಬ್ಬರು ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿ ‘ಬೆಂಚ್‌’ ಕಾಯಿಸುವ ಕುತಂತ್ರವನ್ನು ಬಿಸಿಸಿಐ ಪ್ರತಿ ವರ್ಷವೂ ಮಾಡುತ್ತಲೇ ಬಂದಿದೆ. ಕಳೆದ ವರ್ಷ ಇಂಗ್ಲೆಂಡ್‌್ ಎದುರಿನ ಸರಣಿಗೆ ವಿನಯ್‌ ಕುಮಾರ್‌ ಆಯ್ಕೆಯಾಗಿದ್ದರು. ಆದರೆ, ಅಂತಿಮ ಹನ್ನೊಂದರಲ್ಲಿ ಆಡಲು ಅವಕಾಶವೇ ಸಿಗಲಿಲ್ಲ. ಮುಂಬೈ ಮತ್ತು ಸೌರಾಷ್ಟ್ರ ನಡುವಿನ ಕಳೆದ ವರ್ಷದ ರಣಜಿ ಫೈನಲ್‌ ಪಂದ್ಯಕ್ಕೂ ಇದೇ ರೀತಿ ಆಯಿತು.

ಸೌರಾಷ್ಟ್ರ ತಂಡದ ಪ್ರಮುಖ ಆಟಗಾರರಾದ ಚೇತೇಶ್ವರ ಪೂಜಾರ ಹಾಗೂ ರವೀಂದ್ರ ಜಡೇಜ ಅವರನ್ನು ಇಂಗ್ಲೆಂಡ್‌ ಎದುರಿನ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದ್ದರಿಂದ ಮುಂಬೈ ಎದುರು ಸೌರಾಷ್ಟ್ರ ಸೋಲು ಕಂಡಿತು. ಈ ಸಲ ಸ್ಟುವರ್ಟ್‌್ ಬಿನ್ನಿ ನ್ಯೂಜಿಲೆಂಡ್‌ ಎದುರಿನ ಸರಣಿಗೆ ಆಯ್ಕೆಯಾಗಿದ್ದಾರೆ. ಆದರೆ, ಅಂತಿಮ ಹನ್ನೊಂದರಲ್ಲಿ ಕಾಣಿಸಿಕೊಳ್ಳುವ ಭರವಸೆಯಿಲ್ಲ. ಅದೇನೇ ಇದ್ದರೂ ಬಿನ್ನಿ ಸ್ಥಾನ ತುಂಬಬಲ್ಲ ಸಾಕಷ್ಟು  ಆಟಗಾರರು ರಾಜ್ಯ ತಂಡದಲ್ಲಿದ್ದಾರೆ.
ಚಿತ್ರಗಳು: ಆರ್‌. ಶ್ರೀಕಂಠ ಶರ್ಮ

2010ರ ಜನವರಿ 14.ಮೈಸೂರು.
ಮುಂಬೈ ಎದುರಿನ ಫೈನಲ್‌ ಪಂದ್ಯ. ಕರ್ನಾಟಕಕ್ಕೆ ಸೋಲು
2011ರ ಜನವರಿ 4. ವಡೋದರ.
ಬರೋಡ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ನಿರಾಸೆ
2012ರ ಜನವರಿ 4. ಬೆಂಗಳೂರು.
ಹರಿಯಾಣ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕಕ್ಕೆ ಸೋಲು
2013ರ ಜನವರಿ   10. ರಾಜ್‌ಕೋಟ್‌.
ಕರ್ನಾಟಕ ಮತ್ತು ಸೌರಾಷ್ಟ್ರ ನಡುವಿನ ಕ್ವಾರ್ಟರ್‌ ಫೈನಲ್‌ ಪಂದ್ಯ ಡ್ರಾ. ಇನಿಂಗ್ಸ್‌್ ಮುನ್ನಡೆ ಪಡೆದ ಸೌರಾಷ್ಟ್ರ ಸೆಮಿಫೈನಲ್‌ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT