ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಉತ್ತಮ ಮೊತ್ತದತ್ತ ಕರ್ನಾಟಕ

Last Updated 30 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಯದೇವ್ ಉನದ್ಕತ್, ಸಂದೀಪ್ ಮನಿಯಾರ್, ಎಸ್.ಕೆ ತ್ರಿವೇದಿ... ಹೀಗೆ ಸೌರಾಷ್ಟ್ರದ ಎಲ್ಲಾ ಬೌಲರ್‌ಗಳು ಹೀಗೆ ಬಂದು ಹಾಗೆ ಹೋದರು. ಆದರೆ ಬರಿಗೈಯಲ್ಲಿ ಹೋಗಲಿಲ್ಲ. ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ತುಂಬಿ ಕೊಟ್ಟ `ರನ್~ ಕೊಡವನ್ನು ಹೊತ್ತುಕೊಂಡು ಹೋದರು...!

ಹೌದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳ ನಡುವಿನ ಎಲೈಟ್ `ಎ~ ಗುಂಪಿನ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಎದುರಾಳಿ ತಂಡದ ಬೌಲರ್‌ಗಳನ್ನು ಕರುನಾಡಿನ ಹುಡುಗರು ಚೆನ್ನಾಗಿಯೇ ಚಚ್ಚಿದರು.

ಈ ಪರಿಣಾಮವಾಗಿ ಆತಿಥೇಯ ತಂಡ ಎರಡನೇ ದಿನದಾದ ಬುಧವಾರದ ಅಂತ್ಯಕ್ಕೆ 105 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 369 ರನ್ ಕಲೆ ಹಾಕಿದೆ.

ಎರಡನೇ ದಿನದಾಟದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಗಣೇಶ್ ಸತೀಶ್ ಹಾಗೂ ಕೆ.ಬಿ.ಪವನ್ ಜುಗಲ್ ಬಂದಿ. ಈ ಜೋಡಿ ಎರಡನೇ ವಿಕೆಟ್‌ಗೆ 280 ಎಸೆತಗಳಲ್ಲಿ 154 ರನ್ ಕಲೆ ಹಾಕಿತು. 213 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ನಿಂತು ತಂಡದ ಮೊತ್ತವನ್ನು 250ರ ಸನಿಹ ತಂದಿಟ್ಟರು. ಆಗಲೇ ಕರುನಾಡ ಪಡೆಯಲ್ಲಿ ನೆಮ್ಮದಿಯ ಭಾವ.

ಈ ಜೋಡಿಯ ರನ್ ಗಳಿಕೆಯ ಅಬ್ಬರಕ್ಕೆ ಸಿದ್ಧಾರ್ಥ ತ್ರಿವೇದಿ ಕಡಿವಾಣ ಹಾಕಿದರು. 65.6ನೇ ಓವರ್‌ನಲ್ಲಿ ಗಣೇಶ್ ಅವರ ವಿಕೆಟ್ ಪಡೆದರು. ಆಗ ವಿಕೆಟ್ ಬರ ಅನುಭವಿಸಿದ್ದ ಸೌರಾಷ್ಟ್ರ ಪಡೆಯಲ್ಲಿ ಸಂತಸದ ಅಲೆ...!

ಆದರೆ,  ವಿಕೆಟ್ ಇದ್ದರೂ ಸಹ ಕರ್ನಾಟಕ ರನ್ ಗಳಿಸುವತ್ತ ಹೆಚ್ಚು ಗಮನ ಹರಿಸಲಿಲ್ಲ ಎನ್ನುವುದು ಬೇಸರಕ್ಕೆ ಕಾರಣವಾದ ಸಂಗತಿ. ಆತಿಥೇಯರು ಮೊದಲ ದಿನದಲ್ಲಿ 144 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಆದರೆ, ಬುಧವಾರ 81 ಓವರ್‌ಗಳಲ್ಲಿ ಕಲೆ ಹಾಕಿದ್ದು ಕೇವಲ 262 ರನ್ ಮಾತ್ರ. ಕಳೆದುಕೊಂಡಿದ್ದು ಮೂರು ವಿಕೆಟ್.

ಭೋಜನ ವಿರಾಮದ ವೇಳೆಗೆ 55 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿದ ಪವನ್-ಸತೀಶ್ ಜೋಡಿ, ರನ್ ವೇಗ ಹೆಚ್ಚಿಸುವ ಸಾಹಸ ಮಾಡಿದರು. ಈ ವೇಳೆಗೆ ತಂಡದ ಖಾತೆಗೆ 114 ರನ್‌ಗಳು ಸೇರ್ಪಡೆಯಾಗಿದ್ದವು. ನಂತರ 144 ರನ್‌ಗಳು ಬಂದವು. ಬಂದು ಹೋಗುವ ಶಾಸ್ತ್ರ ಮುಗಿಸಿದ ಅಮಿತ್ ವರ್ಮಾ 42 ಎಸೆತಗಳಲ್ಲಿ 18 ರನ್ ಗಳಿಸಿದ್ದಾಗ ಸಂದೀಪ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆಗ ಎದುರಾಳಿ ಸೌರಾಷ್ಟ್ರ ತನ್ನ `ಕೈ~ ಚಳಕ ತೋರಿಸುವ ಸೂಚನೆ ನೀಡಿತ್ತು. ಇದಕ್ಕೆ ಚಿಪ್ಲಿ ಅವಕಾಶ ನೀಡಲಿಲ್ಲ.

ಮೂರು ವರ್ಷಗಳ ನಂತರ ತಂಡ ಸೇರಿಕೊಂಡ ಚಿಪ್ಲಿ 124 ಎಸೆತಗಳಲ್ಲಿ ಔಟಾಗದೇ 66 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಇದರಲ್ಲಿ ಎಂಟು ಬೌಂಡರಿಗಳು ಸೇರಿವೆ.  ಮನೀಷ್ ಪಾಂಡೆ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ಚಿಪ್ಲಿ ಅವರ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದರು.

ಆಫ್ ಸೈಡ್‌ನಲ್ಲಿ ಚೆಂಡಿಗೆ ಬೌಂಡರಿಯ ಹಾದಿ ತೋರಿಸುವ ಮೂಲಕ 93 ಎಸೆತಗಳಲ್ಲಿ ಅವರು ಅರ್ಧ ಶತಕ ಗಳಿಸಿದರು. ಅವರು ಕೊನೆಯ ಅರ್ಧಶತಕ ಗಳಿಸಿದ್ದು, 2006ರಲ್ಲಿ. ಮತ್ತೊಂದು 50 ರನ್‌ಗಾಗಿ ನಾಲ್ಕು ವರ್ಷಗಳ ಕಾಲ ಕಾಯಬೇಕಾಯಿತು. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಈ ಅರ್ಧಶತಕ ದಾಖಲಾಗಿತ್ತು.

ಪವನ್ ಶತಕ ಬಲ: ಮೊದಲ ದಿನ ಮಂದ ಬೆಳಕಿನ ಕಾರಣ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ಕೆ.ಬಿ.ಪವನ್ ಎರಡನೇ ದಿನ ಬಿರುಸಿನ ಆಟವಾಡಿದರು. ಮೊದಲ ದಿನದಾಟದ ಅಂತ್ಯಕ್ಕೆ 68 ಎಸೆತಗಳಲ್ಲಿ 28 ರನ್ ಗಳಿಸಿದ್ದರು.

ಎರಡನೇ ದಿನ 193 ಎಸೆತಗಳಲ್ಲಿ ಈ ಸಲದ ರಣಜಿ ಟೂರ್ನಿಯಲ್ಲಿ ಎರಡನೇ ಶತಕ ಗಳಿಸಿದರು.  ಮೊದಲ ಶತಕ  (251) ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಬಂದಿತ್ತು. ಒಟ್ಟು 303 ನಿಮಿಷಗಳ ಕಾಲ `ಗೋಡೆ~ಯಂತೆ ಕ್ರೀಸ್‌ಗೆ ಅಂಟಿಕೊಂಡು ಎದುರಾಳಿ ಬೌಲರ್‌ಗಳನ್ನು ಕಕ್ಕಾಬಿಕ್ಕಿಯಾಗಿಸಿದರು. ಆಕರ್ಷಕ ಸ್ಟ್ರೈಟ್ ಡ್ರೈವ್ ಹಾಗೂ ಆಫ್ ಸೈಡ್‌ನಲ್ಲಿ ರನ್ ಗಳಿಕೆಗೆ ಹೆಚ್ಚು ಒತ್ತು ನೀಡಿದ್ದು ಗಮನ ಸೆಳೆದ ಅಂಶ.

99 ರನ್ ಗಳಿಸಿದ್ದಾಗ ಸಂದೀಪ್ ಎಸೆತದ ಚೆಂಡನ್ನು ಬೌಂಡರಿ  ಬಳಿ ಅಟ್ಟಿ ಮೂರು ರನ್ ಗಳಿಸಿದರು. ಈ ಮೂಲಕ ಶತಕ ಗಳಿಸಿ ಕರ್ನಾಟಕ ತಂಡಕ್ಕೆ ರನ್ ಗಳಿಕೆಗೆ ನೆರವಾದರು. 222 ಎಸೆತಗಳಲ್ಲಿ 15 ಬೌಂಡರಿ ಸೇರಿದಂತೆ ಶತಕ ದಾಖಲಿಸಿದರು. ಗಳಿಸಿದ ಒಟ್ಟು 118 ರನ್‌ಗಳಲ್ಲಿ 60 ರನ್‌ಗಳು ಬೌಂಡರಿಯಿಂದಲೇ ಬಂದವು ಎನ್ನುವುದು ವಿಶೇಷ.  

 ಮತ್ತೆ ಮಂದ ಬೆಳಕು: ದಿನದ ಕೊನೆಯ ಅವಧಿಯಲ್ಲಿ ಮತ್ತೆ ಬೆಳಕಿನ ಅಭಾವ ಕಾಡಿತು. ಆದ್ದರಿಂದ 81 ಓವರ್‌ಗಳ ಆಟ ಮಾತ್ರ ನಡೆಯಿತು.

ಸ್ಕೋರು ವಿವರ
ಕರ್ನಾಟಕ 105 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 369
(ಮೊದಲ ದಿನ 24 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 107)

ಕೆ.ಬಿ. ಪವನ್ ಸಿ ಮತ್ತು ಬಿ. ಸಿದ್ಧಾರ್ಥ ತ್ರಿವೇದಿ  118
ಗಣೇಶ್ ಸತೀಶ್ ಸಿ ಜೋಗಿಯಾನಿ ಬಿ. ಸಿದ್ಧಾರ್ಥ ತ್ರಿವೇದಿ  54
ಭರತ್ ಚಿಪ್ಲಿ  ಬ್ಯಾಟಿಂಗ್  66
ಅಮಿತ್ ವರ್ಮಾ ಎಲ್‌ಬಿಡಬ್ಲ್ಯು ಸಂದೀಪ್ ಮನಿಯಾರ್  18
ಸ್ಟುವರ್ಟ್ ಬಿನ್ನಿ ಬ್ಯಾಟಿಂಗ್  29
ಇತರೆ: ಲೆಗ್ ಬೈ-1, ವೈಡ್-4, ನೋಬಾಲ್ -9  14
ವಿಕೆಟ್ ಪತನ: 1-95 (ಉತ್ತಪ್ಪ; 18.2), 2-249 (ಗಣೇಶ್ ಸತೀಶ್; 65.6), 3-274 (ಪವನ್; 75.3), 4-318 (ಅಮಿತ್; 89.2).
ಬೌಲಿಂಗ್ ವಿವರ: ಜಯದೇವ್ ಉನದ್ಕತ್ 27-2-105-1 (ವೈಡ್-3), ಸಂದೀಪ್ ಮನಿಯಾರ್ 23-2-99-1 ( 8 ನೋಬಾಲ್), ಸಿದ್ಧಾರ್ಥ ತ್ರಿವೇದಿ 24-4-65-2 (1 ನೋಬಾಲ್, 1 ವೈಡ್), ನಯಾನ್ ದೋಶಿ 17-2-66-0, ಪ್ರತೀಕ್ ಮೆಹ್ತಾ 8-1-18-0, ಶಿತಾನ್ಶು ಕೊಟಕ್ 6-1-15-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT