ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕದ ಕನಸಿಗೆ ಹರಿಯಾಣ ಅಡ್ಡಿ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕನಸು ಪುಡಿಯಾಗಿದೆ. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಬೇಕೆಂಬ ಆಸೆ ಈ ಬಾರಿಯೂ ಕೈಗೂಡಲಿಲ್ಲ. ಬುಧವಾರ ಉದ್ಯಾನನಗರಿಯ ಆಗಸದಲ್ಲಿ ಮರೆಯಾದ ಸೂರ್ಯನ ಜೊತೆಗೆ ಕರ್ನಾಟಕದ ಸೆಮಿಫೈನಲ್ ಕನಸೂ ಅಸ್ತಮಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರೇ ದಿನದಲ್ಲಿ ಕೊನೆಗೊಂಡ ಕ್ವಾರ್ಟರ್ ಫೈನಲ್‌ನಲ್ಲಿ ಗಣೇಶ್ ಸತೀಶ್ ಬಳಗದ ವಿರುದ್ಧ ಆರು ವಿಕೆಟ್‌ಗಳ ಸ್ಮರಣೀಯ ಗೆಲುವು ಪಡೆದ ಹರಿಯಾಣ ಸೆಮಿಫೈನಲ್‌ಗೆ ಮುನ್ನಡೆಯಿತು. ಆರು ಬಾರಿಯ ಚಾಂಪಿಯನ್ನರು ತವರು ನೆಲದಲ್ಲಿ ಮುಖಭಂಗ ಅನುಭವಿಸಿದರೆ, ಹರಿಯಾಣ ಎರಡು ದಶಕಗಳ ಬಿಡುವಿನ ಬಳಿಕ ನಾಲ್ಕರಘಟ್ಟಕ್ಕೆ ರಹದಾರಿ ಪಡೆಯಿತು.

ಅಮಿತ್ ಮಿಶ್ರಾ ಬಳಗ ಕರ್ನಾಟಕ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 262 ರನ್‌ಗಳಿಗೆ ನಿಯಂತ್ರಿಸಿ ಗೆಲುವಿಗೆ 142 ರನ್‌ಗಳ ಸುಲಭ ಗುರಿ ಪಡೆಯಿತು. ಆ ಬಳಿಕ 36.2 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 144 ರನ್ ಗಳಿಸಿ ಜಯ ಸಾಧಿಸಿತು.

ಪ್ರಮುಖ ಬೌಲರ್‌ಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಎಸ್. ಅರವಿಂದ್ ಅಲಭ್ಯರಾದ ಕಾರಣ ಕರ್ನಾಟಕದ ಗೆಲುವಿನ ಸಾಧ್ಯತೆ ಬ್ಯಾಟ್ಸ್‌ಮನ್‌ಗಳನ್ನು ಅವಲಂಬಿಸಿತ್ತು. ಆದರೆ ಅತಿಮಹತ್ವದ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಮಿಂಚದೇ ಇದ್ದುದು ಸೋಲಿಗೆ ಕಾರಣ ಎನಿಸಿತು.

ರಾಹುಲ್ ದೆವಾನ್ (25, 43 ಎಸೆತ) ಹಾಗೂ ನಿತಿನ್ ಸೈನಿ  (52, 70 ಎಸೆತ, 8 ಬೌಂ) ಮೊದಲ ವಿಕೆಟ್‌ಗೆ 75 ರನ್ ಸೇರಿಸಿ ಹರಿಯಾಣ ತಂಡದ ಗೆಲುವಿಗೆ ಅಗತ್ಯವಿದ್ದ ಬುನಾದಿ ಹಾಕಿಕೊಟ್ಟರು. ಮೊದಲ ಇನಿಂಗ್ಸ್‌ನಲ್ಲೂ ಇವರು ತಂಡಕ್ಕೆ ಉತ್ತಮ ಆರಂಭ ನೀಡಿದ್ದರು.

ಸಿ.ಎಂ. ಗೌತಮ್ ವಿಕೆಟ್ ಹಿಂದುಗಡೆ ಅಲ್ಪ ಚುರುಕುತನ ತೋರಿದ್ದಲ್ಲಿ ಕರ್ನಾಟಕಕ್ಕೆ ಎದುರಾಳಿಗಳ ಮೇಲೆ ಆರಂಭದಲ್ಲೇ ಒತ್ತಡ ಹೇರಬಹುದಿತ್ತು. ಎನ್.ಸಿ. ಅಯ್ಯಪ್ಪ ಓವರ್‌ನಲ್ಲಿ ರಾಹುಲ್ ಬ್ಯಾಟ್‌ಗೆ ತಾಗಿದ್ದ ಚೆಂಡನ್ನು ಹಿಡಿತಕ್ಕೆ ಪಡೆಯಲು ಗೌತಮ್‌ಗೆ ಸಾಧ್ಯವಾಗಿರಲಿಲ್ಲ. ಈ ಸಂದರ್ಭ ಹರಿಯಾಣದ ಮೊತ್ತ ಎರಡಂಕಿ ತಲುಪಿರಲಿಲ್ಲ.

ಚಹಾ ವಿರಾಮದ ವೇಳೆಗೆ ಪ್ರವಾಸಿ ತಂಡ ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿತ್ತು. ಅಂತಿಮ ಅವಧಿಯ ಆರಂಭದಲ್ಲೇ ಕರ್ನಾಟಕಕ್ಕೆ ಯಶ ಲಭಿಸಿತು. ನಿತಿನ್ ಅವರು  ಅಯ್ಯಪ್ಪ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಅಲ್ಪ ಸಮಯದ ಬಳಿಕ ರಾಹುಲ್ ಮರಳಿದರು. ಎಸ್.ಎಲ್. ಅಕ್ಷಯ್ ಎಸೆತದಲ್ಲಿ ಸನ್ನಿ ಸಿಂಗ್ (12) ಮತ್ತು ಸಚಿನ್ ರಾಣಾ (01) ಔಟಾದಾಗ ಕರ್ನಾಟಕಕ್ಕೆ ಗೆಲುವಿನ ಅಲ್ಪ ಆಸೆ ಇತ್ತು. ಆದರೆ ಪ್ರತೀಕ್ ಪವಾರ್ (27) ಮತ್ತು ಪ್ರಿಯಾಂಕ್ ತೆಹ್ಲಾನ್ (25) ಹೆಚ್ಚಿನ ವಿಕೆಟ್ ಬೀಳದಂತೆ ನೋಡಿಕೊಂಡು ಗೆಲುವಿನ ವ್ಯವಹಾರ ಪೂರೈಸಿದರು.

ಸೋಲು ಅನುಭವಿಸಿದ ಕರ್ನಾಟಕದ ಆಟಗಾರರು ಭಾರವಾದ ಹೆಜ್ಜೆಗಳೊಂದಿಗೆ ಪೆವಿಲಿಯನ್‌ಗೆ ಮರಳಿದರು. `ಗೆಲ್ಲಬೇಕಿದ್ದ ಪಂದ್ಯ ಎದುರಾಳಿಗಳಿಗೆ ಬಿಟ್ಟುಕೊಟ್ಟೆವು~ ಎಂಬ ಭಾವನೆ ಎಲ್ಲರ ಮುಖದಲ್ಲೂ ಕಾಣಬಹುದಿತ್ತು.
ಕಳೆದ ಋತುವಿನಲ್ಲಿ ಸೆಮಿಫೈನಲ್‌ನಲ್ಲಿ ಎಡವಿದ್ದ ತಂಡ ಅದಕ್ಕೂ ಮುನ್ನ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಈ ಬಾರಿ ಎಂಟರಘಟ್ಟದಲ್ಲೇ ಮುಗ್ಗರಿಸಿದೆ. 1998-99 ರಲ್ಲಿ ಕರ್ನಾಟಕ ಕೊನೆಯ ಬಾರಿ ರಣಜಿ ಚಾಂಪಿಯನ್ ಎನಿಸಿತ್ತು. 

ಮತ್ತೆ ಬ್ಯಾಟಿಂಗ್ ವೈಫಲ್ಯ: ಎರಡನೇ ಇನಿಂಗ್ಸ್‌ನಲ್ಲೂ ಕರ್ನಾಟಕದ ಬ್ಯಾಟಿಂಗ್ ಕೈಕೊಟ್ಟಿತು. ಮೂರು ವಿಕೆಟ್‌ಗೆ 122 ರನ್‌ಗಳಿಂದ ಆಟ ಆರಂಭಿಸಿದ ತಂಡಕ್ಕೆ ಆರಂಭದಲ್ಲೇ ಆಘಾತ. ದಿನದ ಮೊದಲ ಎಸೆತದಲ್ಲಿ ಅಮಿತ್ ವರ್ಮಾ ಔಟಾದರು. ಹರ್ಷಲ್ ಪಟೇಲ್ ಎಸೆತದಲ್ಲಿ ಅವರು ಎಲ್‌ಬಿ ಬಲೆಗೆ ಬಿದ್ದರು.

ಆದರೆ ಚೆಂಡು ಸ್ಟಂಪ್‌ನಿಂದ ಹೊರಹೋಗುತ್ತಿರುವುದು ಟಿವಿ ರಿಪ್ಲೇನಲ್ಲಿ ಸ್ಪಷ್ಟವಾಗಿತ್ತು. ಅಂಪೈರ್ ಅಮೀಶ್ ಸಾಹಿಬಾ ತಪ್ಪು ತೀರ್ಪು ನೀಡಿದರು. ಅದೃಷ್ಟ ಕರ್ನಾಟಕದ ಪರವಾಗಿಲ್ಲ ಎಂಬುದು ಮೊದಲ ಎಸೆತದಲ್ಲೇ ಸಾಬೀತಾಯಿತು. ಬಳಿಕ ಮರಳಿದ್ದು ನಾಯಕ ಗಣೇಶ್ ಸತೀಶ್ (33). ಸತೀಶ್ ವಿರುದ್ಧ ಅಂಪೈರ್ ಅಸ್ನಾನಿ ನೀಡಿದ ತೀರ್ಪು ಕೂಡಾ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ಸ್ಟುವರ್ಟ್ ಬಿನ್ನಿ (34, 44 ಎಸೆತ, 6 ಬೌಂ) ಕೆಲವೊಂದು ಮನಮೋಹಕ ಬೌಂಡರಿಗಳ ಮೂಲಕ ಮುನ್ನಡೆ ಹೆಚ್ಚಿಸತೊಡಗಿದರು. ಆದರೆ ಮೋಹಿತ್ ಶರ್ಮ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ರಾಹುಲ್‌ಗೆ ಕ್ಯಾಚಿತ್ತರು. ಲೀಗ್‌ನಲ್ಲಿ ಕರ್ನಾಟಕದ ಯಶಸ್ಸಿನ ಓಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಸ್ಟುವರ್ಟ್ ಅವರಿಂದ ಅಂತಹ ಹೊಡೆತವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸ್ಟುವರ್ಟ್ ಮರಳಿದಾಗ ಕರ್ನಾಟಕದ ಡ್ರೆಸಿಂಗ್ ಕೊಠಡಿಯಲ್ಲಿ ಮೌನ ಆವರಿಸಿತು.

ಗೌತಮ್ (16) ವೈಫಲ್ಯ ಮತ್ತೆ ಮುಂದುವರಿಯಿತು. ಐದು ರನ್ ಗಳಿಸಿದ್ದ ಸಂದರ್ಭ ಲಭಿಸಿದ್ದ ಜೀವದಾನದ ಪ್ರಯೋಜನ ಪಡೆಯಲು ಅವರಿಗೆ ಆಗಲಿಲ್ಲ. ಆಶೀಶ್ ಹೂಡಾ ಎಸೆತವನ್ನು ಕೆಣಕಲು ಮುಂದಾದಾಗ ಬ್ಯಾಟ್‌ನ ಅಂಚನ್ನು ಸವರಿಕೊಂಡು ಚೆಂಡು ವಿಕೆಟ್ ಕೀಪರ್ ನಿತಿನ್ ಸೈನಿ ಕೈಸೇರಿತು. ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲಾ ಪೆವಿಲಿಯನ್ ಮರಳಿದಾಗ ಮೊತ್ತ 7 ವಿಕೆಟ್‌ಗೆ 183.

ಕೊನೆಯ ಮೂರು ವಿಕೆಟ್‌ಗಳಿಂದ 79 ರನ್‌ಗಳು ಬಂದ ಕಾರಣ ತಂಡದ ಮೊತ್ತ 250ರ ಗಡಿ ದಾಟಿತು. ಸುನಿಲ್ ರಾಜು (31, 55 ಎಸೆತ) ಮತ್ತು ಕೆ.ಪಿ. ಅಪ್ಪಣ್ಣ (ಅಜೇಯ 31, 43 ಎಸೆತ, 5 ಬೌಂ, 1 ಸಿಕ್ಸರ್) ಅವರ ಆಟ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ `ಪಾಠ~ ಮಾಡಿದ ರೀತಿಯಲ್ಲಿತ್ತು. ಅಂತಿಮ ವಿಕೆಟ್‌ಗೆ ಅಪ್ಪಣ್ಣ ಹಾಗೂ ಎನ್.ಸಿ. ಅಯ್ಯಪ್ಪ 40 ರನ್ ಸೇರಿಸಿದರು.

`ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ~
ಬೆಂಗಳೂರು: `ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತ ಪ್ರದರ್ಶನ ನೀಡಲು ವಿಫಲರಾದದ್ದು ತಂಡದ ಸೋಲಿಗೆ ಕಾರಣ~ ಎಂದು ಕರ್ನಾಟಕದ ಕೋಚ್ ಕೆ. ಜಸ್ವಂತ್ ಪ್ರತಿಕ್ರಿಯಿಸಿದ್ದಾರೆ.

`ಮೊದಲ ಇನಿಂಗ್ಸ್‌ನಲ್ಲಿ 151 ರನ್‌ಗಳಿಗೆ ಆಲೌಟ್ ಆದೆವು. ಆ ಬಳಿಕ ಮರುಹೋರಾಟ ನಡೆಸಲು ಶಕ್ತಿಮೀರಿ ಪ್ರಯತ್ನಿಸಿದರೂ ವಿಫಲರಾದೆವು. ಸೆಮಿಫೈನಲ್ ಕನಸು ಭಗ್ನಗೊಂಡಿರುವುದು ನಿರಾಸೆ ಉಂಟುಮಾಡಿದೆ~ ಎಂದು ಪಂದ್ಯದ ಬಳಿಕ ನುಡಿದರು.

ಸ್ಕೋರ್ ವಿವರ ;

ಕರ್ನಾಟಕ: ಮೊದಲ ಇನಿಂಗ್ಸ್ 49.5 ಓವರ್‌ಗಳಲ್ಲಿ 151
ಹರಿಯಾಣ: ಮೊದಲ ಇನಿಂಗ್ಸ್
93.1 ಓವರ್‌ಗಳಲ್ಲಿ 272
ಕರ್ನಾಟಕ: ಎರಡನೇ ಇನಿಂಗ್ಸ್ 76.5 ಓವರ್‌ಗಳಲ್ಲಿ 262
(ಮಂಗಳವಾರ 32 ಓವರ್‌ಗಳಲ್ಲಿ 3 ವಿಕೆಟ್‌ಗೆ 122)
ಗಣೇಶ್ ಸತೀಶ್ ಎಲ್‌ಬಿಡಬ್ಲ್ಯು ಬಿ ಸಚಿನ್ ರಾಣಾ  33
ಅಮಿತ್ ವರ್ಮಾ ಎಲ್‌ಬಿಡಬ್ಲ್ಯು ಬಿ ಹರ್ಷಲ್ ಪಟೇಲ್  01
ಸ್ಟುವರ್ಟ್ ಬಿನ್ನಿ ಸಿ ರಾಹುಲ್ ಬಿ ಮೋಹಿತ್ ಶರ್ಮ  34
ಸಿ.ಎಂ. ಗೌತಮ್ ಸಿ ನಿತಿನ್ ಬಿ ಆಶೀಶ್ ಹೂಡಾ  32
ಸುನಿಲ್ ರಾಜು ಸ್ಟಂಪ್ ನಿತಿನ್ ಬಿ ಜಯಂತ್ ಯಾದವ್  31
ಎಸ್.ಎಲ್. ಅಕ್ಷಯ್ ಸಿ ಸಚಿನ್ ಬಿ ಅಮಿತ್ ಮಿಶ್ರಾ  16
ಕೆ.ಪಿ. ಅಪ್ಪಣ್ಣ ಔಟಾಗದೆ  31
ಎನ್.ಸಿ. ಅಯ್ಯಪ್ಪ ಬಿ ಮೋಹಿತ್ ಶರ್ಮ  09
ಇತರೆ: (ಲೆಗ್‌ಬೈ-3, ನೋಬಾಲ್-2)  05
ವಿಕೆಟ್ ಪತನ: 1-22 (ಪವನ್; 5.1), 2-73 (ರಾಬಿನ್; 15.2), 3-110 (ಭರತ್; 27.6), 4-122 (ಅಮಿತ್; 32.1), 5-154 (ಸತೀಶ್; 41.4), 6-169 (ಬಿನ್ನಿ; 46.1), 7-183 (ಗೌತಮ್; 51.1), 8-216 (ಅಕ್ಷಯ್; 61.2), 9-222 (ಸುನಿಲ್; 64.1), 10-262 (ಅಯ್ಯಪ್ಪ; 76.5)
ಬೌಲಿಂಗ್: ಆಶೀಶ್ ಹೂಡಾ 7-1-26-1, ಹರ್ಷಲ್ ಪಟೇಲ್ 18-3-77-1, ಸಚಿನ್ ರಾಣಾ 22.4-5-42-3, ಮೋಹಿತ್ ಶರ್ಮ 10.5-0-54-2, ಸನ್ನಿ ಸಿಂಗ್ 1-0-12-0, ಅಮಿತ್ ಮಿಶ್ರಾ 9.2-3-28-1, ಜಯಂತ್ ಯಾದವ್ 8-1-20-1

ಹರಿಯಾಣ ಎರಡನೇ ಇನಿಂಗ್ಸ್ 36.2 ಓವರ್‌ಗಳಲ್ಲಿ
4 ವಿಕೆಟ್‌ಗೆ 144
ನಿತಿನ್ ಸೈನಿ ಬಿ ಎನ್.ಸಿ. ಅಯ್ಯಪ್ಪ  52
ರಾಹುಲ್ ದೆವಾನ್ ಸಿ ಗೌತಮ್ ಬಿ ಸ್ಟುವರ್ಟ್ ಬಿನ್ನಿ  25
ಸನ್ನಿ ಸಿಂಗ್ ಸಿ ಮತ್ತು ಬಿ ಎಸ್.ಎಲ್. ಅಕ್ಷಯ್  12
ಪ್ರತೀಕ್ ಪವಾರ್ ಔಟಾಗದೆ  27
ಸಚಿನ್ ರಾಣಾ ಸಿ ಗೌತಮ್ ಬಿ ಎಸ್.ಎಲ್. ಅಕ್ಷಯ್  01
ಪ್ರಿಯಾಂಕ್ ತೆಹ್ಲಾನ್ ಔಟಾಗದೆ  25
ಇತರೆ: (ಬೈ-1, ನೋಬಾಲ್-1)  02
ವಿಕೆಟ್ ಪತನ: 1-75 (ನಿತಿನ್; 16.6), 2-79 (ರಾಹುಲ್; 19.4), 3-95 (ಸನ್ನಿ ಸಿಂಗ್; 26.2), 4-107 (ಸಚಿನ್; 30.1).
ಬೌಲಿಂಗ್: ಎಸ್.ಎಲ್. ಅಕ್ಷಯ್ 9-0-31-2, ಎನ್.ಸಿ. ಅಯ್ಯಪ್ಪ 13-3-43-1, ಸ್ಟುವರ್ಟ್ ಬಿನ್ನಿ 10-3-37-1, ಕೆ.ಪಿ. ಅಪ್ಪಣ್ಣ 1.2-0-13-0, ಸುನಿಲ್ ರಾಜು 2-0-9-0, ಅಮಿತ್ ವರ್ಮಾ 1-0-10-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT