ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಸೆಮಿಫೈನಲ್ ಕನಸಲ್ಲಿ ಕರ್ನಾಟಕ ತಂಡ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹದಿಮೂರು ವರ್ಷಗಳಿಂದ ಎದುರಿಸುತ್ತಿರುವ ಪ್ರಶಸ್ತಿಯ ಬರ ನೀಗಿಸಲು ಪಣತೊಟ್ಟಿರುವ ಕರ್ನಾಟಕ ತಂಡಕ್ಕೆ ಸೋಮವಾರದಿಂದ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಲಿದೆ. ಅದು ಹರಿಯಾಣ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯ.

ಲೀಗ್ ವ್ಯವಹಾರವನ್ನು ಯಶಸ್ವಿಯಾಗಿ ಕೊನೆಗೊಳಿಸಿರುವ ಕರ್ನಾಟಕ ಇನ್ನು ಮುಂದಿನ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಿದೆ. ಕಳೆದ ಎರಡು ಋತುಗಳಲ್ಲಿ ಎದುರಾದ ಕಹಿ ನೆನಪು ತಂಡದ ಆಟಗಾರರ ಮನಸ್ಸಿನಲ್ಲಿ ಇನ್ನೂ ಇದೆ. 2009-10  ಹಾಗೂ 2010-11 ರಲ್ಲಿ ಲೀಗ್ ಹಂತದಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ್ದ ಕರ್ನಾಟಕ ನಾಕೌಟ್ ಹಂತದಲ್ಲಿ ಎಡವಿತ್ತು.

ಈ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗುವ ಎಂಟರಘಟ್ಟದ ಪಂದ್ಯದಲ್ಲಿ ಗಣೇಶ್ ಸತೀಶ್ ಬಳಗದಿಂದ ಜವಾಬ್ದಾರಿಯುತ ಆಟದ ನಿರೀಕ್ಷೆಯಲ್ಲಿ ಕರುನಾಡ ಕ್ರಿಕೆಟ್ ಪ್ರೇಮಿಗಳು ಇದ್ದಾರೆ. ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಏನಾದರೂ ತಪ್ಪು ಸಂಭವಿಸಿದರೆ, ಅದನ್ನು ಇನ್ನೊಂದು ಪಂದ್ಯದಲ್ಲಿ ತಿದ್ದಿಕೊಳ್ಳುವ ಅವಕಾಶ ಇರುತ್ತಿತ್ತು. ಇನ್ನು ಅಂತಹ ಅವಕಾಶ ಇಲ್ಲ. ಕಳಪೆ ಆಟವಾಡಿದರೆ ಟೂರ್ನಿಯಿಂದಲೇ `ಔಟ್~ ಆಗುವ ದುರ್ಗತಿ ಎದುರಿಸಬೇಕು.

ಇದನ್ನು ಮನಗಂಡಿರುವ ಸತೀಶ್ ಬಳಗ ಹರಿಯಾಣ ವಿರುದ್ಧ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಟಕ್ಕೆ ಸಜ್ಜಾಗಿದೆ. ಅಮಿತ್ ಮಿಶ್ರಾ ನೇತೃತ್ವದ ಹರಿಯಾಣ ತಂಡದ ಆಟಗಾರರ ಮನಸ್ಸಿನಲ್ಲೂ ಸೆಮಿಫೈನಲ್ ಕನಸು ಅಚ್ಚೊತ್ತಿದೆ.

ಈ ಕಾರಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ತುರುಸಿನ ಪೈಪೋಟಿ ನಿರೀಕ್ಷಿಸಬಹುದು. ಉಭಯ ತಂಡಗಳು ಲೀಗ್‌ನಲ್ಲಿ ನೀಡಿರುವ ಪ್ರದರ್ಶನವನ್ನು ಗಮನಿಸಿದರೆ ಈ ಪಂದ್ಯದಲ್ಲಿ ಗೆಲುವಿನ `ಫೇವರಿಟ್~ ಎಂಬ ಹಣೆಪಟ್ಟಿ ಸಹಜವಾಗಿ ಕರ್ನಾಟಕಕ್ಕೆ ಲಭಿಸುತ್ತದೆ.

ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಎಡವಿದ್ದ ರಾಜ್ಯ ತಂಡ, ಅದಕ್ಕೂ ಮುಂದಿನ ಋತುವಿನಲ್ಲಿ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಈ ಬಾರಿ ಅಂತಹ ನಿರಾಸೆ ಎದುರಾಗಬಾರದು. ಸ್ಟಾರ್ ಆಟಗಾರರಾದ ಆರ್. ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಎಸ್. ಅರವಿಂದ್ ಮತ್ತು ಮನೀಷ್ ಪಾಂಡೆ ತಂಡದಲ್ಲಿಲ್ಲ ನಿಜ. ಆದರೆ ಹರಿಯಾಣ ತಂಡವನ್ನು ಮಣಿಸುವಷ್ಟು ತಾಕತ್ತು ಸತೀಶ್ ಬಳಗ ಹೊಂದಿದೆ.

ಲೀಗ್‌ನಲ್ಲಿ `ಎ~ ಗುಂಪಿನಲ್ಲಿದ್ದ ಕರ್ನಾಟಕ ಒಟ್ಟು 22 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಪ್ರಸಕ್ತ ಋತುವಿನಲ್ಲಿ 600 ಕ್ಕೂ ಅಧಿಕ ರನ್ ಪೇರಿಸಿರುವ ಸ್ಟುವರ್ಟ್ ಬಿನ್ನಿ (686) ಮತ್ತು ಕೆ.ಬಿ. ಪವನ್ (652) ಒಳಗೊಂಡಂತೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಯಾವುದೇ ಬೌಲಿಂಗ್ ದಾಳಿಯನ್ನು ಎದುರಿಸಿ ನಿಲ್ಲುವ ವಿಶ್ವಾಸದಲ್ಲಿದ್ದಾರೆ.

ನಾಯಕ ಗಣೇಶ್ ಸತೀಶ್ ಮತ್ತು ಅಮಿತ್ ವರ್ಮಾ 500 ಕ್ಕೂ ಅಧಿಕ ರನ್ ಕಲೆಹಾಕಿರುವ ಬ್ಯಾಟ್ಸ್‌ಮನ್‌ಗಳು. ರಾಬಿನ್ ಉತ್ತಪ್ಪ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿಲ್ಲವಾದರೂ, ಒಂದು ಒಳ್ಳೆಯ ದಿನ ಅವರು ತಂಡಕ್ಕೆ ಸ್ಫೋಟಕ ಆರಂಭ ನೀಡಬಲ್ಲರು. ಕೊಡಗಿನ ಈ ಬ್ಯಾಟ್ಸ್‌ಮನ್ ಹರಿಯಾಣದ ವಿರುದ್ಧ ಲಯ ಕಂಡುಕೊಂಡರೆ ಇತರ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಆದರೆ ಆಟಗಾರರು ಲೀಗ್‌ನಲ್ಲಿ ಕೂಡಿಹಾಕಿರುವ ರನ್, ಪಡೆದ ವಿಕೆಟ್‌ಗಳಿಂದ ನೆರವು ಲಭಿಸದು. ಇವು ಏನಿದ್ದರೂ ಮಾನಸಿಕವಾಗಿ ಅಲ್ಪ ಬಲ ಒದಗಿಸಬಲ್ಲದು. ಏಕೆಂದರೆ ಸೋಮವಾರ ಆರಂಭವಾಗಲಿರುವುದು ಹೊಸ ಪಂದ್ಯ. ಎದುರಾಗಲಿರುವುದು ಹೊಸ ಸವಾಲು. ಪರಿಸ್ಥಿತಿಯ ಬೇಡಿಕೆಗೆ ತಕ್ಕಂತೆ ಪ್ರದರ್ಶನ ನೀಡುವುದು ಅಗತ್ಯ. ನಾಯಕ ಸತೀಶ್ ತನ್ನ ಆಟಗಾರರ ಸಾಮರ್ಥ್ಯವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುವರು ಎಂಬುದು ಮುಖ್ಯ.

ವಿನಯ್ ಮತ್ತು ಮಿಥುನ್ ಅನುಪಸ್ಥಿತಿಯ ಲಾಭವನ್ನು ಎತ್ತಿಕೊಳ್ಳುವ ಲೆಕ್ಕಾಚಾರದಲ್ಲಿ ಹರಿಯಾಣ ತಂಡ ಇದೆ. ಅದಕ್ಕೆ ಅವಕಾಶ ನೀಡದಿರುವುದು ಎನ್.ಸಿ.ಅಯ್ಯಪ್ಪ ಮತ್ತು ಎಸ್.ಎಲ್.ಅಕ್ಷಯ್ ಅವರ ಗುರಿ. ಇದುವರೆಗೆ 26 ವಿಕೆಟ್‌ಗಳನ್ನು ಪಡೆದಿರುವ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ `ಜಾದೂ~ ತೋರುವರೇ ಎಂಬುದನ್ನು ನೋಡಬೇಕು. ಮೊದಲ ಎರಡು ಪಂದ್ಯಗಳಲ್ಲೇ 17 ವಿಕೆಟ್ ಗಳಿಸಿದ್ದ ಅಪ್ಪಣ್ಣ ಬಳಿಕ ಅಲ್ಪ ಲಯ ಕಳೆದುಕೊಂಡಿದ್ದಾರೆ.

ಸ್ಟುವರ್ಟ್ ಬಿನ್ನಿ ಆಲ್‌ರೌಂಡ್ ಪ್ರದರ್ಶನ ಕೂಡಾ ಕರ್ನಾಟಕದ ಯಶಸ್ಸಿನ ಹಿಂದೆ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಸ್ಟುವರ್ಟ್ ಲೀಗ್‌ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ನೀಡಿದ್ದು ಅದ್ಭುತ ಪ್ರದರ್ಶನ. ಉತ್ತರ ಪ್ರದೇಶ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸುವುದಾಗಿ ನಾಯಕ ಗಣೇಶ್ ಸತೀಶ್ ನುಡಿದಿದ್ದಾರೆ.

ಮತ್ತೊಂದೆಡೆ ಅಮಿತ್ ಮಿಶ್ರಾ ನೇತೃತ್ವದ ಹರಿಯಾಣ ತಂಡದಲ್ಲಿ ಹೇಳಿಕೊಳ್ಳುವಂತಹ ಸ್ಟಾರ್ ಆಟಗಾರರು ಇಲ್ಲ. ಆದರೆ ತಂಡದಲ್ಲಿರುವ ಕೆಲ ಯುವ ಆಟಗಾರರು ಲೀಗ್ ಹಂತದಲ್ಲಿ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ.

ಬ್ಯಾಟಿಂಗ್‌ನಲ್ಲಿ ತಂಡ ಸನ್ನಿ ಸಿಂಗ್ (577 ರನ್), ನಿತಿನ್ ಸೈನಿ (482) ಮತ್ತು ರಾಹುಲ್ ದೆವಾನ್ (464) ಅವರನ್ನು ನೆಚ್ಚಿಕೊಂಡಿದೆ. ಕರ್ನಾಟಕದ ವೇಗ ಹಾಗೂ ಸ್ಪಿನ್ ದಾಳಿಯನ್ನು ಇವರು ಎಷ್ಟರಮಟ್ಟಿಗೆ ಎದುರಿಸಿ ನಿಲ್ಲುವರು ಎಂಬುದನ್ನು ನೋಡಬೇಕು.

ತಂಡಗಳು
ಕರ್ನಾಟಕ: ಗಣೇಶ್ ಸತೀಶ್ (ನಾಯಕ), ರಾಬಿನ್ ಉತ್ತಪ್ಪ, ಕೆ.ಬಿ.ಪವನ್, ಭರತ್ ಚಿಪ್ಲಿ, ಸ್ಟುವರ್ಟ್ ಬಿನ್ನಿ, ಸಿ.ಎಂ.ಗೌತಮ್, ಅಮಿತ್ ವರ್ಮ, ಸುನಿಲ್ ರಾಜು, ಕೆ.ಪಿ.ಅಪ್ಪಣ್ಣ, ಎನ್.ಸಿ.ಅಯ್ಯಪ್ಪ, ಎಸ್.ಎಲ್.ಅಕ್ಷಯ್, ಆದಿತ್ಯ ಸಾಗರ್,    ಎಸ್.ಕೆ.ಮೊಯಿನುದ್ದೀನ್, ಕರುಣ್ ನಾಯರ್ ಹಾಗೂ ಕೆ.ಎಲ್.ಗೌತಮ್.

ಹರಿಯಾಣ: ಅಮಿತ್ ಮಿಶ್ರಾ (ನಾಯಕ), ರಾಹುಲ್ ದೆವಾನ್, ಯಜುವೇಂದ್ರ ಚಹಾಲ್, ಹರ್ಷಲ್ ಪಟೇಲ್, ಪ್ರತೀಕ್ ಪವಾರ್, ಸಚಿನ್ ರಾಣಾ, ನಿತಿನ್ ಸೈನಿ, ಸಂದೀಪ್ ಸಿಂಗ್, ಸನ್ನಿ ಸಿಂಗ್, ಪ್ರಿಯಾಂಕ್ ತೆಹ್ಲಾನ್, ಜಯಂತ್ ಯಾದವ್, ಮೋಹಿತ್ ಶರ್ಮ, ಆಶೀಶ್ ಹೂಡಾ, ಜಿತೇಂದರ್ ಬಿಲ್ಲಾ, ಅಭಿಮನ್ಯು ಖೋಡ್, ಸಂದೀಪ್ ಜಿ., ವೈ. ತೋಮಲ್.
ಅಂಪೈರ್: ಸುಧೀರ್ ಅಸ್ನಾನಿ ಮತ್ತು ಅಮೀಶ್ ಸಾಹಿಬಾ, ರೆಫರಿ: ರಾಜೇಂದ್ರ ಜಡೇಜ. ದಿನದಾಟದ ಆರಂಭ: ಬೆಳಿಗ್ಗೆ 9.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT