ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಜಯದ ಹೊಸ್ತಿಲಲ್ಲಿ ಕರ್ನಾಟಕ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ತಂಡದ ವೇಗದ ಬೌಲಿಂಗ್ ದಾಳಿಗೆ `ಅಂಕುಶ~ ಹಾಕಲು ಹೋಗಿ ಆತಿಥೇಯ ರೇಲ್ವೇಸ್ ತಂಡ, ಇಲ್ಲಿಯ ಕರ್ನೇಲ್ ಸಿಂಗ್ ಕ್ರೀಡಾಂಗಣದಲ್ಲಿ ಸಿದ್ಧಪಡಿಸಿದ್ದ ಸ್ಪಿನ್ `ಖೆಡ್ಡಾ~ಕ್ಕೆ ತಾನೇ ಉರುಳಿ ಬಿದ್ದಿದ್ದು, ದಿನದಾಟದಲ್ಲಿ 12 ವಿಕೆಟ್ ಎಗರಿಸಿದ ವಿನಯ್ ಪಡೆಗೆ ಆಗಲೇ ಗೆಲುವಿನ ವಾಸನೆ ಬಡಿಯಲು ಆರಂಭಿಸಿದೆ.

ರಣಜಿ ಟ್ರೋಫಿ  ಕ್ರಿಕೆಟ್ ಸೂಪರ್ ಲೀಗ್ `ಎ~ ಗುಂಪಿನ ಪಂದ್ಯದ ದ್ವಿತೀಯ ದಿನವಾದ ಶುಕ್ರವಾರ, ರೇಲ್ವೇಸ್ ತಂಡ, ಕರ್ನಾಟಕದ ಮುಂದೆ ವೈಫಲ್ಯದ ಪ್ರಪಾತಕ್ಕೆ ಜಾರುತ್ತಿದ್ದು, ಸತತ ಎರಡನೇ ಹೀನಾಯ ಸೋಲಿನ ಭೀತಿಯನ್ನು ಅನುಭವಿಸುತ್ತಿದೆ. ಪುನರಾಗಮನದ ನಂತರ ಸೊಗಸಾಗಿ ಬೌಲ್ ಮಾಡುತ್ತಿರುವ ಕೆ.ಪಿ.ಅಪ್ಪಣ್ಣ, ಬಂಗಾರ್ ಪಡೆಯ ಮಹತ್ವದ ಐದು ವಿಕೆಟ್ ಪಡೆಯುವ ಮೂಲಕ ಆ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದು ಹಾಕಿದರು. 

ವಿನಯ್ ಬಳಗವನ್ನು ಮೊದಲ ಇನಿಂಗ್ಸ್‌ನಲ್ಲಿ 347 ರನ್‌ಗಳಿಗೆ ನಿಯಂತ್ರಿಸಿದ ರೇಲ್ವೇಸ್ ತಂಡ, ಮೊದಲ ಸರದಿಯಲ್ಲಿ 134 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು `ಫಾಲೋ ಆನ್~ ಆಹ್ವಾನ ಪಡೆಯಿತು.
 
213 ರನ್‌ಗಳ ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಮತ್ತೆ ಆಡಲಿಳಿದ ತಂಡ, ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 33 ರನ್ ಗಳಿಸಿತು. ಎದುರಾಳಿಯ ಮೊದಲ ಇನಿಂಗ್ಸ್ ಬಾಕಿಯನ್ನು ತೀರಿಸಲು ರೇಲ್ವೇಸ್ ತಂಡಕ್ಕೆ ಇನ್ನೂ 180 ರನ್‌ಗಳ ಅಗತ್ಯವಿದ್ದು, ಎಂಟು ವಿಕೆಟ್ ಮಾತ್ರ ಬಾಕಿ ಉಳಿದಿವೆ.

ಸಿಕ್ಕಾಪಟ್ಟೆ ಬಿರುಕು ಬಿಟ್ಟಿರುವ ಕಂದುಬಣ್ಣದ ಪಿಚ್, ಶುಕ್ರವಾರ ಸಂಪೂರ್ಣವಾಗಿ ಅಪ್ಪಣ್ಣಗೆ ಒಲಿದಿದ್ದು, ಅವರು ಹೇಳಿದಂತೆಯೇ ಅದು ಮಾತು ಕೇಳುತ್ತಿತ್ತು. ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಬೌಲ್ ಮಾಡಲು ಬಂದ ಈ ಕೊಡಗಿನ ಎಡಗೈ ಸ್ಪಿನ್ನರ್, ಮೊದಲ ಎಸೆತದಲ್ಲಿಯೇ ಶ್ರೇಯಸ್ ಖನೋಲ್ಕರ್ ಅವರನ್ನು ಎಲ್‌ಬಿಡಬ್ಲ್ಯು ಜಾಲಕ್ಕೆ ಕೆಡವಿದರು. ಶ್ರೇಯಸ್‌ಗೆ ಏನಾಗಿದೆ ಎಂಬುದು ತಿಳಿಯುವ ಮುನ್ನವೇ ಅಪ್ಪಣ್ಣ ಅವರ ಆಕರ್ಷಕ `ಲೆಗ್ ಕಟರ್~ ದೊಡ್ಡ ಅನಾಹುತ ಮಾಡಿಯಾಗಿತ್ತು.

ಖನೋಲ್ಕರ್ ಅವರ ವಿಕೆಟ್ ಬಿದ್ದದ್ದೇ ನೆಪವಾಗಿ ರೇಲ್ವೇಸ್ ತಂಡದ ಆಟಗಾರರು ಎಂಜಿನ್‌ಅನ್ನು ಹಿಂಬಾಲಿಸುವ ರೈಲ್ವೆಯ ಬೋಗಿಗಳಂತೆ ಆರಂಭಿಕ ಬ್ಯಾಟ್ಸ್‌ಮನ್‌ನನ್ನು ಒಬ್ಬರ ಬೆನ್ನಹಿಂದೆ ಒಬ್ಬರಂತೆ ಹಿಂಬಾಲಿಸಿ ಹೊರಟರು. ಕೆಳಹಂತದಲ್ಲಿ ತೂರಿ ಬರುತ್ತಿದ್ದ ಅಪ್ಪಣ್ಣ ಅವರ ಎಸೆತಗಳನ್ನು ಎದುರಿಸಲು ರೇಲ್ವೇಸ್ ತಂಡದ ಆಟಗಾರರು ಪರದಾಡಿದರು.

ವೇಗದ ಬೌಲಿಂಗ್‌ಗಿಂತ ಸ್ಪಿನ್ ಮಾಡುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದ ಎಸ್.ಅರವಿಂದ್ ಲೆಗ್ ಸ್ಪಿನ್ ಅಸ್ತ್ರ ಪ್ರಯೋಗಿಸಿ ಎರಡು `ಬಲಿ~ಗಳನ್ನು ಪಡೆದರು. ಆತಿಥೇಯ ಬ್ಯಾಟ್ಸ್‌ಮನ್‌ಗಳ ಪೈಕಿ ನಿಂತು ಆಡಲು ಯತ್ನಿಸಿದವರು ನಾಯಕ ಬಂಗಾರ್ ಮಾತ್ರ. ಸುಮಾರು ಎರಡೂವರೆ ಗಂಟೆಗೂ ಅಧಿಕ ಹೊತ್ತು ಕ್ರೀಸ್‌ಗೆ ಲಂಗರು ಹಾಕಿ ನಿಂತಿದ್ದ ಅವರು, 130 ಎಸೆತಗಳನ್ನು ಎದುರಿಸಿದರು. ವಿಕೆಟ್‌ನ ಇನ್ನೊಂದು ತುದಿಯಲ್ಲಿ ಅವರಿಗೆ ಯಾವುದೇ ಬೆಂಬಲ ದೊರೆಯಲಿಲ್ಲ.

`ಫಾಲೋ ಆನ್~ ಭೀತಿಯಿಂದ ತಂಡವನ್ನು ಪಾರು ಮಾಡುವಂತಹ ಯಾವುದೇ ಪಾಲುದಾರಿಕೆ ರೇಲ್ವೇಸ್ ಪರ ಮೂಡಿಬರಲಿಲ್ಲ. ಅಪ್ಪಣ್ಣ ಅವರ ಭರ್ಜರಿ ಬೇಟೆಗಳ ಮಧ್ಯೆ ಮಿಂಚಿದ ಮಿಥುನ್ ಮೂರು ವಿಕೆಟ್ ಜೇಬಿಗಿಳಿಸಿದರು. ತಿರುವು ಪಡೆಯುತ್ತಿದ್ದ ನಿಧಾನಗತಿ ಪಿಚ್ ಮೇಲೆ ಕೆಳ ಹಂತದಲ್ಲಿ ತೂರಿ ಬರುತ್ತಿದ್ದ ಒಂದೊಂದು ಎಸೆತವನ್ನು ಎದುರಿಸುವುದೂ ಸಂಜಯ್ ಪಡೆಗೆ ಕಷ್ಟವಾಗಿತ್ತು.

ಇದಕ್ಕೂ ಮುನ್ನ ತನ್ನ ಗುರುವಾರದ ಆಟ ಮುಂದುವರಿಸಿದ ಕರ್ನಾಟಕ ತಂಡ (7 ವಿಕೆಟ್‌ಗೆ 284) ಬೆಳಗಿನ 67 ನಿಮಿಷಗಳ ಆಟದಲ್ಲಿ 63 ರನ್ ಕಲೆ ಹಾಕುವಷ್ಟರಲ್ಲಿ ಮಿಕ್ಕ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ವಿನಯ್ ಕೇವಲ ಎರಡು ರನ್‌ಗಳಿಂದ ಅರ್ಧಶತಕ ತಪ್ಪಿಸಿಕೊಂಡರು. ಬ್ಯಾಟಿಂಗ್‌ನಲ್ಲಿ ಮಿಂಚಿದ ಮಿಥುನ್ ಎರಡು ಭರ್ಜರಿ ಸಿಕ್ಸರ್ ಬಾರಿಸಿದರು. ಅರವಿಂದ್ ಸಹ ಬಿರುಸಿನ ರನ್ ಗಳಿಕೆಗೆ ಮುಂದಾಗಿದ್ದರಿಂದ ತಂಡದ ಮೊತ್ತ ಸುರಕ್ಷಾ `ಕಕ್ಷೆ~ ಸೇರಲು ಸಾಧ್ಯವಾಯಿತು.

ಕರ್ನಾಟಕದ ಮೂರು ಸೇರಿದಂತೆ ದಿನದಾಟದಲ್ಲಿ ಒಟ್ಟಾರೆ 15 ವಿಕೆಟ್‌ಗಳು ಪತನಗೊಂಡವು.

ಸ್ಕೋರು ವಿವರ
ಕರ್ನಾಟಕ ಮೊದಲ ಇನಿಂಗ್ಸ್ 114.3 ಓವರ್‌ಗಳಲ್ಲಿ 347
(ಗುರುವಾರ 99 ಓವರ್‌ಗಳಲ್ಲಿ 7 ವಿಕೆಟ್‌ಗೆ 284)

ಆರ್.ವಿನಯಕುಮಾರ್ ಸಿ ರಾವತ್ ಬಿ ಜೈಪ್ರಕಾಶ್ ಯಾದವ್  48
ಮಿಥುನ್ ಸಿ ಸಂಜಯ್ ಬಂಗಾರ್ ಬಿ ಶ್ರೇಯಸ್ ಖನೋಲ್ಕರ್  32
ಅರವಿಂದ್ ಸಿ ಸಂಜಯ್ ಬಂಗಾರ್ ಬಿ ಶ್ರೇಯಸ್ ಖನೋಲ್ಕರ್ 20
ಕೆ.ಪಿ. ಅಪ್ಪಣ್ಣ ನಾಟೌಟ್  01
ಇತರೆ: (ಬೈ-3, ನೋಬಾಲ್-6)  09
ವಿಕೆಟ್ ಪತನ: 8-291 (102.2, ವಿನಯ್), 9-336 (112.3, ಮಿಥುನ್), 10-347 (114.3, ಅರವಿಂದ್).
ಬೌಲಿಂಗ್: ಜೈಪ್ರಕಾಶ್ ಯಾದವ್ 20-6-59-2 (ನೋಬಾಲ್-2), ಸಂಜಯ್ ಬಂಗಾರ್ 10-2-38-0, ಮುರಳಿ ಕಾರ್ತಿಕ್ 37-6-88-5 (ನೋಬಾಲ್-4), ನಿಲೇಶ್‌ಕುಮಾರ್ ಚವ್ಹಾಣ್ 17-2-60-0, ಆರ್ಲೆನ್ ಕೋನ್ವಾರ್ 24-4-81-1, ಶ್ರೇಯಸ್ ಖನೋಲ್ಕರ್ 6.3-2-18-2.

ರೇಲ್ವೇಸ್ ಮೊದಲ ಇನಿಂಗ್ಸ್ 53.5 ಓವರ್‌ಗಳಲ್ಲಿ 134
ಶಿವಕಾಂತ್ ಶುಕ್ಲಾ ಸಿ ಮನೀಷ್ ಪಾಂಡೆ ಬಿ ಕೆ.ಪಿ.ಅಪ್ಪಣ್ಣ  17
ಶ್ರೇಯಸ್ ಖನೋಲ್ಕರ್ ಎಲ್‌ಬಿಡಬ್ಲ್ಯು ಬಿ ಕೆ.ಪಿ.ಅಪ್ಪಣ್ಣ  04
ಫಯಾಜ್ ಫಜಲ್ ಸಿ ಗಣೇಶ್ ಸತೀಶ್ ಬಿ ಮಿಥುನ್ ಅಭಿಮನ್ಯು 03
ಸಂಜಯ್ ಬಂಗಾರ್ ಸಿ ಮನೀಷ್ ಪಾಂಡೆ ಬಿ ಎಸ್.ಅರವಿಂದ್ 36
ಯರೇಗೌಡ ಸಿ ಮನೀಷ್ ಪಾಂಡೆ ಬಿ ಎಸ್.ಅರವಿಂದ್  10
ಮಹೇಶ್ ರಾವತ್ ಸಿ ಸಿ.ಎಂ.ಗೌತಮ್ ಬಿ ಕೆ.ಪಿ.ಅಪ್ಪಣ್ಣ  01
ಎಸ್.ಎಸ್. ಮರುಪುರಿ ಸಿ ಸಿ.ಎಂ.ಗೌತಮ್ ಬಿ ಮಿಥುನ್  24
ಜೈಪ್ರಕಾಶ್ ಯಾದವ್ ಸಿ ಎಸ್.ಅರವಿಂದ್ ಬಿ ಕೆ.ಪಿ.ಅಪ್ಪಣ್ಣ  12
ಮುರಳಿ ಕಾರ್ತಿಕ್ ಬಿ ಕೆ.ಪಿ.ಅಪ್ಪಣ್ಣ  13
ನಿಲೇಶ್‌ಕುಮಾರ್ ಚವ್ಹಾಣ್ ಬಿ ಮಿಥುನ್ ಅಭಿಮನ್ಯು  00
ಆರ್ನೆಲ್ ಕೋನ್ವಾರ್ ನಾಟೌಟ್  00
ಇತರೆ: (ಬೈ-5, ನೋಬಾಲ್-9)  14
ವಿಕೆಟ್ ಪತನ: 1-22 (5.1, ಖನೋಲ್ಕರ್), 2-27 (7.2, ಶುಕ್ಲಾ), 3-31 (12.1, ಫಜಲ್), 4-62 (28.6, ಯರೇಗೌಡ), 5-64 (31.5, ರಾವತ್), 6-104 (45.4, ಬಂಗಾರ್), 7-118 (49.4, ಯಾದವ್), 8-134 (52.5, ಮರುಪುರಿ), 9-134 (52.6, ಚವ್ಹಾಣ್), 10-134 (53.5, ಮುರಳಿ).
ಬೌಲಿಂಗ್: ಆರ್.ವಿನಯ್‌ಕುಮಾರ್ 9-2-16-0, ಮಿಥುನ್ ಅಭಿಮನ್ಯು 9-3-29-3 (ನೋಬಾಲ್-1), ಕೆ.ಪಿ.ಅಪ್ಪಣ್ಣ 19.5-6-39-5 (ನೋಬಾಲ್-2), ಎಸ್.ಅರವಿಂದ್ 10-0-25-2 (ನೋಬಾಲ್-5), ಸ್ಟುವರ್ಟ್ ಬಿನ್ನಿ 1-0-4-0, ಅಮಿತ್ ವರ್ಮಾ 5-2-16-0.

ರೇಲ್ವೇಸ್ ದ್ವಿತೀಯ ಇನಿಂಗ್ಸ್ 16 ಓವರ್‌ಗಳಲ್ಲಿ 2 ವಿಕೆಟ್‌ಗೆ 33
ಶಿವಕಾಂತ್ ಶುಕ್ಲಾ ಬ್ಯಾಟಿಂಗ್  07
ಶ್ರೇಯಸ್ ಖನೋಲ್ಕರ್ ಎಲ್‌ಬಿಡಬ್ಲ್ಯು ಬಿ ಮಿಥುನ್  03
ಎಸ್.ಎಸ್. ಮರುಪುರಿ ಸಿ ಕೆ.ಪಿ.ಅಪ್ಪಣ್ಣ ಬಿ ವಿನಯಕುಮಾರ್  14
ಇತರೆ: (ಬೈ-8, ನೋಬಾಲ್-1) 09
ವಿಕೆಟ್ ಪತನ: 1-6 (5.5, ಖನೋಲ್ಕರ್), 2-33(15.6, ಮರುಪುರಿ).
ಬೌಲಿಂಗ್: ಆರ್.ವಿನಯಕುಮಾರ್ 5-3-4-1, ಕೆ.ಪಿ.ಅಪ್ಪಣ್ಣ 2-0-5-0, ಮಿಥುನ್ ಅಭಿಮನ್ಯು 3-0-5-1, ಸ್ಟುವರ್ಟ್ ಬಿನ್ನಿ 2-1-2-0, ಗಣೇಶ್ ಸತೀಶ್ 2-0-7-0, ಎಸ್.ಅರವಿಂದ್ 2-0-2-0 (ನೋಬಾಲ್-1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT