ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಪಂದ್ಯಕ್ಕೆ ಯುವಿ,ಭಜ್ಜಿ ಇಲ್ಲ

ಹುಬ್ಬಳ್ಳಿಗೆ ಬಂದಿಳಿದ ಪಂಜಾಬ್‌ ಕ್ರಿಕೆಟ್‌ ತಂಡ
Last Updated 12 ಡಿಸೆಂಬರ್ 2013, 6:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿರೀಕ್ಷೆ ಹುಸಿಯಾಯಿತು; ಹರ್ಭಜನ್‌ ಸಿಂಗ್‌ ನಗರಕ್ಕೆ ಬರುತ್ತಾರೆ ಎಂಬ ಕ್ರಿಕೆಟ್‌ ಪ್ರಿಯರ ಬಯಕೆ ಈಡೇರಲಿಲ್ಲ. ಇದೇ 14ರಿಂದ ನಗರದ ರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ಕರ್ನಾಟಕ ತಂಡದ ವಿರುದ್ಧ ನಡೆಯ­ಲಿರುವ ರಣಜಿ ಪಂದ್ಯದಲ್ಲಿ ಆಡಲಿರುವ ಪಂಜಾಬ್‌ ತಂಡ ಬುಧವಾರ ನಗರಕ್ಕೆ ಬಂದಿಳಿದಿದ್ದು ನಾಯಕ ಹರ್ಭಜನ್‌ ಸಿಂಗ್‌ ಕಾಣಿಸಿಕೊಳ್ಳಲಿಲ್ಲ.

ಭುಜದ ನೋವಿನಿಂದ ಬಳಲುತ್ತಿ­ರುವ ಭಜ್ಜಿ ಹರಿಯಾಣ ಮತ್ತು ವಿದರ್ಭ ವಿರುದ್ಧದ ಪಂಜಾಬ್‌ನ ಕಳೆದ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೆ ಹುಬ್ಬಳ್ಳಿ ಪಂದ್ಯಕ್ಕೆ ಅವರು ಫಿಟ್‌ ಆಗುತ್ತಾರೆ ಎಂಬ ಭರವಸೆ ಇತ್ತು. ಆದರೆ ಇಲ್ಲಿಗೆ ಬುಧವಾರ ಮಧ್ಯಾಹ್ನ ಆಗಮಿಸಿದ ಇಪ್ಪತ್ತು ಮಂದಿಯ ತಂಡದಲ್ಲಿ ದೂಸ್ರಾ ಪರಿಣಿತ ಇರಲಿಲ್ಲ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡದಲ್ಲಿ ಆಡುತ್ತಿರುವ ಯುವ­ರಾಜ್‌ ಸಿಂಗ್‌ ಏಕದಿನ ಸರಣಿ ಮುಗಿದ ಕೂಡಲೇ ವಾಪಸಾಗಿ ಪಂಜಾಬ್‌ ತಂಡವನ್ನು ಸೇರಲಿದ್ದಾರೆ ಎಂಬ ನಿರೀಕ್ಷೆ ಇತ್ತು (ಯುವಿ ಟೆಸ್ಟ್‌ ಸರಣಿಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ). ‘ಹರ್ಭಜನ್‌ ಸಿಂಗ್‌ ಭುಜದ ನೋವಿನಿಂದ ಇನ್ನೂ ಗುಣಮುಖರಾಗ­ಲಿಲ್ಲ.

ಹೀಗಾಗಿ ಮುಂದಿನ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳುತ್ತಾರೆ. ಯುವ­ರಾಜ್‌ ಸಿಂಗ್‌ ಕೂಡ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ’ ಎಂದು ತಂಡದ ಕೋಚ್‌ ಮತ್ತು ವ್ಯವಸ್ಥಾಪಕ ಭೂಪೀಂದರ್‌ ಸಿಂಗ್‌ ಸೀನಿಯರ್‌ ತಿಳಿಸಿದರು. ಹುಬ್ಬಳ್ಳಿ ಪಂದ್ಯದಲ್ಲಿ ಆಲ್‌ರೌಂ­ಡರ್‌ ಮನ್‌ದೀಪ್‌ ಸಿಂಗ್‌ ಪಂಜಾಬ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ನೇತೃತ್ವದಲ್ಲಿ ಬಂದ ಇಪ್ಪತ್ತು ಮಂದಿಯ ತಂಡವನ್ನು ಹೋಟೆಲ್ ಗೇಟ್‌ವೇದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.

ಯುವಿ ಮತ್ತು ಭಜ್ಜಿ ಇಲ್ಲದಿದ್ದರೂ ಪಂಜಾಬ್‌ ತಂಡ ಅನೇಕ ಅಂತರ­ರಾಷ್ಟ್ರೀಯ ಮತ್ತು ಐಪಿಎಲ್‌ ಆಟಗಾರ­ರನ್ನು ಒಳಗೊಂಡಿದೆ. ಗೂಗ್ಲಿ ಪರಿಣಿತ ರಾಹುಲ್‌ ಶರ್ಮಾ, ವೇಗಿಗಳಾದ ಮನ್‌ಪ್ರೀತ್‌ ಗೋನಿ, ವಿಆರ್‌ವಿ ಸಿಂಗ್‌, ಬ್ಯಾಟ್ಸ್‌ಮನ್‌ಗಳಾದ ಉದಯ್‌ ಕೌಲ್‌, ಸಂದೀಪ್‌ ಶರ್ಮಾ, ರವಿ ಇಂದರ್‌ ಸಿಂಗ್‌, ಮನನ್‌ ಸಂಜೀವ ಓಹ್ರಾ, ಜೀವನ್‌ಜ್ಯೋತ್‌ ಸಿಂಗ್‌, ಗುರ್‌ಕೀರತ್‌ ಸಿಂಗ್‌ ಮನ್‌, ರಾಜ್‌­ವಿಂದರ್‌ ಸಿಂಗ್‌ ಗೋಲು, ಗೀತಾಂಶು ಘೇರಾ, ವಿನಯ್‌ ಚಂದ್‌, ತರುವಾರ್‌ ಕೊಹ್ಲಿ ಹಾಗೂ ಸಿದ್ದಾರ್ಥ್‌ ಕೌಲ್‌ ತಂಡದಲ್ಲಿದ್ದಾರೆ.

ಸಹಾಯಕ ಕೋಚ್ ಹರ್ಮಿಂದರ್‌ ಸಿಂಗ್‌, ಫಿಜಿಯೋ ರವಿ, ತರಬೇತು­ದಾರ ಸತ್‌ಬೀರ್‌ ಮತ್ತು ವೀಡಿಯೊ ವಿಶ್ಲೇಷಕ ಅಮಿತ್‌ ತಂಡ­ದೊಂದಿಗೆ ಬಂದಿದ್ದಾರೆ. ಕರ್ನಾಟಕ ತಂಡ ಇಂದು ನಗರಕ್ಕೆ: ಕರ್ನಾಟಕ ತಂಡ ಗುರುವಾರ ರಾತ್ರಿ ನಗರಕ್ಕೆ ಆಗಮಿಸಲಿದೆ. ಬೆಂಗಳೂರಿ­ನಿಂದ ವಿಮಾನದಲ್ಲಿ ಬರುವ ತಂಡ ಗೋಕುಲ ರಸ್ತೆಯ ಡೆನಿಸನ್‌ ಹೋಟೆ­ಲ್‌­ನಲ್ಲಿ ತಂಗಲಿದೆ. ಆಟಗಾರರು ಶುಕ್ರವಾರ ಅಭ್ಯಾಸ ಮಾಡಲಿದ್ದಾರೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ಪಂಜಾಬ್‌ ಆಟಗಾ­ರರು ಗುರುವಾರ ಅಭ್ಯಾಸ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT