ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣರಂಗದಲ್ಲಿ ಮೊಳಗಿದ ಬಂಡಾಯ ಕಹಳೆ

Last Updated 18 ಏಪ್ರಿಲ್ 2013, 12:58 IST
ಅಕ್ಷರ ಗಾತ್ರ

ಬೆಳಗಾವಿ: ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ಬಂಡಾಯ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುವ ಮೂಲಕ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದರು.

ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬಿಸಿ ತಾರಕ್ಕೇರಿದೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಕೆಜೆಪಿಯಲ್ಲೂ ಬಂಡಾಯದ ಕಹಳೆ ಮೊಳಗಿತು. ಚುನಾವಣೆಯ ಪ್ರಚಾರ ಮಾಡುವುದಕ್ಕಿಂತ ಬಂಡಾಯ ಎದ್ದಿರುವ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವುದು ದೊಡ್ಡ ತಲೆನೋವಾಗಿದೆ. ಕೆಲವು ಅಧಿಕೃತ ಪಕ್ಷಗಳ ಅಭ್ಯರ್ಥಿಗಳು ಮತ್ತೊಂದು ಪಕ್ಷದಿಂದ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂಬ ಮಾತುಗಳು ಸಹ ಮಹಾನಗರ ಪಾಲಿಕೆ ಕಚೇರಿಯ ಆವರಣದಲ್ಲಿ ಕೇಳಿಬಂದವು.

ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಎಂಇಎಸ್‌ನಲ್ಲಿ ಬಂಡಾಯ ತಾರಕಕ್ಕೇರಿದೆ. ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಅವರನ್ನು ಚುನಾವಣೆಯಲ್ಲಿ ಮಣಿಸಬೇಕು ಎಂದು ಎಂಇಎಸ್‌ನ ಒಂದು ಗುಂಪಿನ ನಾಯಕರು `ತಂತ್ರಗಾರಿಕೆ'ಯಲ್ಲಿ ತೊಡಗಿದ್ದರೆ, ಸಮಿತಿಯ ಇನ್ನೊಂದು ಗುಂಪಿನವರು ಬಂಡಾಯದ ಕಹಳೆ ಊದಿದ್ದಾರೆ. ಈ ಪರಿಸ್ಥಿತಿ ಎಂಇಎಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮಾಜಿ ಮೇಯರ್ ಸಂಭಾಜಿ ಪಾಟೀಲ ದಕ್ಷಿಣ ಕ್ಷೇತ್ರದ ಎಂಇಎಸ್ ಬೆಂಬಲಿತ ಅಧಿಕೃತ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ನೇತಾಜಿ ಬಾಳು ಮನಗೂತ್ಕರ್ ಬಂಡಾಯ ಅಭ್ಯರ್ಥಿಯಾಗಿದ್ದರೆ, ರತನ್ ಗೋಪಾಲ್ ಮಾಸೇಕರ ಸಹ ನಾಮಪತ್ರ ಸಲ್ಲಿಸಿದ್ದಾರೆ.

ಸಂಭಾಜಿ ಪಾಟೀಲ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಬುಧವಾರ ನಾಮಪತ್ರ ಸಲ್ಲಿಸಿದರು. ಉಳಿದ ಇಬ್ಬರು ಅಭ್ಯರ್ಥಿಗಳು ಸೂಚಕರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಬೆಳಗಾವಿ ಉತ್ತರದಲ್ಲಿ ಎಂಇಎಸ್ ಬೆಂಬಲದಿಂದ ಅಮರ ಎಳ್ಳೂರಕರ, ರೇಣು ಕಿಲ್ಲೇಕರ ನಾಮಪತ್ರ ಸಲ್ಲಿಸಿದರು.

`ಎಂಇಎಸ್ ಕಾರ್ಯಸೂಚಿ ಮೇಲೆ ಕಣಕ್ಕಿಳಿದಿದ್ದು, ಮರಾಠಿ ಭಾಷಿಕರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಗಡಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಮರಾಠಿ ಭಾಷಿಕರ ಹೋರಾಟ ನಿರಂತರವಾಗಿರುತ್ತದೆ' ಎಂದು ಸಂಭಾಜಿ ಪಾಟೀಲ ಹೇಳಿದರು.

ದಕ್ಷಿಣ ಮತಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಎಂಇಎಸ್‌ನ ಮೂವರ ಜೊತೆಗೆ ಶಿವಸೇನಾದಿಂದ ಹನಮಂತ ಕೃಷ್ಣ ಮಜುಕರ ಕಣಕ್ಕಿಳಿದಿದ್ದಾರೆ.

ಕೆಜೆಪಿಯಲ್ಲೂ ಬಂಡಾಯದ ಬಾವು ಹಾರಿದ್ದು, ಉತ್ತರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಸ್.ಸಿ. ಮಾಳಗಿ ಅವರಿಗೆ ಬಂಡಾಯ ಅಭ್ಯರ್ಥಿ ರವಿ ಮಾಳಗಿ ಸೆಡ್ಡು ಹೊಡೆದು ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

`ನಾನು ಕೆಜೆಪಿ ಮೂಲ ಕಾರ್ಯಕರ್ತ. ಪದ್ಮನಾಭ ಪ್ರಸನ್ನಕುಮಾರ ಅವರೊಂದಿಗೆ ಮೊದಲಿನಿಂದಲೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದವನು. ಆದರೆ ಈಚೆಗೆ ಪಕ್ಷ ಸೇರಿದವರಿಗೆ ಟಿಕೆಟ್ ನೀಡುವ ಮೂಲಕ ನಾಯಕರು ಮೋಸ ಮಾಡಿದ್ದಾರೆ. ಚುನಾವಣೆಯಲ್ಲಿ ಇದರ ಪರಿಣಾಮ ಗೊತ್ತಾಗಲಿದೆ' ಎಂದು ರವಿ ಮಾಳಗಿ ಹೇಳಿದರು.

ಬೆಳಗಾವಿ ಗ್ರಾಮೀಣ ಹಾಗೂ ಖಾನಾಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸುವ ಮೂಲಕ ಪಕ್ಷದ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆನಂದಸ್ವಾಮಿ ಗಡ್ಡದೇವರಮಠ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು.

ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಆನಂದಸ್ವಾಮಿ ಗಡ್ಡಯ್ಯ ಗಡ್ಡದೇವರಮಠ ಅವರು ಸಾವಿರಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬುಧವಾರ ಆಗಮಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಮೂಲಕ `ಶಕ್ತಿ' ಪ್ರದರ್ಶಿಸಿದರು.

ನಗರದ ಕ್ಲಬ್ ರಸ್ತೆಯಲ್ಲಿನ ತಮ್ಮ ಕಚೇರಿಯಿಂದ ಗಡ್ಡದೇವರಮಠ ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಮೆರವಣಿಗೆಯಲ್ಲಿ ಹೊರಟರು. ಕೇಸರಿ ಪೇಟ ಧರಿಸಿ, ಹಸಿರು ಶಾಲು ಹೊದ್ದು ಚಕ್ಕಡಿ ಗಾಡಿಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದರು.
ಅಭಿಮಾನಿಗಳು ಗಡ್ಡದೇವರಮಠ ಪರವಾಗಿ ಘೋಷಣೆಗಳನ್ನು ಕೂಗುತ್ತ, ಡೊಳ್ಳು ಬಾರಿಸುತ್ತ ಮೆರವಣಿಗೆಯಲ್ಲಿ ಸಾಗಿದರು. ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ನಡೆಸಿದ ಬಳಿಕ ರಿಸಾಲ್ದಾರ ಗಲ್ಲಿಯಲ್ಲಿನ ತಹಸೀಲ್ದಾರ ಕಚೇರಿಗೆ ಆಗಮಿಸಿ ನಾಮಪತ್ರವನ್ನು ಸಲ್ಲಿಸಿದರು.

`ನಾನು ಕಾಂಗ್ರೆಸ್ ಅಭಿಮಾನಿಯಾಗಿದ್ದೆ. ಕಾರಣಾಂತರದಿಂದ ನನಗೆ ಟಿಕೆಟ್ ನೀಡಲಿಲ್ಲ. ಈ ಬಗ್ಗೆ ನನಗೆ ಬೇಸರ ಇಲ್ಲ. ಕಾಂಗ್ರೆಸ್ ಪಕ್ಷ ಹಾಗೂ ನಾಯಕರಿಗೆ ಅಗೌರವ ತರುವಂತಹ ಯಾವುದೇ ಹೇಳಿಕೆಯನ್ನೂ ನೀಡುವುದಿಲ್ಲ. ಕ್ಷೇತ್ರದ ಜನರು ಹಾಗೂ ಜಿಲ್ಲಾ ಪಂಚಾಯ್ತಿಯ ಹಲವು ಸದಸ್ಯರು ಪ್ರೀತಿ- ವಿಶ್ವಾಸ ತೋರಿಸುವ ಮೂಲಕ ಸ್ವತಂತ್ರವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ಹೀಗಾಗಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ನನ್ನ ಜೀವನದಲ್ಲಿ ಇಂದು ಮಹತ್ವದ ಹೆಜ್ಜೆ ಇಟ್ಟಿದ್ದೇನೆ. ಜನರ ಪ್ರೀತಿ- ವಿಶ್ವಾಸಕ್ಕೆ ಎಂದೂ ಚ್ಯುತಿ ತರುವುದಿಲ್ಲ' ಎಂದು ಆನಂದಸ್ವಾಮಿ ಪ್ರತಿಕ್ರಿಯಿಸಿದರು.

`ಕಣದಲ್ಲಿರುವ ಯಾರನ್ನೂ ಸಣ್ಣದಾಗಿ ನೋಡುವುದಿಲ್ಲ. ಟಿಕೆಟ್ ನೀಡಲಿಲ್ಲ ಎಂಬ ವಿಷಯದ ಮೇಲೆ ರಾಜಕೀಯ ಮಾಡುವುದಿಲ್ಲ. ಗ್ರಾಮೀಣ ಭಾಗದಲ್ಲಿ ಹಲವು ಸಮಸ್ಯೆಗಳಿವೆ. ನಾನು ಅವುಗಳನ್ನೆಲ್ಲ ಪರಿಹರಿಸುತ್ತೇನೆ ಎಂದು ಸುಳ್ಳು ಭರವಸೆಯನ್ನು ನೀಡುವುದಿಲ್ಲ. ಹೊಸತನವನ್ನು ಶೋಧಿಸಲು ಯತ್ನಿಸುತ್ತೇನೆ. ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಮಾಡಲು `ಶಕ್ತಿ' ನೀಡಬೇಕು ಎಂದಷ್ಟೇ ಜನರಲ್ಲಿ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

`ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ಷೇತ್ರದ ಜಿ.ಪಂ. ಸದಸ್ಯರು ಸೇರಿಕೊಂಡು ಯುವ ಮುಖಂಡರಾದ ಆನಂದಸ್ವಾಮಿ ಗಡ್ಡದೇವರಮಠರನ್ನು ಸ್ವತಂತ್ರವಾಗಿ ಚುನಾವಣೆಗೆ ನಿಲ್ಲಿಸಿದ್ದೇವೆ. ರಸ್ತೆ, ಕುಡಿಯುವ ನೀರು, ಪಡಿತರ ಚೀಟಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಗಡ್ಡದೇವರಮಠ ಅವರನ್ನು ಬೆಂಬಲಿಸಬೇಕು' ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಶಂಕರಗೌಡ ಪಾಟೀಲ ಮನವಿ ಮಾಡಿದರು.

ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್‌ನಲ್ಲೂ ಬಂಡಾಯದ ಕಹಳೆ ಮೊಳಗಿದೆ. ಬಂಡಾಯ ಅಭ್ಯರ್ಥಿಯಾಗಿ ಶಿವಾಜಿ ಸುಂಟಕರ, ಲಕ್ಷ್ಮಣ ಹೊನಗೇಕರ ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT