ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತನ್ ನಿರ್ಗಮನ ಮಿಸ್ತ್ರಿ ಆಗಮನ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

28.12.2012. ಇನ್ನೆರಡೇ ದಿನ ಬಾಕಿ!
ಅದು ಭಾರತದ ಪ್ರತಿಷ್ಠಿತ `ಟಾಟಾ ಕಂಪೆನಿಗಳ ಸಮೂಹ'ದ ಪಾಲಿಗೆ ಹಲವು ಕಾರಣಗಳಿಗೆ ಮಹತ್ವದ ದಿನ.
ನೂರಕ್ಕೂ ಹೆಚ್ಚು ಕಂಪೆನಿಗಳ ಒಡೆತನ ಹೊಂದಿರುವ ಟಾಟಾ ಸಮೂಹವನ್ನು 21 ವರ್ಷಗಳಿಂದ (1991) ಮುನ್ನಡೆಸಿದ, ಸಮೂಹದ ಮಾತೃಸಂಸ್ಥೆ `ಟಾಟಾ ಸನ್ಸ್' ಅಧ್ಯಕ್ಷರಾಗಿದ್ದ ರತನ್ ಟಾಟಾ ನಿರ್ಗಮನ.

ಮೂಲಸೌಕರ್ಯ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವ್ಯಾಪಕ ಅನುಭವವಿರುವ, ಹೊಸಬಗೆ ಆಲೋಚನೆಗಳ ನಲವತ್ತನಾಲ್ಕೂವರೆ ವರ್ಷದ(ಜನನ 1968 ಜುಲೈ 4) ಸೈರಸ್ ಮಿಸ್ತ್ರಿ `ಟಾಟಾ ಸನ್ಸ್' ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

ಮೂರನೆಯ ಗಮನ ಸೆಳೆವ ಅಂಶವೆಂದರೆ, `ಟಾಟಾ' ಸರ್‌ನೇಮ್ ಇರದ, ಟಾಟಾ ವಂಶಸ್ಥರೂ ಅಲ್ಲದ ವ್ಯಕ್ತಿಯ ನೇಮಕ.
ಟಾಟಾ ಕುಟುಂಬಕ್ಕೆ ಸೇರದ ವ್ಯಕ್ತಿ  ಪ್ರತಿಷ್ಠಿತ ಈ ಉದ್ಯಮ ಸಮೂಹದ ಮುಖ್ಯಸ್ಥರಾಗಿ ಅಧಿಕಾರ ದಂಡ ಹಿಡಿಯುತ್ತಿರುವ  ಎರಡನೇ ಪ್ರಸಂಗವಿದು.

ಈ ಹಿಂದೆ ಸರ್ ದೋರಬ್‌ಜಿ ಟಾಟಾ ನಿರ್ಗಮನದ ನಂತರ 1932ರಲ್ಲಿ `ಸರ್ ನೌರೋಜಿ ಸಕ್ಲತ್ವಾಲಾ' ಅವರು ಟಾಟಾ ಸಮೂಹ ಮುಖ್ಯಸ್ಥರಾಗಿ ಆರು ವರ್ಷಗಳವರೆಗೆ ಜವಾಬ್ದಾರಿ ನಿರ್ವಹಿಸಿದ್ದರು. ಅವರೂ ಟಾಟಾ ಕುಟುಂಬಕ್ಕೆ ಹೊರಗಿನವರೇ ಆಗಿದ್ದರು.

ಸಂಸ್ಥಾಪಕ ಜೆಮ್‌ಷೆಡ್‌ಜಿ ಎನ್.ಟಾಟಾ ಅವರ ಪ್ರಯತ್ನದ ಫಲವಾಗಿ 1868ರಂದು ಟಾಟಾ ಉದ್ಯಮದ ಬೀಜ ಮೊಳಕೆ ಒಡೆಯಿತು. ಅಂದಿನಿಂದ ಇಲ್ಲಿಯವರೆಗೆ (144 ವರ್ಷ) ಐವರು ಈ ಸಮೂಹವನ್ನು ಮುನ್ನಡೆಸಿದ್ದಾರೆ.  ರತನ್ ಟಾಟಾ (1991- 2012) ಐದನೇ ಅಧ್ಯಕ್ಷ.

ದೊಡ್ಡ ಕನಸುಗಾರ

ರತನ್ ಟಾಟಾ, ಒಬ್ಬ ಉದ್ಯಮಿಯಾಗಿ ಬಹಳ ದೊಡ್ಡ ಕನಸುಗಾರ.  ಚಿನ್ನದ ಚಮಚೆಯನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವರು ಎಂಬಂತೆ ಆಗರ್ಭ ಸಿರಿವಂತರಾಗಿದ್ದ ರತನ್, ಅವರ ಕನಸುಗಳು ದೊಡ್ಡವು. ಅದರಲ್ಲಿ ಮಧ್ಯಮ ವರ್ಗದವರಿಗಾಗಿಯೂ ಸ್ವಲ್ಪ ಜಾಗವಿತ್ತು. ಅವರಿಗಾಗಿ ಕಂಡ  ಕನಸೇ `ನ್ಯಾನೋ'. ಇದು  ರೂ. 1.35 ಲಕ್ಷ ಬೆಲೆಯ ಪುಟ್ಟ ಕಾರಿನ ಜನನಕ್ಕೆ ಕಾರಣವಾಯಿತು. ಮೂರು ಚಕ್ರದ ಗೂಡ್ಸ್ ಆಟೊ ಚಾಲಕರಿಗೂ ಪುಟ್ಟ ಲಾರಿ `ಏಸ್' ಮೂಲಕ ನಾಲ್ಕು ಚಕ್ರ ಮತ್ತು ಸ್ಟೀರಿಂಗ್ ಇರುವ ವಾಹನ ಒದಗಿಸಲೂ  ಕನಸೇ ಪ್ರೇರಣೆ.

ಇನ್ನೊಂದೆಡೆ, ಭಾರತದ ಸಿರಿವಂತರಿಗೆ ಕೋಟಿ ರೂಪಾಯಿ ಮೌಲ್ಯದ, ಅತ್ಯಾಧುನಿಕ ಶೈಲಿ-ಸೌಲಭ್ಯಗಳ ಕಾರನ್ನು ಕೊಡಬೇಕು ಎಂಬ ಕನಸನ್ನೂ `ಜಾಗ್ವಾರ್' ಮೂಲಕ ನನಸಾಗಿಸಿ ಕೊಂಡವರು ರತನ್.

ವೃತ್ತಿಬದುಕು
1962ರಲ್ಲಿ ಟಾಟಾ ಸಾಮ್ರಾಜ್ಯದಲ್ಲಿಯೇ ಸಾಮಾನ್ಯ ನೌಕರನಂತೆ ವೃತ್ತಿ ಬದುಕು ಆರಂಭಿಸಿದರು ರತನ್ ಟಾಟಾ. ಮೊದಲಿಗೆ `ಟಾಟಾ ಸ್ಟೀಲ್' ಕಂಪೆನಿಯ `ಷಾಪ್ ಫ್ಲೋರ್'ನಲ್ಲಿ ಸುಣ್ಣದ ಕಲ್ಲು ಪುಡಿ ಮಾಡುವ, ಬ್ಲಾಸ್ಟ್ ಫರ್ನೇಸ್ ಕೆಲಸ ನಿರ್ವಹಿಸುವ ವಿಭಾಗದಲ್ಲಿ ದುಡಿದು ಅನುಭವ ಪಡೆದರು.

1971ರಲ್ಲಿ `ನ್ಯಾಷನಲ್ ರೇಡಿಯೊ ಅಂಡ್ ಎಲೆಕ್ಟ್ರಾ    ನಿಕ್ಸ್'(ನೆಲ್ಕೊ) ನಿರ್ದೇಶಕರಾಗಿ ನೇಮಕಗೊಳ್ಳುವ ಮೂಲಕ ಉದ್ಯಮದ ಜವಾಬ್ದಾರಿಯ ಮೊದಲ ಹೊರೆ ಹೊತ್ತರು. ನೆಲ್ಕೊ ಶೇ 2ರಷ್ಟು ಅಲ್ಪ ಮಾರುಕಟ್ಟೆ ಪಾಲಿನೊಂದಿಗೆ ಶೇ 40ರಷ್ಟು ನಷ್ಟದಲ್ಲಿತ್ತು. ಅಂತಹ ಕಂಪೆನಿಗೂ ಪರಿಶ್ರಮದ ಮೂಲಕ ಶೇ 25ರಷ್ಟು ಮಾರುಕಟ್ಟೆ ಪಾಲು ದೊರಕಿಸಿಕೊಟ್ಟಿದ್ದರು.

1977ರಲ್ಲಿ ಎರಡನೇ ದೊಡ್ಡ ಜವಾಬ್ದಾರಿಯಾಗಿ ಹೆಗಲೇರಿದ್ದೂ ನಷ್ಟದಲ್ಲಿದ್ದ `ಎಂಪ್ರೆಸ್ ಮಿಲ್' ರೂಪದಲ್ಲಿ!

ಅವಿವಾಹಿತ ರತನ್
ಸರಕು ಸಾಗಣೆಯ ಪುಟ್ಟ ವಾಹನ `ಏಸ್' ಬಿಡುಗಡೆಗೆ ರತನ್ ಟಾಟಾ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಅವರನ್ನು ಸಮೀಪದಿಂದ ನೋಡಿದ್ದೆ. ಮೆಲ್ಲಗೆ ಚಿವುಟಿದರೆ ರಕ್ತ ಚಿಮ್ಮುವುದೇನೋ ಎಂಬಂತಹ ಕೆಂಪುಗೆನ್ನೆಯ ರತನ್  ಅವರ ಮೊಗದಲ್ಲಿ ಎದ್ದು ಕಾಣುವಂತಹ ನಾಸಿಕ. ಎತ್ತರದ ಆಳು. ನಿಧಾನವೂ ಅಲ್ಲ, ವೇಗವೂ ಅಲ್ಲ ಎಂಬಂತಹ, ಆದರೆ ದಾಪುಗಾಲಿನ ದೃಢವಾದ ನಡಿಗೆ.

ಸದಾ ಉದ್ಯಮದ ಜಪದಲ್ಲೇ ಇರುತ್ತಿದ್ದ ಅವರು ಅದೇಕೋ ಮದುವೆಗೆ ಮನಸ್ಸು ಮಾಡಲಿಲ್ಲ. ಅವರ ಸಂಸಾರವೆಂದರೆ ಟಾಟಾ ಸಮೂಹವೇ ಆಗಿದ್ದಿತು. ಉದ್ಯಮ, ವಹಿವಾಟು, ಅಭಿವೃದ್ಧಿ, ಪ್ರಚಾರ, ಫಲಿತಾಂಶ ಇವೇ ಪ್ರತಿನಿತ್ಯದ ಬದುಕಿನಲ್ಲಿ ಪೂಜೆ-ಮಂತ್ರ, ಊಟ-ನಿದ್ರೆ ಎಲ್ಲವೂ ಆಗಿದ್ದವು. ಹಲವು ಸವಾಲುಗಳ ನಡುವೆ ಅನುಭವ ಪಡೆಯುತ್ತಾ, ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ, ಕನಸುಗಳನ್ನು ಕಾಯ್ದುಕೊಳ್ಳುತ್ತಾ ಸಾಗಿಬಂದ ರತನ್ ಟಾಟಾ, ದಿನದ ಬಹುತೇಕ ಸಮಯವನ್ನು ಉದ್ಯಮದ ನಡುವೆಯೇ ಕಳೆದುಬಿಟ್ಟರು. ಇದರಿಂದಲೇ ಏನೋ, ಅವರ ನೇತೃತ್ವದ ಎರಡು ದಶಕದ ಅವಧಿಯಲ್ಲಿ ಟಾಟಾ ಸಮೂಹ ಐದು ಪಟ್ಟು ದೊಡ್ಡದಾಗಿ ಬೆಳೆಯಲು ಸಾಧ್ಯವಾಯಿತು.

ಜೆ.ಆರ್.ಡಿ ಟಾಟಾ ಅವರಿಂದ ರತನ್ ಟಾಟಾ 1991ರಲ್ಲಿ  ಸಮೂಹದ ಮುಖ್ಯಸ್ಥನ ಅಧಿಕಾರ ವಹಿಸಿಕೊಂಡಾಗ ವಿವಿಧ ಕವಲುಗಳಾಗಿ ಹಂಚಿಹೋಗಿದ್ದ ಟಾಟಾ ಲಾಂಛನದ ಉದ್ಯಮಗಳನ್ನು `ಟಾಟಾ ಸನ್ಸ್' ಎಂಬ ಒಂದೇ ಛಾವಣಿಯಡಿ ತರುವ ದೊಡ್ಡ ಜವಾಬ್ದಾರಿ ಅವರದ್ದಾಗಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಷ್ಟೇ ಅಲ್ಲದೆ, ವಿದೇಶಗಳಲ್ಲಿನ ಕೆಲವು ಪ್ರಮುಖ ಕಂಪೆನಿಗಳನ್ನೂ ಖರೀದಿಸಿದರು.

ಚಹಾ ತಯಾರಿಕೆಯ `ಟೆಟ್ಲಿ', ದುಬಾರಿ ಕಾರು ಕಂಪೆನಿ `ಜಾಗ್ವಾರ್ ಲ್ಯಾಂಡ್ ರೋವರ್', ಪ್ರಸಿದ್ಧ ಉಕ್ಕು ಕಂಪೆನಿ `ಕೋರಸ್' ಮೊದಲಾದವನ್ನು ಖರೀದಿಸಿದರು. ಆ ಮೂಲಕ ಟಾಟಾ ಸಾಮ್ರಾಜ್ಯವನ್ನು ದೇಶ-ವಿದೇಶದಲ್ಲಿ ದೊಡ್ಡ ಮಟ್ಟದಲ್ಲಿ ವಿಸ್ತರಿಸಿದರು.

ಉಕ್ಕು, ವಾಹನ ಉದ್ಯಮ, ವಿದ್ಯುತ್, ರಾಸಾಯನಿಕ ತಯಾರಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ವಹಿವಾಟು ಹೊಂದಿದ್ದ ಟಾಟಾ ಸಮೂಹ, ಮಾಹಿತಿ ತಂತ್ರಜ್ಞಾನ ಯುಗದ ಪ್ರಭಾವಕ್ಕೂ ಒಳಪಟ್ಟಿತು. ಅದು `ಟಾಟಾ ನ್ಸಲ್ಟೆನ್ಸಿ ಸರ್ವಿಸಸ್'(ಟಿಸಿಎಸ್) ಆರಂಭಕ್ಕೆ ಮುನ್ನುಡಿ ಬರೆಯಿತು.

ಸದ್ಯ ವರಮಾನ, ವಿಸ್ತಾರ, ಸಾಮರ್ಥ್ಯ, ಸಿಬ್ಬಂದಿ ಸಂಖ್ಯೆ ಎಲ್ಲದರಿಂದಾಗಿ ಭಾರತದ ನಂ. 1 `ಮಾಹಿತಿ ತಂತ್ರಜ್ಞಾನ' ಕಂಪೆನಿ ಎನಿಸಿಕೊಂಡಿರುವ  `ಟಿಸಿಎಸ್', ನೆರೆಯ ಚೀನಾದಲ್ಲೂ ಪ್ರಾಬಲ್ಯ ತೋರಿದೆ.

ಉಪ್ಪಿನಿಂದ ಉಕ್ಕಿನವರೆಗೆ, ಲಾರಿ, ಬಸ್ ತಯಾರಿಕೆಯಲ್ಲಿ ವಿಶ್ವಾಸಾರ್ಹತೆ ಗಳಿಸಿದ್ದ `ಟಾಟಾ ಬ್ರಾಂಡ್', ಏರ್ ಕಂಡೀಷನರ್(ವೋಲ್ಟಾಸ್), ಚಿನ್ನಾಭರಣ(ಟ್ಯಾನಿಷ್ಕ್), ಕೈಗಡಿಯಾರ(ಟೈಟಾನ್), ಸಿದ್ಧ ಉಡುಪು (ವೆಸ್ಟ್‌ಸೈಡ್) ಮೊದಲಾದ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸಿದೆ.

ರತನ್ ಟಾಟಾ ಅವರ ದೂರದೃಷ್ಟಿ ಮತ್ತು ಕನಸುಗಳಿಂದಾಗಿ ಟಾಟಾ ಸಮೂಹ `ಬಹುರಾಷ್ಟ್ರೀಯ ಕಂಪೆನಿ' ಎನಿಸಿಕೊಂಡು ಜಾಗತಿಕ ಮಟ್ಟಕ್ಕೆ ಸಾಮ್ರಾಜ್ಯ ವಿಸ್ತರಿಸಿಕೊಂಡಿದೆ.

ಇದು ಟಾಟಾ ಸಮೂಹ
ಉಪ್ಪಿನಿಂದ ಹಿಡಿದು ಸಾಫ್ಟ್‌ವೇರ್‌ವರೆಗೆ ವಹಿವಾಟು ಇರುವ ಟಾಟಾ ಸಮೂಹದ ಒಟ್ಟು ವರಮಾನ 10 ಸಾವಿರ ಕೋಟಿ ಡಾಲರ್(ರೂ. 5,50,000 ಕೋಟಿ)ಗೂ ಅಧಿಕ. ಮಾಹಿತಿ ತಂತ್ರಜ್ಞಾನ, ಎಂಜಿನಿಯರಿಂಗ್, ರಾಸಾಯನಿಕ, ಉಕ್ಕು, ಗ್ರಾಹಕ ಸರಕು ಸೇರಿದಂತೆ 7  ಕ್ಷೇತ್ರಗಳಲ್ಲಿ 100ಕ್ಕೂ ಹೆಚ್ಚು ಕಂಪೆನಿಗಳು ಟಾಟಾ ಸಮೂಹದಡಿ ಕಾರ್ಯನಿರ್ವಹಿಸುತ್ತಿವೆ. `ಟಾಟಾ ಸನ್ಸ್' ಕಂಪೆನಿಯು ಈ ಎಲ್ಲೂ ಸಂಸ್ಥೆಗಳ ಪ್ರವರ್ತಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಒಟ್ಟು 4,55,947 ಜನರಿಗೆ ಉದ್ಯೋಗವನ್ನೂ ಈ ಬೃಹತ್ ಸಮೂಹ ಒದಗಿಸಿದೆ.

1743 ಕೋಟಿ ವರಮಾನವಿರುವ ತಾಜ್ ಹೋಟೆಲ್ಸ್ ಸರಣಿಯೂ ಟಾಟಾ ಸಮೂಹದ ಒಡೆತನಕ್ಕೆ ಸೇರಿದೆ. 
`ಟಾಟಾ ಬ್ರಾಂಡ್'ನಡಿ ಬರುವ ಕಂಪೆನಿಗಳ ಸಂಖ್ಯೆ 12. ಉಳಿದಂತೆ 80ಕ್ಕೂ ಹೆಚ್ಚು ದೇಶಗಳಲ್ಲಿ ವಹಿವಾಟು ಹೊಂದಿರುವ ಟಾಟಾ ಸಮೂಹದ ಒಟ್ಟು 31 ಕಂಪೆನಿಗಳು ವಿವಿಧ ಷೇರುಪೇಟೆಗಳಲ್ಲಿ ನೋಂದಾಯಿತವಾಗಿವೆ. ಟಾಟಾ ಸಮೂಹದ ಒಟ್ಟು ವರಮಾನದಲ್ಲಿ ಶೇ 58ರಷ್ಟು ದೊಡ್ಡ ಪಾಲು ವಿದೇಶಗಳಲ್ಲಿನ ಅಧೀನ ಸಂಸ್ಥೆಗಳು ಮತ್ತು ಸಾಗರೋತ್ತರ ಚಟುವಟಿಕೆಗಳಿಂದಲೇ ಬರುತ್ತದೆ.

ಸೈರಸ್ ಮಿಸ್ತ್ರಿ
ಇಂಥ ಬೃಹತ್ ಸಮೂಹವನ್ನು ಮುನ್ನಡೆಸುವ-ವಿಸ್ತರಿಸುವ ಬಹುದೊಡ್ಡ ಹೊಣೆಗಾರಿಕೆ ಸೈರಸ್ ಮಿಸ್ತ್ರಿ ಅವರದ್ದಾಗಿದೆ.
ಮೂಲ ಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರದ ಹೆಸರಾಂತ ಐರಿಷ್ -ಪಾರ್ಸಿ ಉದ್ಯಮಿ ಪಲ್ಲೋಂಜಿ ಮಿಸ್ತ್ರಿ ಅವರ ಕಿರಿಯ ಪುತ್ರ ಸೈರಸ್.

ಟಾಟಾ ಸಮೂಹದ ಆರನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ  ಸೈರಸ್ ಮಿಸ್ತ್ರಿ ಅವರ ಕುಟುಂಬಕ್ಕೆ ಟಾಟಾ ಸಮೂಹದ ನಂಟು ಹೊಸದೇನಲ್ಲ. ಸೈರಸ್ ಅವರ ತಾತಾ, ಷಪೂರ್ಜಿ ಪಲ್ಲೊಂಜಿ ಮಿಸ್ತ್ರಿ(ಜನನ 1889) ಅವರು 1930ರಲ್ಲಿಯೇ ಟಾಟಾ ಕಂಪೆನಿಗಳ ಷೇರು ಹೊಂದಿದ್ದರು. ಈಗ ಟಾಟಾ ಸಮೂಹದ ಶೇ 18.5ರಷ್ಟು ದೊಡ್ಡ ಷೇರು ಪಾಲು ಮಿಸ್ತ್ರಿ ಕುಟುಂಬದಲ್ಲಿದೆ.

ಸೈರಸ್ ಕೂಡಾ ಟಾಟಾ ಕುಟುಂಬಕ್ಕೆ ದೂರದವರೇನೂ ಅಲ್ಲ. ರತನ್ ಟಾಟಾ ತಂದೆ ನವಲ್ ಟಾಟಾ ಅವರ ಎರಡನೇ ಪತ್ನಿ ಸಿಮೋನ್. ಇವರಿಗೆ ಜನಿಸಿದವರೇ ನೋಯೆಲ್ ಟಾಟಾ. ರತನ್ ಅವರ ಈ ಕಿರಿಯ ಸೋದರನಿಗೇ ಸೈರಸ್ ಅವರ ಸೋದರಿ `ಆಲೂ'ವನ್ನು ಮದುವೆ ಮಾಡಿಕೊಡಲಾಗಿದೆ. ಹೀಗೆ ಟಾಟಾ ಕುಟುಂಬಕ್ಕೆ ಸೈರಸ್ ಹತ್ತಿರದ ನೆಂಟ.

ಶಿಕ್ಷಣ-ಅನುಭವ
ಮಿಸ್ತ್ರಿ ಪ್ರಾಥಮಿಕ ಶಿಕ್ಷಣ ಮುಂಬೈನ ಕೆಥೆಡ್ರಲ್ ಅಂಡ್ ಜಾನ್ ಕೊನೊನ್ ಸ್ಕೂಲ್‌ನಲ್ಲಾಗಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್(ಬಿಇ) ಪದವಿ. ನಂತರ `ಲಂಡನ್ ಬಿಜಿನೆಸ್ ಸ್ಕೂಲ್'ನಲ್ಲಿ ಮ್ಯಾನೇಜ್‌ಮೆಂಟ್ ವಿಷಯದಲ್ಲಿ `ಎಂಎಸ್' ಸ್ನಾತಕ ಪದವಿ. `ಇನ್‌ಸ್ಟಿಟ್ಯೂಟ್ ಆಫ್ ಸಿವಿಲ್ ಎಂಜಿನಿಯರ್ಸ್' ಫೆಲೊ.

ಲಂಡನ್‌ನಲ್ಲಿ ಓದು ಮುಗಿಸಿದ ತಕ್ಷಣ ಕುಟುಂಬದ ಒಡೆತನದ ನಿರ್ಮಾಣ ಉದ್ಯಮದಿಂದಲೇ ವೃತ್ತಿಬದುಕು ಆರಂಭಿಸಿದಾಗ ಸೈರಸ್ ಅವರಿಗೆ ತಂದೆ ಹೇಳಿದ ಮಾತು, `ಎಂಜಿನಿಯರಿಂಗ್ ಮತ್ತು ನಿರ್ಮಾಣ ಹಾಗೂ ಸರಕು ಸಂಗ್ರಹ ಉದ್ಯಮಕ್ಕೆ ಭಾರಿ ಭವಿಷ್ಯವಿದೆ.

ಅದನ್ನೇ ಹೆಚ್ಚು ಬೆಳೆಸು'.ಅಪ್ಪನ ಮಾತನ್ನು ಶಿರಸಾವಹಿಸಿ ಪಾಲಿಸಿದ ಸೈರಸ್, ಮಧ್ಯಪ್ರಾಚ್ಯ, ಓಮನ್‌ನಲ್ಲಿ ನಿರ್ಮಾಣ ಕಾರ್ಯದಲ್ಲಿ ಗಮನ ಕೇಂದ್ರೀಕರಿಸಿದರು. ಅವರಿಗೆ ಮೂಲ ಸೌಕರ್ಯ ಮತ್ತು ಕಟ್ಟಡ ನಿರ್ಮಾಣ ರಂಗದಲ್ಲಿ ಅಪಾರ ಅನುಭವ. 

ದಶಕದ ಹಿಂದೆ ಭಾರತದಲ್ಲಿ ನಿರ್ಮಾಣ ಉದ್ಯಮ ವೇಗವಾಗಿ ಬೆಳೆಯುತ್ತಿದ್ದ ಸಂದರ್ಭ. ಭವಿಷ್ಯದ ನೋಟ ಕಂಡ ಸೈರಸ್, ಭಾರತ ಮತ್ತು ವಿದೇಶದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿದ್ದ `ಅಫ್ಕಾನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ.' ಕಂಪೆನಿ ಖರೀದಿಸಿದ ಸೈರಸ್, ಅದರ ಅಧ್ಯಕ್ಷರಾದರು. ದೆಹಲಿ ಮೆಟ್ರೊ ನಿರ್ಮಾಣ ಕೈಗೊಂಡರು.

ಹೀಗೆ ನಿರ್ಮಾಣ ರಂಗದ ಅನುಭವ ಗಳಿಸುತ್ತಲೇ ರೂ. 15,000 ಕೋಟಿ ಮೌಲ್ಯದ `ಷಪೂರ್ಜಿ ಪಲ್ಲೋಂಜಿ ಸಮೂಹ'ದ ಅಧ್ಯಕ್ಷರೂ ಆದ ಸೈರಸ್, `ಸಪೂರ್ಜಿ ಪಲ್ಲೋಂಜಿ ಅಂಡ್ ಕಂಪೆನಿ'ಯ  ವ್ಯವಸ್ಥಾಪಕ ನಿರ್ದೇಶಕ ಹಾಗೂ ಫೋರ್ವಲ್ ಇಂಟರ್‌ನ್ಯಾಷನಲ್ ಸರ್ವಿಸಸ್ ಲಿ., ಸೈರಸ್ ಇನ್ವೆಸ್ಟ್‌ಮೆಂಟ್ಸ್ ಲಿ., ಬ್ಯುಲ್ಡ್‌ಬಜಾರ್ ಟೆಕ್ನಾಲಜೀಸ್ ಪ್ರೈ.ಲಿ., ಸ್ಟರ್ಲಿಂಗ್ ಇನ್ವೆಸ್ಟ್‌ಮೆಂಟ್, ಸಮಲ್‌ಪಟ್ಟಿ ಪವರ್ ಕಂಪೆನಿ ಮತ್ತು ಷಪೂರ್ಜಿ ಪಲ್ಲೋಂಜಿ ಹೆಸರಿನ ಏಳು ಕಂಪೆನಿಗಳ ನಿರ್ದೇಶಕ. ಅಲ್ಲದೆ, ವಾಣಿಜ್ಯೋದ್ಯಮ ಸಂಘಟನೆ `ಕನ್‌ಸ್ಟ್ರಕ್ಷನ್ ಫೆಡರೇಷನ್ ಆಫ್ ಇಂಡಿಯ'ದ ಸ್ಥಾಪಕ ಸದಸ್ಯ.

ಸವಾಲು-ಕಿವಿಮಾತು
ಟಾಟಾ ಸಮೂಹದ ಭಾವಿ ಅಧ್ಯಕ್ಷ, ರತನ್ ಟಾಟಾ ಅವರ ಉತ್ತರಾಧಿಕಾರಿ ಎಂದು 2001ರ ನವೆಂಬರ್‌ನಲ್ಲಿ ಘೋಷಣೆ ಆದಾಗ ಸೈರಸ್ ಮಿಸ್ತ್ರಿ ಪ್ರತಿಕ್ರಿಯಿಸಿದ್ದು; `ಇಂಥ ಬೃಹತ್ ಉದ್ಯಮ ಸಮೂಹದ ಮುಖ್ಯಸ್ಥನಾಗುವುದೆಂದರೆ ಬಹಳ ದೊಡ್ಡ ಗೌರವ, ಅಷ್ಟೇ ದೊಡ್ಡ ಹೊಣೆಗಾರಿಕೆ. ಸಂತಸವೂ ಆಗುತ್ತಿದೆ, ಮುಂದಿರುವ ಜವಾಬ್ದಾರಿಗಳು, ಸವಾಲುಗಳ ಅರಿವೂ ಇದೆ. ಯಶಸ್ವಿಯಾಗಿ ನಿಭಾಯಿಸಲು ಅನುಭವಿ ಟಾಟಾ ಅವರ ಮಾರ್ಗದರ್ಶನ ಅತ್ಯಗತ್ಯ'.

ಸೈರಸ್ ಮಿಸ್ತ್ರಿ ಅವರು `ಟಾಟಾ ಸನ್ಸ್' ಅಧ್ಯಕ್ಷರಾಗಿ ಡಿ. 28ರಂದು ಅಧಿಕಾರ ಸ್ವೀಕರಿಸುವರು ಎಂದು ಕಳೆದ ವಾರ ಅಧಿಕೃತ ಪ್ರಕಟಣೆ ಹೊರಬಿದ್ದ ಸಂದರ್ಭದಲ್ಲಿ ರತನ್ ಟಾಟಾ ಅವರು ಹೇಳಿದ ಕಿವಿಮಾತು; `ನೀವು ನೀವಾಗಿರಿ. ನಿರ್ಧಾರಗಳು ನಿಮ್ಮವೇ ಆಗಿರಲಿ. ಆದರೆ, ನೀವು ಕೈಗೊಳ್ಳುವ ಎಲ್ಲ ಕ್ರಮಗಳೂ ಸಾರ್ವಜನಿಕ ಪರಿಶೀಲನೆಗೆ ಒಳಗಾಗುತ್ತವೆ ಎಂಬ ಬಗ್ಗೆ ಎಚ್ಚರವಿರಲಿ'.

ನಿವೃತ್ತಿ ಡಿ.28ಕ್ಕೇ ಏಕೆ?
ಕಾರಣವಿಷ್ಟೆ, ರತನ್ ಟಾಟಾ ಜನ್ಮ ದಿನ ಡಿ. 28! ಹಾಗಾಗಿಯೇ ಅವರು ತಮ್ಮ 75ನೇ ವರ್ಷದಲ್ಲಿ ಜನ್ಮದಿನದಿಂದೇ ನಿವೃತ್ತರಾಗುತ್ತಿದ್ದಾರೆ.

ರತನ್ ಜನಿಸಿದ್ದು 1937ರ ಡಿಸೆಂಬರ್ 28. ತಂದೆ ನವಲ್ ಟಾಟಾ-ತಾಯಿ ಸೂನಿ. ರತನ್‌ಗೆ ಏಳು ವರ್ಷ, ಕಿರಿಯ ಸೋದರ ಜಿಮ್ಮಿಗೆ ಐದು ವರ್ಷವಾಗಿದ್ದಾಗ ಅಪ್ಪ-ಅಮ್ಮ ಬೇರೆಯಾದರು. ರತನ್ ಮತ್ತು ಜಿಮ್ಮಿಯನ್ನು ಸಲಹಿದ್ದು ಅಜ್ಜಿ ಲೇಡಿ ನವಜ್ ಬಾಯಿ. ನಂತರ ಟಾಟಾ ಸಮೂಹ ಸಂಸ್ಥಾಪಕ ಜೆಮ್‌ಷೆಡ್ ಜಿ ಅವರ ಮರಿಮೊಮ್ಮಗನಾಗಿ ದತ್ತು ಸ್ವೀಕಾರ.

ರತನ್ ಪ್ರಾಥಮಿಕ ಶಿಕ್ಷಣ ಮುಂಬೈ, ಶಿಮ್ಲಾದಲ್ಲಿ. ನಂತರ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಸ್ಟ್ರಕ್ಚರಲ್ ಎಂಜಿನಿಯರಿಂಗ್ ಆರ್ಕಿಟೆಕ್ಟ್‌ನಲ್ಲಿ ಪದವಿ. 1975ರಲ್ಲಿ ಹಾರ್ವರ್ಡ್ ಬಿಜಿನೆಸ್ ಸ್ಕೂಲ್‌ನಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ವ್ಯಾಸಂಗ.

ರತನ್ ಟಾಟಾ ಅವರಿಗೆ ದೇಶದ ಅತ್ಯುನ್ನತ ಗೌರವಗಳಾದ 2008ರಲ್ಲಿ ಪದ್ಮಭೂಷಣ, 2011ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸಂದಿವೆ. 2012ರಲ್ಲಿ ಪ್ರತಿಷ್ಠಿತ ರಾಕ್‌ಫೆಲ್ಲರ್ ಪ್ರತಿಷ್ಠಾನದಿಂದ `ಜೀವಮಾನದ ಸಾಧನೆ' ಪ್ರಶಸ್ತಿಯೂ ಸಂದಿದೆ.

ಸೈರಸ್‌ಗೆ ಟಾಟಾ ನಂಟು
2005ರಲ್ಲಿ ಸೈರಸ್ ಅವರ ತಂದೆ ಪಲ್ಲೋಂಜಿ ಮಿಸ್ತ್ರಿ ನಿವೃತ್ತರಾದಾಗ ಸೈರಸ್, `ಟಾಟಾ ಸನ್ಸ್' ನಿರ್ದೇಶಕ ಮಂಡಳಿ ಪ್ರವೇಶಿಸುವ ಅವಕಾಶ ಪಡೆದರು. 2006ರ ಸೆಪ್ಟೆಂಬರ್ 1ರಿಂದ ಅವರು ಟಾಟಾ ಸನ್ಸ್ ನಿರ್ದೇಶಕ. ಅದಕ್ಕೂ ಮುನ್ನ ಅಂದರೆ, 1990ರ ಸೆಪ್ಟೆಂಬರ್ 24ರಿಂದ 2009ರ ಅಕ್ಟೋಬರ್ 26ರವರೆಗೂ `ಟಾಟಾ ಎಲೆಕ್ಸಿ ಲಿ.'ನಲ್ಲಿ, 2006ರ ಸೆಪ್ಟೆಂಬರ್ 18ರವರೆಗೆ `ಟಾಟಾ ಪವರ್ ಕಂಪೆನಿ ಲಿ.'ನಲ್ಲಿ ನಿರ್ದೇಶಕರಾಗಿದ್ದರು.

22 ವರ್ಷಗಳಿಂದಲೂ ಒಂದಲ್ಲಾ ಒಂದು ಟಾಟಾ ಕಂಪೆನಿ ಒಡನಾಟದಲ್ಲಿ ಇರುವ ಸೈರಸ್, ಈ ಬೃಹತ್ ಉದ್ಯಮ ಕೂಟದ ಆಳ-ಅಗಲವನ್ನೆಲ್ಲಾ ಅರಿತವರೇ ಆಗಿದ್ದಾರೆ. ಹಾಗಾಗಿ ಅವರಿಗೆ ಟಾಟಾ ಸಮೂಹ ಹೊಸತೇನೂ ಅಲ್ಲ. ಅಲ್ಲದೆ, ಸಮೂಹದ ಸಾಮರ್ಥ್ಯ- ಸಾಧನೆ-ಸಂಕಷ್ಟ-ಸವಾಲು-ವೈಫಲ್ಯಗಳ ಅರಿವೂ ಅವರಿಗೆ ತಕ್ಕಮಟ್ಟಿಗೆ ಇದೆ ಎನ್ನಬಹುದು.

ನ್ಯಾನೋ ಜನನ
ಮಳೆಗಾಲದ ಒಂದು ರಾತ್ರಿ ರತನ್ ಟಾಟಾ ಮನೆಗೆ ಮರಳುವಾಗ ಕಂಡಿದ್ದು ಸ್ಕೂಟರ್‌ನಲ್ಲಿ ಸರ್ಕಸ್ ಮಾಡುತ್ತಾ ಸಂಚರಿಸುತ್ತಿದ್ದ ಪುಟ್ಟ ಕುಟುಂಬ. ಧೋ ಎಂದು ಸುರಿಯುತ್ತಿದ್ದ ಮಳೆ, ಸ್ಕೂಟರ್ ಚಕ್ರವನ್ನು ಜಾರಿಸುತ್ತಿದ್ದ ರಸ್ತೆ. ಮಡದಿ-ಇಬ್ಬರು ಮಕ್ಕಳನ್ನು ಕೂರಿಸಿಕೊಂಡು ಓಲಾಡುತ್ತಾ ಸ್ಕೂಟರ್ ಚಲಾಯಿಸುತ್ತಿದ್ದ ಆ ವ್ಯಕ್ತಿಯ ಶೋಚನೀಯ ಸ್ಥಿತಿ ಕಂಡಾಗ ರತನ್ ಅವರ ಮನಸ್ಸಿನಲ್ಲಿ ಮೂಡಿದ್ದು `ಮಧ್ಯಮ ವರ್ಗದವರಿಗೂ ಎಟಕುವಂತೆ ರೂ. 1ಲ್ಷಕ್ಕೆ ಕಾರು ತಯಾರಿಸಬೇಕು'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT