ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಾಕರವರ್ಣಿ ವೇದಿಕೆಯಲ್ಲಿ ಭೋರ್ಗರೆದ ಗಾನಗಂಗೆ

Last Updated 21 ಡಿಸೆಂಬರ್ 2013, 4:32 IST
ಅಕ್ಷರ ಗಾತ್ರ

ಮೂಡುಬಿದಿರೆ: ವಿರಾಟ್ ವೇದಿಕೆಗೆ ತಕ್ಕಂತೆ ಸಾಲು ಸಾಲು ಖ್ಯಾತ ಹಿನ್ನೆಲೆ ಗಾಯಕರು... ಅವರ ಹಿಂದೆ ಹಿನ್ನೆಲೆ ಸಂಗೀತಕ್ಕೆ ಕುಳಿತ ಹತ್ತಾರು ಮಂದಿಯ ಸುಮಧುರ ವಾದನ... ಇವರು ಹರಿಸಿದ ಗಾಯನ ಸುಧೆಯಲ್ಲಿ ಹಿರಿಯರು, ಯುವ­ಕರು ಎಂಬ ಭೇದವಿಲ್ಲದೆ ಮಿಂದ­ವರು ಅನೇಕರು...

ಹೌದು. ಇಂತಹದ್ದೊಂದು ರಸ­ಪೂರ್ಣ ಸಂಜೆಗೆ ಶುಕ್ರವಾರ ತಾಣ­ವಾಗಿದ್ದು ಆಳ್ವಾಸ್ ವಿಶ್ವ ನುಡಿಸಿರಿ ವಿರಾ­ಸತ್ 2013ರ ಅಂಗವಾಗಿ ರಚಿಸ­ಲಾ­ಗಿದ್ದ ರತ್ನಾಕರವರ್ಣಿ ವಿಶಾಲ ವೇದಿಕೆ.

ರಾಜೇಶ್ ಕೃಷ್ಣನ್, ಎಂ.ಡಿ. ಪಲ್ಲವಿ, ದಿವ್ಯಾ ರಾಘವನ್, ಬಿ.ಎಸ್. ಹೇ­ಮಂತ್. ಅಜಯ್ ವಾರಿಯರ್ ಹಾಗೂ ರಾಧಾಕೃಷ್ಣ ಮೋಹನ್. ಮತ್ತೇನು ಬೇಕು ಸಭಾಂಗಣ ಕಿಕ್ಕಿರಿಯಲು.

ಮೊದಲಿಗೆ ಎಂ.ಡಿ. ಪಲ್ಲವಿ ಅವರು ಹಾಡಿದ ‘ಅಜಂ ನಿರ್ವಿಕಲ್ಪಂ ನಿರಾಕಾ­ರಮೇಕಂ ನಿರಾನಂದಮಾನಂದ ಮದ್ವೈತ  ಪೂರ್ಣಂ...’ ಗಣೇಶ ಸ್ತುತಿ ಸಭೆಯ ನಾದಮಯ ಗುಂಗಿಗೆ ನಾಂದಿ ಹಾಡಿತು.

ಅವರು ಹಾಡಿದ ‘ದುನಿಯಾ’ ಚಿತ್ರ ‘ನೋಡಯ್ಯ ಕ್ವಾಟೇ ಲಿಂಗವೇ....’ ಹಾಡು ಕೇಳುಗರ ಮನಸೂರೆಗೊಂಡಿತು. ಇವೆಲ್ಲದಕ್ಕೂ ಕಳಸವಿಟ್ಟಂತೆ ಪಲ್ಲವಿ ಹಾಡಿದ ಕೆ.ಎಸ್. ನರಸಿಂಹಸ್ವಾಮಿ ರಚಿತ ‘ದೀಪವು ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು...’ ಹಾ­ಡಂತೂ ಭೋರ್ಗರೆಯುವ ಸಂಗೀತದ ಸುಧೆಯನ್ನೇ ಹರಿಸಿತು.

ಇದಕ್ಕೆ ಹಿನ್ನೆಲೆ­ಯಾಗಿ  ಮೂಡಿ ಬಂದ ಸಂಗೀತ­ವಂತೂ ರಸರೋಮಾಂಚನ­ಕಾರಿಯಾಗಿ ನೋಡುಗರು ತನ್ಮಯ­ರಾಗುವಂತೆ ಮಾಡಿತು.

ರಾಧಾಕೃಷ್ಣ ಮೋಹನ್ ಹಾಡಿದ ಕವಿರತ್ನ ಕಾಳಿದಾಸ ಚಿತ್ರದ ‘ಬೆಳ್ಳಿ ಮೂಡಿತೂ ಕೋಳಿ ಕೂಗಿತೂ’ ಹಾಡಿ­ಗಂತೂ ಪ್ರೇಕ್ಷಕ ವೃಂದ ಹುಚ್ಚೆದ್ದು ಕುಣಿಯಿತು. ಆಕಸ್ಮಿಕ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡಂತೂ ಇಡೀ ಸಮಾರಂಭದ ತಾರಕ ಗಾಯನವಾಗಿ ಅನುರಣಿಸಿತು.

ತಡವಾಗಿ ಬಂದರೂ ರಾಜೇಶ್ ಕೃಷ್ಣನ್ ಅವರಿಗೆ ಭರಪೂರ ಕರತಾಡನ ಹಾಗು ಶಿಳ್ಳೆಗಳ ಸ್ವಾಗತ ದೊರೆಯಿತು. ಅಮೆರಿಕ ಅಮೆರಿಕ ಚಿತ್ರದ ‘ನೂರು ಜನ್ಮಕೂ ನೂರಾರು ಜನ್ಮಕೂ’ ಹಾಡಿನ ಗುಂಗಿಗೆ ಕೇಳುಗರು ತನ್ಮಯರಾಗುವಂತೆ ಮಾಡಿತು.

ಹುಚ್ಚ ಚಿತ್ರದ ‘ಉಸಿರೇ ಉಸಿರೇ ನೀ ನನ್ನ ಕೊಲ್ಲಬೇಡ’ ಹಾಡು ಕೊಂಚ ವಿಷಾದದ ಛಾಯೆಯನ್ನು ಮೂಡಿಸಿ­ತಾದರೂ, ಮರುಗಳಿಗೆ ಅವರು ಹಾಡಿದ ನಿತ್ಯ ಹಸಿರಿನ ಗೀತೆ ‘ಸಂತೋಷಕೆ ಹಾಡು ಸಂತೋಷಕೆ....’ ಹಾಡಿಗೆ ಯುವ ಸಮೂಹ ಎದ್ದು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು.

ಉಳಿದಂತೆ ದಿವ್ಯಾ ರಾಘವನ್ ಹಾಗೂ ಅಜಯ್ ವಾರಿಯರ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಎರಡು ಕನಸು ಚಿತ್ರದ ‘ತಂನಂ ತಂನಂ ನನ್ನೀ ಮನಸು ಮಿಡಿಯುತ್ತಿದೆ...’ ಹಾಡಿಗೆ ಎಲ್ಲರ ಹೃದಯ ಮಿಡಿಯಿತು. ಇದನ್ನು ಅಬಾಲವೃದ್ಧರಾಗಿ ಎಲ್ಲರೂ ತಲೆದೂಗಿ ಆಸ್ವಾದಿಸಿದರು. ಹೇಮಂತ್ ಅವರು  ಪ್ರೀತ್ಸೆ... ಪ್ರೀತ್ಸೆ... ಹಾಡು ಹಾಡಿದಾಗ ಹುಚ್ಚೆದ್ದು ಕುಣಿಯದೇ ಇದ್ದ ಯುವಕರೇ ಅಲ್ಲಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT