ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಥಬೀದಿ ಶಾರದೆಗೆ ಭವ್ಯ ವಿದಾಯ

Last Updated 8 ಅಕ್ಟೋಬರ್ 2011, 10:20 IST
ಅಕ್ಷರ ಗಾತ್ರ

ಮಂಗಳೂರು: ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಳೆದ ಐದು ದಿನಗಳಿಂದ ಪೂಜೆಗೊಂಡ ಶಾರದಾ ಮಾತೆಯ ಭವ್ಯ ಶೋಭಾಯಾತ್ರೆ ಶುಕ್ರವಾರ ರಾತ್ರಿ ನಗರದಲ್ಲಿ ನಡೆಯಿತು.

89ನೇ ವರ್ಷದ ಸಾರ್ವಜನಿಕ ಶಾರದೋತ್ಸವ ಇದಾಗಿತ್ತು. ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಾತ್ರಿ 8.55ರ ಹೊತ್ತಿಗೆ ಶಾರದಾ ಮೂರ್ತಿಯನ್ನು ಪಲ್ಲಕಿಯಲ್ಲಿ ಕುಳ್ಳಿರಿಸಲಾಯಿತು. ಪೂಜೆಗಳು, ಇತರ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ 9.15ರ ಸುಮಾರಿಗೆ ಪಲ್ಲಕಿಯ ಮೇಲಿದ್ದ ಶಾರದೆಯನ್ನು ಸೊಗಸಾಗಿ ಅತ್ತಿಂದಿತ್ತ ತೂಗುತ್ತ ಹೆಗಲ ಮೇಲೆ ಹೊತ್ತು ಶೋಭಾಯಾತ್ರೆ ಆರಂಭಿಸಲಾಯಿತು.

ಶ್ರೀ ಮಹಾಮಾಯಾ ದೇವಸ್ಥಾನ, ಗದ್ದೆಕೇರಿ, ಎ.ಎಸ್.ಆರ್. ಪೈ ರಸ್ತೆ, ಡೊಂಗರಕೇರಿ, ಬಸವನಗುಡಿ, ಲೋವರ್ ಕಾರ್‌ಸ್ಟ್ರೀಟ್, ರಥಬೀದಿ ಹಾದು ಶ್ರೀ ಮಹಾಮಾಯಾ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನಗೊಳಿಸುವುದು ಸಂಪ್ರದಾಯ.  ಮೆರವಣಿಗೆಯ ಗತಿ ನೋಡಿದರೆ ಶಾರದೆಯ ವಿಸರ್ಜನೆ ಆಗುವಾಗ ನಸುಕಿನ 3 ಗಂಟೆ ಕಳೆಯಬಹುದು ಎಂದು ಭಕ್ತರು ಆಡಿಕೊಳ್ಳುತ್ತಿದ್ದರು.

ನಾಸಿಕ್ ಬ್ಯಾಂಡ್‌ಗಳ ಕಿವಿಗಡಚಿಕ್ಕುವ ಸದ್ದಿನೊಂದಿಗೆ ಹೊರಟ ಮೆರವಣಿಗೆ ವೆಂಕಟ್ರಮಣ ದೇವಸ್ಥಾನದ ಮುಂಭಾಗದಿಂದ, ಕಿಕ್ಕಿರಿದು ಸೇರಿದ್ದ ಜನಸ್ತೋಮದ ಮಧ್ಯೆ ನಿಧಾನವಾಗಿ ಸಾಗಿತು. ಶೋಭಾಯಾತ್ರೆ ಆರಂಭದ ಹಾದಿ ಇಕ್ಕಟ್ಟಾಗಿದ್ದ ಕಾರಣ ಸ್ತಬ್ಧಚಿತ್ರಗಳು ನವಭಾರತ ವೃತ್ತದ ಬಳಿ ಸೇರಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 10.30ರ ಸುಮಾರಿಗೆ ಪಲ್ಲಕಿಯಲ್ಲಿ ಕುಳಿತಿದ್ದ ಶಾರದಾ ಮಾತೆಯ ಮೆರವಣಿಗೆ ಕೆನರಾ ಶಾಲೆಯ ಸಮೀಪ ಬಂದಿತ್ತು.

ಸಾಂಪ್ರದಾಯಿಕ ವಿಧಿವಿಧಾನ: ವೆಂಕಟ್ರಮಣ ದೇವಸ್ಥಾನದ ಶಾರದೋತ್ಸವ ಆಧುನಿಕ ಸ್ಪರ್ಶದಲ್ಲೂ ಅತ್ಯಂತ ಸಾಂಪ್ರದಾಯಿಕವಾಗಿ ನಡೆಯುತ್ತಿರುವುದು ರೂಢಿ. ಈ ಬಾರಿಯೂ ಅದಕ್ಕೆ ಹೊರತಾಗಿರಲಿಲ್ಲ. ಝಗಮಗಿಸುವ ವಿದ್ಯುತ್ ಅಲಂಕಾರದೊಂದಿಗೆ ಪಲ್ಲಕಿಯ ಹಿಂಭಾಗದ ಪ್ರಭಾವಳಿಯನ್ನು ಸಿಂಗರಿಸಲಾಗಿತ್ತು.
ಹಾದಿಯುದ್ದಕ್ಕೂ ಹೆಚ್ಚುಕಮ್ಮಿ ಪ್ರತಿ ಮನೆಗಳಲ್ಲಿ ಆರತಿ ನಡೆಯುತ್ತಿತ್ತು. ಹೀಗಾಗಿ ಮೆರವಣಿಗೆ ನಿಧಾನವಾಗಿ ಮುಂದಕ್ಕೆ ಸಾಗಿತು.

ಹುಲಿವೇಷಗಳು: ಹೆಚ್ಚಿನ ಸ್ತಬ್ಧಚಿತ್ರ ವಾಹನಗಳಲ್ಲಿ ಹುಲಿವೇಷಗಳೇ ತುಂಬಿದ್ದವು. ಕಣ್ಣು ಕೋರೈಸುವ ಬೆಳಕಿನಲ್ಲಿ ಹುಲಿವೇಷಗಳು ಲಯಬದ್ಧ ತಾಳಕ್ಕೆ ತಕ್ಕಂತೆ ಕುಣಿದು ನೆರೆದಿದ್ದವರನ್ನು ರಂಜಿಸಿದವು.

ಕೆಲವೊಂದು ತೆರೆದ ಟ್ರಕ್‌ಗಳ ಮೇಲೆ ರಸಮಂಜರಿ ತಂಡಗಳು ಭಕ್ತಿಗೀತೆಗಳನ್ನು ಹಾಡಿದವು. ಒಂದು ಸ್ತಬ್ಧಚಿತ್ರ ಲೇಸರ್ ಬೆಳಕನ್ನು ಜನರ ಮೇಲೆ ಹಾಯಿಸಿ ಪುಳಕಗೊಳಿಸಿತು. ಒಟ್ಟು 15 ಸ್ತಬ್ಧಚಿತ್ರಗಳು ನೋಂದಾಯಿಸಿದ್ದು, ಸುಮಾರು 10  ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಸಹಸ್ರಾರು ಜನರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT