ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್ನ ಕಾವ್ಯದ ಪ್ರತಿ ಹಂತವೂ ಅಂತರಾವಲೋಕನ

Last Updated 6 ಜನವರಿ 2014, 8:58 IST
ಅಕ್ಷರ ಗಾತ್ರ

ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆ(ಮುಧೋಳ): ವ್ಯಷ್ಟಿ ಹಾಗೂ ಸಮಷ್ಟಿಯ ಸ್ವಾಸ್ಥ್ಯಕ್ಕಾಗಿ ಇಟ್ಟುಕೊಂಡ ಎಲ್ಲ ಮೌಲ್ಯಗಳ ಅನಾವರಣ ಮಾಡುತ್ತ ರನ್ನನು ಮಾನವೀಯ ಸಂಬಂಧಗಳಿಗೆ ಹೊಸ ಅರ್ಥ ನೀಡುತ್ತಾನೆ ಎಂದು ಬೆಳಗಾವಿಯ ಸಂಶೋಧಕ ಡಾ.ಬಸವರಾಜ ಜಗಜಂಪಿ ಹೇಳಿದರು.

ಕವಿಚಕ್ರವರ್ತಿ ರನ್ನ ಭವನದ ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆಯ ಮೇಲೆ ರನ್ನ ಉತ್ಸವ 2014ರ ಅಂಗವಾಗಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಯೋಜಿಸಿದ್ದ ‘ರನ್ನನ ಕೃತಿಗಳಲ್ಲಿ ಮನುಷ್ಯನ ಹುಡುಕಾಟ’ ಎಂಬ ವಿಷಯದ ವಿಚಾರ ಸಂಕಿರಣದ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡಿ­ದರು. 

ಕವಿಚಕ್ರವರ್ತಿ ರನ್ನನಿಂದ ರಚಿತಗೊಂಡ ಕಾವ್ಯದ ಪ್ರತಿ ಹಂತದಲ್ಲೂ ಮನುಷ್ಯನ ಹುಡುಕಾಟದ ವಾಸನೆ ಇದೆ. ಯುದ್ಧದ ನಂತರ ಸಂಬಂಧಗಳ ಕುರಿತು ದುರ್ಯೋಧನ­ನಿಂದ ಆಡಿಸುವ ಪ್ರತಿ ಮಾತುಗಳಲ್ಲೂ  ಮನುಷ್ಯನ ಅಂತರಾವಲೋಕನ ಕಾಣ ಸಿಗುತ್ತದೆ.

ರನ್ನ ರಚಿಸಿದ ಸಾಹಸ ಭೀಮ ವಿಜಯದಲ್ಲಿ ಮಹಾಭಾರತದ ಹದಿನೆಂಟು ದಿನಗಳ ಮಹಾಯುದ್ಧದ ನಂತರ ಸಾಲಾಗಿ ಬಿದ್ದ ಹೆಣಗಳನ್ನು ಪ್ರತ್ಯೇಕವಾಗಿ ಗುರುತಿಸಿ ಅವರಲ್ಲಿರುವ ವಿಶೇಷ ಗುಣಗಳನ್ನು ಹೇಳಿ ಪ್ರಲಾಪಿಸುವ ದುರ್ಯೋಧನನ ಪಾತ್ರ ಓದುಗನನ್ನು ಕಣ್ಣೀರು ಹಾಕುವಂತೆ ಮಾಡುತ್ತದೆ, ಭೀಮನ ಪಾತ್ರವನ್ನು ಕೆಳಗಿಳಿಸದೇ ಧುರ್ಯೋಧನನನ್ನು ಸುಯೋಧನ­ನನ್ನಾಗಿ ಮಾಡಿ ಅವನನ್ನು ಖಳ ನಾಯಕನಾಗಿ ಬಿಂಬಿಸದೇ ಪ್ರತಿನಾಯಕ­ನನ್ನಾಗಿ ಸೃಷ್ಟಿಸಿದ್ದು ರನ್ನನ ಕಾವ್ಯದ ಶೈಲಿಯ ಹೆಗ್ಗಳಿಕೆ ಎಂದು ಡಾ.ಜಗಜಂಪಿ ಅಭಿಪ್ರಾಯ ಪಟ್ಟರು.

ರನ್ನನು ಬಳಸಿದ ಭಾಷೆಯ ಅವಲೋಕನ ಮಾಡುತ್ತ ಹೋದರೆ ಅವನು ಪ್ರಯೋಗಿಸಿದ ಹೊಸ ಪದಗಳ ಪ್ರಯೋಗ ಅವನ ಪ್ರತಿಭೆಯನ್ನು ತೋರುತ್ತದೆ, ಅವನೊಬ್ಬ ಸಾಮಾನ್ಯ­ನಾಗಿ ಹುಟ್ಟಿ ತನ್ನ ಸೃಜನ ಶೀಲ ಬರಹದ ಮೂಲಕ ರಾಜಾಶ್ರಯ ಪಡೆದು ಶತಮಾನಗಳವರೆಗೂ ಅಳಿಯಲಾರದ ಕೃತಿಗಳನ್ನು ರಚಿಸಿದ್ದಾನೆ. ಅಂದಿನ ಕಾಲದ ಛಲ, ಹಗೆತನ ಹಾಗೂ ಮಾನವ ಸಹಜ ಸ್ವಭಾವಗಳನ್ನು ಕಾವ್ಯದಲ್ಲಿ ಪ್ರಯೋಗ ಮಾಡಿ ಸರಸ್ವತಿ ಭಾಂಡಾರದ ಮುದ್ರೆ ಒಡೆದ ಕವಿ ಎಂದೆನಿಸಿಕೊಂಡಿದ್ದಾನೆ ಎಂದು ಡಾ.ಜಗಜಂಪಿ ಹೇಳಿದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಧಾರವಾಡ ಬೇಂದ್ರೆ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಹೆಸರಾಂತ ವಿಮರ್ಶಕ ಡಾ.ಶ್ಯಾಮಸುಂದರ ಬಿದರಕುಂದಿ ಮಾತನಾಡಿ ಪಂಪ ಹಾಗೂ ರನ್ನರಂತಹ ಧರ್ಮವನ್ನು ಪ್ರತಿಪಾದಿಸುವ ಕವಿಗಳು ಜಗತ್ತಿನ ಯಾವ ಭಾಗದಲ್ಲೂ ಕಾಣುವುದಿಲ್ಲ, ಅವರ ಪ್ರತಿಯೊಂದು ಕೃತಿಗಳಲ್ಲೂ ಧರ್ಮವನ್ನು ಹೊಸ ಪರಿಭಾಷೆಯಿಂದ ಅರ್ಥೈಸಬಹುದಾದ ಓದಿನ ಅವಕಾಶ ದೊರೆಯುತ್ತದೆ. ಸಾಂದರ್ಭಿಕ ಸ್ತುತಿಗಳು ಶಾಶ್ವತವಲ್ಲ, ಯಾರು ಒಳ್ಳೆಯವರಿರುತ್ತಾರೋ ಅವರು ಒಳ್ಳೆಯವರಾಗಿಯೇ ಮುಂದು­ವ­ರಿದು ಸಮಾಜದ ಸ್ವಾಸ್ಥ್ಯ ಕಾಪಾಡ­ಬೇಕು ಎಂಬ ಆಶಯ ರನ್ನನ ಕೃತಿಗಳಲ್ಲಿ ಕಾಣುತ್ತೇವೆ ಎಂದು ಹೇಳಿದರು.

ಯುದ್ಧ ಎನ್ನುವುದು ವ್ಯರ್ಥ. ಅದರಿಂದ ಅಹಂಕಾರಕ್ಕೆ ಮಾತ್ರ ತೃಪ್ತಿ ಸಿಗುತ್ತದೆ. ಯುದ್ಧಗಳಿಂದ ಪ್ರೀತಿಯ ಸಂಬಂಧಗಳನ್ನು ಕಳೆದುಕೊಳ್ಳು­ತ್ತೇವೆ. ದುರ್ಯೋಧನ ತನ್ನ ಛಲ ಹಾಗೂ ಕ್ರೌರ್ಯದಿಂದ ಹೆಸರಾಗಿದ್ದರೂ ವೈಯಕ್ತಿಕ­ವಾಗಿ ಮಹಾನುಭಾವ­ನಾಗಿದ್ದ. ಅವನ ಗುಣಗಳನ್ನು ವಿವರಿಸುವಾಗ ರನ್ನನು ಮೂಲ ಕಾವ್ಯಕ್ಕೆ ಯಾವ ಬದಲಾವಣೆಯನ್ನೂ ಮಾಡು­ವು­ದಿಲ್ಲ. ಕೇವಲ ವೈಯಕ್ತಿಕ ನಡವಳಿಕೆ ಹಾಗೂ ಮನುಷ್ಯ ಹುಡುಕಾಟಗಳ ಹಿನ್ನೆಲೆಯಲ್ಲಿ ಮಾಡಿದ ಪಾತ್ರ ಸೃಷ್ಟಿ ರನ್ನನ ಕಾವ್ಯವನ್ನು ಸ್ಮರಣೀಯವಾಗಿಸಿವೆ ಎಂದು ಡಾ.ಬಿದರಕುಂದಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಹಾರ ಮತ್ತು ನಾಗರಿಕ ಪೂರೈಕೆ ಸಹಾಯಕ ನಿರ್ದೇಶಕ ಶ್ರೀಶೈಲ ಕಂಕನವಾಡಿ ಸ್ವಾಗತಿಸಿದರು. ಚಿಂತಕ ವಾಸಣ್ಣ ದೇಸಾಯಿ, ‘ಕವಿಕುಲತಿಲಕ ರನ್ನ’ ಕೃತಿಯ ಲೇಖಕ ಬಿ.ಪಿ. ಹಿರೇಸೋಮಣ್ಣವರ, ಕನ್ನಡ ಕಬೀರ ಇಬ್ರಾಹಿಂ ಸುತಾರ, ತಮ್ಮಣ್ಣಪ್ಪ ಬುದ್ನಿ, ವಿಭಾಗಾಧಿಕಾರಿ ಅಶೋಕ ದುಡಗುಂಟಿ, ಶಂಕರಗೌಡ ಸೋಮನಾಳ, ಡಿ.ಐ. ಹೆಗ್ಗೊಂಡ, ಜಾಜಿ ಮಲ್ಲಿಗೆಯ ಕವಿ ಸತ್ಯಾನಂದ ಪಾತ್ರೋಟ, ಸಾಹಿತಿ ಬಾಳಾಸಾಹೇಬ ಲೋಕಾಪೂರ, ಶ್ರೀಶೈಲ ಕರಿಶಂಕರಿ ಹಾಗೂ ಅನೇಕ ರನ್ನನ ಅಭಿಮಾನಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT