ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್ನ ವೈಭವಕ್ಕೆ ಮುಧೋಳ ಸಜ್ಜು

Last Updated 24 ಡಿಸೆಂಬರ್ 2012, 9:18 IST
ಅಕ್ಷರ ಗಾತ್ರ

ಮುಧೋಳ: `ಕವಿ ಚಕ್ರವರ್ತಿ' ರನ್ನನ ಜನ್ಮಸ್ಥಳವಾದ ಮುಧೋಳದಲ್ಲಿ ಇದೇ 24ರಿಂದ 26ರವರೆಗೆ `ರನ್ನ ವೈಭವ-2012' ನಡೆಯಲಿದ್ದು, ಇದಕ್ಕಾಗಿ ಇಲ್ಲಿಯ  ರನ್ನ ಕ್ರೀಡಾಂಗಣದಲ್ಲಿ ಎಲ್ಲ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ.

ಸಚಿವ ಗೋವಿಂದ ಕಾರಜೋಳ ಭಾನುವಾರ ನಗರದಲ್ಲಿ ಪಾದಯಾತ್ರೆ ನಡೆಸಿ `ಇದು ನಿಮ್ಮ ಮನೆಯ ಉತ್ಸವ, ಯಶಸ್ವಿಗೊಳಿಸುವುದು ನಿಮ್ಮ ಜವಾಬ್ದಾರಿ' ಎಂದು ಮನವಿ ಮಾಡಿದರಲ್ಲದೆ ಸಮಾರಂಭ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ರನ್ನ ಕ್ರೀಡಾಂಗಣದಲ್ಲಿ ಉತ್ಸವದ ಸಿದ್ಧತಾ ಕಾರ್ಯ ಪರಿಶೀಲಿಸಿದ ಅವರು “ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವನಾದ ನಂತರ 2ನೇ ಬಾರಿ ರನ್ನ ವೈಭವ ಉತ್ಸವ ನಡೆಯುತ್ತಿದ್ದು, ಕಳೆದ ಬಾರಿ ರೂ. 30 ಲಕ್ಷ ಮಂಜೂರಾಗಿದ್ದರೆ, ಈ ಸಲದ ಉತ್ಸವಕ್ಕೆ ರೂ. 40 ಲಕ್ಷ ಮಂಜೂರಾಗಿದೆ” ಎಂದರು.

ಸುಮಾರು ಒಂದು ಲಕ್ಷ ಜನ ಕಾರ್ಯಕ್ರಮ ವೀಕ್ಷಿಸುವಂತೆ ಎಲ್ಲ ವ್ಯವಸ್ಥೆ ಮಾಡಲಾಗಿದ್ದು,  ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ  ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯ ಮೇಲೆ ಸುಂದರವಾದ ಅರಮನೆಯ ಪ್ರತಿಕೃತಿಯನ್ನು ಖ್ಯಾತ ಕಲಾವಿದ ಮಂಜುನಾಥ ಮಾನೆ ಅವರ ತಂಡ ನಿರ್ಮಿಸುತ್ತಿದ್ದು, ಅರಮನೆಯ ದೃಶ್ಯ ಉತ್ಸವಕ್ಕೆ ಮತ್ತಷ್ಟು ಕಳೆ ತರುವಂತೆ ಮಾಡಿದೆ. ವೇದಿಕೆಯ ಮೇಲೆ ದೊಡ್ಡ ದೊಡ್ಡ ವಿದ್ಯುತ್ ದೀಪ ಗಳನ್ನು ಅಳವಡಿಸಲಾಗಿದ್ದು ದೂರದ ಪ್ರೇಕ್ಷರಿಗೆ ವೇದಿಕೆಯಲ್ಲಿ ಕಾರ್ಯಕ್ರಮಗಳ ವೀಕ್ಷಣೆಗಾಗಿ 4 ಎಲ್‌ಇಡಿ ಅಳವಡಿಸಿದ್ದು 32 ಅಡಿ ಎತ್ತರದ ಝಿಬ್ರಾ ಕ್ರೇನ್ ಹಾಗೂ 2 ಎಚ್‌ಡಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ವಿದ್ಯುತ್ ವ್ಯವಸ್ಥೆಯ ಉಸ್ತುವಾರಿ ವಹಿಸಿರುವ ಹಫೀಜ್ ಮಕಾನದಾರ ತಿಳಿಸಿದ್ದಾರೆ.

ಮೂರು ದಿನಗಳ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದು, 30 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಊಟ, ಉಪಾಹಾರ ವ್ಯವಸ್ಥೆ ಗಣ್ಯರಿಗೆ ಹಾಗೂ ಕಲಾವಿದರಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗಾಗಿ 25 ಕೌಂಟರ್‌ಗಳನ್ನು ನಿರ್ಮಿಸಲಾಗಿದ್ದು ಒಟ್ಟು 1200 ಸ್ವಯಂ ಸೇವಕರು ಊಟ-ಉಪಾಹಾರದ ವ್ಯವಸ್ಥೆಯಲ್ಲಿ ತೊಡಗಿದ್ದಾರೆ.

ಪುಸ್ತಕ ಹಾಗೂ ವಿವಿಧ ಕಲೆಯ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಾಗಿ ಮೈದಾನದ ಸುತ್ತ ಜಾಗ ಕಲ್ಪಿಸಲಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ತೈಲಪರ ರಾಜ ವೈಭವವನ್ನು ನೆನಪಿಸುವ ಬೃಹತ್ ವಿಜಯೋತ್ಸವ 26ರಂದು ಬೆಳಿಗ್ಗೆ ನಡೆಯಲಿದೆ.
ಉತ್ಸವಕ್ಕೆ ಆನೆ, ಒಂಟೆ, ಕುದುರೆ ಆಗಮಿಸಲಿದ್ದು, ಒಂದು ಆನೆಗೆ ಶ್ರಿಕಾಂತ ಶಿಂಧೆ ನಿರ್ಮಿಸಿದ ಅಂಬಾರಿಯನ್ನು ಅಲಂಕರಿಸಿ ಅದರಲ್ಲಿ ರನ್ನನ ಗದಾಯುದ್ಧದ ಪ್ರತೀಕವಾಗಿ ಗದೆಯ ಮೆರವಣಿಗೆ ನಡೆಸಲಾಗುವುದು.

ರನ್ನ ಪ್ರತಿಷ್ಠಾನದ ಅಡಿಯಲ್ಲಿ 14 ಸಮಿತಿ ರಚಿಸಲಾಗಿದೆ. ವೈ.ಎಚ್. ಕಾತರಕಿ, ಬಿ.ಪಿ. ಹಿರೇಸೋಮಣ್ಣವರ, ಎಸ್.ಬಿ. ಕೃಷ್ಣಗೌಡರ, ಸಂಗಮೇಶ ಕಲ್ಯಾಣಿ ನೇತೃತ್ವದಲ್ಲಿ ಸಮಿತಿ ದಿನಕ್ಕೆರಡು ಬಾರಿ ಸಭೆ ಸೇರಿ ಕಾರ್ಯಕ್ರಮದ ಸಿದ್ಧತೆಯ ಕುರಿತು ಚರ್ಚಿಸಿದೆ.

ಸಿದ್ಧತೆಗಳ ಪರಿಶೀಲನೆ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಬಿ.ಎಚ್. ಪಂಚಗಾಂವಿ, ಪುರಸಭೆ ಅಧ್ಯಕ್ಷ ಸೈದು ಭೋವಿ, ತಹಸೀಲ್ದಾರ ಶಂಕರಗೌಡ ಸೋಮನಾಳ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿ.ಕೆ.ದೇಶಪಾಂಡೆ, ಮುಖ್ಯಾಧಿಕಾರಿ ರಮೇಶ ಸುಣಗಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT