ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರನ್‌ವೇಗೆ ಕಾಡುಕೋಣ ಓಡಿ ಬಂದಿತ್ತ..!

Last Updated 31 ಮೇ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಕಾಡುಕೋಣವೊಂದು ಬಜ್ಪೆಯ ಮಂಗಳೂರು ವಿಮಾನ ನಿಲ್ದಾಣದ ರನ್‌ವೇಗೆ ಬಂದು, ರಾಜಾರೋಷವಾಗಿ ಓಡಾಡಿ ಕೆಲವು ಹೊತ್ತು ಆತಂಕ ಸೃಷ್ಟಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

 ಬೆಳಿಗ್ಗೆ 6.45ಕ್ಕೆ ಮೊದಲ ವಿಮಾನ ಆಗಮಿಸುತ್ತದೆ. ದುಬೈಯಿಂದ ಆಗಮಿಸುವ ಏರ್ ಇಂಡಿಯಾ ವಿಮಾನಕ್ಕೆ ರನ್‌ವೇ ಒದಗಿಸಿಕೊಡುವ ತಯಾರಿ ನಡೆಸುತ್ತಿದ್ದಾಗ 6 ಗಂಟೆ ಸುಮಾರಿಗೆ ರನ್‌ವೇಯಲ್ಲಿ ಕಾಡುಕೋಣ  ಕಂಡುಬಂತು. ಸುಮಾರು 5 ನಿಮಿಷ ಕಾಲ ಅದು ರನ್‌ವೇಯಲ್ಲಿತ್ತು.

ವಿಮಾನ ನಿಲ್ದಾಣದ ಸಿಬ್ಬಂದಿ ತಕ್ಷಣ ಅರಣ್ಯ ಇಲಾಖೆ ಮತ್ತು ಪಿಲಿಕುಳ ನಿಸರ್ಗಧಾಮದ ಪರಿಣತರಿಗೆ ವಿಷಯ ಮುಟ್ಟಿಸಿದರು. ಜನರ ಓಡಾಟ, ಕಾರ್ಯಾಚರಣೆಯ ಸದ್ದು ಆಲಿಸಿದ ಕಾಡುಕೋಣ ಮತ್ತೆ ತಾನು ಬಂದ ಹಾದಿಯಲ್ಲೇ ಕಣಿವೆಯತ್ತ ತೆರಳಿತು.

ಅರಿವಳಿಕೆ ಔಷಧ ಸಹಿತ ಅರಣ್ಯ ಇಲಾಖೆ ಮತ್ತು ಪಿಲಿಕುಳದ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಕಾಡುಕೋಣ ಇನ್ನೂ ವಿಮಾನ ನಿಲ್ದಾಣದ ಆವರಣದೊಳಗೆಯೇ ಇತ್ತು. ಬಂದೂಕಿನ ಮೂಲಕ ಅರಿವಳಿಕೆ ಚುಚ್ಚುಮದ್ದನ್ನು ನೀಡಲು ಸಿದ್ಧತೆ ನಡೆಸಿದಾಗ ಅದು ಮುನ್ನುಗ್ಗಿ ಬಂತು. ಇದರಿಂದ ಪಿಲಿಕುಳ ನಿಸರ್ಗಧಾಮದ ವೈಜ್ಞಾನಿಕ ಅಧಿಕಾರಿ ವಿಕ್ರಂ ಲೋಬೊ ಅವರಿಗೆ ಗಾಯವಾಯಿತು. ಕಾಡುಕೋಣ ಮತ್ತೆ ಅಲ್ಲಿ ನಿಲ್ಲದೆ ಕಣಿವೆಯತ್ತ ಪಲಾಯನ ಮಾಡಿತು. ಹೀಗಾಗಿ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡುವುದು ಸಾಧ್ಯವಾಗಲಿಲ್ಲ.

ಭದ್ರತಾ ವೈಫಲ್ಯ?: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಿಂದಲೇ ದಿನದ 24 ಗಂಟೆಯೂ ಕಣ್ಗಾವಲಿನಲ್ಲಿರುವ ವಿಮಾನ ನಿಲ್ದಾಣದ ಒಳಗೆ ಕಾಡುಕೋಣ ಬಂದಿರುವುದು ಭದ್ರತಾ ವೈಫಲ್ಯವೇ ಎಂಬ ಶಂಕೆ ಮೂಡುವಂತಾಗಿದೆ. ಸುಮಾರು 400 ಕೆ.ಜಿ. ತೂಕದ ದಷ್ಟಪುಷ್ಟ ಕಾಡುಕೋಣವೇ ರನ್‌ವೇಯತ್ತ ಬಂದುದು ಭದ್ರತಾ ಸಿಬ್ಬಂದಿಗೆ ಏಕೆ ಗೊತ್ತಾಗದೆ ಹೋಯಿತು ಎಂಬ ಪ್ರಶ್ನೆ ಮೂಡುವಂತಾಯಿತು.

`ಟೇಬಲ್ ಟಾಪ್ ರನ್‌ವೇ~ ಮಾದರಿಯ ಬಜ್ಪೆ ವಿಮಾನ ನಿಲ್ದಾಣದ ಬಳಿಯಲ್ಲೇ ಕಾಡು ಮತ್ತು ಕಣಿವೆ ಇದೆ. ಎರಡು ವರ್ಷಗಳ ಹಿಂದೆ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ ಧ್ವಂಸಗೊಂಡಿದ್ದು ಪಕ್ಕದ ಕೆಂಜಾರು ಕಣಿವೆಯಲ್ಲಿ. ಕಾಡುಕೋಣ ಅಲ್ಲಿಗೆ ಸಮೀಪದ ಆದ್ಯಪಾಡಿ ಕಡೆಯಿಂದ ರನ್‌ವೇಯತ್ತ ಬಂದಿರಬೇಕು ಎಂದು ಶಂಕಿಸಲಾಗಿದೆ.

`ರನ್‌ವೇಗೆ ಕಾಡುಕೋಣ ಬಂದಿದೆ ಎಂಬ ಕಾರಣಕ್ಕೆ ಭದ್ರತಾ ವೈಫಲ್ಯ ಆಗಿದೆ ಎಂದು ಭಾವಿಸಬೇಕಿಲ್ಲ. ವಿಮಾನ ಇಳಿಯುವುದಕ್ಕೆ ಮೊದಲಾಗಿ ರನ್‌ವೇ ಪರಿಶೀಲಿಸಿಯೇ ವಿಮಾನ ಇಳಿಯುವುದಕ್ಕೆ ಅನುಮತಿ ನೀಡಲಾಗುತ್ತದೆ. ಕಾಡುಕೋಣ ಕೇವಲ ಐದು ನಿಮಿಷ ಹೊತ್ತು ಮಾತ್ರ ರನ್‌ವೇಯಲ್ಲಿತ್ತು~ ಎಂದು ವಿಮಾನನಿಲ್ದಾಣದ ನಿರ್ದೇಶಕ ಎಂ.ಆರ್.ವಾಸುದೇವ್ `ಪ್ರಜಾವಾಣಿ~ಗೆ ತಿಳಿಸಿದರು.

`ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಒಳಪಟ್ಟ ಜಮೀನಿನ ಸುತ್ತ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ (ಡಿಜಿಸಿಎ) ನಿಯಮದಂತೆ 9.5 ಅಡಿ ಎತ್ತರದ ಕಾಂಪೌಂಡ್ ಇದೆ. ಕಾಡುಕೋಣಗಳು ಕೆಲವೊಮ್ಮೆ 11 ಅಡಿ ಎತ್ತರದ ಗೋಡೆಯನ್ನೂ ಹಾರುವುದಿದೆ. ಈ ಕಾಡುಕೋಣ ಹೀಗೆ ಆವರಣ ಗೋಡೆ ಹಾರಿ ಒಳಗೆ ಪ್ರವೇಶಿಸಿ ಕಣಿವೆಯ ಮೂಲಕ ರನ್‌ವೇಗೆ ಬಂದಿರಬೇಕು~ ಎಂದು ಅವರು ಹೇಳಿದರು.

ವಿಮಾನ ನಿಲ್ದಾಣಕ್ಕೆ ಹಕ್ಕಿಗಳ ಕಾಟ ತಪ್ಪಿಸುವುದಕ್ಕಾಗಿ ಎಲ್ಲೆಡೆ ಇರುವಂತೆ ಬಜ್ಪೆಯಲ್ಲೂ ಮಾಂಸ ಮಾರಾಟ ನಿರ್ಬಂಧ, ಕಸ ವಿಲೇವಾರಿ ಸಹಿತ ಇತರ ವಿಚಾರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಇವೆ.

ಆದರೂ, ಕಾಡು ಪ್ರಾಣಿಗಳು ಕೆಲವೊಮ್ಮೆ ತೊಂದರೆ ಕೊಟ್ಟ ನಿದರ್ಶನ ಇದೆ. ಕಳೆದ ವರ್ಷ ನವಿಲುಗಳು ರನ್‌ವೇಗೆ ಬಂದಾಗ ಅವುಗಳನ್ನು ಓಡಿಸಿ ವಿಮಾನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT