ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫಿ ಮತ್ತು ಸಂಭಾವನೆ

Last Updated 18 ಜನವರಿ 2011, 11:20 IST
ಅಕ್ಷರ ಗಾತ್ರ

ಪ್ರತಿಯೊಬ್ಬ ಕಲಾವಿದರೂ ತನ್ನದೇ ಆದ ರೀತಿಯಲ್ಲಿ ಸಂಭಾವನೆಯನ್ನು ನಿಗದಿಪಡಿಸಿಕೊಂಡಿರುತ್ತಾರೆ. ಆದರೆ, ಎಲ್ಲ ಕಾಲದಲ್ಲಿಯೂ ಸಂಭಾವನೆ ಕೊಟ್ಟರೇನೇ ಹಾಡುತ್ತಾರೆ ಎಂಬುದು ಸುಳ್ಳು. ಸಂಭಾವನೆ ಎಂಬುದು ಗಾಯಕರಿಗೆ ಕೊಡಮಾಡುವ ಗೌರವಧನ. ಕಲಾವಿದರನೇಕರು ಬಿದಾಗಿಯನ್ನು (ಗೌರವಧನ) ತೆಗೆದುಕೊಳ್ಳದೇನೇ ಹಾಡಿದ ಅನೇಕ ಪ್ರಸಂಗಗಳು ನಮ್ಮ ಮುಂದಿವೆ. ಈ ಮಾತು ಶಾಸ್ತ್ರೀಯ ಸಂಗೀತಗಾರರಿಗೂ, ಸಿನಿಮಾ ಗಾಯಕರಿಗೂ ಅನ್ವಯಿಸುತ್ತದೆ. ಹೀಗೆ ಸಂಭಾವನೆಯಿಲ್ಲದೆ ಹಾಡುವ ಕಾರ್ಯಕ್ರಮಗಳನ್ನು ಕೆಲವು ಗಾಯಕರು ‘ಅವಲಕ್ಕಿ ಕಾರ್ಯಕ್ರಮ’ ಎಂದು ತಮಾಷೆಗೆ ಕರೆಯುತ್ತಾರೆ. ಕೆಲವು ಕಡೆ ಗೆಳೆಯರು ಅಥವಾ  ಸಂಬಂಧಿಕರು ಮನೆಯಲಿ ಬೈಠಕ್ ಮುಗಿದ ಮೇಲೆ ಗಾಯಕರಿಗೆ ಅವಲಕ್ಕಿ ಮತ್ತು ಚಹಾ ಕೊಡುತ್ತಾರೆ. ಅದರಿಂದ ಈ ತಮಾಷೆ ಹುಟ್ಟಿಕೊಂಡಿರಬೇಕು.

ಗೌರವಧನವನ್ನು ಕೊಡಲು ಬಂದರೂ ಅದನ್ನು ಪ್ರೀತಿಯಿಂದ ನಿರಾಕರಿಸಿದ ಒಂದು ಅಪರೂಪದ ಪ್ರಸಂಗ ಇಲ್ಲಿದೆ. 1960ನೇ ದಶಕದ ಕತೆಯಿದು. ಡಾ.ವಿ.ಎನ್.ಸಿನ್ಹಾ ತಮ್ಮ ರಿಪಬ್ಲಿಕ್ ಫಿಲಮ್ ಕಾರ್ಪೋರೇಶನ್ ಅಡಿಯಲ್ಲಿ ‘ಕೊಹಿನೂರ್’ ಚಿತ್ರವನ್ನು ತಯಾರಿಸುತ್ತಿದ್ದ ದಿನಗಳವು. ಪ್ರಖ್ಯಾತ ಸಂಗೀತ ನಿರ್ದೇಶಕ ನೌಶಾದ್ ಆ ಸಿನಿಮಾಕ್ಕಾಗಿ ಸಂಗೀತ ಸಂಯೋಜನೆಯಲ್ಲಿ ನಿರತರಾಗಿದ್ದರು. ಡಾ.ಸಿನ್ಹಾಗೆ ನೌಶಾದ್ ಹಾಡುಗಳ ಟ್ಯೂನ್ ಕೇಳಿಸಿದರು. ಎಲ್ಲ ಹಾಡುಗಳೂ ಅವರಿಗೆ ಒಪ್ಪಿಗೆಯಾದುವು. ಆದರೆ, ಒಂದು ಹಾಡಿನ ಟ್ಯೂನ್ ಮೆಚ್ಚುಗೆಯಾಗಲಿಲ್ಲ. ನೌಶಾದ್ ಯಾಕೆ ಎಂದು ಪ್ರಶ್ನಿಸಿದರು. ಅದಕ್ಕೆ ಸಿನ್ಹಾ ಹೇಳಿದ ಉತ್ತರ ಹೀಗಿತ್ತು-
‘ನೌಶಾದ್‌ಜಿ, ರಾಗ ಹಮೀರದಲ್ಲಿ ಇದನ್ನು ಟ್ಯೂನ್ ಮಾಡಿದ್ದೀರಿ. ಇದು ತುಂಬ ಹಳೆಯ ರಾಗ. ಇಷ್ಟೊಂದು ಶಾಸ್ತ್ರೀಯ ನೆಲೆಗಟ್ಟಿರುವ ಈ ಹಾಡು ಜನರಿಗೆ ಒಪ್ಪಿಗೆಯಾಗಲಿಕ್ಕಿಲ್ಲ. ದಯವಿಟ್ಟು ಇದನ್ನು ಬದಲಿಸಿ’.

ಇವರ ಚರ್ಚೆಯನ್ನು ಕೇಳುತ್ತ ಅಲ್ಲಿಯೇ ನಿಂತಿದ್ದ ಸುಪ್ರಸಿದ್ಧ ಗಾಯಕ ಮೊಹಮ್ಮದ್ ರಫಿ ಈ ಮಾತಿಗೆ ಒಪ್ಪದೇ, ಈಗಿರುವ ರಾಗಸಂಯೋಜನೆಯೇ ಇರಲಿ, ನಾನು ಹಾಡುತ್ತೇನೆ ಎಂದು ತಮ್ಮ ಅಭಿಪ್ರಾಯ ಹೇಳಿದರು. ನೌಶಾದ್ ಕೂಡ ಇದನ್ನು ಬಿಟ್ಟು ಬೇರೆ ಸಂಯೋಜನೆ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಆದರೆ ಡಾ.ಸಿನ್ಹಾಗೆ ಆ ಹಾಡು ಮನಸ್ಸಿಗೆ ಬರುತ್ತಿಲ್ಲ. ಕೊನೆಗೆ ಚರ್ಚೆ ಮುಗಿಯುವುದೇ ಇಲ್ಲವೇನೋ ಎಂಬ ಹಂತವನ್ನು ತಲುಪಿದಾಗ ಮೊಹಮ್ಮದ್ ರಫಿ ಹೇಳಿದರು-

‘ಸಿನ್ಹಾಜಿ, ಈ ಹಾಡು ಸಿನಿಮಾದಲ್ಲಿ ಹೀಗೆಯೇ ಇರಲಿ. ಈ ಹಾಡನ್ನು ಜನ ಒಪ್ಪಿಕೊಂಡರೆ ಮಾತ್ರ ನಾನು ಈ ಹಾಡಿನ ಸಂಭಾವನೆಯನ್ನು ಪಡೆಯುತ್ತೇನೆ. ಇಲ್ಲವಾದರೆ, ನನಗೆ ಸಂಭಾವನೆಯನ್ನೇ ಕೊಡಬೇಡಿ’

ರಫಿ ಕೊನೆಯದಾಗಿ ಹೀಗೆ ಹೇಳಿದಾಗ ಡಾ.ಸಿನ್ಹಾ ನಿರುತ್ತರರಾದರು. ಡಾ.ಸಿನ್ಹಾಗೆ ಮನಸಿಲ್ಲದಿದ್ದರೂ ಆ ಹಾಡನ್ನು ಯಥಾವತ್ ಉಳಿಸಿಕೊಳ್ಳಲಾಯಿತು. ಕೊನೆಗೆ ಸಿನಿಮಾ ಬಿಡುಗಡೆಯಾಯಿತು. ರಫಿಯವರ ಸೊಗಸಾದ ಹಾಡಿಗೆ ದಿಲೀಪ್‌ಕುಮಾರ ಅಷ್ಟೇ ಸೊಗಸಾಗಿ ಅಭಿನಯಿಸಿದ್ದರು. ಆ ಹಾಡು ತುಂಬ ಜನಪ್ರಿಯವಾಯಿತು. ಅಷ್ಟೇ ಅಲ್ಲ, ‘ಕೊಹಿನೂರ್’ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ಮುಖ್ಯ ಕಾರಣವೆನಿಸಿತು. ಜನ ಆ ಹಾಡನ್ನು ಕೇಳಿ ಆನಂದಿಸಲೆಂದೇ ಸಿನಿಮಾಕ್ಕೆ ಧಾವಿಸತೊಡಗಿದರು. ಇಂದಿಗೂ ಆ ಹಾಡನ್ನು ಕೇಳಿದರೆ ಜನ ತಲೆದೂಗುತ್ತಾರೆ. ಶಾಸ್ತ್ರೀಯ ಅಂಶಗಳು ಜಾಸ್ತಿಯಾಗಿದ್ದರೆ ಹಾಡು ಜನಪ್ರಿಯವಾಗುವುದಿಲ್ಲ ಎಂಬ ಡಾ. ಸಿನ್ಹಾರ ವಿಚಾರವನ್ನು ಸುಳ್ಳಾಗಿಸಿತ್ತು ಆ ಹಾಡು. ಆ ಹಾಡು ಯಾವುದು ಗೊತ್ತೇ?

ರಾಗ ಹಮೀರದಲ್ಲಿ ನೌಶಾದ್ ರಾಗ ಸಂಯೋಜಿಸಿದ, ಮೊಹಮ್ಮದ್ ರಫಿ ಹಾಡಿದ, ‘ಮಧು ಬನಮೆ ರಾಧಿಕಾ ನಾಚೇರೆ’! ಇಂದಿಗೂ ಆ ಹಾಡಿನ ಜನಪ್ರಿಯತೆ ಕುಂದಿಲ್ಲ!

ಡಾ.ಸಿನ್ಹಾ ತಮ್ಮ ಸೋಲೊಪ್ಪಿಕೊಂಡರು. ನೌಶಾದ್‌ರೊಡಗೂಡಿ ರಫಿಯವರಲ್ಲಿಗೆ ತೆರಳಿದರು. ಅವರಿಗೆ ತುಂಬು ಮನಸ್ಸಿನಿಂದ ಅಭಿನಂದನೆ ಹೇಳಿದರು. ಅವರೆಂದರು- ‘ರಫೀಯವರೆ, ನಿಮ್ಮ ಕರಾರಿನಂತೆ ನಾನೀಗ ಆ ಹಾಡಿನ ಸಂಭಾವನೆಯನ್ನು ಕೊಡಲು ಬಂದಿದ್ದೇನೆ. ಎಷ್ಟು ಹಣ ಬೇಕು ಕೇಳಿ’

ರಫಿ ನಗುತ್ತ ಹೇಳಿದರು- ‘ಸಿನ್ಹಾಜಿ, ನನ್ನ ಸಂಭಾವನೆ ಈಗಾಗಲೇ ಸಂದಿದೆ’.
‘ಇಲ್ಲ. ನಾನು ಯಾವಾಗ ಕೊಟ್ಟಿದ್ದೇನೆ?’
ಡಾ.ಸಿನ್ಹಾ ಆಶ್ಚರ್ಯದಿಂದ ಕೇಳಿದರು.

‘ನೀವು ಕೊಟ್ಟಿಲ್ಲ ನಿಜ. ಆದರೆ ಜನ ನನಗೆ ಅದನ್ನು ಕೊಟ್ಟಿದ್ದಾರೆ. ನಾನು ಹಾಡಿರುವುದನ್ನು ಅಪಾರವಾಗಿ ಮೆಚ್ಚಿಕೊಂಡಿರುವದೇ ನನಗೆ ಸಲ್ಲಬೇಕಾಗಿದ್ದ ಸಂಭಾವನೆ. ಅದನ್ನು ನಾನಾಗಲೇ ಪಡೆದಾಗಿದೆ’.

ಡಾ.ಸಿನ್ಹಾ ಹಾಗೂ ನೌಶಾದ್ ಎಷ್ಟೇ ಒತ್ತಾಯ ಮಾಡಿದರೂ ರಫಿ ಸಂಭಾವನೆ ಪಡೆಯಲಿಲ್ಲ. ಆದರೆ, ಅವರು ಹಾಡಿದ ಹಾಡು ಮಾತ್ರ ಇಂದಿಗೂ ಹಸಿರಾಗಿದೆ. ಜನ ‘ಕೊಹಿನೂರ್’ ಚಿತ್ರದ ನಿರ್ಮಾಪಕ ಡಾ. ಸಿನ್ಹಾರನ್ನು ಮರೆತಿರಬಹುದು ಆದರೆ, ಆ ಹಾಡು ಹಾಡಿದ ರಫಿಯವರನ್ನು ಮತ್ತು ರಾಗ ಸಂಯೋಜಿಸಿದ ನೌಶಾದ್‌ರನ್ನು ಮಾತ್ರ ಯಾವಕಾಲಕ್ಕೂ ಮರೆಯುವುದಿಲ್ಲ.
ಇದೇ ಹಣಕ್ಕೂ ಕಲೆಗೂ ಇರುವ ವ್ಯತ್ಯಾಸ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT