ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫೆಲ್ ನಡಾಲ್ ಕನಸು ಭಗ್ನ

Last Updated 26 ಜನವರಿ 2011, 18:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಎಎಫ್‌ಪಿ): ಸತತ ನಾಲ್ಕನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆಲ್ಲಬೇಕೆಂಬ ಸ್ಪೇನ್‌ನ ರಫೆಲ್ ನಡಾಲ್ ಅವರ ಕನಸು ಭಗ್ನಗೊಂಡಿದೆ. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಮುಗ್ಗರಿಸಿದರು.

ರಾಡ್ ಲೇವರ್ ಅರೆನಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸ್ಪೇನ್‌ನ ಡೇವಿಡ್ ಫೆರೆರ್ 6-4, 6-2, 6-3 ರಲ್ಲಿ ಅಗ್ರಶ್ರೇಯಾಂಕದ ನಡಾಲ್‌ಗೆ ಆಘಾತ ನೀಡಿ ಸೆಮಿಫೈನಲ್‌ಗೆ ಮುನ್ನಡೆದರು.

ಎಡತೊಡೆಯ ಗಾಯದಿಂದ ಬಳಲಿದ ಕಾರಣ ನಡಾಲ್‌ಗೆ ಪೂರ್ಣ ಸಾಮರ್ಥ್ಯದೊಂದಿಗೆ ಆಡಲು ಸಾಧ್ಯವಾಗಲಿಲ್ಲ. ಎಂದಿನ ಲಯ ಕಂಡುಕೊಳ್ಳಲು ವಿಫಲರಾದ ಅವರು ಎರಡೂವರೆ ಗಂಟೆಯ ಹೋರಾಟದ ಬಳಿಕ ಎದುರಾಳಿಗೆ ಶರಣಾದರು.

ಏಳನೇ ಶ್ರೇಯಾಂಕದ ಫೆರೆರ್‌ಗೆ ನಡಾಲ್ ವಿರುದ್ಧ ಲಭಿಸಿದ ನಾಲ್ಕನೇ ಗೆಲುವು ಇದಾಗಿದೆ. ಇವರಿಬ್ಬರು ಇದುವರೆಗೆ 15 ಸಲ ಪರಸ್ಪರ ಎದುರಾಗಿದ್ದು, ನಡಾಲ್ 11 ಬಾರಿ ಗೆಲುವಿನ ನಗು ಬೀರಿದ್ದಾರೆ. ಫೆರೆರ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಅವರ ಸವಾಲನ್ನು ಎದುರಿಸುವರು.

ಮರ್ರೆ ಬುಧವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ 7-5, 6-3, 6-7, 6-3 ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲೊಪೊಲೊವ್ ವಿರುದ್ಧ ಜಯ ಪಡೆದರು. ನಡಾಲ್ ಅವರು ಕಳೆದ ವರ್ಷ ಇದೇ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಗಾಯದ ಕಾರಣ ಅರ್ಧದಲ್ಲೇ ಹಿಂದೆ ಸರಿದಿದ್ದರು. ಆ ಬಳಿಕ ನಡೆದ ಮೂರೂ ಗ್ರ್ಯಾಂಡ್‌ಸ್ಲಾಮ್ ಟೂರ್ನಿಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸತತ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಗೆಲ್ಲಬೇಕೆಂಬ ಕನಸಿನೊಂದಿಗೆ ಇಲ್ಲಿಗೆ ಆಗಮಿಸಿದ್ದರು.

ಆದರೆ ಗಾಯದ ಸಮಸ್ಯೆ ಎದುರಾದ ಕಾರಣ ಅವರ ಕನಸು ಭಗ್ನಗೊಂಡಿದೆ. ಫೆರೆರ್ ವಿರುದ್ಧದ ಪಂದ್ಯದ ಮೊದಲ ಸೆಟ್‌ನಲ್ಲೇ ನಡಾಲ್ ಗಾಯದಿಂದ ಬಳಲಿದರು. ಆದರೂ ಅವರು ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಲಿಲ್ಲ. ಮೊದಲ ಸೆಟ್‌ನಲ್ಲಿ ಫೆರೆರ್ ಮೂರು ಸಲ ಎದುರಾಳಿಯ ಸರ್ವ್ ಮುರಿದರು. ಎರಡನೇ ಸೆಟ್‌ನ ಆರಂಭದಲ್ಲಿ ನಡಾಲ್ ಅಲ್ಪ ಚೇತರಿಕೆಯ ಪ್ರದರ್ಶನ ನೀಡಿ ಎದುರಾಳಿಯ ಸರ್ವ್ ಮುರಿದರು. ಆದರೆ ಫೆರೆರ್ ಎದುರಾಳಿಯ ಸತತ ಮೂರು ಸರ್ವ್ ಮುರಿದು ಮೇಲುಗೈ ಸಾಧಿಸಿದರು.

ಮೂರನೇ ಸೆಟ್‌ನಲ್ಲಿ ಮರುಹೋರಾಟ ನಡೆಸುವ ನಡಾಲ್ ಅವರ ಕನಸು ಈಡೇರಲಿಲ್ಲ. ಪಂದ್ಯದಲ್ಲಿ ಫೆರೆರ್ ಒಟ್ಟು 44 ವಿನ್ನರ್‌ಗಳನ್ನು ಸಿಡಿಸಿದರು. 19 ವಿನ್ನರ್‌ಗಳನ್ನು ಗಳಿಸಿದ ನಡಾಲ್ 34 ಅನಗತ್ಯ ತಪ್ಪುಗಳನ್ನು ಎಸಗಿದರು.

ಸೆಮಿಫೈನಲ್‌ಗೆ ಕ್ಲೈಸ್ಟರ್ಸ್: ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 6-3, 7-6 ರಲ್ಲಿ ಪೋಲೆಂಡ್‌ನ ಅಗ್ನೀಸ್ಕಾ ರಡ್ವಾಂನ್‌ಸ್ಕಾ ವಿರುದ್ಧ ಜಯ ಪಡೆದರು.

ಮೂರನೇ ಶ್ರೇಯಾಂಕ ಪಡೆದಿರುವ ಕ್ಲೈಸ್ಟರ್ಸ್ ನಾಲ್ಕರಘಟ್ಟದ ಪಂದ್ಯದಲ್ಲಿ ರಷ್ಯಾದ ವೆರಾ ಜೊನರೇವಾ ಅವರ ಸವಾಲನ್ನು ಎದುರಿಸುವರು. ಜೊನರೇವಾ 6-2, 6-4 ರಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT