ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತು ಉದ್ಯಮಕ್ಕೆ ಪ್ರೋತ್ಸಾಹ: ಕಾಯ್ದೆಗೆ ತಿದ್ದುಪಡಿ

Last Updated 22 ಜೂನ್ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: `ಮುಂದಿನ ಅಧಿವೇಶನದಲ್ಲಿ ರಫ್ತು ಸೇರಿದಂತೆ ಉದ್ಯಮಕ್ಕೆ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲಾಗುವುದು~ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ `ಉತ್ತಮ ರಫ್ತುದಾರ ಪ್ರಶಸ್ತಿ~ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

`ದೇಶದ ಅರ್ಥವ್ಯವಸ್ಥೆಯಲ್ಲಿ ರಫ್ತುದಾರರ ಪಾತ್ರ ಪ್ರಮುಖವಾಗಿದೆ. ಉದ್ಯಮದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಕೈಗಾರಿಕಾ ನಿಯಮಗಳನ್ನು ಸರಳೀಕರಿಸುವ ಬಗ್ಗೆ ಸರ್ಕಾರ ಈಗಾಗಲೇ ಚಿಂತನೆ ನಡೆಸಿದೆ~ ಎಂದು ತಿಳಿಸಿದರು.

`ರಾಜ್ಯವು ಕಾಫಿ, ರೇಷ್ಮೆ, ತಂತ್ರಾಂಶಗಳನ್ನು ರಫ್ತು ಮಾಡುವಲ್ಲಿ ಮುಂಚೂಣಿಯಲ್ಲಿದ್ದು, 2020ರ ವೇಳೆಗೆ ಬಂಡವಾಳ ಹೂಡಿಕೆದಾರರ ಸ್ವರ್ಗವಾಗಿ ರೂಪುಗೊಳ್ಳಲಿದೆ~ ಎಂದು  ಹೇಳಿದರು.

`ವಿಶ್ವದ ನಾನಾ ಭಾಗಗಳಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡಾಗಲೂ, ದೇಶ ಮತ್ತು ರಾಜ್ಯದಲ್ಲಿ ಅದರ ಪ್ರಭಾವ ಆಗದಂತೆ ಮಾಡಿದ್ದು ರಾಷ್ಟ್ರೀಕೃತ ಬ್ಯಾಂಕುಗಳ ಕಾರ್ಯಕ್ಷಮತೆ. ಪ್ರತಿ ಉದ್ಯಮದಾರರು ಇದನ್ನು ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಎಂಜಿನಿಯರಿಂಗ್ ಪದವಿಯ ನಂತರ ನಾನು ಕೇವಲ 10 ಲಕ್ಷ ರೂಪಾಯಿ ಬಂಡವಾಳ ಹೂಡಿ ಸ್ಥಾಪಿಸಿದ ಉದ್ಯಮದ ಘಟಕವು ಹಂತ ಹಂತವಾಗಿ ವಿವಿಧ ಘಟಕಗಳೊಂದಿಗೆ ಎರಡು ಸಾವಿರ ಕೋಟಿ ವ್ಯವಹಾರವನ್ನು ನಡೆಸುತ್ತಿದೆ. ಸತತ ಪರಿಶ್ರಮದಿಂದ ಮಾತ್ರ ಉದ್ಯಮದಾರರು ಪ್ರಗತಿ ಹೊಂದಲು ಸಾಧ್ಯ~ ಎಂದು ಹೇಳಿದರು.

ವಿದೇಶಿ ವಹಿವಾಟು ಮಹಾನಿರ್ದೇಶಕ ಡಾ.ಅನೂಪ್ ಕೆ.ಪೂಜಾರಿ, `ಆರ್ಥಿಕ ಅಭಿವೃದ್ಧಿಯಲ್ಲಿ ರಫ್ತುದಾರರು ಪ್ರಮುಖರಾಗಿರುವುದರಿಂದ ಅವರಿಗೆ ಉತ್ತೇಜನ ನೀಡುವಲ್ಲಿ ಇಂತಹ ಪ್ರಶಸ್ತಿಗಳು ಪ್ರಮುಖ ಪಾತ್ರ ವಹಿಸುತ್ತವೆ~ ಎಂದು ತಿಳಿಸಿದರು.

ಟಯೋಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್, ಇನ್ಫೋಸಿಸ್, ಬಾಷ್, ಹಿಂದೂಸ್ತಾನ್ ಏರೋನಾಟಿಕ್ಸ್ ಸೇರಿದಂತೆ ಒಟ್ಟು 44 ಉದ್ಯಮದಾರರಿಗೆ `ಉತ್ತಮ ರಫ್ತುದಾರ~ ಪ್ರಶಸ್ತಿ ಪ್ರದಾನ ಮಾಡಲಾಯಿತು. `ಉತ್ತಮ ಹಣಕಾಸು ಸಂಸ್ಥೆ~ ವಿಭಾಗದಲ್ಲಿ ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಸ್.ರಮಣ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ಮೆಹ್ರಾ ಪ್ರಶಸ್ತಿ ಪಡೆದರು. ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್.ಬಂಗೇರ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT