ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಫ್ತುದಾರರ ಸಮಾವೇಶ 13ಕ್ಕೆ: ಮೊಯಿಲಿ

Last Updated 10 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಮಂಗಳೂರು: ಸುಸಜ್ಜಿತ ವಿಮಾನ ನಿಲ್ದಾಣ ಮತ್ತು ಬಂದರು ಹೊಂದಿರುವ ಮಂಗಳೂರು ಮುಂದಿನ ದಿನಗಳಲ್ಲಿ ರಾಜ್ಯದ ರಫ್ತುದಾರರ ಹೆಬ್ಬಾಗಿಲಾಗಿ ಬದಲಾಗಲಿದ್ದು, ಇಲ್ಲಿನ ಅವಕಾಶಗಳನ್ನು ರಫ್ತುದಾರರಿಗೆ ಪರಿಚಯಿಸುವುದಕ್ಕಾಗಿಯೇ ಇದೇ 13ರಂದು `ಕರ್ನಾಟಕ: ಎಕ್ಸ್‌ಪೋರ್ಟ್ ವಿಷನ್-2020~ ಹೆಸರಿನ ರಫ್ತುದಾರರ ಸಮಾವೇಶವನ್ನು ನಗರದಲ್ಲಿ ಹಮ್ಮಿಕೊಂಡಿರುವುದಾಗಿ ಕೇಂದ್ರದ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಟಿಎಂಎ ಪೈ ಸಭಾಂಗಣದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆಯುವ ಈ ಸಮಾವೇಶದಲ್ಲಿ ರಾಜ್ಯದ 200ಕ್ಕಿಂತ ಅಧಿಕ ರಫ್ತುದಾರರು ಪಾಲ್ಗೊಳ್ಳಲಿದ್ದಾರೆ. ಕೇಂದ್ರದ ವಾಣಿಜ್ಯ ಸಚಿವಾಲಯಕ್ಕೆ ಒಳಪಟ್ಟ ಭಾರತೀಯ ರಫ್ತು ಸಂಘಟನೆಗಳ ಮಹಾಒಕ್ಕೂಟದ (ಎಫ್‌ಐಇಒ) ದಕ್ಷಿಣ ಪ್ರಾದೇಶಿಕ ಕಚೇರಿ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

2020ರವರೆಗಿನ ರಾಜ್ಯದ ರಫ್ತು ಗುರಿಗಳನ್ನು ನಿರ್ಧರಿಸುವುದು, ದೇಶದ ರಫ್ತು ಕ್ಷೇತ್ರದಲ್ಲಿ ರಾಜ್ಯದ ಪಾಲನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದೊಂದಿಗೆ ಈ ಸಮಾವೇಶ ನಡೆಯಲಿದೆ.

ಹಲವು ಗೋಷ್ಠಿಗಳು ಈ ಕ್ಷೇತ್ರದ ಮೇಲೆ ಬೆಳಕು ಚೆಲ್ಲಲಿವೆ. ರಾಜ್ಯ ಸರ್ಕಾರ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸರಕು ಸಾಗಣೆ ಸೇವೆಗೆ ವಿಮಾನ ನಿಲ್ದಾಣ ಪ್ರಾಧಿಕಾರ ಸಮ್ಮತಿ ಸೂಚಿಸಿರುವುದನ್ನು ಉಲ್ಲೇಖಿಸಿದ ಅವರು, ಎನ್‌ಎಂಪಿಟಿಯಿಂದ ಕಂಟೇನರ್ ಮತ್ತು ಇತರ ಸರಕುಗಳ ನಿರ್ವಹಣೆ ಸಾಮರ್ಥ್ಯ ಹೆಚ್ಚಿರುವ ಬಗ್ಗೆಯೂ ಗಮನ ಸೆಳೆದರು. ರಾಷ್ಟ್ರೀಯ ಹೆದ್ದಾರಿ, ರೈಲು ಸಂಪರ್ಕಗಳಿಂದಾಗಿ ಮಂಗಳೂರಿನ ಪಾತ್ರ ಇನ್ನಷ್ಟು ಹೆಚ್ದಾಗಿದೆ ಎಂದರು.

ಎನ್‌ಎಂಪಿಟಿ ಅಧ್ಯಕ್ಷ ಪಿ.ತಮಿಳುವಾಣನ್, ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಎಂ.ಆರ್.ವಾಸುದೇವ್ ಅವರು ತಮ್ಮಲ್ಲಿನ ಸೌಲಭ್ಯಗಳ ಸಂಕ್ಷಿಪ್ತ ಪರಿಚಯ ನೀಡಿದರು. ಮಹಾಒಕ್ಕೂಟದ ಅಧ್ಯಕ್ಷ ವಾಲ್ಟರ್ ಡಿಸೋಜ, ಸಂಘಟನಾ ಸಮಿತಿ ಸಹ ಸಂಚಾಲಕ ಕೆ.ತೇಜೋಮಯ, ಕಾರ್ಯದರ್ಶಿ ಜಿ.ಜಿ.ಮೋಹನದಾಸ್ ಪ್ರಭು, ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT