ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಬ್ಬರ್ ನಡುವೆ ಮೆಕ್ಕೆಜೋಳ

Last Updated 16 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಮೆಕ್ಕೆಜೋಳ ಬಯಲು ಸೀಮೆಯ ಬೆಳೆ ಎಂದೇ ಮಲೆನಾಡಿನ ರೈತರು ಭಾವಿಸಿದ್ದಾರೆ. ಆದರೆ ನರಸಿಂಹರಾಜಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದ ರೈತರೊಬ್ಬರು ಮಲೆನಾಡಿನಲ್ಲೂ ಮೆಕ್ಕೆ ಜೋಳ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

 ಲಿಂಗಾಪುರ ಗ್ರಾಮದ ಮಹಮ್ಮದ್ ಉಮ್ಮರ್ ರೈತರು ಕುಟುಂಬಕ್ಕೆ ಸೇರಿದವರು. 12 ಎಕರೆ ಜಮೀನಿನಲ್ಲಿ ರಬ್ಬರ್ ನಡುವೆ ಅಂತರ ಬೆಳೆಯಾಗಿ ಮೆಕ್ಕೆಜೋಳ ಬೆಳೆದು ಯಶಸ್ವಿಯಾಗಿದ್ದಾರೆ. ಶಿವಮೊಗ್ಗದಿಂದ ಕಾಂಚನ, ಕಾವೇರಿ ಮತ್ತು ಸಿಪಿ ಮೆಕ್ಕೆ ಜೋಳದ ಬಿತ್ತನೆ ಬೀಜಗಳನ್ನು ತಂದು ರಬ್ಬರ್ ಗಿಡಗಳ ನಡುವೆ ಗಿಡದಿಂದ ಗಿಡಕ್ಕೆ 1ಅಡಿ ಹಾಗೂ ಸಾಲಿನಿಂದ ಸಾಲಿಗೆ 11/2(ಒಂದುವರೆ) ಅಡಿ ಅಂತರದಲ್ಲಿ 45 ಕೆಜಿ ಬಿತ್ತನೆ ಬೀಜವನ್ನು ಬಿತ್ತಿ 105 ಕ್ವಿಂಟಲ್ ಮೆಕ್ಕೆಜೋಳ ಬೆಳೆದಿದ್ದಾರೆ.

ಅಕಾಲಿಕ ಮಳೆ, ಕಾಡು ಪ್ರಾಣಿ ಹಾಗೂ ಹಕ್ಕಿಗಳ ಹಾವಳಿ ಇಲ್ಲದಿದ್ದರೆ ಇನ್ನೂ ಹೆಚ್ಚಿನ ಇಳುವರಿ ಸಿಗುತ್ತಿತ್ತು. 105 ಕ್ವಿಂಟಲ್ ಮೆಕ್ಕೆಜೋಳ ಬೆಳೆಯಲು ಅವರು 65,000 ಖರ್ಚು ಮಾಡಿದ್ದಾರೆ. ಅವರಿಗೆ ಬಂದ ಆದಾಯ ರೂ 85,000. ಮೆಕ್ಕೆ ಜೋಳದ ದಂಟು ರಬ್ಬರ್ ತೋಟಕ್ಕೆ ಗೊಬ್ಬರವಾಗಿದ್ದರಿಂದ ಅವರಿಗೆ  ಲಾಭವಾಗಿದೆ.

ಒಂದು ವೇಳೆ ಮೆಕ್ಕೆ ಜೋಳ ಬೆಳೆಯದಿದ್ದರೆ ರಬ್ಬರ್ ಗಿಡಗಳ ನಿರ್ವಹಣೆಗೆ ಇಷ್ಟೇ ಹಣ ವೆಚ್ಚವಾಗುತ್ತಿತ್ತು. ರಬ್ಬರ್ ನಡುವೆ ಮೆಕ್ಕೆಜೋಳ ಹಾಕುತ್ತೇನೆ ಎಂದಾಗ ಕೆಲವರು ಮಲೆನಾಡಿನಲ್ಲಿ ಮೆಕ್ಕೆಜೋಳ ಬೆಳೆಯಲು ಸಾಧ್ಯವಿಲ್ಲ. ಹಣ ವ್ಯರ್ಥವಾಗುತ್ತದೆ ಎಂದು ಹೆದರಿಸಿದ್ದರು. ಅಂತರ ಬೆಳೆಯಾಗಿ ಬೆಳೆಯುವುದರಿಂದ  ಒಂದು ವೇಳೆ ನಷ್ಟವಾದರೂ ಭೂಮಿಗೆ ಗೊಬ್ಬರವಾಗುತ್ತದೆ ಎಂಬ ಧೈರ್ಯದಿಂದ ಬೆಳೆಯಲು ನಿರ್ಧರಿಸಿದೆ. ಅಕಾಲದಲ್ಲಿ ಮಳೆ ಬಂದಿದ್ದರಿಂದ 45 ಕ್ವಿಂಟಲ್‌ನಷ್ಟು ಬೆಳೆ ಹಾಳಾಯಿತು.

ಮೆಕ್ಕೆಜೋಳದ ಗುಣಮಟ್ಟ ಉತ್ತಮವಾಗಿದ್ದರಿಂದ ಕ್ವಿಂಟಲ್‌ಗೆ 850 ರೂ ಬೆಲೆ ಸಿಕ್ಕಿತು ಎನ್ನುತ್ತಾರೆ ಉಮ್ಮರ್.
ಮಾಧ್ಯಮಿಕ ಶಾಲೆವರೆಗೆ ಓದಿರುವ ಮಹಮ್ಮದ್ ಉಮ್ಮರ್ ಕೆಲವು ವರ್ಷ ಸೌದಿ ಅರೇಬಿಯಾದಲ್ಲಿದ್ದರು. ಅಲ್ಲಿಗೆ ಹೋಗುವ ಮೊದಲು ಬೇಸಾಯ ಮಾಡುತ್ತಿದ್ದರು. ಅಲ್ಲಿಂದ ಬಂದ ಮೇಲೆ ಬೇಸಾಯ ಹಾಗೂ ವ್ಯಾಪಾರ ಮಾಡುತ್ತಿದ್ದಾರೆ. ಈ ವರ್ಷ ಮತ್ತೆ ಮೆಕ್ಕೆ ಜೋಳ ಬೆಳೆಯುವುದಾಗಿ ಅವರು ತಿಳಿಸಿದ್ದಾರೆ.
ಮಹಮ್ಮದ್ ಉಮ್ಮರ್ ಅವರ ಮೊಬೈಲ್ ನಂಬರ್- 9740085835.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT