ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮ್ಯಾ ಸ್ಟಾಪ್

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕ್ಯಾಮೆರಾ ಬೆಳಕು ಕಣ್ಣ ಹೊಳಪು ಸಂಧಿಸಿ ಆಕೆಯ ಚೆಲುವು ಮತ್ತಷ್ಟು ಹೊಳೆಯುತ್ತಿತ್ತು. ಕೋಲ್ಮಿಂಚಿನಂತೆ ನಡೆದು ಬಂದ ಆ ಚೆಲುವಿನ ಹಿಂದೆ ಕ್ಯಾಮೆರಾ ಹಿಡಿದವರ ಹಿಂಡು ಓಡುತ್ತಿತ್ತು.

ಬೆಂಗಳೂರಿನ ಹಳೆಯ ಮದ್ರಾಸ್ ರಸ್ತೆಯಲ್ಲಿ ಇರುವ ಗೋಪಾಲನ್ ಸಿಗ್ನೇಚರ್ ಟವರ್‌ನ ಹೊಸ ಶಾಪರ್ಸ್‌ ಸ್ಟಾಪ್ ಮಳಿಗೆಯನ್ನು ಉದ್ಘಾಟಿಸಲು ನಟಿ ರಮ್ಯಾ ಬಂದಾಗ ಚದುರಿ ನಿಂತಿದ್ದ ಗುಂಪು ಕೂಡಿಕೊಂಡಿತ್ತು ಮತ್ತು ಕ್ಯಾಮೆರಾ ಕಣ್ಣುಗಳು ಹೊಳೆಯಲು ಆರಂಭಿಸಿದವು.

ಬಿಳಿಯ ಟಾಪ್, ಹೂಗಳಿದ್ದ ಗಾಢನೀಲಿ ಬಣ್ಣದ ಸ್ಕರ್ಟ್ ತೊಟ್ಟು ವೇಗವಾಗಿ ಹೆಜ್ಜೆ ಹಾಕುತ್ತಿದ್ದ ರಮ್ಯಾ, ಸುತ್ತ ನಿಂತಿದ್ದವರಿಗೆ ಮುಗುಳ್ನಗೆ ಬಿಸಾಕುತ್ತಿದ್ದರು. ದೀಪ ಬೆಳಗಿ ಮಳಿಗೆ ಉದ್ಘಾಟಿಸಿದ ತಕ್ಷಣ ಅಂಗಡಿಯೊಳಗೆಲ್ಲಾ ಒಂದು ಸುತ್ತು ಹಾಕಲು ತಯಾರಾದರು.

ಅವರ ಹಿಂದೆ ಓಡಲು ಕ್ಯಾಮೆರಾಗಳೂ ಸಜ್ಜಾದವು. ಒಂದು ಕ್ಷಣ ರಮ್ಯಾ ಕಣ್ಣು ಅಲ್ಲಿಯೇ ತೂಗು ಹಾಕಿದ್ದ ಗುಲಾಬಿ ಬಣ್ಣದ ಸಲ್ವಾರ್ ಕಮೀಜ್ ಕಡೆ ಹೋಯಿತು. ಅದರ ಎದುರು ನಿಂತು ಕ್ಯಾಮೆರಾಗೆ ಪೋಸು ನೀಡಿ, `ಇದು ತುಂಬಾ ಇಷ್ಟವಾಯಿತು. ಯುಗಾದಿಗೆ ಖರೀದಿಸಬೇಕು~ ಎನ್ನುತ್ತಾ ನಗೆ ಚೆಲ್ಲಿದರು.

`ಸಾಮಾನ್ಯವಾಗಿ ಚಿತ್ರೀಕರಣಕ್ಕಾಗಿ ವಿದೇಶಗಳಿಗೆ ಹೋದಾಗ ಹೆಚ್ಚು ಶಾಪಿಂಗ್ ಮಾಡ್ತೀನಿ. ಆದರೆ ಬೆಂಗಳೂರಿನಲ್ಲಿ ಮಾತ್ರ ಶಾಪರ್ಸ್‌ ಸ್ಟಾಪ್‌ಗೆ ನನ್ನ ಮೊದಲ ಆದ್ಯತೆ~ ಎಂದ ರಮ್ಯಾ ಬೆಂಗಳೂರಿನಲ್ಲಿ ತಮ್ಮನ್ನು ಗುರುತು ಹಿಡಿದು ಗುಂಪುಗೂಡುವ ಮಂದಿ ಇದ್ದರೂ ಶಾಪರ್ಸ್‌ ಸ್ಟಾಪ್‌ನಲ್ಲಿಯೇ ಶಾಪಿಂಗ್ ಮಾಡುವುದಾಗಿ ಹೇಳಿದರು.

`ಪ್ರೇಮಿಗಳ ದಿನ~ ಹತ್ತಿರವಾಗುತ್ತಿದೆ ಪ್ರಿಯಕರನಿಗೆ ಕೊಡುಗೆ ಕೊಡುವುದಿಲ್ಲವೇ? ಎಂಬ ಪ್ರಶ್ನೆ ತೂರಿ ಬಂದಾಗ ರಮ್ಯಾ ಕೆನ್ನೆ ಕೆಂಪಗಾಯಿತು. ಗುಳಿಕೆನ್ನೆಯನ್ನು ಕೊಂಕಿಸುತ್ತಲೇ, `ಕೊಡ್ತೀನಿ. ಆದರೆ ಅದೇನೆಂದು ನಿಮಗೆ ಹೇಳುವುದಿಲ್ಲ~ ಎನ್ನುತ್ತಾ ನಾಚಿ ನೀರಾದರು.

`ಸದ್ಯದಲ್ಲೇ ಯುಗಾದಿ ಹಬ್ಬದ ಶಾಪಿಂಗ್ ಆರಂಭಿಸುವೆ. ಶೇ 51ರಷ್ಟು ರಿಯಾಯ್ತಿ ಇರುವುದರಿಂದ ಎಲ್ಲರೂ ಶಾಪರ್ಸ್‌ ಸ್ಟಾಪ್‌ಗೇ ಶಾಪಿಂಗ್‌ಗೆ ಬನ್ನಿ~ ಎಂದು ಸುತ್ತ ನಿಂತಿದ್ದವರಿಗೆ ಆಹ್ವಾನ ನೀಡಿದ ರಮ್ಯಾ, ಕೆಲವರ ಕಡೆ ನಗೆ ಬೀರುತ್ತಾ, ಮತ್ತೆ ಕೆಲವರಿಗೆ ಹಸ್ತಲಾಘವ ನೀಡುತ್ತಾ ಮುಂದುವರಿದರು.

ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಶ್ರೀಕಂಡೆ ಅವರು ಅದಾಗ ತಾನೇ ಉದ್ಘಾಟನೆಯಾದ ಶಾಪರ್ಸ್‌ ಸ್ಟಾಪ್ ಮಳಿಗೆ ಭಾರತದಲ್ಲಿಯೇ ಐವತ್ತನೆಯದು, ಬೆಂಗಳೂರಿನಲ್ಲಿದು ಆರನೆಯದು ಎಂದು ಮಾಹಿತಿ ನೀಡಿದರು.

ಸದ್ಯ ಲಾಭದಾಯಕವಾಗಿ ಇರುವ ತಮ್ಮ ಶಾಪರ್ಸ್‌ ಸ್ಟಾಪ್ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಆಸೆಯನ್ನೂ ವ್ಯಕ್ತಪಡಿಸಿದರು. ಮೂರು ಮಹಡಿಗಳಲ್ಲಿ ಅಂತರರಾಷ್ಟ್ರೀಯ ವಿನ್ಯಾಸದಲ್ಲಿ ಮಳಿಗೆಯನ್ನು ವಿನ್ಯಾಸಗೊಳಿಸಿರುವುದಾಗಿ ಹೇಳಿದ ಅವರು ಮನಬಯಸುವ, ಎಲ್ಲರಿಗೂ ಒಪ್ಪುವ ವಿಶ್ವದರ್ಜೆಯ ಬ್ರ್ಯಾಂಡ್‌ಗಳೆಲ್ಲಾ ತಮ್ಮಲ್ಲಿ ಲಭ್ಯ ಎಂದರು.

ಅತ್ತ ರಮ್ಯಾ ಮಳಿಗೆಯನ್ನು ಒಂದು ಸುತ್ತು ಹೊಡೆದು ವಾಚ್ ನೋಡಿಕೊಳ್ಳುತ್ತಲೇ `ಶಾಪರ್ಸ್‌ ಸ್ಟಾಪ್ ಇಷ್ಟವಾಗುವುದು ಯಾಕೆಂದರೆ ನನ್ನಿಷ್ಟದ ಎಲ್ಲಾ ಬ್ರ್ಯಾಂಡ್‌ಗಳು ಇಲ್ಲಿವೆ~ ಎಂದು ಉಲಿದು ಹೊರನಡೆದರು. ಅವರು ಹೋಗುತ್ತಿದ್ದಂತೆಯೇ ಗುಂಪು ಚದುರಿತು. ಕ್ಯಾಮೆರಾಗಳಿಗೆ ಬಿಡುವು ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT