ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿ ಪೂಜಾರಿ ಸಹಚರರಿಬ್ಬರ ಬಂಧನ

Last Updated 8 ಜೂನ್ 2011, 10:50 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕದ್ರಿ ಪಾರ್ಕ್ ಸಮೀಪ ಮೇ 26ರಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಒಬ್ಬರ ಕಾರಿಗೆ ಗುಂಡು ಹಾರಿಸಿದ ಪ್ರಕರಣದ ತನಿಖೆ ತೀವ್ರಗೊಳಿಸಿದ್ದ ಮಂಗಳೂರು ನಗರ ಪೊಲೀಸರಿ ಇಬ್ಬರು ಪಾತಕಿಗಳು ಅಚಾನಕ್ಕಾಗಿ ಸೆರೆ ಸಿಕ್ಕಿದ್ದಾರೆ.

ಪ್ರದೀಪ್ ಮೆಂಡನ್(39) ಎಂಬಾತನನ್ನು ಮಲ್ಪೆಯಲ್ಲಿ ಹಾಗೂ ಎ.ಎಸ್.ರವಿ(27) ಎಂಬಾತನನ್ನು ಸೋಮವಾರಪೇಟೆಯಲ್ಲಿ ಮಂಗಳವಾರ ಬೆಳಿಗ್ಗೆ ಬಂಧಿಸಲಾಗಿದೆ. ಆರೋಪಿಗಳಿಂದ ಒಂದು ರಿವಾಲ್ವರ್ ಹಾಗೂ 10 ಗುಂಡು ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಭೂಗತ ಪಾತಕಿ ರವಿ ಪೂಜಾರಿ ಸಹಚರರು ಎಂದು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಕದ್ರಿ ಶೂಟೌಟ್‌ಗೂ ಬಂಧಿತ ಆರೋಪಿಗಳೂ ಯಾವುದೇ ಸಂಬಂಧ ಇಲ್ಲ ಎಂದು ಇದೇ ವೇಳೆ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದರು.

ಪಾತಕಿ ಜಾತಕ: ಬಂಧಿತ ಆರೋಪಿ ಉಡುಪಿ ಜಿಲ್ಲೆಯ ಆದಿ ಉಡುಪಿ ನಾಗೇಶ ನಗರದ ನಿವಾಸಿ ಪ್ರದೀಪ್ ಮೆಂಡನ್ ಕುಖ್ಯಾತ ರೌಡಿ. ಈತನ ವಿರುದ್ಧ ಎರಡು ಕೊಲೆ ಪ್ರಕರಣ, ನಾಲ್ಕು ಕೊಲೆ ಯತ್ನ ಪ್ರಕರಣ, ಎರಡು ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರ ಎರಡು ಪ್ರಕರಣಗಳು ದಾಖಲಾಗಿವೆ. ಈತ 1993ರಿಂದ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ.

ಈತನ ವಿರುದ್ಧ ಸುರತ್ಕಲ್, ಪಾಂಡೇಶ್ವರ, ಬಂದರು, ಉರ್ವ, ಬಂಟ್ವಾಳ, ಉಡುಪಿ ನಗರ ಹಾಗೂ ಕಾರ್ಕಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಈತ ಸುರತ್ಕಲ್‌ನಲ್ಲಿ 1994ರಲ್ಲಿ ನಡೆದ ದೇಜು ಕೊಲೆ ಪ್ರಕರಣ, ಪಾಂಡೇಶ್ವರದಲ್ಲಿ 1994ರಲ್ಲಿ ನಡೆದ ಸಲೀಂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ 2 ವರ್ಷಗಳ ಹಿಂದೆ ಕೊಲೆಗೀಡಾದ ಪಾತಕಿ ಪಾಂಡು ಪೈ ಸಹಚರ.
 
ಮೆಂಡನ್ ರಿಯಲ್ ಎಸ್ಟೇಟ್ ಕಮಿಷನ್ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದ. ಸೋಮವಾರಪೇಟೆ ಮಹಾತ್ಮ ಗಾಂಧಿ ರಸ್ತೆಯ ನಿವಾಸಿ ಸಂಜೀವ ಪೂಜಾರಿ ಎಂಬವರ ಪುತ್ರ ಎ.ಎಸ್.ರವಿ ವಿರುದ್ಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಈತನೂ ಪಾಂಡು ಪೈ ಸಹಚರನಾಗಿದ್ದು, ಮಣ್ಣಗುಡ್ಡದಲ್ಲಿ ಸಿ.ಡಿ ಅಂಗಡಿ ನಡೆಸುತ್ತಿದ್ದ ಎಂದು ವಿವರ ನೀಡಿದರು. ಎಸಿಪಿ ರವೀಂದ್ರ ಗಡಾದಿ ಸುದ್ದಿಗೋಷ್ಠಿಯಲ್ಲಿದ್ದರು.

ಮೊಬೈಲ್‌ಗೆ ಕಿವಿ: ಶೂಟೌಟ್ ಪ್ರಕರಣ ಹಿನ್ನೆಲೆಯಲ್ಲಿ ರೌಡಿ ಹಿನ್ನೆಲೆಯುಳ್ಳ ಹಲವರ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೌಡಿ ಶೀಟರ್‌ಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದರು. ಅವರು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ, ಯಾರ ಜತೆ ಇದ್ದಾರೆ ಎಂಬುದರ ಜತೆಗೇ, ಅವರ ಮೊಬೈಲ್ ಫೋನ್ ಸಂಭಾಷಣೆ ಬಗ್ಗೆಯೂ ಕಿವಿಗೊಡಲಾಗಿತ್ತು.

ಪ್ರದೀಪ್ ಹಾಗೂ ಸಹಚರ ರವಿ ಚಲನವಲನದ ಮೇಲೆ ಕಣ್ಣಿಟ್ಟಾಗ ಅವರಲ್ಲಿ ರಿವಾಲ್ವರ್ ಹಾಗೂ ಗುಂಡುಗಳಿದ್ದು, ಕೊಲೆ ಸಂಚು ನಡೆಸಿರುವ ಬಗ್ಗೆ ಸುಳಿವು ದೊರೆಯಿತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಯಿತು. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಿಸ್ತೂಲ್ ಹೊಂದಿದ್ದ ಬಗ್ಗೆಯೂ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT