ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಪಲ್ಲವಿ ಹಂಸಗಾನ

Last Updated 17 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಗುಲಾಬಿ ಹಿಡಿದು ನಿಂತ ಶಾಲಾ ಮಕ್ಕಳು ಮುಕ್ಕಾಲು ತಾಸು ಕಾಯ್ದರಷ್ಟೆ. ಕೊನೆಗೂ ರವಿಚಂದ್ರನ್ ಬಂದರು. ಅದಕ್ಕೆ ಅರ್ಧ ಗಂಟೆ ಮುಂಚಿತವಾಗಿಯೇ ಹಂಸಲೇಖ ಬಂದಿದ್ದರು. ಹಾಡುಗಳ ರೆಕಾರ್ಡಿಂಗ್ ಸಂದರ್ಭದಲ್ಲೇ ಇಂಥ ಅದ್ದೂರಿ ಸಮಾರಂಭ ನಡೆಯುವುದು ವಿರಳ. ಹಂಸಲೇಖ-ರವಿಚಂದ್ರನ್ ಮತ್ತೆ ಒಂದಾಗೋಣ ಬಾ ಎಂದಿರುವ ಕಾರಣಕ್ಕೆ ಇಷ್ಟೆಲ್ಲಾ ಸಂಭ್ರಮ. ಪ್ರೇಮಿಗಳ ದಿನಾಚರಣೆಯ ದಿನ ಈ ಇಬ್ಬರೂ ಸಿನಿಮಾ ಪ್ರೇಮಾರಾಧಕರು ಕೂಡಿ ಕೆಲಸ ಮಾಡುವುದಾಗಿ ಘೋಷಿಸಿದ್ದು ವಿಶೇಷ; ಅದೂ ರವಿಚಂದ್ರನ್ ವಿವಾಹದ ಬೆಳ್ಳಿಹಬ್ಬದ ದಿನವೇ.

ನಟ ಮೋಹನ್ ನಿರ್ದೇಶಿಸಲಿರುವ ‘ನರಸಿಂಹ’ ಚಿತ್ರದ ಮೂಲಕ ಹಂಸ್-ರವಿ ಜೋಡಿ ಬೆಸೆದುಕೊಂಡಿದೆ. ಆರು ಟ್ಯೂನ್‌ಗಳನ್ನು ಹಂಸ್ ಹಾಕಿದ್ದಾಗಿದೆ. ಅದರಲ್ಲಿ ಒಂದನ್ನು ವಯಲಿನ್ ವಾದಕರು ಕಂಠೀರವ ಅಂಗಳದ ಪ್ರಸಾದ್ ಸ್ಟುಡಿಯೋದಲ್ಲಿ ಪ್ರಸ್ತುತಪಡಿಸಿದರು.

‘ನಂಗೆ ಟೈಮಿಲ್ಲ’ ಎನ್ನುತ್ತಲೇ ಕ್ಯಾಮೆರಾ ಕಣ್ಣುಗಳನ್ನು ಪಕ್ಕಕ್ಕೆ ಸರಿಸಿಕೊಂಡು ಬಂದವರು ರವಿಚಂದ್ರನ್. ಆದರೆ, ಅವೇ ಕಣ್ಣುಗಳು ಅವರ ಮೇಲೆ ಹತ್ತಿರದಿಂದ ನಿಗಾ ಇಟ್ಟವು. ಅವರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲಾ ಹಿಂಬಾಲಿಸಿದವು. ‘ಬೈಟ್ಸ್ ಬೈಟ್ಸ್’ ಎಂಬ ಟಿವಿ ವಾಹಿನಿಯವರ ಸೊಲ್ಲಿಗೆ ಸೊಪ್ಪು ಹಾಕದ ಅವರು ಏನು ಮಾಡಿದರೂ ಕ್ಯಾಮೆರಾ ದಾಳಿಯಿಂದ ಬಚಾವಾಗಲು ಆಗಲೇ ಇಲ್ಲ. ಐದು ಕಡೆ ಲೊಕೇಷನ್ ಚೇಂಜ್ ಆದ ನಂತರ ಮತ್ತೆ ಮುಖ್ಯ ವೇದಿಕೆಯಲ್ಲೇ ಹಂಸ್ ಜೊತೆಗೆ ಅವರು ಗೋಷ್ಠಿಗೆಂದು ಕೂತಿದ್ದು.

ಅದಕ್ಕೂ ಮೊದಲು ಸಿನಿಮಾ ಶೈಲಿಯಲ್ಲೇ ಹಂಸ್-ರವಿ ಜೋಡಿಯ ಬೆಸುಗೆಯನ್ನು ದೇಸಿ ಶಾಲಾ ವಿದ್ಯಾರ್ಥಿಗಳು ತೋರಿಸಿದರು. ಹಂಸ್ ಟ್ಯೂನ್ ಹಾಕಿ, ಸಾಹಿತ್ಯ ಕಟ್ಟಿದ ಹಳೆಯ ಹಾಡುಗಳು ತೇಲಿಬಂದಾಗ ರವಿ ತಮ್ಮದೇ ಸ್ಟೈಲಿನಲ್ಲಿ ಕಣ್ಣು ಸಣ್ಣಗೆ ಮಾಡಿಕೊಂಡು ಹಸನ್ಮುಖಿಯಾದರು. ಇಬ್ಬರ ಕೈಲೂ ಪ್ರೇಮಸಂಕೇತದ ಆಕಾರದ ಪುಗ್ಗಗಳಿದ್ದವು.

‘ನಾನು, ಹಂಸಲೇಖ ಜಗಳವನ್ನೇ ಆಡಿಲ್ಲ. ಕಿಂದರಿಜೋಗಿ ಟೈಮಲ್ಲಿ ಕೆಲಸದ ಕಾರಣಕ್ಕೆ ಮಾತಾಗಿತ್ತಷ್ಟೆ. ಆಗ ಮೂವತ್ತು ಪಲ್ಲವಿ ಬರೆಸಿ, ಒಂದನ್ನು ಮಾತ್ರ ಆರಿಸಿದ್ದೆ. ಇನ್ನೂ ಇಪ್ಪತ್ತೊಂಬತ್ತು ಉಳಿದುಕೊಂಡಿದ್ದವು. ಅನೇಕರು ನಮ್ಮಿಬ್ಬರಿಗೂ ಡೈವೊರ್ಸ್ ಕೊಡಿಸಿಬಿಟ್ಟರು. ನಾವು ಅನೇಕ ವರ್ಷ ದೂರ ಇದ್ದೆವಷ್ಟೆ. ವಿರಹ ಎನ್ನುವುದು ಕ್ರಿಯೇಟಿವಿಟಿ ದೃಷ್ಟಿಯಿಂದ ಬೇಕು. ಆಗಲೇ ಎಲ್ಲರಿಗೂ ಅವರವರ ಬೆಲೆ ಗೊತ್ತಾಗೋದು.
ಹಂಸಲೇಖ ಜೊತೆ ಕೆಲಸ ನಿಂತಮೇಲೆ ನಾನೇ ಟ್ಯೂನ್ ಹಾಕತೊಡಗಿದೆ. ಸಾಹಿತ್ಯ ಬರೆದದ್ದೂ ಆಯಿತು. ಆದರೆ, ನನಗೆ ಮಿತಿ ಇತ್ತು. ಬರವಣಿಗೆಯಲ್ಲಿ ಹಂಸಲೇಖ ಕೆದಕುವುದರಲ್ಲಿ ನಿಸ್ಸೀಮರು. ನನ್ನಿಂದ ಅದು ಸಾಧ್ಯವಿಲ್ಲ. ನಾವು ಒಗ್ಗೂಡಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಒಬ್ಬರೇ ಎಂಬಂತಿದ್ದೆವು. ಈಗ ಮತ್ತೆ ಆ ಕಾಲ ಬಂದಿದೆ. ಎಲ್ಲವೂ ಒಳ್ಳೆಯದಕ್ಕೆ. ಬ್ರೈಟ್ ಅಂಡ್ ಗುಡ್ ಸಾಂಗ್ಸ್ ಕೊಡುತ್ತೇವೆ’ ಎಂದು ರವಿಚಂದ್ರನ್ ಎರಡೇ ನಿಮಿಷದಲ್ಲಿ ಹೇಳಿಮುಗಿಸಿದರು.

ರವಿ ಹೇಳಿದ್ದೆಲ್ಲಾ ತಮ್ಮ ಮಾತೇ ಎಂದು ಸಿನಿಮೀಯ ಶೈಲಿಯಲ್ಲೇ ನುಡಿ ಪೋಣಿಸತೊಡಗಿದರು ಹಂಸಲೇಖ. ‘ನಾವಿಬ್ಬರೂ ಬೇರೆ ಆಗುತ್ತೇವೆ ಅಂತ ನನಗೂ ಗೊತ್ತಿರಲಿಲ್ಲ, ಅವರಿಗೂ ಗೊತ್ತಿರಲಿಲ್ಲ. ಅವರೀಗ ತುಂಬಾ ಪಕ್ವವಾಗಿದ್ದಾರೆ. ಯಾವಾಗ ಸಿಕ್ಕರೂ ಸೂಕ್ಷ್ಮ ಸಂಬಂಧಗಳ ಬಗ್ಗೆ ಮಾತಾಡುತ್ತಾರೆ. ಇದಾದ ನಂತರ ಅವರ ನಿರ್ದೇಶನದ ಚಿತ್ರಗಳಿಗೂ ಕೆಲಸ ಮಾಡಲಿದ್ದೇನೆ. ರಾಷ್ಟ್ರ ಮಟ್ಟದಲ್ಲೇ ಸದ್ದು ಮಾಡುವ ಒಂದು ಸಿನಿಮಾವನ್ನು ಕೊಡುವ ಆಸೆ ನಮ್ಮದು. ಅಷ್ಟೊಂದು ಎನರ್ಜಿ ಇರುವ ಇನ್ನೊಬ್ಬ ನಿರ್ದೇಶಕರನ್ನು ನಾನು ನೋಡೇ ಇಲ್ಲ. ನನಗೂ ನಿರ್ದೇಶಕನಾಗಬೇಕೆಂಬ ಬಯಕೆ ಇದೆ. ಈಶ್ವರಿ ಸಂಸ್ಥೆಯೇ ಆ ಅವಕಾಶ ಕೊಟ್ಟರೆ ನನ್ನ ಬದುಕು ಧನ್ಯವಾಗಲಿದೆ. ಆ ಸಂಸ್ಥೆ ನನ್ನನ್ನು ರಾಜಬೀದಿಯಲ್ಲಿ ಕರೆದುಕೊಂಡು ಬಂದಿದೆ...’ ಹಂಸಲೇಖ ಹೊಗಳಿಕೆಯ ಹೊನಲು ಹರಿಸಿದರು.

ಆಶೀರ್ವದಿಸಲು ಇಬ್ಬರೂ ಗುರುಗಳು ಒಟ್ಟಾಗಿದ್ದಾರೆ ಎಂದು ಕೃತಾರ್ಥರಾದವರಂತೆ ಮಾತನಾಡಿದವರು ನಿರ್ದೇಶಕ ಮೋಹನ್. ಇಂಥ ಅಪರೂಪದ ಯೋಜನೆಗೆ ಹಣ ಹೂಡಲು ಬಂದಿರುವ ಎನ್.ಕುಮಾರ್ ಹಾಗೂ ಬಿ.ಎನ್.ಗಂಗಾಧರ್‌ಗೆ ಕೃತಜ್ಞತೆ ಅರ್ಪಿಸಿದ ಮೋಹನ್ ತಮ್ಮದು ‘ಹಿಂಸಾ ಗಾಂಧಿಯ ಸಿನಿಮಾ’ ಎಂದರು. ಗಾಂಧಿಯ ಸರಳತೆಯಲ್ಲೇ ನಾಯಕ ಇದ್ದರೂ ಎರಡು ಶೇಡ್‌ಗಳಲ್ಲಿ ಪಾತ್ರ ಸಾಗುವ ಕಾರಣಕ್ಕೆ ಅವರು ಗಾಂಧಿಗೇ ಹಿಂಸೆಯ ಅಸ್ತ್ರ ಕೊಟ್ಟುಬಿಟ್ಟಿದ್ದಾರೆ.

ಹಂಸಲೇಖ ತಾವೇ ಈಚೆಗೆ ಈ ಚಿತ್ರಕ್ಕೆ ಬರೆದ, ತಮಗೆ ಇಷ್ಟವಾದ ಸಾಲುಗಳನ್ನು ಹಾಡಿದರು:

ಲಂಗು ಲಗಾಮಿಲ್ಲ ಲಂಚ ನುಂಗೋರಿಗೆ ಕೊಂಚ ನುಂಗಿರೋ ಕೊಂಚ ದೋಚಿರೋ/ಕೊಂಚ ನೀವು ಹಂಚಿ ಬಾಳಿರೋ.../ಆಡಿದ್ದೆ ಮರೆತ್ಹೋಗ್ತೀರ ನೀವು ಹೊಟ್ಟೇಗೆ ಏನ್ ತಿಂತೀರಾ... ಹಂಸ್ ಅಭಿಮಾನಿಗಳಿಂದ ಚಪ್ಪಾಳೆ ಬೀಳತೊಡಗಿತು. ರವಿಚಂದ್ರನ್ ವಿವಾಹ ಬೆಳ್ಳಿಹಬ್ಬ ಆಚರಿಸಿಕೊಳ್ಳಲು ತಮ್ಮ ಮನೆಯತ್ತ ಧಾವಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT