ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಶಂಕರ್ ಗುರೂಜಿ ಆಗ್ರಹ.ಲೋಕಪಾಲ ಮಸೂದೆ ಜಾರಿಯಾಗಲಿ

Last Updated 18 ಫೆಬ್ರುವರಿ 2011, 11:05 IST
ಅಕ್ಷರ ಗಾತ್ರ

ಬಡಗಮಿಜಾರು (ಮಂಗಳೂರು): ದೇಶದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ತರುವ ಸಲುವಾಗಿ ಲೋಕಪಾಲ ಮಸೂದೆ ಜಾರಿಗೆ ತರಬೇಕಾದ ಅಗತ್ಯ ಇದೆ ಎಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟರು.ಇಲ್ಲಿನ ಆಳ್ವಾಸ್ ವಿದ್ಯಾಸಂಸ್ಥೆಯ ಶೋಭಾವನದಲ್ಲಿ ಗುರುವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ಸಮಾಜದ ಗೌರವಾನ್ವಿತ ವ್ಯಕ್ತಿಯೊಬ್ಬರನ್ನು ಲೋಕಪಾಲರನ್ನಾಗಿ ನೇಮಿಸಬೇಕು. ದೇಶದ ಯಾವುದೇ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ಅವರಿಗಿರಬೇಕು. ಲೋಕಪಾಲರ ಕಾರ್ಯಾಚರಣೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಬಾರದು. ಪ್ರಧಾನಮಂತ್ರಿಯನ್ನೂ ತನಿಖೆಯ ವ್ಯಾಪ್ತಿಗೆ ತರಬೇಕು’ ಎಂದರು.
‘ಆಡಳಿತಶಾಹಿ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಆಳವಾಗಿ ಬೇರುಬಿಟ್ಟಿದೆ. ನ್ಯಾಯಾಂಗ ಹಾಗೂ ಧಾರ್ಮಿಕ ಕ್ಷೇತ್ರ–ವೂ ಇದಕ್ಕೆ ಹೊರತಾಗಿಲ್ಲ. ಜನ ಭ್ರಷ್ಟಾಚಾರದ ವಿರುದ್ಧ ತಿರುಗಿಬೀಳಬೇಕು’ ಎಂದರು.

‘ಧಾರ್ಮಿಕ ಕ್ಷೇತ್ರವನ್ನೂ ಅನೇಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ರಾವಣನ ಕಾಲದಿಂದಲೂ ನಡೆದು ಬಂದಿದೆ. ಯಾವುದನ್ನೂ ನಂಬುವ ಮುನ್ನ ಬುದ್ಧಿ ಮತ್ತು ವಿಚಾರದಿಂದ ಒರೆಹಚ್ಚಿನೋಡಬೇಕು. ಹಾಗೆಂದ ಮಾತ್ರಕ್ಕೆ ಧರ್ಮಗುರುಗಳನ್ನು ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವವರು ಪೂರ್ವಾಗ್ರಹಪೀಡಿತರಾಗಿ ಟೀಕಿಸುವುದು ಸರಿಯಲ್ಲ’ ಎಂದರು.

‘ಆಯುರ್ವೇದ ಜನಪ್ರಿಯವಾಗುತ್ತಿರುವುದನ್ನು ಕಂಡು ಪಾಶ್ಚಿಮಾತ್ಯ ವೈದ್ಯಕೀಯ ಲಾಬಿ ಕಂಗಾಲಾಗಿದ್ದು, ಭಾರತೀಯ ವೈದ್ಯಪದ್ಧತಿ ಬಗ್ಗೆ ಅಪಪ್ರಚಾರ ನಡೆ–ಸುತ್ತಿದೆ. ಆದರೆ, ನಮ್ಮ ಸರ್ಕಾರ ಮಾತ್ರ ಸ್ವದೇಶಿ ವ್ಯದ್ಯಕೀಯ ಪದ್ಧತಿಯನ್ನು ಪ್ರೋತ್ಸಾಹಿಸದೆ ನಿದ್ದೆಹೋಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಯೋಗದ ಮೇಲಿನ ಸ್ವಾಮಿತ್ವವನ್ನೂ ನಾವು ಕಳೆದುಕೊಳ್ಳಬೇಕಾಗಿ ಬರಬಹುದು’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ವಾಮಾಚಾರ-ಸಿ.ಎಂ. ಭಯಪಡುವ ಅಗತ್ಯವಿಲ್ಲ’

‘ವಾಮಾಚಾರಕ್ಕೆ ಮುಖ್ಯಮಂತ್ರಿ ಭಯಪಡುವ ಅಗತ್ಯವಿಲ್ಲ. ಆಶೀರ್ವಾದ ವ್ಯಕ್ತಿಯ ಮೇಲೆ ಪ್ರಭಾವ ಬೀರುವಂತೆ ಕೆಲವೊಮ್ಮೆ ನಕಾರಾತ್ಮಕ ಆಶೀರ್ವಾದವೂ ಪ್ರಭಾವ ಬೀರುತ್ತದೆ. ಬೈಗುಳ ಕೇಳಿದಾಗ ಋಣಾತ್ಮಕ ಕಂಪನ ಸೃಷ್ಟಿಯಾಗುವಂತೆ ವಾಮಾಚಾರವೂ ಮನದಲ್ಲಿ ತಲ್ಲಣ ಸೃಷ್ಟಿಸುತ್ತದೆ. ಅದು ಚಿಂತನಾ ಶಕ್ತಿಯ ಮೇಲೆ ಅವಲಂಬಿತ. ಪ್ರತಿಯೊಬ್ಬ ಆಸ್ತಿಕರ ಬಳಿಯೂ ಅದಕ್ಕೆ ಬ್ರಹ್ಮಾಸ್ತ್ರ ಇದೆ. ಭಕ್ತಿ, ಶ್ರದ್ಧೆ ಭಜನೆ ಮಾಡುವವರ ಬಳಿ ನಕಾರಾತ್ಮಕ ಶಕ್ತಿ ಸುಳಿಯುವುದೂ ಇಲ್ಲ. ಕತ್ತಲೆ ಎಷ್ಟಿದ್ದರೂ ಬೆಳಕಿಗೆ ಸರಿಸಮಾನ ಅಲ್ಲ’ ಎಂದರು.

‘ಮಡೆಸ್ನಾನ ಮೂಢನಂಬಿಕೆ’

‘ಮಡೆಸ್ನಾನದ ಬಗ್ಗೆ ಯಾವ ಶಾಸ್ತ್ರದಲ್ಲೂ ಹೇಳಿಲ್ಲ. ಮಡಿವಂತಿಕೆ ಆಚರಣೆ ವಿಪರೀತಕ್ಕೆ ಹೋದಾಗ ಅದಕ್ಕೆ ಪ್ರತಿಗಾಮಿಯಾಗಿ ಇಂಥ ಆಚರಣೆ ರೂಢಿಗೆ ಬಂದಿರುವ ಸಾಧ್ಯತೆ ಇದೆ. ಮಡೆಸ್ನಾನದಿಂದ, ಮಕ್ಕಳನ್ನು ತಲೆ ಕೆಳಗೆ ಮಾಡಿ ನೇತುಹಾಕುವುದರಿಂದ, ಕತ್ತಿನವರೆಗೆ ಮಣ್ಣುಹಾಕಿ ಹೂಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಆಚರಣೆಯಲ್ಲಿರುವ ಇಂಥ ಪದ್ಧತಿಗಳು ಮರಳು - ಸಕ್ಕರೆ ಮಿಶ್ರಣದಂತೆ. ಇವೆರಡನ್ನು ಬೇರ್ಪಡಿಸಲು ಒಂದೋ ಮಿಶ್ರಣವನ್ನು ನೀರಿನಲ್ಲಿ ಕರಗಿಸಬೇಕು.ಅಥವಾ ನಾವು ಇರುವೆಯಾಂತಾಗಬೇಕು’ ಎಂದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT