ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಟಾಕೀಸ್‌ನಲ್ಲಿ

ಬ್ಲಾಗಿಲನು ತೆರೆದು...
Last Updated 20 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಅಂತರರಾಷ್ಟ್ರೀಯ ಚಿತ್ರೋತ್ಸವದ ನಶೆ ಬೆಂಗಳೂರನ್ನು ಆವರಿಸಿಕೊಂಡಿರುವ ಸಂದರ್ಭದಲ್ಲಿ ಬ್ಲಾಗಿನಲ್ಲೂ ಸಿನಿಮಾ ಹುಡುಕೋಣ. ಸಿನಿಮಾ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಜಾಲತಾಣಗಳೂ ಕೆಲವೇ ಕೆಲವು ಬ್ಲಾಗ್‌ಗಳೂ ಇವೆ. ಅಂಥ ಬ್ಲಾಗ್‌ಗಳಲ್ಲಿ `ರವೀಂದ್ರ ಟಾಕೀಸ್' ಒಂದು. ಚಲನಚಿತ್ರವನ್ನು ಗಂಭೀರ ಮಾಧ್ಯಮವನ್ನಾಗಿ ಪರಿಗಣಿಸಿರುವ ರವೀಂದ್ರ ಎನ್ನುವ ಯುವ ನಿರ್ದೇಶಕರ ಬ್ಲಾಗಿದು. ಬನ್ನಿ, ಅದರ ಬಾಗಿಲು ತಟ್ಟೋಣ. 
 
`ರವೀಂದ್ರ ಟಾಕೀಸ್' (ravindratalkies.blogspot.in ) ಬರಹಗಳು ಚಲನಚಿತ್ರದ ವಿದ್ಯಾರ್ಥಿಯೊಬ್ಬ ಮಾಡಿಕೊಂಡಿರುವ ಶೈಕ್ಷಣಿಕ ಟಿಪ್ಪಣಿಗಳಂತಿವೆ. ಈ ಚೆಲ್ಲಾಪಿಲ್ಲಿ ಟಿಪ್ಪಣಿಗಳು ತಮ್ಮ ವಸ್ತು ವೈವಿಧ್ಯದಿಂದ ಗಮನಸೆಳೆಯುತ್ತವೆ. ತಾವು ನೋಡಿದ ಸಿನಿಮಾಗಳ ಬಗ್ಗೆ ಬರೆಯುವ ರವೀಂದ್ರ, ಓದಿ ಮೆಚ್ಚಿದ್ದರ ಕುರಿತೂ ದಾಖಲಿಸಿದ್ದಾರೆ. ಆಸ್ಕರ್ ವಿಜೇತ ಚಿತ್ರಗಳಿಂದ ಹಿಡಿದು ಕನ್ನಡದ `ಡ್ರಾಮಾ' ಚಿತ್ರದವರೆಗೂ ಅವರ ಬರಹಗಳ ಹರಹಿದೆ. ಬೆಳ್ಳಿತೆರೆಯ ಜೊತೆಗೆ ಕಿರುತೆರೆಯ ಅವರ ಬರಹಗಳ ದ್ರವ್ಯವಾಗಿದೆ. ಅಪರೂಪದ ಕಲಾವಿದರು, ನಿರ್ದೇಶಕರು, ಧಾರಾವಾಹಿ, ಟೈಂಪಾಸ್ ಸಿನಿಮಾಗಳು, ನೀಲ ಚಿತ್ರಿಕೆಗಳು, ಟ್ರೈಲರ್‌ಗಳು, ಕಥೆ ಕವನ ಚುಟುಕ ಇತ್ಯಾದಿ- ಹೀಗೆ ಟಾಕೀಸ್‌ನಲ್ಲಿನ ಸರಕು ಸಾಕಷ್ಟಿದೆ. 
 
ನೋಡಿದ ಚಿತ್ರಗಳ ಬಗ್ಗೆ ಮೆಚ್ಚುಗೆಯನ್ನು ದಾಖಲಿಸುವಂತೆಯೇ, ತಮ್ಮ ಇರಿಸುಮುರಿಸು ವ್ಯಕ್ತಪಡಿಸಲೂ ರವೀಂದ್ರ ಹಿಂಜರಿದಿಲ್ಲ. ಆ ಕಾರಣದಿಂದಲೇ `ಡ್ರಾಮಾ'ದ ಯೋಗರಾಜ ಭಟ್ಟರನ್ನು ಮೆಚ್ಚಿಕೊಳ್ಳುತ್ತಲೇ, ಅವರು ತಮ್ಮಷ್ಟಕ್ಕೆ ತಾವು ರೂಪಿಸಿಕೊಂಡಿರುವ ಚೌಕಟ್ಟುಗಳನ್ನೂ ಗುರ್ತಿಸುವ ಪ್ರಯತ್ನ ಮಾಡುತ್ತಾರೆ. 
 
`ಮಾರ್ಚ್ 23' ಎನ್ನುವುದು ರವೀಂದ್ರರು ನಿರ್ದೇಶಿಸಿರುವ ಸಿನಿಮಾ. ಈ ಸಿನಿಮಾ ಸೆನ್ಸಾರ್ ಆದ ಪ್ರಸಂಗದ ಕುರಿತ ಬರಹ ಕುತೂಹಲಕರವಾಗಿದೆ. 
ರವೀಂದ್ರರ ಅಭಿಪ್ರಾಯಗಳಿಗೆ ನಾವು ತಕರಾರು ಎತ್ತಬಹುದಾಗಿದೆ. ಆದರೆ, ಅವರ ಬರಹಗಳ ಹಿಂದಿನ ಪ್ರಾಮಾಣಿಕತೆ ಮತ್ತು ಸಿನಿಮಾ ಪ್ರೀತಿಯನ್ನು ಮೆಚ್ಚಿಕೊಳ್ಳಲೇಬೇಕು. ಸಿನಿಮಾ ಕುರಿತ ಮಾತು-ಬರಹ ಎನ್ನುವುದು ವಿನೋದದ, ತೆಗಳಿಕೆಯ ಇಲ್ಲವೇ ಒಣ ಅಭಿಮಾನದ ಮಾತುಗಳಾಗಿರುವ ಸಂದರ್ಭದಲ್ಲಿ `ರವೀಂದ್ರ ಟಾಕೀಸ್' ಬರಹಗಳ ಗಾಂಭೀರ್ಯ ಭಿನ್ನ ಎನ್ನಿಸುತ್ತದೆ. 
 
ಟಾಕೀಸ್‌ನಲ್ಲಿ ಕಂಡ ಸಿನಿಮಾವೊಂದರ ಬಗೆಗಿನ ಬರಹದ ತುಣುಕು ಕೆಳಕಂಡಂತಿದೆ:
“ಬೆಲ್ಜಿಯಂ ಭಾಷೆಯಲ್ಲಿ `ವೇಸ್ ಡಿ. ನೋಸೆಸ್' ಎನ್ನುವ ಚಲನಚಿತ್ರವೊಂದಿದೆ. ಥಿಯೆರಿ ಜೆನೊ ಎನ್ನುವವ ಅದರ ನಿರ್ದೇಶಕ. ಚಿತ್ರದ ಕಥೆ ಇಂತಿದೆ ಕೇಳಿ. ಆತನೊಬ್ಬ ರೈತ. ಪ್ರಾಣಿಗಳೆಂದರೆ ಆತನಿಗೆ ಪ್ರೀತಿಯೋ, ದ್ವೇಷವೋ ಗೊತ್ತಾಗದಂತಹ ಪರಿಸ್ಥಿತಿ ನಮಗೆ ಅಥವಾ ನಿರ್ದೇಶಕನಿಗೆ ಅಥವಾ ಸ್ವತಃ ನಾಯಕನಿಗೂ. ಅವನು ಎಲ್ಲರಿಗಿಂತ ಭಿನ್ನ ಎನ್ನುವುದಕ್ಕಿಂತ ವಿಲಕ್ಷಣ, ತಿಕ್ಕಲ ಎನ್ನಬಹುದು. ಕೋಳಿ ಪ್ರೀತಿಸುತ್ತಾನಾದರೂ ತಲೆ ಕತ್ತರಿಸುತ್ತಾನೆ, ಪಾರಿವಾಳದ ತಲೆಗೆ ಗೊಂಬೆ ಕಟ್ಟುತ್ತಾನೆ. ಇವೆಲ್ಲಕ್ಕಿಂತ ಅತಿರೇಕ ಮುಂದೆ ಇದೆ. ಆತನು ಒಂದು ಹೆಣ್ಣು ಹಂದಿಯನ್ನು ಪ್ರೀತಿಸುತ್ತಾನೆ. ಹೌದು. ಅದನ್ನೇ ನಮ್ಮ ಸಂಸ್ಕತಿಯ ಪ್ರಕಾರ ಹೇಳುವುದಾದರೆ ಮದುವೆಯಾಗುತ್ತಾನೆ. ಮುಂದೆ ಅದಕ್ಕೆ ಮಕ್ಕಳಾದಾಗ, ಅಥವಾ ಇವನಿಗೆ ಹಂದಿ ಮರಿಗಳಾದಾಗ ಅವಕ್ಕೆ ತಾನೇ ಹಾಲುಣಿಸಲು ಪ್ರಯತ್ನಿಸುತ್ತಾನೆ. ಆದರೆ ಅವು ತಟ್ಟೆಯಲ್ಲಿ ಹಾಲು ಕುಡಿಯುತ್ತವೆ. ಮರಿ ಹಂದಿಗಳಿಗೆ ತಾಯಿಯ ಸಹವಾಸ ಬೇಕೇ ಬೇಕಲ್ಲವೇ..? ಅವುಗಳು ತಾಯಿ ಹಂದಿಯ ಬಳಿ ಹೋಗಲು ಹಾತೊರೆಯುತ್ತವೆ. ಇದರಿಂದ ಕೋಪಗೊಳ್ಳುವ ತಂದೆ ಅವುಗಳನ್ನೂ ಸಾಯಿಸುತ್ತಾನೆ. ಇದರಿಂದ ತಾಯಿ ಹಂದಿ ಖಿನ್ನತೆಗೊಳಗಾಗುತ್ತದೆ. ರೊಚ್ಚಿಗೆದ್ದು ಹುಚ್ಚುಹುಚ್ಚಾಗಿ ಓಡತೊಡಗುತ್ತದೆ. ಹಾಗೆ ಓಡಿ ಗುಂಡಿಯೊಂದಕ್ಕೆ ಬೀಳುತ್ತದೆ. ಆದರೆ ಈತ ಬಿಡಬೇಕಲ್ಲ! ಹುಡುಕುತ್ತಾನೆ. ಆ ದೇಹವನ್ನೂ ಹೊರತೆಗೆಯುತ್ತಾನೆ. ಅಳುತ್ತಾನೆ. ತಾನು ಸಾಯಲು ಪ್ರಯತ್ನಿಸುತ್ತಾನೆ. ಆಮೇಲೆ ಹುಚ್ಚನಂತಾಡಿ ಮನೆಯ ವಸ್ತುಗಳನ್ನೆಲ್ಲ ಒಡೆದು ಹಾಕುತ್ತಾನೆ. ಕೊನೆಯಲ್ಲಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
 
ಈ ಚಿತ್ರದ ಪೂರ್ಣ ಕಥೆ ಹೇಳಿದುದರ ಹಿಂದೆ ಒಂದು ಉದ್ದೇಶವಿದೆ. ಜಗತ್ತಿನಲ್ಲಿ ಏನೆಲ್ಲಾ ಸಿನಿಮಾಗಳನ್ನೂ ಮಾಡುತ್ತಾರೆ ಎನ್ನುವುದನ್ನು ಪರಿಚಯಿಸುವುದಾದರೂ ಕೆಲವೊಂದು ಸಿನೆಮಾಗಳನ್ನೂ ನೋಡಿ ಎಂದು ಶಿಫಾರಸ್ಸು ಮಾಡಲು ಧೈರ್ಯ ಬರುವುದಿಲ್ಲ. ಆದರೆ ಅದು ಹೇಗೋ ಏನೋ  ನಾನಂತೂ ನೋಡಿಬಿಟ್ಟಿರುತ್ತೇನಾದ್ದರಿಂದ ನೋಡಿದ ವಿಶೇಷವನ್ನು, ವಿಚಿತ್ರವನ್ನು ಹೇಳಿಕೊಳ್ಳಬೇಕೆಂಬ ತುಡಿತವಂತೂ ಇರುತ್ತದೆ. ಹಾಗಾಗಿ ಚಿತ್ರದ ಬಗ್ಗೆ ಹೇಳಿಕೊಳ್ಳುವ ಎನಿಸಿದರೂ ಕೆಲವೊಮ್ಮೆ ಕೆಲವು ಸಿನೆಮಾಗಳು ಆ ಧೈರ್ಯ ಕೊಡುವುದಿಲ್ಲ. ಈ ಸಿನೆಮಾ ಕೂಡ ಅದೇ ಪಟ್ಟಿಗೆ ಸೇರಿದ್ದು”.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT