ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಶ್ಮಿ... ಕಬಡ್ಡಿಯ ಗ್ರಾಮೀಣ ಪ್ರತಿಭೆ

Last Updated 3 ಅಕ್ಟೋಬರ್ 2012, 7:30 IST
ಅಕ್ಷರ ಗಾತ್ರ

ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆ ಪ್ರದರ್ಶಿಸಿದ ಕರಾವಳಿಯ ಕ್ರೀಡಾಪಟುಗಳು ಸಾಕಷ್ಟು ಇದ್ದಾರೆ. ಇವರಲ್ಲಿ ಹೆಚ್ಚಿನವರು ತೀರಾ ಗ್ರಾಮೀಣ ಪ್ರದೇಶದಿಂದ ಬೆಳೆದು ಬಂದವರು. ಗ್ರಾಮೀಣ ಕ್ರೀಡೆ `ಕಬಡ್ಡಿ  ಕರಾವಳಿಯ ಉದ್ದಗಲಕ್ಕೂ ಜನಪ್ರಿಯ. ಕಬಡ್ಡಿ ಆಟಗಾರರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

ಕಬಡ್ಡಿಯನ್ನು ಬಾಲ್ಯದಿಂದಲೇ ಕಠಿಣ ಪರಿಶ್ರಮದಿಂದ ತಪಸ್ಸು ಮಾಡಿಕೊಂಡು ರಾಷ್ಟ್ರ ಮಟ್ಟದಲ್ಲಿ `ರನ್ನರ್ ಆಪ್~ ಪ್ರಶಸ್ತಿ  ಪಡೆದುಕೊಂಡಿರುವ ಅಪ್ಪಟ ಗ್ರಾಮೀಣ ಪ್ರತಿಭೆ ರಶ್ಮಿ ಕೆ.ಕೂಟೇಲು. ರಶ್ಮಿ ಪುತ್ತೂರು ತಾಲೂಕು ಪಡ್ನೂರು ಗ್ರಾಮದ ಕೂಟೇಲು ಕೃಪ್ಣಪ್ಪ ಪೂಜಾರಿ ಮತ್ತು ವೀಣಾ ದಂಪತಿ ಪುತ್ರಿ. ರಶ್ಮಿ ಪ್ರಾಥಮಿಕ ಶಿಕ್ಷಣವನ್ನು ಪಡ್ನೂರು ಸರಕಾರಿ ಶಾಲೆಯಲ್ಲಿಯೇ ಪೂರೈಸಿದ್ದಾರೆ.

ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಅವರ ತರಬೇತಿ, ಪ್ರೋತ್ಸಾಹದ ಅಡಿಪಾಯವೇ ಸಾಧನೆಗೆ ದಾರಿದೀಪವಾಯಿತು ಎಂದು ರಶ್ಮಿ ಕೂಟೇಲು ಧನ್ಯತೆಯ ಮಾತನ್ನಾಡುತ್ತಾರೆ. 

ಕಬಡ್ಡಿ ಜೊತೆ ಜೊತೆಗೆ ಅವರಿಗೆ ಪ್ರಾರಂಭದಿಂದಲೇ ಅಥ್ಲೆಟಿಕ್ಸ್‌ನಲ್ಲಿ ಆಸಕ್ತಿ. ರಶ್ಮಿ ಹಲವು ಅಥ್ಲೆಟಿಕ್ ಕೂಟಗಳಲ್ಲಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಪ್ರತಿಭೆಯನ್ನು ಗಮನಿಸಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಮೋಹನ್ ಆಳ್ವ, ಒಂದು ವರ್ಷ ಪ್ರಾಥಮಿಕ ಉಚಿತ ಶಿಕ್ಷಣ ಮತ್ತು ವಸತಿಯನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಪ್ರಸ್ತುತ ರಶ್ಮಿ ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ವಿಲಿಯಂ ಪಿಂಟೊ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಕುಶಾಲನಗರದಲ್ಲಿ 2006ರಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ತಮ್ಮ ತಂಡ ಪ್ರಥಮ ಸ್ಥಾನ ಗಿಟ್ಟಿಸಲು ರಶ್ಮಿ ಪ್ರಮುಖ ಪಾತ್ರ ವಹಿಸಿದ್ದರು. ಬಳ್ಳಾರಿ, ಧಾರವಾಡ ಹಾಗೂ ತುಮಕೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ತಮ್ಮ ನೇತೃತ್ವದ ತಂಡಕ್ಕೆ ಮೊದಲ ಪ್ರಶಸ್ತಿ ದೊರೆತು, `ಸರ್ವಾಂಗೀಣ ಆಟಗಾರ್ತಿ~ ಎಂದು ಗುರುತಿಸಿಕೊಂಡಿರುವುದು ಈಕೆಯ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ.

ಕಬಡ್ಡಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ `ರಾಜಸ್ಥಾನ, ಆಂಧ್ರಪ್ರದೇಶ, ಉತ್ತರಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳಲ್ಲಿ ನಡೆದ ಕಬಡ್ಡಿ ಸ್ಪರ್ಧೆಯಲ್ಲಿ ತಲಾ ಆರನೇ ಸ್ಥಾನ ಗಳಿಸಿದ್ದೇನೆ ಎಂದು ಹೇಳುವ ರಶ್ಮಿ ಮೊಗದಲ್ಲಿ ಪರಿಶ್ರಮದ ಫಲ ನಸು ನಗು ಕಾಣುತ್ತದೆ.

ಆರು ಬಾರಿ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಆರು ಚಿನ್ನದ ಪದಕಗಳನ್ನು ಪಡೆದಿರುವ ಈಕೆಯ ಮುಂದಿನ ಗುರಿ ಕಬಡ್ಡಿ ವಿಶ್ವಕಪ್‌ನಲ್ಲಿ ಆಡುವುದು, ಇಂತೆಯೇ ಇನ್ನೂ ಹೆಚ್ಚು ಸಾಧಿಸುವಂತಾಗಲಿ ಎನ್ನುವುದೆ ಹಾರೈಕೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT