ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾ ಜೊತೆ ಬಾಂಧವ್ಯ ವೃದ್ಧಿ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಮೊನ್ನೆ ದೆಹಲಿಯಲ್ಲಿ ಭಾರತ ಮತ್ತು ರಷ್ಯಾ ಒಟ್ಟು 10 ಒಪ್ಪಂದಗಳಿಗೆ ಸಹಿ ಹಾಕಿರುವುದು ಉಭಯ ದೇಶಗಳ ಬಾಂಧವ್ಯ ವೃದ್ಧಿ ನಿಟ್ಟಿನಲ್ಲಿ ಮಹತ್ವದ ಮೈಲಿಗ್ಲ್ಲಲಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಧ್ಯೆ ನಡೆದ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ಸಂದರ್ಭದಲ್ಲಿ ಸಹಿ ಹಾಕಿದ ಒಪ್ಪಂದಗಳಿಗೆ ಬಹುಮುಖ ಆಯಾಮಗಳೂ ಇವೆ. ಪುಟಿನ್ ಅವರ ಈ ಭೇಟಿಯ ಫಲಶ್ರುತಿಯು ಒಪ್ಪಂದಗಳಲ್ಲಿ ಪ್ರತಿಫಲನಗೊಂಡಿರುವುದು ಸ್ಪಷ್ಟವಾಗುತ್ತದೆ. 

ರೂ 11 ಸಾವಿರ ಕೋಟಿಗಳಷ್ಟು ನೇರ ಬಂಡವಾಳ ಹೂಡಿಕೆಗೆ ಸಮ್ಮತಿ, ದ್ವಿಪಕ್ಷೀಯ ವಾಣಿಜ್ಯ ವಹಿವಾಟು 2015ರಷ್ಟೊತ್ತಿಗೆ  ರೂ 1.10 ಲಕ್ಷ ಕೋಟಿಗಳಿಗೆ ತಲುಪಿಸುವ ಉದ್ದೇಶ ಮತ್ತು `ಸುಖೋಯ್-ಎಸ್‌ಯು-30' ಯುದ್ಧ ವಿಮಾನ, `ಮಿಗ್ ಎಂಐ' ಸೇನಾ ಹೆಲಿಕಾಪ್ಟರ್‌ಗಳ ಖರೀದಿ ನಿರ್ಧಾರಗಳು ಆರ್ಥಿಕ ಸಂಬಂಧವನ್ನು ಇನ್ನಷ್ಟು ಬೆಸೆಯಲು ನೆರವಾಗಲಿವೆ. ಆರ್ಥಿಕ ಬಾಂಧವ್ಯ ಮತ್ತು ಸೇನಾ ಸಹಕಾರಕ್ಕೆ ಎರಡೂ ದೇಶಗಳು ಈ ಬಾರಿ ಹೆಚ್ಚಿನ ಒತ್ತು ನೀಡಿರುವುದೂ ಇದರಿಂದ ವೇದ್ಯವಾಗುತ್ತದೆ.

ಪಾಶ್ಚಿಮಾತ್ಯ ಪಡೆಗಳು ಆಫ್ಘಾನಿಸ್ತಾನದಿಂದ 2014ರಿಂದ ನಿರ್ಗಮಿಸಲಿರುವುದರಿಂದ ಭಾರತ ಉಪಖಂಡದಲ್ಲಿ ಭಯೋತ್ಪಾದಕರ ಉಪಟಳ ನಿಗ್ರಹ ಮತ್ತು ಮಾದಕ ದ್ರವ್ಯಗಳ ಕಳ್ಳಸಾಗಣೆ ತಡೆಗಟ್ಟಲು ಪರಸ್ಪರ ಸಹಕರಿಸಲು ಎರಡೂ ದೇಶಗಳು ಒಪ್ಪಿಕೊಂಡಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.

ಎರಡೂ ದೇಶಗಳ ಬಾಂಧವ್ಯಕ್ಕೆ ದಶಕಗಳ ಇತಿಹಾಸವಿದೆ. ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ಮಧ್ಯೆ ನಡೆಯುತ್ತಿದ್ದ ಶೀತಲ ಸಮರದ ಕಾಲದಿಂದಲೂ ಉಭಯ ದೇಶಗಳು ಗಟ್ಟಿಸ್ನೇಹವನ್ನು ಜತನದಿಂದ ಕಾಪಾಡಿಕೊಂಡು ಬಂದಿವೆ. ಈಗ ಮಾಡಿಕೊಂಡಿರುವ  ಒಪ್ಪಂದವು ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅವರು ಪುನರಾಯ್ಕೆ ಆಗಿರುವುದರಲ್ಲಿ ಅನಿವಾಸಿ ಭಾರತೀಯರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಭಾರತ ಸ್ನೇಹಿತರಾಗಿರುವ ಜಾನ್ ಕೆರ‌್ರಿ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಭವಿಷ್ಯದಲ್ಲಿ ಅಮೆರಿಕವು ಭಾರತಕ್ಕೆ ಇನ್ನಷ್ಟು ಹತ್ತಿರವಾಗುವ ಸಾಧ್ಯತೆಗಳು ಇರುವಾಗ, ತನ್ನ ಪರಂಪರಾಗತ ಸ್ನೇಹಿತನನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ರಷ್ಯ ಇಚ್ಛಿಸದಿರುವುದೂ ಪುಟಿನ್ ಅವರ ಈ ಭೇಟಿಯಿಂದ ವೇದ್ಯವಾಗುತ್ತದೆ. ಔಷಧಿ, ರಸಗೊಬ್ಬರ, ಗಣಿಗಾರಿಕೆ, ಉಕ್ಕು, ಐ.ಟಿ, ನಾಗರಿಕ ವಿಮಾನಯಾನ, ದೂರಸಂಪರ್ಕ ಮತ್ತಿತರ ರಂಗಗಳಲ್ಲೂ ಬಾಂಧವ್ಯ ಸುಧಾರಣೆಗೆ ವಿಪುಲ ಅವಕಾಶಗಳು ಇವೆ.

ಇವುಗಳನ್ನು  ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎರಡೂ ದೇಶಗಳು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾಗಿರುವುದನ್ನು ಮರೆಯುವಂತಿಲ್ಲ. ನಾಗರಿಕ ಉದ್ದೇಶದ ಪರಮಾಣು ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ, ತಮಿಳುನಾಡಿನ ಕೂಡುಂಕುಳಂ ಪರಮಾಣ ವಿದ್ಯುತ್ ಉತ್ಪಾದನಾ ಸ್ಥಾವರದ 3 ಮತ್ತು 4ನೇ  ಘಟಕಗಳ ವಿಸ್ತರಣೆಗೆ  ಸಂಬಂಧಿಸಿದ  ಸಮಾಲೋಚನೆಗಳು ನಡೆದಿವೆ. ಆದರೆ ಭಾರತದ, ಅಣುಘಟಕ ಹಾನಿಗೆ ನಾಗರಿಕ ಪರಮಾಣು ಬಾಧ್ಯಸ್ಥ ಕಾಯಿದೆಗೆ  ಒಳಪಡುವಲ್ಲಿ ಭಿನ್ನಾಭಿಪ್ರಾಯಗಳು ಉಳಿದುಕೊಂಡಿವೆ. ಅಣು ರಿಯಾಕ್ಟರ್‌ಗಳ ಸುರಕ್ಷತೆ ವಿಚಾರದಲ್ಲಿ ಭಾರತ ರಾಜಿ ಮಾಡಿಕೊಳ್ಳಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT