ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದಲ್ಲಿ ನೇತಾಜಿ: ಉಳಿದದ್ದು ಸುಳಿವು, ಸಾಕ್ಷ್ಯ ಅಲ್ಲ!

ನೇತಾಜಿ ಸುಭಾಷ್ ಚಂದ್ರ ಬೋಸ್
Last Updated 23 ಜನವರಿ 2020, 4:46 IST
ಅಕ್ಷರ ಗಾತ್ರ

ಸೈಬೀರಿಯಾ ಬಳಿಯ ಓಮ್‌ಸ್ಕ್ ಎಂಬ ಸ್ಥಳಕ್ಕೆ ಹೋದ ನೇತಾಜಿ ಸುಭಾಷ್ ಚಂದ್ರ ಬೋಸ್, ಅಲ್ಲಿ ರಷ್ಯಾ ನೆರವಿನಿಂದ ತಾತ್ಕಾಲಿಕ ಸರ್ಕಾರವನ್ನು ರಚಿಸಬೇಕು ಹಾಗೂ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡಬೇಕು ಎಂದುಕೊಂಡಿದ್ದರಂತೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ತೈವಾನ್‌ನಲ್ಲಿ 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ, ರೆಂಕೋಜಿ ದೇವಸ್ಥಾನದಲ್ಲಿ ಇರುವ ಅಸ್ಥಿಯೂ ಅವರದ್ದಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಕೆ.ಮುಖರ್ಜಿ ಆಯೋಗವು ನಿಸ್ಸಂಶಯವಾಗಿ ಹೇಳಿದ ಮೇಲೆ, ನೇತಾಜಿ ಹಾಗೂ ಅವರನ್ನು ಗೌರವದಿಂದ ನೋಡುತ್ತಿದ್ದವರಿಗೆ ಅವರ ನಾಪತ್ತೆ ಕುರಿತ ತನಿಖೆಯು ಮುಖ್ಯವೆನಿಸಿತು. ಫೈಜಾಬಾದ್‌ನ ‘ಗುಮ್‌ನಾಮ್ ಬಾಬಾ’ (ಹೆಸರು ಗೊತ್ತಿಲ್ಲದ ಈ ಬಾಬಾನನ್ನು ಎಲ್ಲರೂ ಹೀಗೇ ಕರೆಯಲಾರಂಭಿಸಿದ್ದರು) ಅವರನ್ನೇ ನೇತಾಜಿ ಎಂದು ಅನೇಕರು ನಂಬಿದ್ದರೂ, ಅದಕ್ಕೆ ಪಕ್ಕಾ ಸಾಕ್ಷ್ಯಗಳು ಸಿಗಲಿಲ್ಲ.

ಎರಡನೇ ವಿಶ್ವಯುದ್ಧಾ ನಂತರದ ರಾಜಕೀಯ ವಾತಾವರಣದಲ್ಲಿ ನೇತಾಜಿ ಅವರಿಗೆ ರಷ್ಯಾ ಸುರಕ್ಷಾ ತಾಣವೆನಿಸಿತ್ತು ಎನ್ನಲಾಗಿದೆ. ಹಿಂದೆ ಚೀನಾಗೆ ಸೇರಿದ್ದ ಮಂಚೂರಿಯಾವನ್ನು ಜಪಾನೀಯರು ವಶಪಡಿಸಿಕೊಂಡಿದ್ದು, ಅವರು ಅಲ್ಲಿ ಸುಭಾಷ್ ಚಂದ್ರ ಬೋಸರನ್ನು ಇಳಿಸಿದರು, ಸೋವಿಯತ್ ರಷ್ಯಾದ ‘ರೆಡ್ ಆರ್ಮಿ’ ಅದನ್ನು ಹಿಡಿತದಲ್ಲಿಟ್ಟುಕೊಂಡಿತ್ತು ಎಂಬ ಇನ್ನೊಂದು ವಾದವಿದೆ.

ಸೈಬೀರಿಯಾ ಬಳಿಯ ಓಮ್‌ಸ್ಕ್ ಎಂಬ ಸ್ಥಳಕ್ಕೆ ಹೋದ ನೇತಾಜಿ, ಅಲ್ಲಿ ರಷ್ಯಾ ನೆರವಿನಿಂದ ತಾತ್ಕಾಲಿಕ ಸರ್ಕಾರವನ್ನು ರಚಿಸಬೇಕು ಹಾಗೂ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿಸಿಕೊಡಬೇಕು ಎಂದುಕೊಂಡಿದ್ದರಂತೆ. ಅವರ ಆ ಚಿಂತನೆ ಫಲಿಸದೆ, ಅದಕ್ಕೆ ತದ್ವಿರುದ್ಧವಾಗಿ ನೇತಾಜಿ ಅವರನ್ನೇ ಬಂಧಿಸಿ, ಭಾರಿ ಭದ್ರತೆ ಇರುವ ಜೈಲಿನಲ್ಲಿ ಇರಿಸಲಾಯಿತು. ರಷ್ಯನ್ನರು ನೇತಾಜಿ ಜೊತೆ ಸಂಧಾನಕ್ಕಾಗಿ ಯತ್ನಿಸಿ, ಅದು ಫಲ ಕೊಡದೆ ಅವರನ್ನು ಸೈಬೀರಿಯಾದಲ್ಲಿ ಬಂಧಿಸಿಟ್ಟರು. ಅಲ್ಲಿ 1950ರಲ್ಲಿ ಅವರು ಮೃತಪಟ್ಟಿರುವ ಸಾಧ್ಯತೆ ಇದೆ. ಮಾತುಕತೆ ವಿಫಲವಾದ ನಂತರ ನೇತಾಜಿ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಿರುವ ಸಾಧ್ಯತೆಯೂ ಇದೆ. ಆದರೆ, ನೇತಾಜಿ 1950ರವರೆಗೆ ಬದುಕಿದ್ದರು ಎನ್ನುವುದಕ್ಕೆ ಕೆಲವು ಪುರಾವೆಗಳಿವೆ ಎಂದು ಹೈದರಾಬಾದ್‌ನ ಪ್ರಮುಖ ರಾಷ್ಟ್ರೀಯ ಪತ್ರಿಕೆಯೊಂದರ ಹಿರಿಯ ಸಂಪಾದಕ ಕಿಂಗ್‌ಶುಕ್ ನಾಗ್ ಅಭಿಪ್ರಾಯಪಟ್ಟರು.

ಪಶ್ಚಿಮ ಬಂಗಾಳದ ಬಹಿರಂಗಗೊಳ್ಳದ ಕಡತಗಳ ಪ್ರಕಾರ ನೇತಾಜಿ ಚೀನಾದ ಮಂಚೂರಿಯಾದ ಎಲ್ಲಿಯೋ 1948ರಲ್ಲಿ ಬದುಕಿದ್ದರು. ನೇತಾಜಿ ನಂಬಿಕೆ ಇಟ್ಟಿದ್ದ ಅವರ ಅನುಯಾಯಿ ದೇಬ್‌ನಾಥ್ ದಾಸ್ ಈ ನಂಬಿಕೆಯ ಬೀಜ ಬಿತ್ತಿದ್ದರು. ಮಾಸ್ಕೊದ ಭಾರಿ ಭದ್ರತೆಯ ಜೈಲಿನಲ್ಲಿ ಇರಿಸಿದ 17 ತಿಂಗಳ ಒಳಗೆ ಅದು ನಿರ್ಬಂಧಿತ ವಲಯ ಎಂದು ಘೋಷಿಸಿದ್ದರಿಂದ, ಬೋಸ್ ಅವರನ್ನು ಸೈನ್ಯದಳಗಳ ಶಿಬಿರಗಳನ್ನು ನಿಯಂತ್ರಿಸುತ್ತಿದ್ದ ‘ಗುಲಾಗ್’ ಎಂಬ ಸಂಸ್ಥೆಯು ವಶಕ್ಕೆ ತೆಗೆದುಕೊಂಡಿತೆನ್ನುವುದಕ್ಕೆ ತನ್ನ ಬಳಿ ಪ್ರಮುಖ ದಾಖಲೆಗಳಿವೆ ಎಂದು ಲೇಖಕ, ಪತ್ರಕರ್ತ ಎಂ.ಡಿ.ನಳಪತ್ ಹೇಳಿದರು.

‘1945ರ ಆಗಸ್ಟ್ 18ರಂದು ನೇತಾಜಿ ಅವರನ್ನು ಹೊತ್ತಿದ್ದ ವಿಮಾನ ಸುರಕ್ಷಿತವಾಗಿ ಟೇಕಾಫ್ ಆದದ್ದೇ ಅಲ್ಲದೆ ಅದು ಮಂಚೂರಿಯಾದ ವಾಯುನೆಲೆಯತ್ತ ಹಾರಿತು. ಆಗ ಸೋವಿಯತ್ ಪಡೆಗಳ ಹಿಡಿತದಲ್ಲಿ ಇದ್ದ ಪ್ರದೇಶ ಮಂಚೂರಿಯಾ. ಅಲ್ಲಿ ನೇತಾಜಿ ಅವರನ್ನು ರಷ್ಯಾ ಪಡೆಗಳು ವಶಕ್ಕೆ ತೆಗೆದುಕೊಂಡವು. ಸ್ಟಾಲಿನ್ ನಂತರದ ಸೋವಿಯತ್ ನಾಯಕರು ನೇತಾಜಿ ಅವರನ್ನು ವಶಕ್ಕೆ ತೆಗೆದುಕೊಂಡ ಸಂಗತಿಯನ್ನು ಗುಟ್ಟಾಗಿ ಇಟ್ಟರು. ಆ ಗುಟ್ಟು ರಟ್ಟಾದರೆ ಭಾರತದ ಜೊತೆ ಸೌಹಾರ್ದ ಸಂಬಂಧ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅವರು ಹೀಗೆ ಮಾಡಿದರು’- ಇದು ನಳಪತ್ ಅಭಿಪ್ರಾಯ.

‘ಸುಭಾಷ್ ಬೋಸ್ ವಿಮಾನ ದುರಂತದಲ್ಲಿ ಮೃತಪಡದೆ ಅಥವಾ ಶಾಶ್ವತವಾಗಿ ನಾಪತ್ತೆಯಾಗದೆ ಭಾರತಕ್ಕೆ ಮರಳಿದ್ದ ಪಕ್ಷದಲ್ಲಿ ಅವರು ಸಲೀಸಾಗಿ ಕಾಂಗ್ರೆಸ್‌ನ ಅತಿ ಜನಪ್ರಿಯ ನಾಯಕ ಆಗಿರುತ್ತಿದ್ದರು. ಯಾಕೆಂದರೆ, ನೇತಾಜಿ ಅವರತ್ತ ಹಿಂದೂ, ಮುಸ್ಲಿಂ ಎರಡೂ ಧರ್ಮೀಯರು ಆಕರ್ಷಿತರಾಗಿದ್ದರು. ಬೋಸ್ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ, ಶ್ವೇತಭವನ ಹಾಗೂ ಮೊಹಮ್ಮದ್ ಅಲಿ ಜಿನ್ನಾ ಅವರಿಗಿದ್ದ ಭಾರತವನ್ನು ವಿಭಜಿಸುವ ಯೋಜನೆ ಫಲಿಸುತ್ತಿರಲಿಲ್ಲ’ ಎನ್ನುವುದು ನಳಪತ್ ವಾದ.

‘ನೇತಾಜಿ ರಷ್ಯಾದಲ್ಲಿ ಇದ್ದರು ಎನ್ನುವುದಕ್ಕೆ ಕೆಲವು ಕಡತಗಳು ನಿಖರವಾದ ಮಾಹಿತಿ ಒದಗಿಸುತ್ತವೆ’ ಎಂದು ಸಂಸದ ಡಾ. ಸುಬ್ರಮಣಿಯನ್ ಸ್ವಾಮಿ ದನಿಯೆತ್ತಿದ್ದರು.

ನೇತಾಜಿ ಅವರನ್ನು ಯು.ಎಸ್‌.ಎಸ್‌.ಆರ್‌.ನಲ್ಲಿ ಚಿತ್ರಹಿಂಸೆ ನೀಡಿ ಕೊಂದರು ಎನ್ನುವುದು ಲೇಖಕ ಹಾಗೂ ಸೇನಾ ವಿಶ್ಲೇಷಕ ಮೇಜರ್ ಜನರಲ್ ಜಿ.ಡಿ.ಬಕ್ಷಿ ಅವರ ಅಭಿಪ್ರಾಯವೂ ಆಗಿದೆ.

‘1945ರಲ್ಲಿ ನೇತಾಜಿ ಮಂಚೂರಿಯಾಗೆ ನುಸುಳಿದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ರಷ್ಯಾದ ಬೆಂಬಲ ಪಡೆಯುವುದು ಅವರ ಉದ್ದೇಶವಾಗಿತ್ತು. ಆದರೆ ಅಲ್ಲಿ ಬ್ರಿಟನ್ ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬೆಲೆ ಕೊಟ್ಟು ನೇತಾಜಿ ಅವರನ್ನು ಬಂಧಿಸಲಾಯಿತು. ಕೊನೆಗೆ ಸೈಬೀರಿಯನ್ ಜೈಲು ಸೇರಿದ ನೇತಾಜಿ ಅವರನ್ನು ಸ್ಟಾಲಿನ್ ಚಿತ್ರಹಿಂಸೆ ನೀಡಿ ಕೊಂದರು’ ಎನ್ನುವುದು ಜನರಲ್ ಬಕ್ಷಿ ನೀಡಿದ ವಿವರಣೆ.

ಬ್ರಿಟನ್ ಹಾಗೂ ಸೋವಿಯತ್ ರಷ್ಯಾ ನಡುವೆ ಯುದ್ಧಕಾಲದಲ್ಲಿ ಆಗಿದ್ದ ಎರಡು ಒಪ್ಪಂದಗಳು ನೇತಾಜಿ ಹಣೆಬರಹವನ್ನು ನಿರ್ಧರಿಸಿದವು. ಸೈಬೀರಿಯಾ ಜೈಲಿನಲ್ಲಿ ಇದ್ದ ಬಂಧಿತ ಸುಭಾಷ್ ಚಂದ್ರ ಬೋಸ್ ಅವರನ್ನು ಬಹುಶಃ 1950ರ ದಶಕದ ನಡುಘಟ್ಟದಲ್ಲಿ ಕೊಂದುಹಾಕಿದರು ಎಂದು ಬಕ್ಷಿ ತನ್ನ ‘2014: ನ್ಯಾಷನಲಿಸಂ ಅಂಡ್ ನ್ಯಾಷನಲ್ ಕಾಂಗ್ರೆಸ್ ಸೆಕ್ಯುರಿಟಿ ಇನ್ ಇಂಡಿಯಾ’ ಪುಸ್ತಕದಲ್ಲಿ ಬರೆದಿದ್ದಾರೆ. 1945ರ ವಿಮಾನ ದುರಂತದಲ್ಲಿ ಬೋಸ್ ಪಾರಾಗಿದ್ದರು ಎಂದು 1964ರಲ್ಲಿ ಕೇಂದ್ರ ತನಿಖಾ ಸಂಸ್ಥೆಗೆ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ಮಾಹಿತಿ ಲಭ್ಯವಾಗಿತ್ತೆನ್ನುವುದಕ್ಕೆ ಮಾಧ್ಯಮ ವರದಿಗಳು, ವರ್ಗೀಕೃತವಾಗದ ದಾಖಲೆಗಳು ಸಾಕ್ಷ್ಯ ಒದಗಿಸಿವೆ.

ನೇತಾಜಿ ಅವರು ಸೋವಿಯತ್ ರಷ್ಯಾದಲ್ಲಿ ಇದ್ದರು ಎಂಬ ವಾದಕ್ಕೆ ಪುಷ್ಟಿ ನೀಡುವ ಮಾಹಿತಿಯನ್ನು ನ್ಯಾಯಮೂರ್ತಿ ಜಿ.ಡಿ.ಖೋಸ್ಲಾ ಆಯೋಗಕ್ಕೆ ಒದಗಿಸಿ, ಈ ಪ್ರಕರಣದ ತನಿಖೆಯಾಗಬೇಕು ಎಂದು ದನಿಯೆತ್ತಿದವರಲ್ಲಿ ಮುಖ್ಯರಾದವರು ಡಾ. ಸತ್ಯನಾರಾಯಣ್ ಸಿನ್ಹ. 1952ರಲ್ಲಿ ಮೊದಲ ಲೋಕಸಭೆಗೆ ಬಿಹಾರದಿಂದ ಚುನಾಯಿತರಾಗಿದ್ದ ಸತ್ಯನಾರಾಯಣ್ ಸಿನ್ಹ, ನೇತಾಜಿ ನಾಪತ್ತೆ ಪ್ರಕರಣವನ್ನು ಭಾರತ ಸರ್ಕಾರದ ಉನ್ನತ ಮಟ್ಟದಲ್ಲಿ ಹೇಗೆ ಮುಚ್ಚಿಹಾಕಲಾಗಿದೆ ಎಂದು ಸಂಸತ್‌ನಲ್ಲಿ ದನಿಯೆತ್ತಿ ಹೇಳಿದ್ದರು.

ಸೈಬೀರಿಯಾದ ಯೋಕುಟ್ಸ್ಕ್ ಜೈಲಿನ 45ನೇ ನಂಬರ್‌ನ ಸೆಲ್‌ನಲ್ಲಿ ನೇತಾಜಿ ಅವರನ್ನು ಬಂಧಿಸಿದ್ದರು ಎಂದು 1970ರಲ್ಲಿ ಖೋಸ್ಲಾ ಆಯೋಗಕ್ಕೆ ಸಿನ್ಹ ಅವರು ಹೇಳಿಕೆ ನೀಡಿದ್ದರು. ಐದು ಲಕ್ಷದಷ್ಟು ಗುಲಾಮ ನೌಕರರು ನವೆದ ಜೈಲು ಅದು. ಭೂಮಿಯ ಮೇಲಿನ ಅತಿ ಹೆಚ್ಚು ತಣ್ಣಗಿನ ನಗರ ಯಾಕುಟ್ಸ್ಕ್. ಅಲ್ಲಿನ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿ ಬದುಕುಳಿದ ಸೆರೆವಾಸಿಗಳ ಸಂಖ್ಯೆ ಬೆರಳೆಣಿಕೆಯಷ್ಟು.

ಸೋವಿಯತ್ ಯೂನಿಯನ್‌ನಲ್ಲಿ ಕಾನೂನು ಜಾರಿಗೊಳಿಸಲು ಎನ್.ಕೆ.ವಿ.ಡಿ. ಎಂಬ ಸಂಸ್ಥೆ ಇತ್ತು. ಅಲ್ಲಿ ಏಜೆಂಟ್ ಆಗಿದ್ದ ಕೊಜ್ಲೊವ್ ಕೂಡ ಬಂಧಿತರಲ್ಲಿ ಒಬ್ಬರಾಗಿದ್ದು, ಅವರು ಬದುಕುಳಿದರು. ಸೋವಿಯತ್ ಸರ್ಕಾರ ಅವರನ್ನು ಬಿಡುಗಡೆಗೊಳಿಸಿ, ಮರುವಸತಿ ಕಲ್ಪಿಸಿತು. ಬೋಸ್ ಅವರನ್ನು ಯಾಕುಟ್ಸ್ಕ್‌ನ 45ನೇ ಸೆಲ್‌ನಲ್ಲಿ ತಾನು ನೋಡಿದ್ದಾಗಿ ಸಿನ್ಹ ಅವರಿಗೆ ತಿಳಿಸಿದ್ದು ಇದೇ ಕೊಜ್ಲೊವ್.

ಖೋಸ್ಲಾ ಆಯೋಗವು ಈ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿತಾದರೂ ಆಮೇಲೆ ಅದನ್ನು ನಿರ್ಲಕ್ಷಿಸಲು ನಿರ್ಧರಿಸಿತು.

ಬೋಸ್ ರಷ್ಯಾದಲ್ಲಿ ಸೆರೆಯಾಗಿದ್ದರು ಎನ್ನುವುದಕ್ಕೆ ರಷ್ಯಾದ ಬೇಹುಗಾರರಿಂದ ಇನ್ನಷ್ಟು ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿರುವುದಾಗಿ ಖೋಸ್ಲಾ ಆಯೋಗಕ್ಕೆ ಡಾ. ಸಿನ್ಹ ಹೇಳಿದರು. 1950ರಲ್ಲಿ ನೆಹರೂ ಅವರಿಗೂ ಈ ವಿಷಯವನ್ನು ತಿಳಿಸಿದ ಸಂಗತಿಯನ್ನೂ ಸಿನ್ಹ ಪ್ರಸ್ತಾಪಿಸಿದ್ದರು. ನೇತಾಜಿ ನಾಪತ್ತೆಯ ಕುರಿತು 1949ರಲ್ಲಿ ಸಿನ್ಹ ಸ್ವತಂತ್ರ ತನಿಖೆ ಪ್ರಾರಂಭಿಸಿದ್ದರು.

ನೇತಾಜಿ ರಷ್ಯಾದಲ್ಲಿ ಮೃತಪಟ್ಟ ಸಂಗತಿಯನ್ನು ಡಾ. ರಾಧಾಕೃಷ್ಣನ್‌ ಅವರಿಗೆ ತಿಳಿಸಿದಾಗ, ‘ಆ ವಿಷಯವಾಗಿ ಹೆಚ್ಚಿನ ತನಿಖೆ ನಡೆಸಿದರೆ ನಿನ್ನ ಭವಿಷ್ಯ ನೆಟ್ಟಗಿರುವುದಿಲ್ಲ’ ಎಂದು ಸಿನ್ಹ ಅವರನ್ನು ರಾಧಾಕೃಷ್ಣನ್‌ ಎಚ್ಚರಿಸಿದ್ದರಂತೆ. ಆ ವಿಷಯವನ್ನೂ ಆಯೋಗದ ಎದುರು ಸಿನ್ಹ ಪುನರುಚ್ಚರಿಸಿದರು. ರಾಧಾಕೃಷ್ಣನ್‌ ಅವರು ಜಿನಿವಾದಲ್ಲಿ ಕೆಲಸ ಮಾಡುತ್ತಿದ್ದಾಗ, ಅವರಿಗೆ ದುಭಾಷಿಯಾಗಿ ಸಿನ್ಹ ಕೆಲಸ ಮಾಡುತ್ತಿದ್ದರು.

ಸೋವಿಯತ್‌ ರಷ್ಯಾದಲ್ಲಿ ನೇತಾಜಿ ಅವರ ಸಾವಿನ ಕುರಿತು ಇದ್ದ ದಾಖಲೆಗಳನ್ನು ಬರ್ಲಿನ್‌ನಿಂದಲೇ ಪರಿಶೀಲಿಸಿದ್ದ ಸಿನ್ಹ ಅವರ ತನಿಖೆಯನ್ನು ಸರ್ಕಾರವೇ ನಿಲ್ಲಿಸಿತು. ನೇತಾಜಿ ಸಾವಿನ ಬಗ್ಗೆ ಸೋವಿಯತ್‌ ಬೇಹುಗಾರಿಕಾ ಮಾಹಿತಿ ಏನು ಹೇಳುತ್ತದೆ ಎಂದು ಕೇಳುವ ಆಸಕ್ತಿ ಖೋಸ್ಲಾ ಆಯೋಗಕ್ಕೂ ಇರಲಿಲ್ಲ.

ನೇತಾಜಿ ನಾಪತ್ತೆ ಕುರಿತ ಸತ್ಯ ಪತ್ತೆ ಮಾಡಲು 2001ರಲ್ಲಿ ರಚಿತವಾದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಕೆ.ಮುಖರ್ಜಿ ಆಯೋಗವು ಸಿನ್ಹ ಒದಗಿಸಿದ್ದ ಮಾಹಿತಿ ಪತ್ತೆಗೆ ಯತ್ನಿಸಿದರೂ ಲಭ್ಯವಾಗಲಿಲ್ಲ. ಸಿನ್ಹ ಅವರನ್ನು ಹುಡುಕಿತಾದರೂ, ಅವರು ಬದುಕಿಲ್ಲ ಎನ್ನುವುದು ಗೊತ್ತಾಯಿತು.

‘ಜಪಾನಿ ಸರ್ಕಾರವು ಮಂಚೂರಿಯಾಕ್ಕೆ ನೇತಾಜಿಯನ್ನು ಕರೆದುಕೊಂಡು ಹೋಯಿತು. ಅಲ್ಲಿಂದ ರಷ್ಯಾಗೆ ಅವರು ಹೋದರೆನ್ನುವುದಕ್ಕೆ ಪುರಾವೆಗಳಿವೆ. ಬ್ರಿಟಿಷ್‌ ಹಾಗೂ ಅಮೆರಿಕನ್‌ ಬೇಹುಗಾರಿಕಾ ಅಧಿಕಾರಿಗಳು ಈ ವಿಷಯ ತಿಳಿದಕೂಡಲೇ ವಿಚಾರಣೆ ನಡೆಸಿದ್ದರು. ನನ್ನ ಮಾತನ್ನು ಅನುಮೋದಿಸಿದ ಅವರಿಗೆ, ನೇತಾಜಿ ಸಾವಿನ ಸುದ್ದಿಯನ್ನು ಜಪಾನೀಯರು ಪ್ರಕಟಿಸಲೇ ಇಲ್ಲ ಎನ್ನುವುದನ್ನೇ ನಂಬಲಾಗಲಿಲ್ಲ’ ಎಂದು ನೇತಾಜಿ ಅವರ ಅಣ್ಣ ಸುರೇಶ್‌ ಚಂದ್ರ ಬೋಸ್‌ 1956ರಲ್ಲಿ ತಮ್ಮ ಭಿನ್ನಾಭಿಪ್ರಾಯ ವರದಿಯಲ್ಲಿ ಉಲ್ಲೇಖಿಸಿದ್ದರು.

ನೇತಾಜಿ ಅವರ ಅಣ್ಣನ ಮಗ ಅಮಿಯಾ ನಾಥ್‌ ಬೋಸ್‌ 1965ರ ಡಿಸೆಂಬರ್‌ 23ರಂದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರನ್ನು ಕೋಲ್ಕತ್ತದಲ್ಲಿ ಭೇಟಿ ಮಾಡಿದರು. ಜನವರಿ 1966ರಲ್ಲಿ ತಾಷ್ಕೆಂಟ್‌ ಒಪ್ಪಂದಕ್ಕಾಗಿ ತಾನು ರಷ್ಯಾಗೆ ಹೋಗಲಿದ್ದು, ನೇತಾಜಿ ಅಲ್ಲಿ ಇದ್ದರೇ ಎನ್ನುವುದನ್ನು ಪತ್ತೆಹಚ್ಚಲು ಯತ್ನಿಸುವುದಾಗಿ ಅಮಿಯಾ ಅವರಿಗೆ ಶಾಸ್ತ್ರಿ ಭರವಸೆ ನೀಡಿದ್ದರು. ಅವರು ರಷ್ಯಾದಿಂದ ಯಾವ ಸುದ್ದಿ ತಂದಾರು ಎಂದು ಬೋಸ್‌ ಕುಟುಂಬದ ಸದಸ್ಯರು ಕುತೂಹಲದಿಂದ ಕಾಯುತ್ತಿದ್ದರು.

ಆದರೆ, ತಾಷ್ಕೆಂಟ್‌ ಒಪ್ಪಂದದ ನಂತರ ಶಾಸ್ತ್ರಿ ದಿಢೀರನೆ ಮೃತಪಟ್ಟು ಅದು ಬೇರೆಯದೇ ವಿವಾದವಾಯಿತು. ನೇತಾಜಿ ನಾಪತ್ತೆ ಪ್ರಕರಣವೂ ನಿಗೂಢವಾಗಿಯೇ ಉಳಿಯಿತು.

‘ನಿಜಕ್ಕೂ ನೇತಾಜಿ ರಷ್ಯಾದಲ್ಲಿ ಇದ್ದರು. ಅದಕ್ಕೇ ನಾವು ಕಡತಗಳಿಗಾಗಿ ಒತ್ತಾಯಿಸುತ್ತಿದ್ದೇವೆ’ ಎಂದು ಸುಭಾಷ್‌ ಚಂದ್ರ ಬೋಸ್‌ ಅವರ ಅಣ್ಣನ ಮೊಮ್ಮಗ ಚಂದ್ರ ಕುಮಾರ್‌ ಬೋಸ್‌ ಪ್ರತಿಕ್ರಿಯಿಸಿದರು.

ಈ ವಿಷಯವಾಗಿ ಬೇರೆಲ್ಲೂ ಹೇಳಿಕೆ ನೀಡದ ನೇತಾಜಿ ಅಣ್ಣನ ಮೊಮ್ಮಗ ಸೂರ್ಯ ಕುಮಾರ್‌ ಬೋಸ್‌ ನನಗೆ ಮಾತಿಗೆ ಸಿಕ್ಕರು. ಅವರು ಹೇಳಿದ್ದು ಹೀಗೆ: ‘ಸುಭಾಷ್‌ ಚಂದ್ರ ಬೋಸರ ಪತ್ನಿ ಎಮಿಲಿ ಶೆಂಕ್ಲ್‌ ರಷ್ಯಾದಲ್ಲಿ ನೇತಾಜಿ ಇದ್ದಿರಬಹುದಾದ ಸಾಧ್ಯತೆಯತ್ತ 1973ರಲ್ಲಿ ಗಮನ ಸೆಳೆದರು. ರಷ್ಯಾದ ಸೇನಾದಳಗಳ ಶಿಬಿರದಲ್ಲಿ ನೇತಾಜಿ ಇದ್ದರು ಹಾಗೂ ಅವರಿಗೆ ನಿಧನಿಧಾನವಾಗಿ ವಿಷ ಉಣಿಸಿದರು ಎಂದು ಆಗಿನ ಜರ್ಮನ್‌ ಗಣರಾಜ್ಯದಲ್ಲಿ (Deutsche Demokratische Republik) ನೆಲೆಸಿದ್ದ ಪತ್ರಕರ್ತ ರೈಮಂಡ್‌ ಶ್ನಾಬೆಲ್‌ 1950ರಲ್ಲಿ ಎಮಿಲಿ ಅವರಿಗೆ ತಿಳಿಸಿದ್ದರು. ವಿಶ್ವದ ಆಗಿನ ದೊಡ್ಡ ಬೇಹುಗಾರಿಕಾ ಸಂಸ್ಥೆ ಕೆ.ಜಿ.ಬಿ. (ಸೋವಿಯತ್‌ ಯೂನಿಯನ್‌ ಮೂಲದ್ದು) ಮೂಲಗಳಿಂದ ಈ ಮಾಹಿತಿ ತನಗೆ ಸಿಕ್ಕಿತೆಂದು ರೈಮಂಡ್‌ ಹೇಳಿದ್ದರಂತೆ’.

ಸೂರ್ಯ ಕುಮಾರ್‌ ತನ್ನ ಮಾತನ್ನು ಮುಂದುವರಿಸಿ ಹೇಳಿದ್ದಿಷ್ಟು: ‘ಹ್ಯಾಂಬರ್ಗ್‌ನಲ್ಲಿ 1995ರಲ್ಲಿ ವ್ಯಾಲೆಂಟಿನ್‌ ಫಾಲಿನ್‌ ಎಂಬುವವರನ್ನು ಭೇಟಿ ಮಾಡಿದೆ. ಅವರು ರಷ್ಯಾ ರಾಜತಾಂತ್ರಿಕ ಕ್ಷೇತ್ರದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ್ದವರು. ಆರು ವರ್ಷ ಅವರು ಜರ್ಮನಿಯಲ್ಲಿ ರಷ್ಯಾದ ರಾಯಭಾರಿ ಆಗಿದ್ದರು. ಗೊರ್ಬಚೆವ್‌, ಯೆಲ್ಟ್‌ಸಿನ್‌ ಇಬ್ಬರಿಗೂ ಅವರು ಹತ್ತಿರದವರು. ಸುಭಾಷ್‌ ಚಂದ್ರ ಬೋಸ್‌ ಕುರಿತ ಅತಿ ಗುಪ್ತವಾದ ಕೆ.ಜಿ.ಬಿ. ಕಡತಗಳು ಅಧ್ಯಕ್ಷ ಯೆಲ್ಟ್‌ಸಿನ್‌ ಸುಪರ್ದಿಯಲ್ಲಿ ಭದ್ರವಾಗಿವೆ ಎಂದು ಅವರು ನನಗೆ ತಿಳಿಸಿದ್ದರು’.

‘ಗಾಂಧಿ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಖುರ್ಷೆದ್‌ ನವರೋಜಿ 1946ರ ಜುಲೈ 22ರಂದು ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದ ಪ್ರೊ. ಲೂಯಿ ಫಿಷರ್‌ ಅವರಿಗೆ ಒಂದು ಪತ್ರ ಬರೆದರು. ಸುಭಾಷ್‌ ಚಂದ್ರ ಬೋಸರು ರಷ್ಯಾದಲ್ಲಿ ಇದ್ದು, ಕೆಲವು ಕ್ರಾಂತಿಕಾರರ ಗುಂಪಿನೊಟ್ಟಿಗೆ ಭಾರತಕ್ಕೆ ಬರಲಿರುವ ಮಾಹಿತಿ ಸಿಕ್ಕಿದೆ ಎಂದು ಅದರಲ್ಲಿ ಉಲ್ಲೇಖಿಸಿದ್ದರು.

ಈ ಮಾಹಿತಿಯನ್ನು ಫಿಷರ್‌ ಆಗ ಮಾಸ್ಕೋದಲ್ಲಿ ಇಟಾಲಿಯನ್‌ ರಾಯಭಾರಿಯಾಗಿದ್ದ ಪಿಯೆಟ್ರೊ ಕೊರೊನಿ ಅವರಿಗೆ 1946ರ ನವೆಂಬರ್‌ 20ರಂದು ದಾಟಿಸಿದರು. ಈ ಮಾಹಿತಿ ದಾಟಿಸಿದ ಸಂದರ್ಭದಲ್ಲಿ ಪಿಯೆಟ್ರೊ ರಜೆಯ ಮೇಲೆ ರೋಮ್‌ನಲ್ಲಿ ಇದ್ದರು. ಆಗ ಪಿಯೆಟ್ರೊ ಕೂಡ, ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ, ಚೀನಾದಲ್ಲೋ ರಷ್ಯಾದಲ್ಲೋ ಇದ್ದಾರೆ ಎಂದು ಪ್ರತಿಕ್ರಿಯಿಸಿದ್ದರು’ ಎಂದು ಸೂರ್ಯ ಬೋಸ್‌ ಮುಖರ್ಜಿ ಆಯೋಗಕ್ಕೆ ನೀಡಿದ ಅಫಿಡವಿಟ್‌ನಲ್ಲಿ (ಪ್ರಮಾಣಪತ್ರ) ಬರೆದಿದ್ದಾರೆ.

‘ಬೋಸ್‌ ನಾಪತ್ತೆ ಪ್ರಕರಣವು ಭಾರತದ ನಾಯಕರಿಗೆ ಮೊದಲು ಮುಖ್ಯವೆನ್ನಿಸಿದ್ದು 1945ರ ಆಗಸ್ಟ್‌ 29ರಂದು ನವದೆಹಲಿಯಲ್ಲಿ. ‘ಶಿಕಾಗೊ ಟ್ರಿಬ್ಯೂನ್‌’ ಪತ್ರಿಕೆಗೆ ಕೆಲಸ ಮಾಡುತ್ತಿದ್ದ, ಅಮೆರಿಕದ ಸೇನೆಯ ಜೊತೆಗೂ ಗುರುತಿಸಿಕೊಂಡಿದ್ದ ಪತ್ರಕರ್ತ ಆಲ್ಫ್ರೆಡ್‌ ವ್ಯಾಗ್‌ ಮೊದಲು ದನಿಯೆತ್ತಿದ್ದು. ಜವಾಹರಲಾಲ್‌ ನೆಹರೂ ನಡೆಸುತ್ತಿದ್ದ ಸುದ್ದಿಗೋಷ್ಠಿಯ ನಡುವೆ ನಿರ್ದಾಕ್ಷಿಣ್ಯವಾಗಿ ಬಾಯಿಹಾಕಿದ ವ್ಯಾಗ್‌, ಬೋಸ್‌ ಇನ್ನೂ ಬದುಕಿದ್ದು, ನಾಲ್ಕು ದಿನಗಳ ಹಿಂದೆ ಸೈಗನ್‌ನಲ್ಲಿ ಅವರನ್ನು ತಾನು ನೋಡಿದ್ದಾಗಿ ತಿಳಿಸಿದರು. ಭಾರತದ ಅನೇಕ ನಾಯಕರಿಗೆ ವ್ಯಾಗ್‌ ಈ ಸಂಗತಿಯನ್ನು ಹೇಳಿದರು. ಅದು ಗಾಂಧಿ ಅವರನ್ನೂ ತಲುಪಿತು. ‘ಯಾರಾದರೂ ನನಗೆ ಅಸ್ಥಿ ತೋರಿಸಿದರೂ ಸುಭಾಷ್‌ ಸತ್ತಿದ್ದಾರೆಂದು ನಾನು ನಂಬಲಾರೆ’ ಎಂದು ಗಾಂಧಿ 1945ರ ಡಿಸೆಂಬರ್‌ 30ರಂದು ಜೈಲಿನಲ್ಲಿದ್ದ ತನ್ನ ಸಹವರ್ತಿಗಳಿಗೆ ಹೇಳಿದ್ದರಂತೆ’ ಎಂದು ಧರ್‌ ತಮ್ಮ ಕೃತಿಯಲ್ಲಿ ಬರೆದಿದ್ದಾರೆ.

ನೇತಾಜಿಗೂ ಸೋವಿಯತ್‌ ಒಕ್ಕೂಟಕ್ಕೂ ಇದ್ದ ಸಂಪರ್ಕವನ್ನು ಮೊದಲು ಪತ್ತೆ ಮಾಡಲು ಯತ್ನಿಸಿದ್ದು ಮುಖರ್ಜಿ ಆಯೋಗ.

ಯುಎಸ್‌ಎಸ್‌ಆರ್‌ನಲ್ಲಿ 1946ರಲ್ಲಿ ನೇತಾಜಿ ಇದ್ದರೆನ್ನುವುದಕ್ಕೆ ದಾಖಲೆಗಳಿವೆ ಎಂದು ಹೇಳಿದ್ದ ರಷ್ಯಾದ ಆಗಿನ ಅಧಿಕಾರಿ ಅಲೆಗ್ಸಾಂಡರ್‌ ಕೊಲೆಸ್ನಿಕೊವ್‌, ಆಯೋಗದವರಿಗೆ ಸಿಗಲೇ ಇಲ್ಲ. ರಷ್ಯಾಗೆ ಆಯೋಗ ಹೋಗಿ, ಅವರನ್ನು ಹುಡುಕಿದರೂ ಸಿಗಲಿಲ್ಲ.

‘ಬೇಹುಗಾರಿಕೆ ಮತ್ತಿತರ ವರದಿಗಳು ನೇತಾಜಿ ರಷ್ಯಾದಲ್ಲಿ ಇದ್ದರೆಂದು ಹೇಳುತ್ತಿವೆ ಎಂಬ ಸುದ್ದಿ ಇದ್ದರೂ, ಆ ಕುರಿತು ಬೆಳಕು ಚೆಲ್ಲುವಂತೆ ಭಾರತ ಸರ್ಕಾರವು ಮಾಜಿ ಕಮ್ಯುನಿಸ್ಟ್‌ ದೇಶವನ್ನು ಕೇಳಿಕೊಳ್ಳಲೇ ಇಲ್ಲ’ ಎಂದು ‘ಇಂಡಿಯಾ ಬಿಗ್ಗೆಸ್ಟ್‌ ಕವರ್‌–ಅಪ್‌’ ಕೃತಿಯಲ್ಲಿ ಪತ್ರಕರ್ತ, ಲೇಖಕ ಅನುಜ್‌ ಧರ್‌ ಬರೆದಿದ್ದಾರೆ.

ವಿವಿಧ ಸುದ್ದಿಗಳು ಹಾಗೂ ಹಳೆಯ ದಾಖಲೆಗಳಿಂದ ರಷ್ಯಾದಲ್ಲಿ ನೇತಾಜಿ ಇದ್ದರು ಎಂದು ಸ್ಪಷ್ಟವಾದರೂ, ಅದನ್ನು ನಂಬಲು ಸಾಕ್ಷ್ಯಗಳು ಬೇಕಿವೆ. ಈ ಗುಟ್ಟು ರಟ್ಟಾಗಲು, ಅಂಥ ಮಾಹಿತಿ ಅಡಗಿಸಿಕೊಂಡ ಕಡತಗಳು ಲಭ್ಯವಾಗಬೇಕಷ್ಟೆ. ಅದಕ್ಕಾಗಿ ದೇಶ ಕಾಯುತ್ತಿದೆ.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ಅಕ್ಟೋಬರ್ 4, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT