ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ನಿರ್ವಹಣೆಗೆ ಎಸ್‌ಎಂಎಸ್ ಬಳಕೆ

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಮನಗರ: ರೈತರಿಗೆ ಸಮರ್ಪಕ ರೀತಿಯಲ್ಲಿ ರಸಗೊಬ್ಬರ ಪೂರೈಕೆಯಾಗುತ್ತಿದೆಯೇ ? ರಸಗೊಬ್ಬರದ ಚಿಲ್ಲರೆ ಮಾರಾಟಗಾರರು ಮತ್ತು ಸೊಸೈಟಿಯವರು ರೈತರನ್ನು ವಂಚಿಸುತ್ತಿದ್ದಾರೆಯೇ ? ರಸಗೊಬ್ಬರಕ್ಕೆ ಸರ್ಕಾರ ನೀಡುತ್ತಿರುವ ಸಬ್ಸಿಡಿ ಸದ್ಬಳಕೆ ಆಗುತ್ತಿದಯೇ ? ದುರುಪಯೋಗ ಆಗುತ್ತಿದೆಯೇ ? ಇವೇ ಮೊದಲಾದ ಮಾಹಿತಿಗಳನ್ನು ಪಡೆದು ಸಮರ್ಪಕವಾಗಿ ರಸಗೊಬ್ಬರ ನಿರ್ವಹಣೆ ಮಾಡಲು ಸರ್ಕಾರ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ.

ರಸಗೊಬ್ಬರ ನಿರ್ವಹಣೆಗೆ ಮೊಬೈಲ್ ಮೂಲಕ `ಎಂ-ಎಫ್‌ಎಂಎಸ್~ ಎಂಬ ಆಧುನಿಕ ವಿಧಾನವನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಲು ಮುಂದಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ರಸಗೊಬ್ಬರದ ಚಿಲ್ಲರೆ ಮಾರಾಟಗಾರರು, ಸೊಸೈಟಿಯವನ್ನು ಇದರ ವ್ಯಾಪ್ತಿಗೆ ತರಲಾಗುತ್ತದೆ. ರಸಗೊಬ್ಬರ ತಯಾರಕರಿಂದ ಚಿಲ್ಲರೆ ಮಾರಾಟಗಾರರವರೆಗೂ ಹಾಗೂ ಅದು ರೈತರಿಗೆ ಪೂರೈಕೆ ಆಗುವವರೆಗೂ ರಸಗೊಬ್ಬರ ಸರಬರಾಜಿನ ಜಾಲ ಪತ್ತೆಯ ಮಾಹಿತಿ ಪಡೆಯುವುದೇ ಇದರ ಹಿಂದಿನ ಉದ್ದೇಶ.

ಎನ್‌ಐಸಿ ಈ ಆಧುನಿಕ ವಿಧಾನದ ಸಾಫ್ಟವೇರ್ ಸಿದ್ಧಪಡಿಸಿದ್ದು, ಇದನ್ನು `ಜಾವಾ~ ಆಧಾರಿತ ಮೊಬೈಲ್‌ಗಳಲ್ಲಿ ಅಳವಡಿಸಲಾಗುವುದು. ಆ ಮೂಲಕ ಎಲ್ಲ ರಸಗೊಬ್ಬರ ವಿತರಕರನ್ನು ಈ ವಿಧಾನದ ಒಳಗೆ ತಂದು ರಸಗೊಬ್ಬರ ವಿತರಣೆಯ ಮೇಲೆ ಕಣ್ಗಾವಲು ಇಡಲು ನೆರವಾಗುತ್ತದೆ ಎಂಬುದು ಸರ್ಕಾರದ ಯೋಜನೆಯಾಗಿದೆ.

ಈ ಸಾಫ್ಟ್‌ವೇರ್‌ನ ಅಳವಡಿಕೆಯಿಂದ ಯಾವ ದಿನದಲ್ಲಿ, ಯಾವ ಚಿಲ್ಲರೆ ಮಾರಾಟಗಾರರಲ್ಲಿ, ಯಾವ ಬಗೆಯ ರಸಗೊಬ್ಬರ ಎಷ್ಟು ಪ್ರಮಾಣದಲ್ಲಿ ಲಭ್ಯತೆ ಇದೆ ಎಂಬುದನ್ನು ನಿಖರವಾಗಿ ತಿಳಿಯಬಹುದಾಗಿದೆ ಎಂದು ಜಿಲ್ಲೆಯ ಕೃಷಿ ಅಧಿಕಾರಿಗಳು ತಿಳಿಸುತ್ತಾರೆ. ಇದರಿಂದ ರಸಗೊಬ್ಬರದ ಪೂರೈಕೆಕೆಯಲ್ಲಿ ಪಾರದರ್ಶಕ ತರಬಹುದು. ಅಲ್ಲದೆ ಸಾಗಾಣಿಕೆ ಜಾಲದಲ್ಲಿ ರಸಗೊಬ್ಬರ ಅಂತಿಮ ಬಳಕೆದಾರರಿಗೆ ಸಕಾಲದಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳುತ್ತಾರೆ.

ಕೇಂದ್ರ ಸರ್ಕಾರವು ಈ ತಂತ್ರಜ್ಞಾನದ ಅಳವಡಿಕೆಯ ಜವಾಬ್ದಾರಿಯನ್ನು ಕೃಷಿ ಇಲಾಖೆಯ ಆಯುಕ್ತರಿಗೆ ವಹಿಸಿದೆ. ಈ ಸಂಬಂಧ ಈಗಾಗಲೇ ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳಿಗೆ ರಾಜ್ಯಮಟ್ಟದಲ್ಲಿ ತರಬೇತಿ ನೀಡಲಾಗುತ್ತಿದೆ. ಎರಡನೇ ಹಂತದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆಯಾ ಜಂಟಿ ಕೃಷಿ ನಿರ್ದೇಶಕರು, ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ನಿಗದಿತ ರಸಗೊಬ್ಬರ ತಯಾರಿಕಾ ಸಂಸ್ಥೆಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದರ ಹಿನ್ನೆಲೆ: 2011-12ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸೀಮೆಎಣ್ಣೆ, ಅಡುಗೆ ಅನಿಲ ಹಾಗೂ ರಸಗೊಬ್ಬರಗಳ ಸಹಾಯಧನವನ್ನು ನೇರವಾಗಿ ಚಿಲ್ಲರೆ ಮಾರಾಟಗಾರರಿಗೆ ವರ್ಗಾಯಿಸಲು ನಿಯಮಗಳನ್ನು ತಯಾರಿಸಲು ಟಾಸ್ಕ್‌ಫೋರ್ಸ್ ನೇಮಕ ಮಾಡಲಾಗುವುದು ಎಂಬ ಅಂಶವನ್ನು ಘೋಷಿಸಲಾಗಿತ್ತು.

ಅದರಂತೆ ನಂದನ ನಿಲೇಕಣಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸದರಿ ಸಮಿತಿಯು ಸರ್ಕಾರದ ಸಬ್ಸಿಡಿ ನೇರ ವರ್ಗಾವಣೆಗಾಗಿ ಕೆಲವು ಮಾನದಂಡಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ. ಅದರಂತೆ ಈ ಪದ್ಧತಿಯ ತಂತ್ರಗಾರಿಕೆಯನ್ನು ಅಭಿವೃದ್ಧಿಪಡಿಸಲು ಎನ್‌ಐಸಿಗೆ ವಹಿಸಲಾಗಿತ್ತು. ಅದರಂತೆ ಎನ್‌ಐಸಿ ಸಬ್ಸಿಡಿ ವರ್ಗಾವಣೆಗೆ ಅಭಿವೃದ್ಧಿಪಡಿಸಿರುವ ಕಾರ್ಯತಂತ್ರಕ್ಕೆ `ಎಂ-ಎಫ್‌ಎಂಎಸ್~ ಎಂದು ಹೆಸರಿಸಿ, ಬಜೆಟ್‌ನ ಉದ್ದೇಶಗಳನ್ನು ಈಡೇರಿಸುವಂತಹ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದು ಕೃಷಿ ಅಧಿಕಾರಿಗಳು ವಿವರಿಸುತ್ತಾರೆ.

ಅನುಷ್ಠಾನ ಹೇಗೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಸಗೊಬ್ಬರದ ಹಾದಿಯನ್ನು ಗುರುತಿಸುವ ನೂತನ ವಿಧಾನವನ್ನು ಅಳವಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಎಲ್ಲ ರಸಗೊಬ್ಬರ ಮಾರಟ ಮಾಡುವ ವ್ಯವಸಾಯ ಸೇವಾ ಸಹಕಾರ ಸಂಘ ಸಂಸ್ಥೆಗಳು ಮತ್ತು ಖಾಸಗಿ ಸಗಟು ಮಾರಾಟಗಾರರಿಗೆ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಅಲ್ಲಿ ಎಲ್ಲರಿಗೂ `ಟಿನ್ ನಂಬರ್, `ಪಾನ್~ ನಂಬರ್, `ಲೈಸೆನ್ಸ್~ ನಂಬರ್, `ಜಾವಾ~ ಆಧಾರದ ಮೊಬೈಲ್ ಅನ್ನು ತರುವಂತೆ ಸೂಚಿಸಲಾಗಿತ್ತದೆ. ಎಲ್ಲರ ಮೊಬೈಲ್‌ಗೂ ನೂತನ ಸಾಫ್ಟ್‌ವೇರ್ ಅಳವಡಿಸಲಾಗುತ್ತದೆ ಎಂದು ಹಿರಿಯ ಕೃಷಿ ಅಧಿಕಾರಿ ತಿಳಿಸಿದರು.

ಈ ಸಂಬಂಧ ಜಿಲ್ಲೆಯ ನೂರಾರು ರಸಗೊಬ್ಬರ ಮಾರಟ ಮಾಡುವ ವ್ಯವಸಾಯ ಸೇವಾ ಸಹಕಾರ ಸಂಘ ಸಂಸ್ಥೆಗಳು ಮತ್ತು ಖಾಸಗಿ ಸಗಟು ಮಾರಾಟಗಾರರಿಗೆ ಸೋಮವಾರ ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಕ್ರಿಬ್ಕೊ~ ಸಂಸ್ಥೆಯಿಂದ ಕಾರ್ಯಾಗಾರ ಹಮ್ಮಿಕೊಳ್ಳ ಲಾಗಿತ್ತು.

ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ಉದ್ಘಾಟಿಸಿದರು. ಕ್ರಿಬ್ಕೊ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಮಹಮದ್ ಅಕ್ತರ್ ರುಜುಮಾನ್, ವ್ಯವಸ್ಥಾಪಕ ಎಚ್.ವಿ.ಮರಿಸ್ವಾಮಿ, ಹಾಸನದ ವ್ಯವಸ್ಥಾಪಕ ವಿ.ಎಸ್.ಸಾಲಿಮಠ್, ಜಂಟಿ ಕೃಷಿ ಅಧಿಕಾರಿ ಎಸ್. ವೆಂಕಟರಾಮು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT