ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಹೆಚ್ಚಿನ ದರ ಮಾರಾಟ: ತರಾಟೆ

Last Updated 24 ಸೆಪ್ಟೆಂಬರ್ 2011, 8:15 IST
ಅಕ್ಷರ ಗಾತ್ರ

ಹರಿಹರ: ರಸಗೊಬ್ಬರ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಗಳಿಲ್ಲದೇ ತಾ.ಪಂ. ಸಭೆಗೆ ಏಕೆ ಬರುತ್ತೀರಿ... ಕೃಷಿ ಮೇಳಕ್ಕೆಂದು ಕರೆದುಕೊಂಡ ಹೋದ ಫಲಾನುಭವಿಗಳನ್ನು ವಾಪಸ್ ಕರೆದುಕೊಂಡು ಬಂದು ಅವರ ಗ್ರಾಮಗಳಿಗೆ ಮುಟ್ಟಿಸದೇ ಬೆಳಗಿನ ಜಾವ 3ಕ್ಕೆ ನಡುರಸ್ತೆಯಲ್ಲಿ ಬಿಟ್ಟು ಹೋದದ್ದು ಏಕೆ...? ವೈದ್ಯರಿಲ್ಲದ ಪ್ರಾಥಮಿಕ ಸೇವಾ ಕೇಂದ್ರದ ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಜನತೆಯ ಪರದಾಟಕ್ಕೆ ಕೊನೆ ಎಂದು...? ಜನನಿ ಸುರಕ್ಷಾ ಹಾಗೂ ಹೆರಿಗೆ ಭತ್ಯೆ ಪಡೆಯಲು ಪರದಾಡುವವರಿಗೆ ಪರಿಹಾರ ಎಂದು...? ಪರೀಕ್ಷೆಗಳು ಸಮೀಪಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಬೆಸ್ಕಾಂನ ವಿದ್ಯುತ್ ಸರಬರಾಜು ನೀತಿ ಬದಲಾಗುವುದು ಯಾವಾಗ...?

-ಇದು ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ತಾ.ಪಂ. ಸಾಮಾನ್ಯಸಭೆಯಲ್ಲಿ ಸದಸ್ಯರು, ಅಧಿಕಾರಿಗಳ ಮೇಲೆ ಸುರಿದ ಪ್ರಶ್ನೆಗಳ ಸರಮಾಲೆ.

ಕೃಷಿ ಸಹಾಯಕ ನಿರ್ದೇಶಕ ವಿಜಯಕುಮಾರ್ ಅವರು ರಸಗೊಬ್ಬರ ಮಾರಾಟಗಾರರ ಅಂಗಡಿಯವರೊಂದಿಗೆ ಷಾಮೀಲಾಗಿ ರಸಗೊಬ್ಬರ ಗರಿಷ್ಠ ಮಾರಾಟದ ಬೆಲೆಗಿಂತ ಕ್ವಿಂಟಲ್ ಒಂದಕ್ಕೆ ್ಙ 200 ರಿಂದ ್ಙ 300 ಹೆಚ್ಚಳ ಮಾರಾಟಕ್ಕೆ ಕಾರಣರಾಗಿದ್ದಾರೆ. ಅಂಗಡಿಗಳ ಮಾಲೀಕರು ರಸಗೊಬ್ಬರಕ್ಕೆ ದಿನಕ್ಕೊಂದು ದರ ಹೇಳುತ್ತಾರೆ. ಕೃಷಿ ಸಹಾಯಕ ನಿರ್ದೇಶಕರು ಎಷ್ಟು ಅಂಗಡಿಗಳ ವೀಕ್ಷಣೆ ಮಾಡಿದ್ದಾರೆ? ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುವ ಯಾವ ಯಾವ ಅಂಗಡಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ? ಪ್ರಸ್ತುತ ರಸಗೊಬ್ಬರಗಳ ದರಪಟ್ಟಿ ಏನಿದೆ? ಎಂಬುದನ್ನು ತಕ್ಷಣ ವರದಿ ಮಾಡಬೇಕು ಎಂದು ಸದಸ್ಯರಾದ ಕನ್ನಪ್ಪ, ಡಿ. ಕುಮಾರ್, ಅಜ್ಜಾನಾಯ್ಕ, ಅಣ್ಣಪ್ಪ ಐರಣಿ, ಶಾಂತಾಬಾಯಿ ಕಲ್ಯಾಣಕರ್ ಪಟ್ಟುಹಿಡಿದರು.

ತಾ.ಪಂ. ಅಧ್ಯಕ್ಷ ಸೋಮಸುಂದರಪ್ಪ ಮಾತನಾಡಿ, ಧಾರವಾಡದ ಕೃಷಿ ಮೇಳಕ್ಕೆಂದು ಫಲಾನುಭವಿ (ಮಹಿಳೆಯರನ್ನು)ಗಳನ್ನು ಕರೆದುಕೊಂಡು ಹೋಗಿದ್ದಿರಿ. ಅವರನ್ನು ಪುನಃ ಅವರ ಗ್ರಾಮಗಳಿಗೆ ಮುಟ್ಟಿಸುವ ಜವಾಬ್ದಾರಿ ನಿಮ್ಮದೇ.  ಅವರನ್ನು ರಾತ್ರಿ 3ಕ್ಕೆ ನಗರಕ್ಕೆ ಕರೆತಂದು ರಸ್ತೆ ಮಧ್ಯದಲ್ಲಿ ಇಳಿಸಿ ಹೋಗಿದ್ದೀರಿ.

ಹಾಗಾದರೆ ನಿಮ್ಮ ಜವಾಬ್ದಾರಿ ಏನು? ಅವರಿಗೇನಾದರೂ ಅನಾಹುತ ಆಗಿದ್ದರೆ ಏನು ಮಾಡುತ್ತಿದ್ದಿರಿ? ಮಹಿಳೆಯರನ್ನು ತಾ.ಪಂ. ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಬೆಳಗಿನವರೆಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡುವಷ್ಟು ಸೌಜನ್ಯ ನಿಮಗೆ ಇರಲಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು.

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅವರ ಬಳಿ ಯಾವುದೇ ದಾಖಲೆಗಳು ಸಿಗಲಿಲ್ಲ. ಮುಂದಿನ ಸಭೆಯಲ್ಲಿ ರಸಗೊಬ್ಬರ ಹಾಗೂ ದರಪಟ್ಟಿ ನೀಡುತ್ತೇನೆ. ಕೃಷಿಮೇಳದ ಸಂದರ್ಭದಲ್ಲಿ ಆದ ತಪ್ಪಿಗೆ ಕ್ಷಮೆ ಯಾಚಿಸುತ್ತೇನೆ. ಮುಂದೆ ಈ ರೀತಿ ತಪ್ಪುಗಳಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಭಾನುವಳ್ಳಿ ಆರೋಗ್ಯ ಕೇಂದ್ರ ವೈದ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಹಜ್‌ಯಾತ್ರೆಗೆ ಹೋಗಿದ್ದಾರೆ. ಆ ಕೇಂದ್ರಕ್ಕೆ ಕೊಕ್ಕನೂರು ಗ್ರಾಮದ ಆರೋಗ್ಯ ಕೇಂದ್ರ ವೈದ್ಯರನ್ನು ವಾರದಲ್ಲಿ ಮೂರು ದಿನ ನಿಯೋಜಿಸಲಾಗಿದೆ. ಇನ್ನುಳಿದಂತೆ ತಾಲ್ಲೂಕಿನ ಕೊಂಡಜ್ಜಿ ಹಾಗೂ ಬಿಳಸನೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಹುದ್ದೆ ಖಾಲಿ ಇದೆ. ಸರ್ಕಾರದಿಂದ ವೈದ್ಯರ ನೇಮಕಾತಿ ಆದ ನಂತರ ಸಮಸ್ಯೆಗಳು ಪರಿಹಾರವಾಗುತ್ತವೆ. ಹೆರಿಗೆ ಭತ್ಯೆ ಪಡೆಯಲು ಅಗತ್ಯವಾದ ದಾಖಲೆಗಳನ್ನು ಒದಗಿಸಿದರೆ ಮಾತ್ರ ಭತ್ಯೆ ನೀಡಲು ಸಾಧ್ಯ ಎಂದು ಟಿಎಚ್‌ಒ ಡಾ.ಎಲ್. ಹನುಮಾನಾಯ್ಕ ಸ್ಪಷ್ಟನೆ ನೀಡಿದರು.

ತಾ.ಪಂ. ಅಧ್ಯಕ್ಷ ಸೋಮಸುಂದರಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರೋಜಮ್ಮ ಶೇಖರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಎ.ಬಿ. ಸವಿತಾ ಹಾಗೂ ಇಒ ಎಚ್.ಎನ್. ರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT