ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸೂಲ್‌ಗೆ ಲಭಿಸದ ಅವಕಾಶ

ಬಿಸಿಸಿಐ ವಿರುದ್ಧ ಒಮರ್ ಅಬ್ದುಲ್ಲಾ ಟೀಕೆ
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬುಲವಾಯೊ/ ಶ್ರೀನಗರ (ಪಿಟಿಐ): ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನಾಡಿದ ಜಮ್ಮು ಮತ್ತು ಕಾಶ್ಮೀರದ ಮೊದಲ ಆಟಗಾರ ಎನಿಸಿಕೊಳ್ಳುವ ಕನಸಿನೊಂದಿಗೆ ಪರ್ವೇಜ್ ರಸೂಲ್ ಜಿಂಬಾಬ್ವೆಗೆ ವಿಮಾನಏರಿದ್ದರು. ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲಾಗದೆಯೇ ಅವರು ತವರಿಗೆ ಬಂದಿಳಿಯಲಿದ್ದಾರೆ.

ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಈ ಆಲ್‌ರೌಂಡರ್‌ಗೆ ಅವಕಾಶ ಲಭಿಸಲೇ ಇಲ್ಲ. ಅಂತಿಮ ಪಂದ್ಯದಲ್ಲಿ ಅವರು ಕಣಕ್ಕಿಳಿಯುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡಾ ಹುಸಿಯಾಗಿದೆ. ಭಾರತ ಸರಣಿಯಲ್ಲಿ 3-0 ಅಂತರದಿಂದ ಮುನ್ನಡೆ ಸಾಧಿಸಿದ್ದರಿಂದ ನಾಲ್ಕನೇ ಪಂದ್ಯದಲ್ಲಿ ಮೋಹಿತ್ ಶರ್ಮ ಮತ್ತು ಚೇತೇಶ್ವರ ಪೂಜಾರ ಅವಕಾಶ ಪಡೆದಿದ್ದರು. ಇದರಿಂದ ಅಂತಿಮ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮತ್ತು ರಸೂಲ್‌ಗೆ ಅವಕಾಶ ದೊರೆಯಬಹುದು ಎಂದೇ ಭಾವಿಸಲಾಗಿತ್ತು. ಆದರೆ ಶನಿವಾರ ನಡೆದ ಕೊನೆಯ ಪಂದ್ಯದಲ್ಲಿ ರಹಾನೆಗೆ ಅವಕಾಶ ನೀಡಿದ ತಂಡದ ಆಡಳಿತ ರಸೂಲ್ ಅವರನ್ನು ಕಡೆಗಣಿಸಿದ್ದು ಅಚ್ಚರಿಗೆ ಕಾರಣವಾಗಿದೆ.

ರಸೂಲ್‌ಗೆ ಅವಕಾಶ ನೀಡದ್ದಕ್ಕೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಟೀಕಿಸಿದ್ದಾರೆ. `ಆತನ ಸ್ಥೈರ್ಯಗೆಡಿಸಲು ಆತನನ್ನು ಜಿಂಬಾಬ್ವೆಗೆ ಕರೆದೊಯ್ಯುವ ಅಗತ್ಯವಿತ್ತೇ?' ಎಂದು ಒಮರ್ `ಟ್ವಿಟರ್'ನಲ್ಲಿ ವ್ಯಂಗ್ಯವಾಡಿದ್ದಾರೆ. `ಜಿಂಬಾಬ್ವೆಯಲ್ಲಿ ರಸೂಲ್ ಯಾವುದೇ ಪಂದ್ಯದಲ್ಲಿ ಆಡದಿರುವುದು ನಿಜವಾಗಿಯೂ ನಿರಾಸೆ ಉಂಟುಮಾಡಿದೆ' ಎಂದು ಹೇಳಿದ್ದಾರೆ.
ಅಂತಿಮ ಪಂದ್ಯದಲ್ಲಿ ರಸೂಲ್‌ಗೆ ಅವಕಾಶ ನೀಡಬೇಕೆಂದು ಅವರು ಶುಕ್ರವಾರ ಬಿಸಿಸಿಐನಲ್ಲಿ ಕೋರಿದ್ದರು. `ಕಮಾನ್ ಬಿಸಿಸಿಐ. ಯುವ ಆಟಗಾರನಿಗೆ (ರಸೂಲ್) ಸಾಮರ್ಥ್ಯ ತೋರಿಸಲು ಒಂದು ಅವಕಾಶ ನೀಡಿ' ಎಂದು `ಟ್ವಿಟರ್'ನಲ್ಲಿ ಬರೆದಿದ್ದರು.

ರಸೂಲ್ ಅರ್ಹರಾಗಿದ್ದರು (ಜಮ್ಮು ವರದಿ): ಅಂತರರಾಷ್ಟ್ರೀಯ ಪಂದ್ಯದಲ್ಲಿ ಸಾಮರ್ಥ್ಯ ತೋರಿಸುವ ಉತ್ತಮ ಅವಕಾಶ ಪರ್ವೇಜ್ ರಸೂಲ್ ಕೈತಪ್ಪಿತು ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಹೇಳಿದೆ. `ಅವರಿಗೆ ಆಡಲು ಏಕೆ ಅವಕಾಶ ನೀಡಲಿಲ್ಲ ಎಂದು ಕೇಳುವುದು ಸರಿಯಲ್ಲ. ಆದರೆ ಯುವ ಆಲ್‌ರೌಂಡರ್ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದರು' ಎಂದು ಜೆಕೆಸಿಎ ಮಾಧ್ಯಮ ಸಮಿತಿ ಮುಖ್ಯಸ್ಥ ರಂಜೀತ್ ಕಾರ್ಲ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT