ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಭಿವೃದ್ಧಿಗೆ 23 ಕೋಟಿ ಬಿಡುಗಡೆ: ಕತ್ತಿ

Last Updated 16 ಜನವರಿ 2012, 6:50 IST
ಅಕ್ಷರ ಗಾತ್ರ

ಹುಕ್ಕೇರಿ:  ಹುಕ್ಕೇರಿ ಮತಕ್ಷೇತ್ರದ ವಿವಿಧ ರಸ್ತೆ ಸುಧಾರಣೆ, ಬಲವರ್ಧನೆ, ಡಾಂಬರೀಕರಣ, ಅಗಲೀಕರಣ ಹಾಗೂ ರಸ್ತೆ ಮೇಲ್ದರ್ಜೆ ಕಾಮಗಾರಿಗಳು ಸೇರಿದಂತೆ 2011-12ನೇ ಸಾಲಿಗಾಗಿ ಒಟ್ಟು ರೂ. 23 ಕೋಟಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿಸಿರುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರವಾರು ವಿಂಗಡಿಸಿದ್ದು, ಕಾಮಗಾರಿಗಳ ಹಣವು ಲೋಕೋಪಯೋಗಿ ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಅನುದಾನದಡಿ ಬಿಡುಗಡೆಯಾಗಿದ್ದು ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸಲು ಸೂಚಿಸಲಾಗಿದೆ ಎಂದರು.

ಮಳೆ ಹಾಗೂ ಇನ್ನೀತರ ಕಾರಣಗಳಿಂದ ಹಾಳಾಗಿ ಗುಂಡಿ ಬಿದ್ದಿರುವ ರಸ್ತೆ ಸುಧಾರಣೆ ಕೈಕೊಳ್ಳುವ ದೃಷ್ಠಿಯಿಂದ ಈ ಕಾಮಗಾರಿ ಆರಂಭಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದೆಂದು ಹೇಳಿದರು.

ಘೋಡಗೇರಿ ಜಿ.ಪಂ: ವ್ಯಾಪ್ತಿಯ ನೊಗನಿಹಾಳ-ಘೋಡಗೇರಿ-ನದಿಗುಡಿಕೇತರ 4.28 ಕಿ.ಮೀ. ರಸ್ತೆ ಸುಧಾರಣೆಗೆ ರೂ. 50 ಲಕ್ಷ, ರಕ್ಷಿ-ಶಿರಗಾಂವ-ಸುಲ್ತಾನಪುರ ಆಯ್ದಭಾಗಗಳ ರಸ್ತೆ 7.14 ಕಿ.ಮೀ. ಮರು ಡಾಂಬರಿಕರಣಕ್ಕೆ ರೂ. 80 ಲಕ್ಷ, ನೊಗನಿಹಾಳ-ಘೋಡಗೇರಿ-ನದಿಗುಡಿಕೇತರ ಆಯ್ದಭಾಗಗಳ 2.28 ಕಿ.ಮೀ ರಸ್ತೆ ಮರುಡಾಂಬರಿಕರಣಕ್ಕೆ ರೂ. 50 ಲಕ್ಷ, ಮದಿಹಳ್ಳಿ-ಶಿರಗಾಂವ-ಅವರಗೋಳ ರಸ್ತೆಯ ಶಿರಗಾಂವದಿಂದ ಅವರಗೋಳವರೆಗಿನ 5 ಕಿ.ಮೀ ರಸ್ತೆ ಸುಧಾರಣೆಗೆ ರೂ. 78 ಲಕ್ಷ ರೂ. ಮಂಜೂರಾಗಿದೆ.

ಅಮ್ಮಣಗಿ ಜಿ.ಪಂ: ವ್ಯಾಪ್ತಿಯ ಬಿಜಾಪೂರ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯ ಬೋರಗಲ್ ಕ್ರಾಸದಿಂದ-ಕಮತನೂರ ಕ್ರಾಸ್‌ವರೆಗಿನ 9.5 ಕಿ.ಮೀ. ರಸ್ತೆ ಸುಧಾರಣೆಗೆ ರೂ.1 ಕೋಟಿ, ಬೊರಗಲ್-ನೇರಲಿ ರಸ್ತೆಯ ಕಮತನೂರದಿಂದ ಬೊರಗಲ್‌ವರೆಗಿನ 6 ಕಿ.ಮೀ. ರಸ್ತೆ ಬಲವರ್ಧನೆ ಹಾಗೂ ಸುಧಾರಣೆಗೆ ರೂ. 95 ಲಕ್ಷ, ಸಂಕೇಶ್ವರ-ಅಮ್ಮಣಗಿ ರಸ್ತೆಯ ನಿಡಸೋಸಿಯಿಂದ ಸಂಕೇಶ್ವರವರೆಗಿನ 3.88 ಕಿ.ಮೀ ರಸ್ತೆ ಅಗಲೀಕರಣ ಹಾಗೂ ಡಾಂಬರಿಕರಣಕ್ಕೆ ರೂ. 70 ಲಕ್ಷ ಮಂಜೂರಾಗಿದೆ.

ಬೆಲ್ಲದ-ಬಾಗೇವಾಡಿ ಜಿ.ಪಂ: ವ್ಯಾಪ್ತಿಯ ಯಾದಗೂಡ-ಬೆಳವಿ-ಹುಲ್ಲೋಳಿ ಹಟ್ಟಿ ರಸ್ತೆ 10.92 ಕಿ.ಮೀ ರಸ್ತೆ ಸುಧಾರಣೆಗೆ ರೂ.95 ಲಕ್ಷ,  ಬೆಲ್ಲದ ಬಾಗೇವಾಡಿ-ಹುಕ್ಕೇರಿ ರಸ್ತೆಯ ಹುಲ್ಲೋಳಿ ಹಟ್ಟಿಯಿಂದ ಹುಕ್ಕೇರಿ ಕ್ರಾಸ್ ವರೆಗಿನ 4 ಕಿ.ಮೀ. ಮರು ಡಾಂಬರೀಕರಣಕ್ಕೆ ರೂ. 50 ಲಕ್ಷ, ಯಾದಗೂಡ-ರಕ್ಷಿ ಕಿ.ಮೀ.6 ರಲ್ಲಿ ದಿಬ್ಬ ತೆಗೆದು (ಬೆಳವಿ ಹತ್ತಿರ) ರಸ್ತೆ ಸುಧಾರಣೆಗೆ ರೂ.15 ಲಕ್ಷ, ರಾಷ್ಟ್ರೀಯ ಹೆದ್ದಾರಿ 44ರಿಂದ ಸಾರಾಪೂರ-ಶಿರಹಟ್ಟಿ ಬಿ.ಕೆ.-ಹಂಚಿನಾಳ ರಸ್ತೆಯ 3 ಕಿ.ಮೀ. ಸುಧಾರಣೆಗೆ ರೂ. 35 ಲಕ್ಷ ಮಂಜೂರಾಗಿದೆ ಎಂದು ಅವರು ವಿವರ ನೀಡಿದರು.

ಎಲಿಮುನ್ನೋಳಿ ಜಿ.ಪಂ: ವ್ಯಾಪ್ತಿಯ ಗೌಡವಾಡ-ಬಸ್ತವಾಡ-ಬೆಣಿವಾಡ-ಸುಲ್ತಾನಪೂರ- ನೋಗನಿಹಾಳ-ಅವರಗೋಳವರೆಗಿನ 12.70 ರಸ್ತೆಯ ಮರು ಡಾಂಬರಿಕರಣಕ್ಕೆ ರೂ.1ಕೋಟಿ, ರಾಷ್ಟ್ರೀಯ ಹೆದ್ದಾರಿ 44ರಿಂದ ಎಲಿಮುನ್ನೋಳಿ ಮಾರ್ಗವಾಗಿ ಅಮ್ಮಣಗಿ ಮಲ್ಲಿಕಾರ್ಜುನ ದೇವಸ್ಥಾನದವರೆಗಿನ ರಸ್ತೆ ಬದಿಯ 7 ಬಾವಿಗಳಿಗೆ ರಕ್ಷಣಾ ಗೋಡೆ ನಿರ್ಮಿಸಲು ರೂ.12.00 ಲಕ್ಷ, ಕೋಚರಿಯಿಂದ ನೇರ್ಲಿವರೆಗಿನ 3 ಕಿ.ಮೀ ರಸ್ತೆ ಸುಧಾರಣೆಗೆ ರೂ. 50 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.

ಕಣಗಲಾ ಜಿ.ಪಂ: ವ್ಯಾಪ್ತಿಯ ಸಂಕೇಶ್ವರ ಸಕ್ಕರೆ ಕಾರಖಾನೆಯಿಂದ ಸೊಲ್ಲಾಪುರ ಕ್ರಾಸ್‌ನವರೆಗೆ ಹಳೆ ರಾಷ್ಟ್ರೀಯ ಹೆದ್ದಾರಿ-4ರ 4.80 ಕಿ.ಮೀ. ರಸ್ತೆ ಸುಧಾರಣೆಗಾಗಿ ರೂ.4.85 ಕೋಟಿ, ರಾಷ್ಟ್ರೀಯ ಹೆದ್ದಾರಿ-4 ರಿಂದ ಸೊಲ್ಲಾಪೂರ ಗ್ರಾಮದ ಕೂಡು ರಸ್ತೆ 4.72 ಕಿ.ಮೀ. ಡಾಂಬರಿಕರಣಕ್ಕೆ ರೂ. 30 ಲಕ್ಷ, ಕಣಗಲಾ ಬೋರಗಲ್ ಮಾರ್ಗವಾಗಿ ಕರಜಗಾ-ಬಾಡ ರಸ್ತೆಯ ಆಯ್ದಭಾಗಗಳ 13.10 ಕಿ.ಮೀ. ಮರು ಡಾಂಬರಿಕರಣಕ್ಕೆ ರೂ.80 ಲಕ್ಷ, ರಾಷ್ಟ್ರೀಯ ಹೆದ್ದಾರಿ-4 ರಿಂದ ಮ.ಹಿಟ್ನಿ-ಮತ್ತಿವಾಡೆವರೆಗೆ ರಸ್ತೆ 7.20 ಕಿ.ಮೀಯ ಆಯ್ದಭಾಗಗಳ ಮರು ಡಾಂಬರಿಕರಣಕ್ಕೆ ರೂ. 50 ಲಕ್ಷ ರೂ. ಮಂಜೂರಾಗಿದೆ ಎಂದು ತಿಳಿಸಿದರು.

ನಬಾರ್ಡ ಯೋಜನೆ 17ರಡಿಯಲ್ಲಿ ಅಮ್ಮಣಗಿ ಮುಗಳಿ ರಸ್ತೆ ಸುಧಾರಣೆಗೆ ರೂ.1.10 ಕೋಟಿ ಹಾಗೂ ಸೊಲ್ಲಾಪೂರ-ಖೋತವಾಡಿ ರಸ್ತೆಯ ಮೇಲೆ ಆರ್‌ಸಿಸಿ ಡೆಕ್‌ಸ್ಲ್ಯಾಬ್ ಸೇತುವೆ ನಿರ್ಮಾಣಕ್ಕೆ ರೂ.1.15 ಕೋಟಿ ಹಾಗೂ ಶೆಟ್ಟಿಹಳ್ಳಿ-ಇಚಲಕರಂಜಿ ರಾಷ್ಟ್ರೀಯ ಹೆದ್ದಾರಿ 78ರಿಂದ ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿ 44ರ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ 5.5 ಕೋಟಿ ಬಿಡುಗಡೆಯಾಗಿದೆ ಎಂದರು.

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಹಾಗೂ ಚಿಕ್ಕೋಡಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಳೆ ಪಿ.ಬಿ. ರಸ್ತೆಯ ಬೆಳಗಾವಿ ನಾಕಾದಿಂದ ಕೊಲ್ಹಾಪೂರ ನಾಕಾವರೆಗಿನ 3.10 ಕಿ.ಮೀ. ರಸ್ತೆ ಸುಧಾರಣೆಗೆ ರೂ. 3.5 ಕೋಟಿ ಮತ್ತು ರಾಯಬಾಗ ತಾಲೂಕಿನ ಚಿಕ್ಕೋಡಿ ರೇಲ್ವೆ ಸ್ಟೇಶನದಿಂದ ಮುಗಳಖೋಡ ಮಠದವರೆಗಿನ ರಸ್ತೆ ಸುಧಾರಣೆಗೆ ರೂ.3.5 ಕೋಟಿ ಮಂಜೂರಾಗಿವೆ. ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಯೋಜನೆಯಡಿ ಮುಧೋಳ-ನಿಪ್ಪಾಣಿ ರಸ್ತೆಯ ದುರಸ್ತಿ ಮಾಡಲು ರೂ.13.00 ಕೋಟಿ ಪ್ರಸ್ತಾವಣೆಯನ್ನು ಸಂಸದ ರಮೇಶ ಕತ್ತಿ ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು ಶೀಘ್ರದಲ್ಲಿ ಅನುಮೋದನೆ ದೊರೆಯುವ ಬಗ್ಗೆ ಕೃಷಿ ಸಚಿವ ಉಮೇಶ ಕತ್ತಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT