ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಉಬ್ಬು ನಿರ್ಮಾಣ: ಸಂಚಾರಕ್ಕೆ ತೊಂದರೆ

Last Updated 8 ಸೆಪ್ಟೆಂಬರ್ 2011, 19:50 IST
ಅಕ್ಷರ ಗಾತ್ರ

ಬೆಂಗಳೂರು: ಅರ್ಧ ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿ ಆರು ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಿದರೆ ವಾಹನ ಸಂಚಾರಕ್ಕೆ ಉಂಟಾಗುವ ತೊಂದರೆಯನ್ನು ಸುಲಭವಾಗಿ ಊಹಿಸಬಹುದು. ನಗರದ ಹೃದಯ ಭಾಗದಲ್ಲೇ ಈ ಪರಿಸ್ಥಿತಿಯಿದ್ದರೂ ಬಿಬಿಎಂಪಿ ಅಧಿಕಾರಿಗಳು ಇದನ್ನು ತೆರವುಗೊಳಿಸಲು ಮುಂದಾಗಿಲ್ಲ.

ನಗರದ ಶೇಷಾದ್ರಿಪುರ ಬಳಿಯ ರಿಸಾಲ್ದಾರ್ ರಸ್ತೆಯಲ್ಲಿ (ಹಳೆಯ ಕಿನೋ ಚಿತ್ರಮಂದಿರದ ಎದುರಿನ ರಸ್ತೆ) ಅರ್ಧ ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿ ಆರು ರಸ್ತೆಉಬ್ಬುಗಳನ್ನು ನಿರ್ಮಿಸಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ರಸ್ತೆ ಉಬ್ಬುಗಳನ್ನು ಅಕ್ರಮವಾಗಿ ನಿರ್ಮಿಸಿರುವುದಷ್ಟೇ ಅಲ್ಲ, ಅವೈಜ್ಞಾನಿಕವಾಗಿವೆ.

ಕೆಲ ತಿಂಗಳ ಹಿಂದೆ ಈ ರಸ್ತೆಗೆ ಡಾಂಬರು ಹಾಕಿದಾಗ ಕೇವಲ ಎರಡು ರಸ್ತೆಉಬ್ಬುಗಳನ್ನು ನಿರ್ಮಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ನಾಲ್ಕು ರಸ್ತೆಉಬ್ಬುಗಳನ್ನು ನಿರ್ಮಾಣ ಮಾಡಲಾಗಿದೆ. `ರಿಸಾಲ್ದಾರ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಸವಾಲಾಗಿ ಪರಿಣಮಿಸಿದೆ. ರಸ್ತೆಉಬ್ಬುಗಳು ವಿಪರೀತ ಎತ್ತರವಿರುವುದರಿಂದ ವಾಹನ ಸವಾರರು ಆಯತಪ್ಪಿ ಬೀಳುವ ಅಪಾಯವಿದೆ.

ಈಗಾಗಲೇ ಸಾಕಷ್ಟು ಅಪಘಾತಗಳು ಸಂಭವಿಸಿ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಡಿಮೆ ಅಂತರದಲ್ಲೇ ಆರು ರಸ್ತೆಉಬ್ಬುಗಳನ್ನು ನಿರ್ಮಿಸಿರುವುದರಿಂದ ವಾಹನ ಚಾಲನೆ ಮಾಡುವುದೇ ಕಷ್ಟಕರವಾಗಿದೆ~ ಎಂದು ವಾಹನ ಸವಾರರೊಬ್ಬರು ದೂರಿದರು.

ಆದರೆ ಸ್ಥಳೀಯರ ವಾದವೇ ಬೇರೆ. `ಮಹಿಳೆಯರು, ಹಿರಿಯರು ಹಾಗೂ ಮಕ್ಕಳು ರಸ್ತೆ ದಾಟಲು ಅನುಕೂಲವಾಗುವಂತೆ ರಸ್ತೆಉಬ್ಬುಗಳನ್ನು ನಿರ್ಮಿಸಿದ್ದಾರೆ. ಈ ಹಿಂದೆ ರಸ್ತೆ ದಾಟಲು ತೀವ್ರ ಕಷ್ಟಪಡುವಂತಾಗಿತ್ತು. ಹಾಗಾಗಿ ಸ್ಥಳೀಯ ಪಾಲಿಕೆ ಸದಸ್ಯ ಎಸ್. ನಟರಾಜ್ ಅವರಿಗೆ ಮನವಿ ಸಲ್ಲಿಸಿ ರಸ್ತೆಉಬ್ಬುಗಳನ್ನು ನಿರ್ಮಿಸಲಾಗಿದೆ. ಈಗ ಸುಗಮವಾಗಿ ರಸ್ತೆ ದಾಟಬಹುದಾಗಿದೆ~ ಎಂದು ಸ್ಥಳೀಯರು ಹೇಳುತ್ತಾರೆ.

ಶಿಫಾರಸು ಮಾಡಿಲ್ಲ: `ಕಳೆದ ಎರಡು ವರ್ಷಗಳಿಂದ ನಗರದ ಯಾವುದೇ ಭಾಗದಲ್ಲಿ ರಸ್ತೆಉಬ್ಬು ನಿರ್ಮಾಣಕ್ಕೆ ಸಂಚಾರ ಪೊಲೀಸ್ ಇಲಾಖೆ ವತಿಯಿಂದ ಶಿಫಾರಸು ಮಾಡಿಲ್ಲ. ರಿಸಾಲ್ದಾರ್ ರಸ್ತೆಯಲ್ಲಿ ಸಂಚಾರ ಅವ್ಯವಸ್ಥೆಗೆ ಪಾಲಿಕೆ ಸದಸ್ಯರು ಹಾಗೂ ಸಂಬಂಧಪಟ್ಟ ಪಾಲಿಕೆ ಎಂಜಿನಿಯರ್ ಹೊಣೆ. ಅಪಘಾತ ಸಂಭವಿಸುವುದನ್ನು ತಪ್ಪಿಸುವ ಸಲುವಾಗಿ ರಸ್ತೆಉಬ್ಬುಗಳಿಗೆ ಬಿಳಿಪಟ್ಟಿ ಬಳಿಯಲಾಗಿದೆ. ಅಲ್ಲದೇ ಈ ಅವೈಜ್ಞಾನಿಕ ರಸ್ತೆಉಬ್ಬುಗಳನ್ನು ಸರಿಪಡಿಸಬೇಕು ಇಲ್ಲವೇ ತೆರವುಗೊಳಿಸುವಂತೆ ಪಾಲಿಕೆಯನ್ನು ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪಾಲಿಕೆ ಸದಸ್ಯರ ಪ್ರತಿಕ್ರಿಯೆ: `ಸ್ಥಳೀಯರ ಒತ್ತಾಯದ ಮೇರೆಗೆ ರಸ್ತೆಉಬ್ಬುಗಳನ್ನು ನಿರ್ಮಿಸಲಾಗಿದೆ. ಆದರೆ ಮೂರು ರಸ್ತೆಉಬ್ಬುಗಳನ್ನಷ್ಟೇ ನಿರ್ಮಿಸುವಂತೆ ಸೂಚಿಸಲಾಗಿತ್ತು. ಆದರೆ ಹೆಚ್ಚುವರಿಯಾಗಿ ಮೂರು ರಸ್ತೆಉಬ್ಬುಗಳನ್ನು ನಿರ್ಮಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅನಧಿಕೃತವಾಗಿ ನಿರ್ಮಿಸಿರುವ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಪಾಲಿಕೆ ಸದಸ್ಯ ಎಸ್. ನಟರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT