ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ವಿಳಂಬ; ರೇಣುಕಾಚಾರ್ಯ ಆಕ್ರೋಶ

Last Updated 12 ಸೆಪ್ಟೆಂಬರ್ 2013, 4:21 IST
ಅಕ್ಷರ ಗಾತ್ರ

ದಾವಣಗೆರೆ:  ಬಸವಾಪಟ್ಟಣ ತಿರುವಿನಿಂದ ಸವಳಂಗ ಮಾರ್ಗದವರೆಗೆ ನನೆಗುದಿಗೆ ಬಿದ್ದಿರುವ ಸುಮಾರು 36 ಕಿ.ಮೀ ವ್ಯಾಪ್ತಿಯ ರಸ್ತೆ ಕಾಮಗಾರಿಯನ್ನು ಸೆ.20ರ ಒಳಗೆ ಆರಂಭ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.

8 ದಿನದ ಒಳಗೆ ಕಾಮಗಾರಿ ಆರಂಭಿಸದಿದ್ದರೆ ಈ ಮಾರ್ಗದಲ್ಲಿ ಬರುವ ಎಲ್ಲಾ ಪಟ್ಟಣಗಳಲ್ಲಿ ಬಂದ್‌ಗೆ ಕರೆ ನೀಡಿ, ಪ್ರತಿಭಟನೆ ನಡೆಸಲಾಗುವುದು ಎಂದು ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಎಚ್ಚರಿಕೆ ನೀಡಿದರು.

ಬಸವಾಪಟ್ಟಣ ತಿರುವಿನಿಂದ ದಾಗಿನಕಟ್ಟೆ, ಬೆನಕನಹಳ್ಳಿ, ಕಮ್ಮಾರಗಟ್ಟೆ, ತಕ್ಕನಹಳ್ಳಿ, ಗೊಲ್ಲರಹಳ್ಳಿ, ಹೊನ್ನಾಳಿ, ನ್ಯಾಮತಿ, ಸೊರಹೊನ್ನೆ ಮತ್ತು ಸವಳಂಗ ಮಾರ್ಗದವರೆಗೆ ಈ ಮಾರ್ಗದಲ್ಲಿ ಬರುವ ಗ್ರಾಮಗಳನ್ನು ಸಂಪಕಿರ್ಸುವ ಸುಮಾರು 36ಕಿಮೀ ರಸ್ತೆ ಕಾಮಗಾರಿಗೆ ಜೂನ್‌ 2012ರಲ್ಲಿ ` 131ಕೋಟಿ ಹಣವನ್ನು ಮಂಜೂರು ಮಾಡಲಾಗಿದೆ. ಆದರೆ, ಗುತ್ತಿಗೆದಾರ ಡಿ.ಆರ್‌.ನಾಯಕ್‌ ಮತ್ತು ಎಂಜಿನಿಯರ್‌ ಇದುವರೆಗೂ ಈ ಭಾಗದ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳದೇ ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಮಾರ್ಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಸೇರಿದಂತೆ ಉತ್ತಮ ಪಾದಚಾರಿ ಮಾರ್ಗ ಹಾಗೂ ಒಳಚರಂಡಿ ನಿರ್ಮಾಣಕ್ಕಾಗಿ ` 131 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್‌ 2012ರಲ್ಲಿಯೇ ಕಾಮಗಾರಿಗಾಗಿ ಶಂಕುಸ್ಥಾಪನೆ ಕೂಡ ಮಾಡಲಾಗಿತ್ತು. ಈ ಬಗ್ಗೆ ಅಂದು ಗುತ್ತಿಗೆದಾರರು ಇನ್ನು 8ತಿಂಗಳ ಅವಧಿಯ ಒಳಗೆ ರಸ್ತೆ ಕಾಮಗಾರಿ ಮುಗಿಸಿಕೊಡುತ್ತೇವೆ ಎಂದು ಭರವಸೆಯನ್ನು  ನೀಡಿದ್ದರು. ಆದರೆ, ಇಂದಿಗೂ ಅದು ಭರವಸೆಯಾಗಿಯೇ ಉಳಿದಿರುವುದು ವಿಪರ್ಯಾಸ ಎಂದು ದೂರಿದರು.

ಈ ಬಗ್ಗೆ ಗುತ್ತಿಗೆದಾರರಿಗೆ ಸಂಬಂಧಪಟ್ಟ ಇಲಾಖೆ 9ಬಾರಿ ನೋಟಿಸ್‌ ಮತ್ತು ಒಂದು ಬಾರಿ ಷೋಕಾಸ್‌ ನೋಟಿಸ್‌ನ್ನು ಜಾರಿಗೊಳಿಸಿದರೂ, ಅವರು ಕಾಮಗಾರಿ ವಿಳಂಬಕ್ಕೆ ಸೂಕ್ತ ಕಾರಣ ನೀಡದೇ ನಿರ್ಲಕ್ಷಿಸುತ್ತಿದ್ದಾರೆ.

ಈ ಮಾರ್ಗದಲ್ಲಿನ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆ ಅಪಘಾತಗಳು ಆಗಾಗ ನಡೆಯುತ್ತಲೇ ಇವೆ.
ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಎಂಜಿನಿಯರ್‌ ಈಗಾಗಲೇ ವಿಳಂಬವಾಗಿರುವ ನೂತನ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗನೆ ಆರಂಭಿಸಿ, ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ವರ್ಗಾವಣೆಯಲ್ಲಿ ನಿರತ ಸರ್ಕಾರ...

ಈಗಾಗಲೇ ರಾಜ್ಯದ ಬಹುತೇಕ ತಾಲ್ಲೂಕು ಕೇಂದ್ರಗಳು ಅತಿವೃಷ್ಟಿ ಮತ್ತು ಅನಾವೃಷ್ಟಿಗೆ ತುತ್ತಾಗಿವೆ. ಅದರಲ್ಲೂ ಸುಮಾರು 51ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಬರಗಾಲ ಸ್ಥಿತಿ ಎದುರಾಗಿದೆ.

ಹೀಗಿದ್ದರೂ ಕಾಂಗ್ರೆಸ್‌ ಸರ್ಕಾರ ತಳಮಟ್ಟದ ಸಿಬ್ಬಂದಿ ಸೇರಿದಂತೆ ಎಲ್ಲಾ ವರ್ಗದ ಅಧಿಕಾರಿಗಳ ವರ್ಗಾವಣೆಯಲ್ಲಿ ನಿರತವಾಗಿದೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆರೋಪಿಸಿದರು.

ಕೇವಲ ಅನ್ನಭಾಗ್ಯ– ಕ್ಷೀರಭಾಗ್ಯ ಯೋಜನೆಗಳಿಗೆ ಸೀಮೀತವಾಗಿರುವ ಬದ್ಧತೆ ಇಲ್ಲದ ಸರ್ಕಾರ ಇದು. ಸಚಿವರಿಗೆ ಅವರ ಖಾತೆಯ ಬಗ್ಗೆ ಸರಿಯಾದ ಮಾಹಿತಿ ಅವರಿಗಿಲ್ಲ. ಇಂದು ಕಂದಾಯ ಸಚಿವರನ್ನು ಹುಡುಕಿಕೊಡಿ ಎಂದು ಜಾಹೀರಾತು ನೀಡುವ ಸ್ಥಿತಿ ಬಂದಿದೆ. ಸಚಿವರು ಆಗಾಗ ಪ್ರಗತಿ ಪರಿಶೀಲನೆ ಸಭೆ ನಡೆಸಬೇಕು.  ಆದರೆ, ಯಾವ ಸಚಿವರು ನಡೆಸುತ್ತಿಲ್ಲ. ಸಚಿವರು ಅವರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಅವರು ನಿರಂತವಾಗಿ ಆರೋಪಿಸಿದರು.

ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವರು ರಾಜ್ಯ ಪ್ರವಾಸ ಮಾಡಿ, ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ತುತ್ತಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ, ತಕ್ಷಣ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿಗೆ ಬಿಎಸ್‌ವೈ ಅನಿವಾರ್ಯ..!
ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮರಳುತ್ತಾರೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದಾಗ...  ‘ಬಿಜೆಪಿಗೆ ಬಿಎಸ್‌ವೈ ಅವರು ಅನಿವಾರ್ಯ!’ ಎಂದರು.

‘ನಾನು ನನ್ನ ಕ್ಷೇತ್ರದ ಜನರ ಹಾಗೂ ಬಿಎಸ್‌ವೈ ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಅವರ ನಿಲುವೇ ನನ್ನ ನಿಲುವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT