ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರವಸ್ಥೆ : ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಹೊರನಾಡು ಸಮೀಪದ ಗ್ರಾಮಗಳಲ್ಲಿ ಗ್ರಾಮಸ್ಥರ ಆಕ್ರೋಶ
Last Updated 10 ಏಪ್ರಿಲ್ 2014, 5:09 IST
ಅಕ್ಷರ ಗಾತ್ರ

ಹೊರನಾಡು (ಕಳಸ): ‘ನಾವೂ ಈ ದೇಶದ ಪ್ರಜೆಗಳಲ್ಲವೇ, ನಮಗೂ ಈ ದೇಶದ ಕಾನೂನುಗಳು ಅನ್ವಯಿಸುವುದಿಲ್ಲವೇ’. ‘ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಎಂದ ಮೇಲೆ ನಾವೇಕೆ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡಬೇಕು ಅಥವಾ ಮತ ಹಾಕಬೇಕು...’ ಮಂಗಳವಾರ ರಾತ್ರಿ ಸುರಿದ ಮಳೆಯಿಂದ ತಣ್ಣಗಾಗಿದ್ದ ಹೊರನಾಡು ಸಮೀಪದ  ಹೂವಿನಹಿತ್ಲು, ಗೋಳಿಬಿಳಲ್‌, ಕುತ್ತನಬಿಳಲ್‌ ಮತ್ತು ಎಳಕುಂಬ್ರಿ ಗ್ರಾಮಗಳ ಜನರು ಬುಧವಾರ ಬೆಳಿಗ್ಗೆ ಆಕ್ರೋಶದಿಂದ ಇಂತಹ ಬಿಸಿಬಿಸಿ ಮಾತನ್ನು ಆಡುತ್ತಿದ್ದರು.

ಈ ಗ್ರಾಮಗಳಿಗೆ ಹೊರನಾಡಿನಿಂದ ಇರುವ ಏಕೈಕ ಸಂಪರ್ಕ ರಸ್ತೆಯ ಬಗ್ಗೆ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ನಮ್ಮ ಕೂಗು ಅರಣ್ಯರೋಧನ ಆಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಪತ್ರಕರ್ತರಿಗೆ ಗ್ರಾಮಸ್ಥರು ದಾಖಲೆಗಳ ಸಹಿತ ಹೆಚ್ಚಿನ ವಿವರಣೆ ನೀಡಿದರು.

‘ಕಳೆದ ವರ್ಷದಿಂದ ಈ ಬಗ್ಗೆ ಸತತವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಹಸೀಲ್‌ದಾರ್‌, ಉಪ­ವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದೆವು. ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರ್ಕಾರಿ ರಸ್ತೆಯನ್ನಾಗಿ ದಾಖಲಿಸುವಂತೆ ಮಾಡಿದ ಒತ್ತಾಯಕ್ಕೆ ಯಾವುದೇ ಅಧಿಕಾರಿ  ಸ್ಪಂದಿಸಿಲ್ಲ’ ಎಂದು ಗ್ರಾಮದ ಯುವ ಮುಂದಾಳು ಹೂವಿನಹಿತ್ಲು ವೃಷಭರಾಜ್‌ ಹೇಳುತ್ತಿದ್ದರೆ, ಅಲ್ಲಿ ನೆರೆದಿದ್ದ ಪರಿಶಿಷ್ಟ ಜಾತಿ ಮತ್ತು ವರ್ಗದ ಜನರು ತಮ್ಮ ಸಹಮತ ವ್ಯಕ್ತಪಡಿಸಿದರು.

‘ಈ ರಸ್ತೆ ಬಿಟ್ಟರೆ ನಮ್ಮ ಗ್ರಾಮಕ್ಕೆ ಬೇರೆ ರಸ್ತೆಯೇ ಇಲ್ಲ. ಬೇರೆ ರಸ್ತೆ ಇದ್ದಿದ್ದರೆ ನಮಗೆ ಈ ರಸ್ತೆಯೇ ಬೇಕಾಗಿರಲಿಲ್ಲ. ಆದರೆ ರಸ್ತೆಯು ಅಭಿವೃದ್ಧಿ ಕಾಣದೆ ಇರುವುದರಿಂದ ಈಗ ಚುನಾವಣೆ ಬಹಿಷ್ಕಾರಕ್ಕೆ ತೀರ್ಮಾನ ಮಾಡಿದ್ದೇವೆ’ ಎಂದೂ ಗ್ರಾಮಸ್ಥರು ವಿವರಣೆ ನೀಡುತ್ತಾರೆ.
ಈ ರಸ್ತೆಯು ಸಂಪೂರ್ಣವಾಗಿ ಸರ್ಕಾರಿ ಜಮೀನಿನಲ್ಲೇ ಹಾದುಬಂದಿದೆ. ರಸ್ತೆಯು ಪರಿಶಿಷ್ಟ ಜಾತಿ, ವರ್ಗ ಮತ್ತು ಅಲ್ಪಸಂಖ್ಯಾತ ಕೋಮಿಗೆ ಸೇರಿದ 25 ಬಡ ಕೃಷಿಕರ ಮತ್ತು ಕೂಲಿ ಕಾರ್ಮಿಕರ ಮನೆಗೆ ಇರುವ ಏಕೈಕ ರಸ್ತೆ ಆಗಿದೆ. ಆದರೆ ಈ ರಸ್ತೆ ಸರ್ಕಾರಿ ರಸ್ತೆ ಎಂದು ದಾಖಲಾಗದೆ ಇರುವುದರಿಂದ ಅಭಿವೃದ್ಧಿ ಅಸಾಧ್ಯವಾಗಿದೆ ಎಂದೂ ಗ್ರಾಮಸ್ಥರು ಇಲ್ಲಿ ಹೇಳುತ್ತಾರೆ.

ರಸ್ತೆ ಬಗೆಗಿನ ಹೋರಾಟ ಬಲಗೊಳಿಸಲು ಗ್ರಾಮ ಅಭಿವೃದ್ಧಿ ಸಂಘವನ್ನು ರಚಿಸಿಕೊಂಡಿರುವ ಗ್ರಾಮಸ್ಥರು ಒಂದೆರಡು ದಿನದಲ್ಲೇ ರಸ್ತೆ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ  ತೆಗೆದುಕೊಳ್ಳದಿದ್ದರೆ ಕಳಸದ ನಾಡ ಕಚೇರಿ ಮುಂಭಾಗ ಸತತ ಧರಣಿ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಂಘದ ಅಧ್ಯಕ್ಷ ಗಣೇಶ, ಕಾರ್ಯದರ್ಶಿ ಅಶೋಕ, ಸದಸ್ಯರಾದ ಈಶ್ವರ, ಗುರುವ, ಪ್ರೇಮ, ಸೋಮು ಮತ್ತಿತರರು ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT