ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ತುರ್ತು ಕಾಮಗಾರಿ: ಡಿ.ಸಿ

Last Updated 26 ಜುಲೈ 2013, 6:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಳಚರಂಡಿ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ಓಡಾಟಕ್ಕೆ ಅನುಕೂಲವಾಗುವಂತೆ ತುರ್ತು ಕಾಮಗಾರಿ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.

ನಗರದ ಬಹಳಷ್ಟು ಕಡೆ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಎಲ್ಲೆಲ್ಲೂ ಕೆಸರು ತುಂಬಿದೆ. ಒಳಚರಂಡಿ ಕಾಮಗಾರಿ ಮುಗಿದ ನಂತರ ರಸ್ತೆಗಳನ್ನು ಮೆಟ್ಲಿಂಗ್ ಮಾಡದ ಕಾರಣ ಹೀಗಾಗಿದೆ. ರಸ್ತೆಗಳಲ್ಲಿನ ಮಣ್ಣನ್ನು ತೆರವುಗೊಳಿಸಿ ಮೆಟ್ಲಿಂಗ್ ಮಾಡುವಂತೆ ಕೆಯುಐಡಿಎಫ್‌ಸಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಕೆಲವು ರಸ್ತೆಗಳಲ್ಲಿ ಕಾಮಗಾರಿ ಆರಂಭವಾಗಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಪ್ರಸ್ತುತ ಒಟ್ಟು ಆರು ತಂಡಗಳು ರಸ್ತೆ ದುರಸ್ತಿ ಕಾಮಗಾರಿಯಲ್ಲಿ ತೊಡಗಿವೆ. ಮಳೆ ಕಾರಣ ಕಾಮಗಾರಿ ಮಂದಗತಿಯಲ್ಲಿ ಸಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಕಾಮಗಾರಿಯ ನಂತರ ರಸ್ತೆಯನ್ನು ಉತ್ತಮ ಸ್ಥಿತಿಯಲ್ಲಿ ಇಡುವುದು ಸಂಬಂಧಿಸಿದ ಏಜೆನ್ಸಿ ಜವಾಬ್ದಾರಿ. ಈ ಕುರಿತು ಪ್ರತಿ ಮಂಗಳವಾರ ಮತ್ತು ಗುರುವಾರ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಇನ್ನು ಎರಡು ವಾರದಲ್ಲಿ ಹುಬ್ಬಳ್ಳಿಯ ರಸ್ತೆಗಳು ಒಂದು ಹಂತಕ್ಕೆ ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅವಳಿನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ರೂ 44 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಅಗತ್ಯವಾದ ಹಣವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು. ಕಾಮಗಾರಿ ಸಹ ಶೀಘ್ರ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ರೂ 30 ಲಕ್ಷ ದಂಡ: ಅವಳಿನಗರದ 96 ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ನಡೆದಿದ್ದು, ಇದರಲ್ಲಿ ಒಟ್ಟು 75.5 ಕಿ.ಮೀ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಅಳವಡಿಸಲಾಗಿದೆ. ನಿಯಮ ಉಲ್ಲಂಘಿಸುವ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುತ್ತಿದ್ದು, ಒಟ್ಟಾರೆ ರೂ 30 ಲಕ್ಷ ದಂಡ ಸಂಗ್ರಹಿಸಲಾಗಿದೆ. ಹುಬ್ಬಳ್ಳಿಯಲ್ಲಿನ ಒಳಚರಂಡಿ ಕಾಮಗಾರಿಯು 2014ರ ಜನವರಿಗೆ ಅಂತ್ಯಗೊಳ್ಳುವ ನಿರೀಕ್ಷೆ ಇದೆ.

ಚರಂಡಿ ಮಾರ್ಗ ಸ್ವಚ್ಛ: ಅವಳಿನಗರದ ಪ್ರಮುಖ ಚರಂಡಿ ಮಾರ್ಗಗಳನ್ನು ಸ್ವಚ್ಛಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ. ಪೈಲಟ್ ಯೋಜನೆ ಅಡಿ ಒಂದು ಚರಂಡಿ ಮಾರ್ಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಒಟ್ಟಾರೆ ಯೋಜನೆಗೆ ತಗಲುವ ವೆಚ್ಚ ಅಂದಾಜು ಪ್ರತಿ ಸಿದ್ಧಪಡಿಸಲಾಗುವುದು. ಹಳೆ ಚರಂಡಿಗಳಲ್ಲಿನ ಹೂಳು ತೆಗೆಯಲಾಗುವುದು ಎಂದರು.

ಆನ್‌ಲೈನ್‌ನಲ್ಲಿ ಮಾಹಿತಿ: 67 ವಾರ್ಡುಗಳಲ್ಲಿನ ಗಟಾರಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ನಡೆದಿರುವ ಕಾಮಗಾರಿಗಳನ್ನು ಭೇಟಿ ನೀಡಿ ಪರಿಶೀಲಿಸಲಾಗುವುದು. ತಪ್ಪು ಮಾಹಿತಿ ನೀಡಿದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿಯ ವಿವರಗಳನ್ನು ಪಾಲಿಕೆಯ ವೈಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಈ ಕುರಿತು ದೂರುಗಳು ಇದ್ದಲ್ಲಿ ಪಾಲಿಕೆ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.  ತೆರೆದ ಮ್ಯಾನ್‌ಹೋಲ್‌ಗಳನ್ನು ಮುಚ್ಚಲಾಗುತ್ತಿದ್ದು, ಒಟ್ಟು 174 ಮ್ಯಾನ್‌ಹೋಲ್‌ಗಳನ್ನು ದುರಸ್ತಿಗೊಳಿಸಲಾಗಿದೆ ಎಂದರು.

ಚತುಷ್ಪರ್ಥ ಕಾಮಗಾರಿ ಪರಿಶೀಲನೆ: ಚತುಷ್ಪಥ ಕಾಮಗಾರಿಯನ್ನು ಸಂಬಂಧಿಸಿದ ಏಜೆನ್ಸಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸಮೀರ್ ಶುಕ್ಲಾ ಆಕ್ಷೇಪ ವ್ಯಕ್ತಪಡಿಸಿದರು. ಎಸ್‌ಡಿಎಂ, ಆರ್‌ಟಿಒ ಕಡೆ ಕೆಟ್ಟ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಓಡಾಟಕ್ಕೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಸ್ತೆಗೆ ಬಳಸುವ ಜಿಎಸ್‌ಬಿ ಸಾಮಗ್ರಿ ಸಿದ್ಧವಾಗಿದ್ದು, ಮಳೆಯ ಕಾರಣ ಕಾಮಗಾರಿಗೆ ತಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಸಿಎ ನಿವೇಶನ-ನೋಟಿಸ್: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ನೀಡಲಾಗಿರುವ ಸಿಎ ನಿವೇಶನಗಳ ಬಳಕೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಹುಡಾದಿಂದ 10 ವರ್ಷಕ್ಕೂ ಹಿಂದೆ ಒಟ್ಟು 44 ನಿವೇಶನಗಳನ್ನು ಸಂಘ-ಸಂಸ್ಥೆಗಳಿಗೆ ನೀಡಲಾಗಿದೆ.

ಇದರಲ್ಲಿ 17 ನಿವೇಶನಗಳನ್ನು ಸಂಬಂಧಿಸಿದವರು ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ. ಇವುಗಳನ್ನು ಮರಳಿ ಪ್ರಾಧಿಕಾರದ ವಶಕ್ಕೆ ಪಡೆಯುವ ಸಂಬಂಧ ನೋಟಿಸ್ ನೀಡಲಾಗಿದೆ ಎಂದು ಹೇಳಿದರು. ಹುಡಾದಿಂದ ನಗರ ಅಭಿವೃದ್ಧಿ ಯೋಜನೆಯ ಕರಡು ಪ್ರತಿ ಸಿದ್ಧಪಡಿಸಲಾಗುತ್ತಿದ್ದು, ಈ ಕುರಿತು ಶಾಸಕರ ಜೊತೆ ಸದ್ಯದಲ್ಲಿಯೇ ಚರ್ಚಿಸಲಾಗುವುದು ಎಂದರು.

ಜಂಟಿ ಆಯುಕ್ತ ವೀರೇಂದ್ರ ಕುಂದಗೋಳ ಹಾಗೂ ಪಾಲಿಕೆ, ಕೆಯುಐಡಿಎಫ್‌ಸಿ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ಜಿಲ್ಲಾಧಿಕಾರಿಗೆ ಕೆಸರಿನ ದರ್ಶನ
ನಗರದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಗುರುವಾರ ಕೆಯುಐಡಿಎಫ್‌ಸಿ ಅಧಿಕಾರಿಗಳ ಜೊತೆ ವೀಕ್ಷಿಸಿದರು. ಬಹುತೇಕ ರಸ್ತೆಗಳಲ್ಲಿ ಜನ ಓಡಾಡಲಾರದ ಸ್ಥಿತಿ ಇರುವುದು ಅವರ ಕಣ್ಣಿಗೆ ಬಿತ್ತು.

ಜಿಲ್ಲಾಧಿಕಾರಿ ಭೇಟಿ ನೀಡಿದ ಎಲ್ಲ ರಸ್ತೆಗಳಲ್ಲೂ ಕೆಸರೇ ತುಂಬಿತ್ತು. ಹೆಗ್ಗೇರಿ, ಆನಂದನಗರ, ಹಳೇಹುಬ್ಬಳ್ಳಿ, ಇಂಡಿಪಂಪ್, ಗಣೇಶಪೇಟೆ, ದೇಶಪಾಂಡೆ ನಗರ, ಹಿರೇಪೇಟೆ, ಸ್ಟೇಷನ್ ರಸ್ತೆಯಲ್ಲಿ ನಡೆದಿರುವ ಕಾಮಗಾರಿಯ ಪ್ರಗತಿಯನ್ನು ಅವರು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT