ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ದುರಸ್ತಿಗೆ ಸೂಚನೆ: ಮೇಯರ್

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ನಗರದಲ್ಲಿ ಮೆಟ್ರೊ ರೈಲು ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಇದೇ 25ರೊಳಗೆ ಈ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದು ಮೇಯರ್ ಪಿ.ಶಾರದಮ್ಮ ಹೇಳಿದರು.

ನಗರದಲ್ಲಿ ಪ್ರಮುಖ ರಸ್ತೆಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಬಿಎಂಆರ್‌ಸಿಎಲ್, ಜಲಮಂಡಳಿ, ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

`ಮೆಟ್ರೊ ಕಾಮಗಾರಿಯಿಂದಾಗಿ ರಸ್ತೆಗಳು ದುಸ್ಥಿತಿಯಲ್ಲಿವೆ. ಅಲ್ಲದೇ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈ ರಸ್ತೆಗಳಲ್ಲಿ ಗುಂಡಿ ಬಿದ್ದು, ಇನ್ನಷ್ಟು ಹಾಳಾಗಿವೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಾಲಿಕೆ ಜನರ ನಿಂದನೆಗೆ ಗುರಿಯಾಗಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ನಗರದ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಪಾಲಿಕೆ ಸಾಕಷ್ಟು ಕಾಮಗಾರಿಗಳನ್ನು ಕೈಗೊಂಡಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳು ಸಹ ತಮ್ಮ ಜವಾಬ್ದಾರಿ ಅರಿತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ~ ಎಂದರು.

ಉಪ ಮೇಯರ್ ಎಸ್. ಹರೀಶ್, `ಮೆಟ್ರೊ ರೈಲು ಮಾರ್ಗ ಹಾದುಹೋಗಿರುವ ರಸ್ತೆಗಳ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಕೆಲವೆಡೆ ದ್ವಿಚಕ್ರ ವಾಹನಗಳು ಸಹ ಸಂಚರಿಸಲು ಸಾಧ್ಯವಾಗದಷ್ಟು ರಸ್ತೆಗಳು ಹದಗೆಟ್ಟಿವೆ.

ವಿಧಾನಸೌಧ ಮತ್ತು ಸುತ್ತಮುತ್ತಲ ರಸ್ತೆಗಳನ್ನಷ್ಟೇ ಉತ್ತಮವಾಗಿ ನಿರ್ವಹಿಸಿದರೆ ಸಾಲದು. ಸಾಮಾನ್ಯ ಜನರು ಸಂಚರಿಸುವ ರಸ್ತೆಗಳನ್ನು ಇದೇ ರೀತಿ ಅಭಿವೃದ್ಧಿ ಪಡಿಸುವತ್ತ ಬಿಎಂಆರ್‌ಸಿಎಲ್ ಅಧಿಕಾರಿಗಳು ಮುಂದಾಗಬೇಕು. ತಾರತಮ್ಯ ಧೋರಣೆಯನ್ನು ಬಿಟ್ಟು, ಎಲ್ಲ ರಸ್ತೆಗಳ ದುರಸ್ತಿಗೆ ಮುಂದಾಗುವಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ~ ಎಂದು ಹೇಳಿದರು.

ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, `ಹಂತ ಹಂತವಾಗಿ ಯಾವ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ `ಮೆಟ್ರೊ~ ರೈಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದನ್ನು ಮೇಲ್ವಿಚಾರಣೆ ನಡೆಸುವಂತೆ ಪಾಲಿಕೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಶುಕ್ರವಾರದಿಂದ ಮೇಯರ್ ಈ ದುರಸ್ತಿ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ~ ಎಂದರು.

ಸಭೆಯಲ್ಲಿ ಬಿಎಂಆರ್‌ಸಿಎಲ್‌ನ ಮುಖ್ಯ ಎಂಜಿನಿಯರ್‌ಗಳಾದ ಪಿ.ಎನ್. ನಾಯಕ್ (ಉತ್ತರ), ಆರ್.ಆರ್. ದೊಡ್ಡಿಹಳ್ಳಿ (ದಕ್ಷಿಣ), ಡಿ.ಎಂ. ರಾಮಠೇಕರ್ (ರೀಚ್-2) ಅವರು ಪಾಲ್ಗೊಂಡಿದ್ದು, ಇದೇ 25ರೊಳಗೆ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು ಎಂದು ಪ್ರಕಟಣೆ ತಿಳಿಸಿದೆ.

ಪಾಲಿಕೆ ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಚ್. ರಾಮಚಂದ್ರ, ವಾರ್ಡ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್, ಪಾಲಿಕೆ ಪ್ರಧಾನ ಎಂಜಿನಿಯರ್ ಬಿ.ಟಿ. ರಮೇಶ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT