ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಡುಗಿಸಲು ಮತ್ತೊಬ್ಬ ಕಲಿ

ಕೆಟಿಎಂ ಡ್ಯೂಕ್ 390
Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತದಲ್ಲಿ ಆಫ್ ರೋಡ್ ಬೈಕಿಂಗ್ ಪರಿಚಯಿಸಿದ ದೇಸೀಯ ಬೈಕ್ ಕಂಪೆನಿಗಳು ಇಲ್ಲವೇ ಇಲ್ಲ ಎನ್ನಬಹುದು.

ಯಮಹಾ ತನ್ನ ಆಫ್ ರೋಡ್ ಬೈಕ್‌ಗಳನ್ನು ತಯಾರಿಸುತ್ತದಾದರೂ, ಅದನ್ನು ಅಧಿಕೃತವಾಗಿ ಮಾರುಕಟ್ಟೆಗೆ ಎಂದೂ ಬಿಡುಗಡೆ ಮಾಡಿಲ್ಲ. ಆಫ್ ರೋಡ್ ರೇಸಿಂಗ್ ಆಸಕ್ತರು ಅವನ್ನು ಆಮದು ಮಾಡಿಕೊಂಡು ಚಲಾಯಿಸುತ್ತಿದ್ದರಷ್ಟೇ. ಟಿವಿಎಸ್ ಕಂಪೆನಿ ಸಹ ಕೆಲವು ಆಫ್ ರೋಡ್ ರೇಸಿಂಗ್ ಬೈಕ್‌ಗಳನ್ನು ತಯಾರಿಸುತ್ತದೆ.

ಆದರೆ ಅದರ ಗುಣಮಟ್ಟ ಹೇಳಿಕೊಳ್ಳುವಷ್ಟೇನೂ ಇಲ್ಲ. ಹೀರೊ ಇಂಪಲ್ಸ್ ಸೆಮಿ ಆಫ್ ರೋಡ್ ಬೈಕ್ ಹೊರಬಿಟ್ಟಿತಾದರೂ ಅದು ಯಶಸ್ಸು ಕಂಡುಕೊಳ್ಳುವಲ್ಲಿ ಸೋತಿತು. ಭಾರತಕ್ಕೆ ಕೊನೆಗೂ ಅಸಲಿ ಆಫ್ ರೋಡ್ ಬೈಕ್ ಪರಿಚಯಿಸಿದ್ದು ಆಸ್ಟ್ರಿಯಾ ಮೂಲದ ಕೆಟಿಎಂ ಕಂಪೆನಿ.

ಡ್ಯೂಕ್ ಭಾರತೀಯರು ಕಂಡು ಕೇಳರಿಯದ ಗುಣಮಟ್ಟ ಹಾಗೂ ಗುಣಲಕ್ಷಣಗಳನ್ನು ಹೊಂದಿದ್ದ ಕಾರಣ ಯುವಕರ ಮನಸ್ಸನ್ನು ಗೆದ್ದುಬಿಟ್ಟಿತಷ್ಟೇ. ಕೆಟಿಎಂ ಡ್ಯೂಕ್ ಸಹ ಪರಿಪೂರ್ಣ ಪ್ರಮಾಣದ ಆಫ್ ರೋಡ್ ಬೈಕ್ ಅಲ್ಲ. ಆಫ್ ರೋಡ್ ಬೈಕ್‌ಗಳನ್ನು ಸಾಮಾನ್ಯವಾಗಿ 5 ವರ್ಗಗಳಾಗಿ ವಿಂಗಡಿಸಲಾಗುತ್ತದೆ. 75 ಸಿಸಿ, 100 ಸಿಸಿ, 150 ಸಿಸಿ, 250 ಸಿಸಿ, 500ಸಿಸಿ ಮೇಲ್ಪಟ್ಟ ಬೈಕ್‌ಗಳು. ಈ ಲೆಕ್ಕದಲ್ಲಿ ಕೆಟಿಎಂ 200 ಡ್ಯೂಕ್ ಮಧ್ಯಮ ವರ್ಗದ ಆಫ್ ರೋಡ್ ಬೈಕ್. ಅತ್ಯುತ್ತಮ ಎಂಜಿನ್ ಶಕ್ತಿ (25 ಪಿಎಸ್) ಹಾಗೂ ಟಾರ್ಕ್ (19ಎನ್‌ಎಂ) ಅನ್ನು ಒಳಗೊಂಡಿದ್ದ ಡ್ಯೂಕ್ 200 ಸಿಂಗಲ್ ಸಿಲಿಂಡರ್ ಒಳಗೊಂಡಿದ್ದೂ ವಿಶೇಷವಾಗಿತ್ತು. ಹಾಗಾಗಿ ಅತ್ಯುತ್ತಮ ಪಿಕ್‌ಅಪ್ ದೊರೆತು ಗರಿಷ್ಠ ವೇಗವನ್ನೂ ನೀಡುತ್ತಿತ್ತು.

19ಎನ್‌ಎಂ ಟಾರ್ಕ್ ಇದ್ದ ಕಾರಣ, ಯಾವುದೇ ಕಾರಣಕ್ಕೂ ಎಂಜಿನ್ ಜರ್ಕ್ ಹೊಡೆಯುವ ಪ್ರಮೇಯವೇ ಇರುತ್ತಿರಲಿಲ್ಲ. ಆಸ್ಟ್ರಿಯನ್ ತಂತ್ರಜ್ಞಾನದ ನಯವಾದ ಎಂಜಿನ್, ಚಾಲಕನನ್ನು ಮೈಮರೆಸುವಷ್ಟು ಉತ್ತಮವಾಗಿದ್ದದ್ದು ಯಶಸ್ಸಿಗೆ ಕಾರಣವಾಗಿತ್ತು. ಈಗ ಇದೇ ತಂತ್ರಜ್ಞಾನದ ಭರವಸೆಯೊಂದಿಗೆ ಕೆಟಿಎಂ ತನ್ನ ಡ್ಯೂಕ್ 390 ಬೈಕ್ ಅನ್ನು ಪರಿಚಯಿಸುತ್ತಿದೆ. 390 ಸಿಸಿಯ ಬೃಹತ್ ಎಂಜಿನ್ ಇರುವುದು ವಿಶೇಷವೇ ಸರಿ.

ಅತ್ಯದ್ಭುತ ಎಂಜಿನ್
ತಂತ್ರಜ್ಞಾನದಲ್ಲಿ ಡ್ಯೂಕ್ 390, ಡ್ಯೂಕ್ 200 ಅನ್ನೇ ಮೀರಿಸುವಂತಿದೆ. ಡ್ಯೂಕ್ 200 ಅನ್ನು ನಕಲು ಮಾಡಿದ್ದ ಬಜಾಜ್ ಪಲ್ಸರ್ ಎನ್‌ಎಸ್, ಇದನ್ನು ನೋಡಿದ ಮೇಲಂತೂ ಮತಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬಹುದೋ ಏನೋ. ಡ್ಯೂಕ್ 390 ಎಂಜಿನ್ ಶಕ್ತಿ ಸಾಮರ್ಥ್ಯದಲ್ಲಿ ಅದ್ವಿತೀಯವಾಗಿದೆ. 375 ಸಿಸಿ, 4 ಸ್ಟ್ರೋಕ್ ಎಂಜಿನ್, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಇರುವುದು ವಿಶೇಷ. ಇದಕ್ಕೂ ವಿಶೇಷವೆಂದರೆ ರಾಯಲ್ ಎನ್‌ಫೀಲ್ಡ್‌ನ 500 ಸಿಸಿ ಎಂಜಿನ್‌ಗಳಲ್ಲಿ ಇದ್ದ ಬೃಹತ್ ಬಿಎಚ್‌ಪಿ ಮತ್ತು ಟಾರ್ಕ್ ಅನ್ನೂ ಡ್ಯೂಕ್ 390 ಮೀರಿಸಿದೆ.

44 ಬಿಎಚ್‌ಪಿ ಶಕ್ತಿ (9500 ಆರ್‌ಪಿಎಂಗಳಲ್ಲಿ) ಹಾಗೂ 3.57 ಕೆಜಿಎಂ ಟಾರ್ಕ್ (7250 ಆರ್‌ಪಿಎಂಗಳಲ್ಲಿ) ಇದ್ದು ಹೆಚ್ಚು ಶಕ್ತಿಯನ್ನು ಎಂಜಿನ್‌ಗೆ ನೀಡಿದೆ. ಇಡೀ ಬೈಕ್ ಕೇವಲ 138 ಕಿಲೋಗ್ರಾಂ ಇದ್ದು, ಹದವಾದ ಶಕ್ತಿ ಹಾಗೂ ತೂಕದ ಹೊಂದಾಣಿಕೆಯಿಂದಾಗಿ ಅತ್ಯುತ್ತಮ ಪಿಕ್‌ಅಪ್ ಸಿಗುತ್ತದೆ. ಆಫ್ ರೋಡ್ ಬೈಕ್ ಆಗಿರುವ ಕಾರಣ, ಕಲ್ಲುಮಣ್ಣುಗಳ ನಡುವೆ ಗಿಯರ್ ಬದಲಾಯಿಸದೇ ಕೊನೆಯ ಗಿಯರ್‌ಗಳಲ್ಲೇ ಚಾಲನೆ ಮಾಡಬಹುದಾದ ಅನುಕೂಲ ಸಿಕ್ಕಿರುವುದು ವಿಶೇಷ.

ಎಲ್ಲವೂ ಚಕ್ರದ ಮಹಿಮೆ
ಆಫ್ ರೋಡ್ ಟಾಪ್ ಎಂಡ್ ಬೈಕ್‌ಗಳಲ್ಲಿ ಮೊದಲ ನೋಟಕ್ಕೆ ಗಮನ ಸೆಳೆಯುವುದು ಚಕ್ರಗಳು. ಅದರಲ್ಲೂ ಟಯರ್‌ಗಳು. ವ್ಯಾಸದಲ್ಲಿ ಸಾಮಾನ್ಯವಾಗಿ 18 ಇಂಚ್‌ನ ರಿಮ್ ಇರುವುದಾದರೂ, ಟಯರ್‌ನ ದಪ್ಪ ಸಾಮಾನ್ಯವಾಗಿ 4 ಇಂಚು ಮೀರಿರುತ್ತದೆ. ಆದರೆ  ಡ್ಯೂಕ್ ಸಿರೀಸ್‌ನಲ್ಲಿ ಮಾತ್ರ ರಿಮ್‌ನ ವ್ಯಾಸ ಕೇವಲ 17 ಇಂಚು ಇದೆ. ಮುಂಭಾಗ ಹಾಗೂ ಹಿಂಭಾಗದ ಎರಡೂ ಟಯರ್‌ಗಳು ಸಾಕಷ್ಟು ಅಗಲವಾಗಿವೆ. ಮುಂಭಾಗದಲ್ಲಿ 110/70 ಎಂಎಂ ದಪ್ಪ ಇದ್ದರೆ, ಹಿಂಭಾಗದಲ್ಲಿ 150/60 ಎಂಎಂ ದಪ್ಪದ ಟಯರ್‌ಗಳನ್ನು ಹೊಂದಿದೆ. ಇವೆರಡೂ ಹೆಚ್ಚು ಮಸಲ್ ಇರುವ ಟಯರ್‌ಗಳು. ಇದರಿಂದಾಗಿ ಬೈಕ್‌ಗೆ ಇನ್ನಿಲ್ಲದ ಹಿಡಿತ, ನಯವಾದ ಸವಾರಿ ಭರವಸೆಯನ್ನು ನೀಡುತ್ತದೆ.

ಡ್ಯೂಕ್ 390ಗೆ 6 ಗಿಯರ್‌ಗಳ ಹದವಾದ ಚಾಲನೆ ಇದೆ. 390ಸಿಸಿಯ ಆಫ್ ರೋಡ್ ಬೈಕ್‌ಗೆ 5 ಗಿಯರ್‌ಗಳು ಸಾಕಾಗುವುದಿಲ್ಲ. ಈ ಹಿಂದೆ ಸುಜುಕಿ ತನ್ನ 150 ಸಿಸಿ ಎಂಜಿನ್‌ನ ಬೈಕ್‌ಗೇ 6 ಗಿಯರ್‌ಗಳನ್ನು ನೀಡಿ ತೀವ್ರ ಸೋಲು ಕಂಡಿತ್ತು. ಕಡಿಮೆ ಶಕ್ತಿಯ ಎಂಜಿನ್ ಉಳ್ಳ ಬೈಕ್‌ಗೆ 6 ಗಿಯರ್ ಕೊಟ್ಟರೆ 6ನೇ ಗಿಯರ್‌ನಲ್ಲಿ ಬೈಕ್ ಇರಬೇಕಾದರೆ ವೇಗ ಕಡಿಮೆ ಆದರೆ, ಚಿಕ್ಕ ಗಿಯರ್‌ಗೆ ಗಿಯರ್ ಬದಲಾಯಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದಾಗಿ ಎಂಜಿನ್‌ನ ಮೇಲೆ ಒತ್ತಡ ಹೆಚ್ಚಾಗಿ ಬೇಗ ಹಾಳಾಗುತ್ತದೆ. ಆದರೆ ಡ್ಯೂಕ್ 390ಯಲ್ಲಿ 44 ಬಿಎಚ್‌ಪಿ ಶಕ್ತಿ ಹಾಗೂ 3.57 ಕೆಜಿಎಂ ಟಾರ್ಕ್ ಇರುವುದರಿಂದ 6ನೇ ಗಿಯರ್‌ನಲ್ಲೂ ಅತಿ ಕಡಿಮೆ ವೇಗದಲ್ಲಿ ಬೈಕ್ ಆರಾಮಾಗಿ ಚಲಿಸಬಲ್ಲದು. 375ಸಿಸಿ ಎಂಜಿನ್ ಇದಕ್ಕೆ ಬೇಕಾದ ಅಗತ್ಯ ಶಕ್ತಿಯನ್ನೂ ಪೂರೈಸುವುದರಿಂದ ಇದು ಮತ್ತಷ್ಟು ಸಲೀಸಾಗುವುದು. ಡ್ಯೂಕ್ 390ಯಲ್ಲಿ ಪರಿಪೂರ್ಣ ಅಲ್ಯೂಮಿನಿಯಂ ಎಂಜಿನ್ ಬಳಸಲಾಗಿದೆ. ಹಾಗಾಗಿ ಎಷ್ಟೇ ವೇಗದ ಅಥವಾ ದೂರದ ಚಾಲನೆ ಮಾಡಿದರೂ ಎಂಜಿನ್ ಹೆಚ್ಚು ಬಿಸಿಯಾಗದು. ಇದಕ್ಕೆ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆಯೂ ಇದೆ.

ಸುರಕ್ಷೆಗೂ ಸೈ
ಸಂಪೂರ್ಣ ಅಲಾಯ್ ಚಕ್ರಗಳು ತೂಕವನ್ನು ಕಡಿಮೆಗೊಳಿಸುವುದರ ಜೊತೆಗೆ ಸದೃಢತೆ ನೀಡಿದೆ. ಎರಡೂ ಚಕ್ರಗಳಲ್ಲಿ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್‌ಗಳಿದ್ದು ಉತ್ತಮ ಬ್ರೇಕಿಂಗ್ ನೀಡುತ್ತವೆ. ಆದರೆ ಟಾಪ್ ಎಂಡ್ ಬೈಕ್ ಆಗಿರುವುದರಿಂದ ಬೈಕ್‌ನಲ್ಲಿ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ನೀಡಬೇಕಿತ್ತು. ಅತ್ಯುತ್ತಮ ಪೌಡರ್ ಕೋಟೆಡ್ ಉಕ್ಕಿನ ಫ್ರೇಂ ಇರುವುದು ಅತ್ಯುತ್ತಮ ರಸ್ತೆ ಹಿಡಿತ, ಪ್ರಯಾಸವಿಲ್ಲದ ಸವಾರಿಗೆ ಹೇಳಿ ಮಾಡಿಸಿದಂತಿದೆ.

ಡ್ಯೂಕ್ 200 ಬೈಕ್ 1ಲೀಟರ್ ಪೆಟ್ರೋಲ್‌ಗೆ 33 ಕಿಲೋಮೀಟರ್ ಮೈಲೇಜ್ ನೀಡುತ್ತಿದೆ. ಡ್ಯೂಕ್ 390 ಸಿಸಿ ಬೈಕ್ 1 ಲೀಟರ್ ಪೆಟ್ರೋಲ್‌ಗೆ ಗರಿಷ್ಠ 25 ಕಿಲೋಮೀಟರ್ ನೀಡಬಹುದು. ದೂರದ ಪ್ರಯಾಣಕ್ಕೆ ಸಾಕಾಗುವಷ್ಟು ದೊಡ್ಡ ಪೆಟ್ರೋಲ್ ಟ್ಯಾಂಕ್ ನೀಡಲಾಗಿದೆ.

ಅತ್ಯುತ್ತಮ ಸಸ್ಪೆನ್ಷನ್ ಡ್ಯೂಕ್‌ಗೆ ಇದೆ. ಮುಂಭಾಗದಲ್ಲಿ ತಲೆಕೆಳಗಾದ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಹಾಗೂ ಹಿಂಭಾಗದಲ್ಲಿ ಬಲಶಾಲಿ ಮಾನೊ ಸಸ್ಪೆನ್ಷನ್ ಇದೆ. ಕುಲುಕಾಟ ಅತಿ ಕಡಿಮೆ ಇದ್ದು, ಐಷಾರಾಮಿ ಅನುಭವ ಸಿಕ್ಕೇ ಸಿಗುತ್ತದೆ. ಡ್ಯೂಕ್ 390 ಜೂನ್‌ನಲ್ಲಿ ಭಾರತದ ರಸ್ತೆಗಿಳಿಯುವ ನಿರೀಕ್ಷೆ ಇದೆ. ಡ್ಯೂಕ್‌ನ ಬೆಲೆ ಬರೋಬ್ಬರಿ 2.25 ಲಕ್ಷ ರೂಪಾಯಿಗಳು. ಕೊಟ್ಟ ಹಣಕ್ಕೆ ತೃಪ್ತಿ ಸಿಗುತ್ತದೆ. ಬೇಸರದ ಸಂಗತಿಯೆಂದರೆ ಡ್ಯೂಕ್‌ನ 390ರ ಪರಿಚಯದಿಂದ ಡ್ಯೂಕ್ 200 ಬೈಕ್‌ನ ಮಾರಾಟ ನಿಲ್ಲುವ ಸಾಧ್ಯತೆ ಇದೆ. ಆದರೆ ಡ್ಯೂಕ್ 200ಗೆ ಭಾರತದಲ್ಲಿ ಆಗಲೇ ಅಭಿಮಾನಿಗಳಿದ್ದಾರೆ. ಚೆನ್ನಾಗಿ ಮಾರಾಟ ಆಗುತ್ತಿರುವ ಬೈಕ್ ಅನ್ನು ನಿಲ್ಲಿಸಲು ಯಾರೂ ಇಷ್ಟಪಡಲಾರರು. ಡ್ಯೂಕ್ 390ನ ಯಶಸ್ಸಿನ ಮೇಲೆ ಎಲ್ಲವೂ ನಿಂತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT