ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮೇಲೆ ಕೆಟ್ಟ ಹೊಗೆಯ ಕಾರ್ಮೋಡ

Last Updated 1 ಜನವರಿ 2014, 10:58 IST
ಅಕ್ಷರ ಗಾತ್ರ

ಕೆಜಿಎಫ್‌: ಕೆಎಸ್‌ಆರ್‌ಟಿಸಿ ಬಸ್‌ಗಳು ಸೇರಿದಂತೆ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಬಹು­ತೇಕ ವಾಹನಗಳು ಕೆಟ್ಟ ಹೊಗೆ ಉಗುಳಿ ನಾಗರಿಕರ ಆರೋಗ್ಯಕ್ಕೆ ಸವಾಲು ಎಸೆ­ಯುವುದು ನಗರ ವ್ಯಾಪ್ತಿ­ಯಲ್ಲಿ ಸಾಮಾನ್ಯ ದೃಶ್ಯವಾಗಿದೆ.ಮಾಲಿನ್ಯ ನಿಯಂತ್ರಣ ಪರೀಕ್ಷೆ­ಯನ್ನು ಸಾರಿಗೆ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಸಂಪೂರ್ಣ ಕೈಬಿಟ್ಟಿದ್ದಾರೆ. ಕಾರಣ ಕೇಳಿದರೆ ‘ಸಲ­ಕ­ರಣೆ ಕೊರತೆ’ಯ ಸಬೂಬು ಕೇಳಿ ಬರುತ್ತದೆ.

ವಾಹನಗಳು ಉಗುಳುವ ಕೆಟ್ಟ ಹೊಗೆ­ಯನ್ನು ನಿಸ್ಸಾಹಯಕರಾಗಿ ಸೇವಿಸಿ ಆರೋಗ್ಯ ಕೆಡಿಸಿಕೊಳ್ಳುವ ಸ್ಥಿತಿ ಸಾರ್ವಜನಿಕರದ್ದಾಗಿದೆ. ವಾಯು ಮಾಲಿನ್ಯ ವಿಚಾರದಲ್ಲಿ ಕೆಎಸ್‌ಆರ್‌­ಟಿಸಿ ಬಸ್‌ಗಳು ಖಾಸಗಿ ವಾಹನ­ಗಳಿಗಿಂತ ಉತ್ತಮ ಸ್ಥಿತಿಯಲ್ಲಿಲ್ಲ. ನಿಯಮದಂತೆ ಎಲ್ಲ ಸರ್ಕಾರಿ ಬಸ್‌­ಗ­ಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ‘ವಾಯು ಮಾಲಿನ್ಯ ಪರೀಕ್ಷೆ’ ಅಗತ್ಯ.

ಈ ಅವಧಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾ­ದರೆ ಮರು ಪರೀಕ್ಷೆ ಅನಿ­ವಾರ್ಯ. ಆದರೆ ಇತ್ತೀಚಿನ ದಿನ­ಗಳಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗ್ರಾಮೀಣ ಸೇವೆಯ ಬಸ್‌ಗಳು ಮಾಲಿನ್ಯ ಪರೀಕ್ಷೆ­ಯನ್ನು ಮರೆತೇ ಬಿಟ್ಟಿವೆ. ಕಪ್ಪು ಬಣ್ಣದ ದಟ್ಟ ಹೊಗೆ­ಯನ್ನು ಉಗುಳುತ್ತಾ ಸಾಗುವುದು ಸಾಮಾನ್ಯ ದೃಶ್ಯವಾಗಿದೆ.

ಆಟೊ ಅವಾಂತರ: ನಗರದಲ್ಲಿ ಅತಿ ಹೆಚ್ಚು ಪರಿಸರ ಮಾಲಿನ್ಯ ಉಂಟು ಮಾಡು­ತ್ತಿರುವುದು ಆಟೊಗಳು. ಪೆಟ್ರೋಲ್‌– ಸೀಮೆಎಣ್ಣೆ ಮಿಶ್ರಣದ ‘ಮಸಾಲೆ’ಯನ್ನು ಆಟೊಗಳ ಮಾಲೀಕರು ಉಪಯೋಗಿಸುತ್ತಿದ್ದಾರೆ. ಇದರಿಂದಾಗಿ ಒಂದು ಲೀಟರ್ ಪಟ್ರೋಲ್ ಧಾರಣೆಯಲ್ಲಿ ₨ 20 ಉಳಿಯುತ್ತದೆ ಎನ್ನುತ್ತಾರೆ.

ಮಸಾಲೆ ಇಂಧನವನ್ನು ಉಪಯೋಗಿಸುವ ಆಟೊ­ಗಳು ಉಗುಳುವ ಬಿಳಿ ಬಣ್ಣದ ಹೊಗೆ ಆಟೊ ಹೋದ ಹಾದಿಯ­ನ್ನೆಲ್ಲಾ ಆವರಿಸಿಕೊಳ್ಳುತ್ತದೆ. ಘಾಟು ವಾಸನೆಗೆ ಸಾರ್ವಜನಿಕರು ಮೂಗು ಮುಚ್ಚಿಕೊಳ್ಳಲೇಬೇಕು. ಅಸ್ತಮ ಇದ್ದ­ವರಿಗೆ ಕೆಮ್ಮು ಸಹಜವಾಗಿ ಜಾಸ್ತಿ­ಯಾಗು­ತ್ತದೆ. ಈ ಹೊಗೆ ಬಳಿ ಇದ್ದವರಿಗೆ ಕಣ್ಣುರಿ ಕೂಡ ಬರುತ್ತದೆ.

ಅದೇ ರೀತಿ ಗ್ರಾಮೀಣ ಪ್ರದೇಶ­ದಲ್ಲಿ ಸಂಚರಿಸುವ ಇಟ್ಟಿಗೆ, ಮರಳು ಮತ್ತು ಕಲ್ಲು ಸಾಗಿಸುವ ಲಾರಿಗಳು ಸಹ ಸಾಕಷ್ಟು  ಪ್ರಮಾಣದಲ್ಲಿ ಹೊಗೆ­ಯನ್ನು ಬಿಟ್ಟು ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿವೆ.

ಯಾರಿಗೆ ಹೇಳೋಣ ನಂ ಪ್ರಾಬ್ಲಂ
ನಮ್ಮಲ್ಲಿ ಮಾಲಿನ್ಯವನ್ನು ಅಳೆಯುವ ಸಾಧನ ಇಲ್ಲ. ಸುತ್ತಮುತ್ತ ಖಾಸಗಿ ಎಮಿಷನ್‌ ಟೆಸ್ಟ್‌ ಕೇಂದ್ರಗಳೂ ಇಲ್ಲ. ಇಂಥ ವಾಹನಗಳ ಮೇಲೆ ಯಾವ ಆಧಾರದ ಮೇಲೆ ಕ್ರಮ ಕೈಗೊಳ್ಳುವುದು ಎಂಬುದು ಆರ್‌ಟಿಒ ಮತ್ತು ಪೊಲೀಸ್‌ ಅಧಿಕಾರಿಗಳ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT