ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆ ಗುಮ್ಮ: ಕಟ್ಟಡ ಮಾಲೀಕರಲ್ಲಿ ತಳಮಳ

Last Updated 5 ಜೂನ್ 2012, 8:35 IST
ಅಕ್ಷರ ಗಾತ್ರ

ಕವಿತಾಳ: ಕಳೆದ ಎರಡು ವರ್ಷಗಳ ಹಿಂದೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ ಜಿಲ್ಲಾಡಳಿತ ರಸ್ತೆ ವಿಸ್ತರಣೆ, ಪಾದಾಚಾರಿ ರಸ್ತೆ ಮತ್ತು ಚರಂಡಿ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ತೆರವು ಕಾರ್ಯಚರಣೆ ನಡೆಯುವ ಮುನ್ನ ಪಟ್ಟಣಕ್ಕೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಅನ್ಬುಕುಮಾರ ಕಾರ್ಯಾಚಣೆ ಮುಗಿದ 2-3ತಿಂಗಳಲ್ಲಿ ಚರಂಡಿ ನಿರ್ಮಾಣ ಸೇರಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ನೀಡಿದ್ದ ಭರವಸೆ ಇಂದಿಗೂ ಈಡೇರಿಲ್ಲ. ರಸ್ತೆ ಮಧ್ಯದಿಂದ 75ಅಡಿ ಎನ್ನುವ ನಿಯಮ ಸಡಿಲಿಸಿ 50ಅಡಿ ತೆರವುಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿತ್ತು.

ನಂತರ ಪಟ್ಟಣದ ಪ್ರಮುಖರೊಂದಿಗೆ ಚರ್ಚಿಸಿದ ಅಂದಿನ ಜಿಲ್ಲಾಧಿಕಾರಿಗಳು 45ಅಡಿಗೆ ತೆರವುಗೊಳಿಸಲು ಸೂಚಿಸಿದ್ದರು. ಇಷ್ಟಾದಾರೂ ಲಿಂಗಸುಗೂರ- ರಾಯಚೂರು ಮುಖ್ಯರಸ್ತೆಯಲ್ಲಿದ್ದ ಬಹುತೇಕ ಕಟ್ಟಡಗಳು ಭಾಗಶಃ ನೆಲಕ್ಕೆ ಉರುಳಿದವು.

ಇಲಾಖೆ ವತಿಯಂದ ಕಟ್ಟಡ ತೆರವುಗೊಳಿಸಿದರೆ ಸರ್ಕಾರಕ್ಕೆ ಹಣ ಪಾವತಿ ಮಾಡಬೇಕಾಗುತ್ತದೆ ಎನ್ನುವ ಅಧಿಕಾರಿಗಳ ಹುಸಿ ಬೆದರಿಕೆಗೆ ಮಣಿದ ಕಟ್ಟಡ ಮಾಲೀಕರು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಿದರು. ಕೆಲವು ಕಟ್ಟಡಗಳ ಮುಂಭಾಗ ತೆರವುಗೊಂಡರೆ ಕೆಲವು ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಂಡವು.

ಕೆಲವು ಕಟ್ಟಡಗಳ ಮಾಲೀಕರು ಉಪಯೋಗಕ್ಕೆ ಬರುವ ಸಾಮಗ್ರಿಗಳನ್ನು ಕಿತ್ತುಕೊಂಡು ಕಟ್ಟಡವನ್ನು ಅರೆಬರೆ ತೆರವುಗೊಳಿಸಿದರು. ಕೆಲವರು ಲಭ್ಯವಿದ್ದೆಡೆ ತಮ್ಮ ವ್ಯಾಪಾರ ವಹಿವಾಟು ಆರಂಭಿಸಿದರು ಇನ್ನೂ ಕೆಲವರು ಎಲ್ಲವನ್ನೂ ಕೈಬಿಟ್ಟು ಮನೆ ಸೇರಿದರು. ವರ್ಷಪೂರ್ತಿ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಕಟ್ಟಡ ದುರಸ್ತಿ ಮಾಡಿಕೊಂಡು ವ್ಯಾಪಾರ ಆರಂಭಿಸಿದ್ದರೆ ಇದೀಗ ಮತ್ತೊಮ್ಮೆ ರಸ್ತೆ ವಿಸ್ತರಣೆ ನಡೆಯುತ್ತದೆ ಅದಕ್ಕಾಗಿ 75ಅಡಿ ಅಳತೆಯಲ್ಲಿ ತೆರವು ನಡೆಯುತ್ತದೆ ಎನ್ನುವ ವದಂತಿಗಳು ಹಬ್ಬಿದ್ದು ಕಟ್ಟಡ ಮಾಲೀಕರಲ್ಲಿ ನಡುಕ ಹುಟ್ಟಿಸಿದೆ.

ಬ್ಯಾಂಕ್‌ನಲ್ಲಿ ಸಾಲ ಪಡೆದು ಅಂದಾಜು ರೂ. 14 ಲಕ್ಷ ವ್ಯಯಿಸಿ ಕಟ್ಡಡ ನಿರ್ಮಿಸಲಾಗಿತ್ತು ಇದೀಗ ಕಟ್ಟಡ ಸಂಪೂರ್ಣ ತೆರವುಗೊಳಿಸಲಾಗಿದೆ. ಕಟ್ಟಡ ಪರವಾನಗಿ ನೀಡುವ ಸಮಯದಲ್ಲಿ ಪಂಚಾಯಿತಿ ಆಡಳಿತ `ರಾಜ್ಯ ಹೆದ್ದಾರಿ ನಿಯಮದ ಅನುಸಾರ ಕಟ್ಟಡ ನಿರ್ಮಿಸಿಕೊಳ್ಳಬೇಕು~ ಎನ್ನುವ ಷರತ್ತಿನೊಂದಿಗೆ ನೀಡಿತ್ತು ಆದರೆ ಹೆದ್ದಾರಿ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರಲಿಲ್ಲ ಹೀಗಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಡಾ.ಶ್ರೀಧರ ಇಲ್ಲೂರು ಆಗ್ರಹಿಸಿದ್ದಾರೆ.

ರಸ್ತೆ ವಿಸ್ತರಣೆ ಕುರಿತು ಖಚಿತ ಮಾಹಿತಿ ನೀಡಬೇಕು ಮತ್ತು ತೆರವು ಕಾರ್ಯಾಚರಣೆ ಪೂರ್ಣಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT