ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಗಾಗಿ ಪ್ರತಿಭಟನೆ

Last Updated 23 ಫೆಬ್ರುವರಿ 2011, 7:10 IST
ಅಕ್ಷರ ಗಾತ್ರ

ಗುಡಿಬಂಡೆ: ಪಟ್ಟಣದ ಮುಖ್ಯ ರಸ್ತೆಯನ್ನು ಕೂಡಲೇ ವಿಸ್ತರಣೆ ಮಾಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಅನೇಕ ಸಂಘ-ಸಂಸ್ಥೆಗಳ ನೂರಾರು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಎಸ್‌ಎಫ್‌ಐ, ವಿಶ್ವ ಮುಸ್ಲಿಂ ಪರಿಷತ್, ಆಟೋ ಚಾಲಕರ ಹಾಗೂ ಮಾಲೀಕರ ಸಂಘ, ಟೆಂಪೊ ಚಾಲಕರ ಸಂಘ, ಕಾರು ಚಾಲಕರ ಸಂಘ, ಮರ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘ, ಸಹರಾ ಗ್ರಾಮೀಣಾಭಿವೃದ್ಧಿ ಸಂಘ ಪ್ರತಿಭಟನೆಗೆ ಕೈ  ಜೋಡಿಸಿದ್ದವು.

ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ ಎಂದು ಕರೆಸಿಕೊಂಡಿದ್ದರೂ, ಪಟ್ಟಣದಲ್ಲಿ ಕೆಲವೆಡೆ ಈ ರಸ್ತೆ ಕೇವಲ 18 ಅಡಿ ಇದೆ. ಎರಡು ವಾಹನಗಳು ಏಕ ಕಾಲದಲ್ಲಿ ಚಲಿಸುವುದು ಅಸಾಧ್ಯವಾಗಿದೆ. ಜನ ಜಾನುವಾರು ವಾಹನಗಳು ಸೇರಿದಂತೆ ಎಲ್ಲರೂ ಈ ಕಿರಿದಾದ ರಸ್ತೆಯಲ್ಲಿಯೇ ಓಡಾಡಬೇಕು. ರಸ್ತೆ ಅಪಘಾತದಲ್ಲಿ ಹಲವು ಜನರು ಪ್ರಾಣ ತೆತ್ತಿದ್ದಾರೆ. ಜನಸಾಮಾನ್ಯರ ನೋವಿಗೆ ಬೆಲೆ ಕೊಟ್ಟು ಕೂಡಲೇ ರಸ್ತೆ ವಿಸ್ತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್‌ಐ ಮುಖಂಡ ರಾಮನಾಥರೆಡ್ಡಿ ಲೋಕೋಪಯೋಗಿ ಇಲಾಖೆಗೆ ಸೇರಿದ ಪಟ್ಟಣದ ಮುಖ್ಯರಸ್ತೆಯನ್ನು ಅಭಿವೃದ್ಧಿಗೊಳಿಸುತ್ತಿರುವ ಇಲ್ಲಿನ ಪಟ್ಟಣ ಪಂಚಾಯಿತಿ ಆಡಳಿತ ಮೊದಲು ತನ್ನ ವ್ಯಾಪ್ತಿಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಲು ಮುಂದಾಗಬೇಕು ಎಂದರು.

ಲೋಕೋಪಯೋಗಿ ಇಲಾಖೆಯ ಬೈಪಾಸ್ ಯೋಜನೆಯಿಂದ ಅತಿಸಣ್ಣ ಹಾಗೂ ಬಡ ರೈತರು ಭೂಮಿ ಕಳೆದುಕೊಳ್ಳಲಿದ್ದು, ಯೋಜನೆಯನ್ನು ಪುನರ್‌ರೂಪಿಸಬೇಕು. ಮುಖ್ಯರಸ್ತೆಯ ವಿಸ್ತರಣೆ ಬಿಟ್ಟು ಪರ್ಯಾಯ ಯೋಜನೆಗಳ ಅನುಷ್ಠಾನಕ್ಕೆ ಮುಂದಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.

ತಹಶೀಲ್ದಾರ್ ಹನುಮಂತರಾಯ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಬೀನ್‌ತಾಜ್ ಚಾಂದ್‌ಪಾಷಾ, ಮುಖ್ಯಾಧಿಕಾರಿ ಸುಧಾಕರ್ ಮನವಿ ಸ್ವೀಕರಿಸಿ ನಿಯಮಗಳಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯ ನೇತೃತ್ವವನ್ನು ಮುಖಂಡರಾದ ಎಚ್.ಪಿ.ರಾಮನಾಥ್, ಯಾಸೀನ್‌ಭಾಷಾ, ಈಶ್ವರಪ್ಪ, ಆದಿನಾರಾಯಣಸ್ವಾಮಿ, ಶಿವಪ್ಪ, ಅಬ್ದುಲ್ ವಹಾದ್, ಶಾಬುಲ್ ಹಸನ್, ಆದಿನಾರಾಯಣ, ರಹಮತುಲ್ಲಾ, ಭಷೀರ್, ಬಿಲ್ಲಾಮೂರ್ತಿ, ವಿಶ್ವನಾಥ್, ಭರತ್, ರಾಜಪ್ಪ, ಶಿವು, ಫೈಯಾಜ್, ಸನಾವುಲ್ಲಾ, ಹಿದಾಯಿತ್, ಅಪ್ಸರ್ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT