ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಗೆ ಜಿಲ್ಲಾಡಳಿತ ನಿರ್ಧಾರ

Last Updated 2 ಜೂನ್ 2011, 8:35 IST
ಅಕ್ಷರ ಗಾತ್ರ

ಕೊಪ್ಪಳ: ನಗರದ ಮೂಲಕ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ವಿಸ್ತರಣೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಈ ರಸ್ತೆಯ ವಿಸ್ತರಣೆ ಕಾರ್ಯಕ್ಕೆ ಜೂ. 6ರಂದು ಚಾಲನೆ ನೀಡಲು ಜಿಲ್ಲಾಡಳಿತ ಮುಹೂರ್ತ ನಿಗದಿಪಡಿಸಿದ್ದು, ಅಂದು ಚರಂಡಿ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ಈ ಕುರಿತಂತೆ ಬುಧವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಅಂದು ಚರಂಡಿ ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದರು.

ಈಗಾಗಲೇ ನಗರಸಭೆ ಸಲ್ಲಿಸಿದ ಟೆಂಡರ್ ತಿರಸ್ಕೃತಗೊಂಡಿದೆ. ಪುನಃ ಟೆಂಡರ್ ಕರೆದು ಕಾಲ ಹರಣ ಮಾಡಲು ಇಷ್ಟವಿಲ್ಲ ಹೀಗಾಗಿ ಜಿಲ್ಲಾಡಳಿತವೇ ಮುಂದಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

ಚರಂಡಿ ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗುವುದು. ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಕೇಂದ್ರದ ಎಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಲ್ಲದೇ, ಮೂರು ತಿಂಗಳ ಒಳಗಾಗಿ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆಯೂ ತಿಳಿಸಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಉಪವಿಭಾಗದವರು 20 ಅಡಿ ಅಗಲವನ್ನು ಅಭಿವೃದ್ಧಿಪಡಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ. ಉಳಿದ ಭಾಗವನ್ನು ಜಿಲ್ಲಾಡಳಿತವೇ ನಿರ್ವಹಿಸಲಿದೆ. ರಸ್ತೆಯ ಇಕ್ಕೆಲಗಳಲ್ಲಿ ಬರುವ ಫುಟ್‌ಪಾಥ್‌ಗೆ ಗ್ರಿಲ್‌ಗಳನ್ನು ಅಳವಡಿಸದೇ ಇರಲು ನಿರ್ಧರಿಸಲಾಗಿದೆ. ಈ ಫುಟ್‌ಪಾಥ್‌ನ ಒಂದಿಷ್ಟು ಭಾಗವನ್ನು ದ್ವಿಚಕ್ರ ವಾಹನಗಳ ನಿಲುಗಡೆ ಬಳಸುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಚರಂಡಿಯನ್ನು ಎರಡು ಭಾಗಗಳನ್ನಾಗಿ ನಿರ್ಮಿಸಲಾಗುವುದು. ಒಂದು ಭಾಗದಲ್ಲಿ ತ್ಯಾಜ್ಯ ನೀರು ಹರಿಯಲಿದ್ದರೆ, ಮತ್ತೊಂದು ಭಾಗದಲ್ಲಿ ದೂರವಾಣಿ ಕೇಬಲ್, ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಲಾಗುವುದು. ಇದರಿಂದ ಚರಂಡಿ ಸ್ವಚ್ಛ ಮಾಡುವ ಸಂದರ್ಭದಲ್ಲಿ ಕೇಬಲ್‌ಗಳಿಗೆ, ಪೈಪ್‌ಗಳಿಗೆ ಯಾವುದೇ ರೀತಿಯ ಧಕ್ಕೆ ಆಗುವುದಿಲ್ಲ ಎಂದು ಹೇಳಿದರು.

ಒಳಚರಂಡಿ, ರಸ್ತೆಗೆ ಡಾಂಬರು ಹಾಕುವುದು ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡುವ ಕಾಮಗಾರಿಗಾಗಿ ನಗರಸಭೆ ಸಲ್ಲಿಸಿದ್ದ ಕ್ರಿಯಾ ಯೋಜನೆಯನ್ನು ನಗರಾಭಿವೃದ್ಧಿ ಇಲಾಖೆ ತಾಂತ್ರಿಕ ಕಾರಣವೊಡ್ಡಿ ತಿರಸ್ಕರಿಸಿತ್ತು. ಹೀಗಾಗಿ ಸಿ.ಎಂ.ಎಸ್.ಎಂ.ಟಿ.ಡಿ.ಪಿ.ಯಡಿ ಕೊಟಿಗಟ್ಟಲೆ ಹಣ ಇದ್ದರೂ, ಈ ರಸ್ತೆಯ ವಿಸ್ತರಣೆ ನೆನೆಗುದಿಗೆ ಬಿದ್ದಿತ್ತು. 

ರಸ್ತೆ ವಿಸ್ತರಣಾ ಕಾರ್ಯಕ್ಕಾಗಿ ಕಳೆದ ವರ್ಷದ ಆಗಸ್ಟ್‌ನಲ್ಲಿ ರಸ್ತೆ ಪಕ್ಕದ ಕಟ್ಟಡಗಳನ್ನು ತೆರವುಗೊಳಿಸಿದ ನಂತರ ಸದರಿ ಕಾರ್ಯ ಮಾಡುವುದರಲ್ಲಿ ವಿಫಲಗೊಂಡಿದ್ದರಿಂದ ಜನತೆ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT