ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಗೆ ತಡೆ: ಲಾಠಿ ಪ್ರಹಾರ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಕೋಲಾರ: ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ರಸ್ತೆ ವಿಸ್ತರಣೆ ಸಲುವಾಗಿ ತೆರವು ಮಾಡುವ ಸಂದರ್ಭದಲ್ಲಿ ಅಡ್ಡಿಪಡಿಸಿದ ಗುಂಪಿನ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ಚದುರಿಸಿದ ಘಟನೆ ನಗರದ ಎಂ.ಬಿ.ರಸ್ತೆ ಅಮ್ಮವಾರಿಪೇಟೆ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಲೋಕೋಪಯೋಗಿ ಇಲಾಖೆ ಗುರುತು ಮಾಡಿದ ಸ್ಥಳಕ್ಕೆ ಸೇರಿದ ಬರ್ಲಿನ್ ಮಸೀದಿ ಸಂಕೀರ್ಣದ ಮೊದಲ ಮಹಡಿ ಸಜ್ಜಾ ತೆರವುಗೊಳಿಸಲು ಮುಂದಾದ ಸಂದರ್ಭದಲ್ಲಿ ಕಟ್ಟಡದಲ್ಲಿದ್ದ ಯುವಕರ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತು. ರಸ್ತೆಯ ಅಕ್ಕಪಕ್ಕದಲ್ಲಿದ್ದ ಗುಂಪು ಕೂಡ ಕಲ್ಲು ತೂರಾಟಕ್ಕೆ ಮುಂದಾಗಿತ್ತು. ಸನ್ನಿವೇಶವನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಕಟ್ಟಡದೊಳಗೆ ನುಗ್ಗಿ ಅಲ್ಲಿದ್ದವರನ್ನೆಲ್ಲ ಈಚೆಗೆಳೆದು ಪೊಲೀಸರು ಲಾಠಿ ಬೀಸಿದರು. ದಿಢೀರನೆ ನಡೆದ ಘಟನೆಯಿಂದ ಸುತ್ತಲೂ ಇದ್ದ ಜನ ಓಡಿದರು. ಪೊಲೀಸರು ಸಂಕೀರ್ಣದ ಆಸುಪಾಸಿನ ಎಲ್ಲ ಗಲ್ಲಿಗಳಿಗೂ ನುಗ್ಗಿ ಜನರನ್ನು ಚದುರಿಸಿದರು.
 
ಟಿಪ್ಪು ರಸ್ತೆ, ಅಮ್ಮವಾರಿಪೇಟೆ ರಸ್ತೆ, ಎಂ.ಬಿ. ರಸ್ತೆಯಲ್ಲಿ ಬೆಳಿಗ್ಗೆಯಿಂದ ನೆರೆದಿದ್ದ ಎಲ್ಲರೂ ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ಜಾಗ ಖಾಲಿ ಮಾಡಿದ್ದರು. ಮುನ್ನೆಚ್ಚರಿಕೆ ಸಲುವಾಗಿ ಅಶ್ರುವಾಯು ವಾಹನವನ್ನು ಸ್ಥಳಕ್ಕೆ ಕರೆಸಲಾಯಿತು. ಲಾಠಿ ಪ್ರಹಾರದ ಪರಿಣಾಮವಾಗಿ ಹತ್ತಾರು ಮಂದಿ ಗಾಯಗೊಂಡರು. ಕಲ್ಲುತೂರಾಟದಿಂದ ಕೆಲವು ಪೊಲೀಸರು ಗಾಯಗೊಂಡರು.

ಅಳತೆ ಮೀರಿ ಕಟ್ಟಡಗಳನ್ನು ತೆರವು ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಂಕೀರ್ಣದ ಸಜ್ಜಾಗಳನ್ನು ಮಾತ್ರ ತೆರವುಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಟಿ.ವೆಂಕಟಾಚಲಯ್ಯ ತಿಳಿಸಿದ್ದರು. ಆದರೆ ಸಜ್ಜಾಗಳನ್ನು ತಾವೇ ತೆರವು ಮಾಡುವುದಾಗಿ ತಿಳಿಸಿ ಪ್ರಯತ್ನ ಶುರು ಮಾಡಿದ ಗುಂಪು ಯಂತ್ರದಿಂದ ತೆರವುಗೊಳಿಸುವ ಪ್ರಯತ್ನ ಶುರುವಾಗುತ್ತಿದ್ದಂತೆಯೇ ಕಲ್ಲು ತೂರಾಟ ನಡೆಸಿತು.

ಬೆಳಿಗ್ಗೆ 6.30ರ ವೇಳೆಗೆ ಹೊಸ ಬಸ್ ನಿಲ್ದಾಣ ಸಮೀಪದಿಂದ ಶುರುವಾದ ಒತ್ತುವರಿ ಕಟ್ಟಡ ತೆರವು ಕಾರ್ಯಾಚರಣೆ ಅಮ್ಮವಾರಿಪೇಟೆ ವೃತ್ತದ ಬಳಿ ಬಂದಾಗ ಮಧ್ಯಾಹ್ನ 12 ಗಂಟೆಯಾಗಿತ್ತು. ವೃತ್ತದಲ್ಲಿರುವ ನಲ್ಲಗಂಗಮ್ಮ ದೇವಾಲಯ ಮುಂಭಾಗದ ಕಟ್ಟಡವನ್ನೂ ತೆರವುಗೊಳಿಸಲು ಪೊಲೀಸರು ಮುಂದಾಗಿದ್ದರು.
 
ಆದರೆ ಅಲ್ಲಿ ಕಂಬಗಳನ್ನು ಅಳವಡಿಸಿ ಬೃಹತ್ ದೇವಿಯ ಮೂರ್ತಿಯನ್ನು ನಿರ್ಮಿಸಲಾಗಿತ್ತು. ಕಂಬವನ್ನು ತೆರವುಗೊಳಿಸಿದರೆ ಮೂರ್ತಿ ಕುಸಿದು ಮುಂಭಾಗದ ಕಟ್ಟಡಗಳಿಗೆ ಹಾನಿಯಾಗುವುದು. ಆದ್ದರಿಂದ ಗೋಡೆಯನ್ನು ಮಾತ್ರ ಕೆಡವಿ  ಕಂಬಗಳನ್ನು ಉಳಿಸುವಂತೆ ಮುಖಂಡರು ಮನವಿ ಮಾಡಿದ್ದರು. ನಂತರ ಕಾಮಗಾರಿಯು ದೇವಾಲಯದ ಪಕ್ಕದಲ್ಲಿರುವ ವಾಣಿಜ್ಯ ಸಂಕೀರ್ಣದ ಬಳಿ ಶುರುವಾಗುವ ಸಂದರ್ಭದಲ್ಲಿ ಪ್ರತಿಭಟನೆ ಎದುರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT