ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸರಿಪಡಿಸಿ

ಕುಂದು ಕೊರತೆ
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ರಸ್ತೆ ಸರಿಪಡಿಸಿ
ಪಣತ್ತೂರು ಎ.ಕೆ.ಕಾಲೊನಿಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಸ್ವಲ್ಪ ಮಳೆ ಬಂದರೂ ಕೆಸರುಗದ್ದೆಯಂತಾಗುತ್ತದೆ. ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು.
– ಲಕ್ಷ್ಮಣ್, ಪಣತ್ತೂರು

ಒಳಚರಂಡಿ ಸಂಪರ್ಕ ಶುಲ್ಕಕ್ಕೆ ರಸೀದಿ ಕೊಡುತ್ತಿಲ್ಲ
ಜಯನಗರ ಈಸ್ಟ್‌ ಎಂಡ್ ಡಿ ಮುಖ್ಯರಸ್ತೆಯಲ್ಲಿ ಒಳಚರಂಡಿ ಸಂಪರ್ಕ ಕಲ್ಪಿಸುತ್ತಿದ್ದಾರೆ. ಇದಕ್ಕಾಗಿ ₹ 1500 ಪಡೆಯುತ್ತಿದ್ದಾರೆ. ರಸೀದಿ ಮಾತ್ರ ಕೊಡುತ್ತಿಲ್ಲ. ಏಕೆ ಹೀಗೆ ಎಂದು ಕೇಳಿದರೆ ನಿಮಗ್ಯಾಕೆ ಎನ್ನುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಶೀಘ್ರ ಇತ್ತ ಗಮನ ಹರಿಸಬೇಕು.
– ನೊಂದ ಸಾರ್ವಜನಿಕರು

ಚರಂಡಿ ಸರಿಪಡಿಸಿ
ತಿಗಳರಪಾಳ್ಯದ ಬಹುತೇಕ ಚರಂಡಿಗಳು ನಿರ್ವಹಣೆ ಕೊರತೆ ಕಾರಣ ಕಟ್ಟಿಕೊಂಡಿವೆ. ನೀರು ಕೊಳೆತು ದುರ್ನಾತ ಬೀರುತ್ತಿದೆ. 5 ವರ್ಷದಿಂದ ಇದೇ ಪರಿಸ್ಥಿತಿ ಹಲವು ಬಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
–ನೊಂದ ಜನರು, ಪೀಣ್ಯ 2ನೇ ಹಂತ

*
ರಸ್ತೆ ಸರಿಪಡಿಸಿ
ಇಟ್ಟಮಡು ಭುವನೇಶ್ವರಿ ನಗರದ 5ನೇ ಮುಖ್ಯರಸ್ತೆ ಸಂಪೂರ್ಣ ಹಾಳಾಗಿವೆ. ಹಲವು ವರ್ಷದಿಂದ ಈ ರಸ್ತೆಗಳು ಟಾರ್ ಕಂಡಿಲ್ಲ. ಜನರು ಕೆಸರಿನಲ್ಲಿ ಜಾರಿ ಬೀಳುತ್ತಾರೆ. ಎಷ್ಟೋ ಸಲ ಲಾರಿಗಳೇ ಇಲ್ಲಿ ಕೆಸರಿನಲ್ಲಿ ಸಿಲುಕಿದ ಉದಾಹರಣೆಗಳಿವೆ.
– ಅಜಯ್, ಇಟ್ಟಮಡು

*
ನಿಲ್ಲದ ಬಸ್
ಟೌನ್‌ಹಾಲ್‌ಗೆ ತೆರಳಲೆಂದು ಲಾಲ್‌ಬಾಗ್‌ ಬಸ್ ನಿಲ್ದಾಣದಲ್ಲಿ ಜುಲೈ 12ರಂದು ಮಧ್ಯಾಹ್ನ 11.30ರ ಸಮಯದಲ್ಲಿ ಕಾಯುತ್ತಿದ್ದೆ. ಪ್ರಯಾಣಿಕರು ಕೈ ಅಡ್ಡ ಹಾಕಿದರೂ ರೂಟ್‌ ಸಂಖ್ಯೆ 342ರ (ಬಸ್‌ ಸಂಖ್ಯೆ KA 01-FA-1897) ಚಾಲಕ ಬಸ್ ನಿಲ್ಲಿಸದೇ ತೆರಳಿದರು. ಲಾಲ್‌ಬಾಗ್ ನಿಲ್ದಾಣದಲ್ಲಿ ಬಸ್‌ ನಿಲ್ಲಿಸಬೇಕು ಎಂದು ಚಾಲಕರಿಗೆ ಅಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಕೋರುತ್ತೇವೆ.
- ನೊಂದ ಪ್ರಯಾಣಿಕರು

ದೀಪದ ಕೆಳಗೆ ಕತ್ತಲು
ಇದು ಯಾವುದೋ ಹಳ್ಳಿ ರಸ್ತೆಯಲ್ಲ. ನಮ್ಮ ಕೆಪಿಟಿಸಿಎಲ್ ಮುಖ್ಯ ಕಚೇರಿ   ಎದುರಿನ ರಸ್ತೆ ಇದು. ಕಾವೇರಿ ಭವನದ ಮುಂದೆ ಇರುವ ಅಂಬೇಡ್ಕರ್‌ ರಸ್ತೆ ಪ್ರತಿ ರಾತ್ರಿ ಕತ್ತಲಲ್ಲಿ ಮುಳುಗಿರುತ್ತದೆ. ಸನಿಹದಲ್ಲೇ ಮೆಟ್ರೊ ನಿಲ್ದಾಣವೂ ಇದೆ. ನೂರಾರು ಮಂದಿ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಅತ್ತ ಕೆ.ಆರ್.ವೃತ್ತದ  ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.
–ಚಕ್ರಧರ ರಾಜು

*
ಜನರಿಗೆ ತೊಂದರೆ ತಪ್ಪಲಿ
ರಸ್ತೆತಡೆ ಮತ್ತು ಮೆರವಣಿಗೆಗಳು ನಗರದಲ್ಲಿ ಮಾಮೂಲಾಗಿದೆ. ಇದರಿಂದ ನಗರ ಮತ್ತು ಇತರೆಡೆಗಳಲ್ಲಿ ಜನರಿಗೆ ಬಹು ತೊಂದರೆಯಾಗಿದೆ. ಇದ್ದಕ್ಕಿದ್ದಂತೆ ತಮಗೆ ಇಷ್ಟ ಬಂದ ಪ್ರಮುಖ ರಸ್ತೆ ಹಾಗೂ ಜನನಿಬಿಡ ಸ್ಥಳಗಳಲ್ಲಿ ರಸ್ತೆ ತಡೆ–ಮೆರವಣಿಗೆಗಳನ್ನು ಹಮ್ಮಿಕೊಂಡು ಗಂಟೆಗಟ್ಟಲೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ಸಂಚಾರ ನಿಲ್ಲಿಸಿಬಿಡುತ್ತಾರೆ.

ಇದರಿಂದ ತುರ್ತು ಕೆಲಸಗಳಿಗೆ ಹಾಜರಾಗಲು ಹಾಗೂ ನಿರ್ದಿಷ್ಟ ಸಮಯದಲ್ಲಿ ಇರಲೇಬೇಕಾಗುವ ಶುಭ ಅಶುಭ ಕಾರ್ಯಗಳಲ್ಲಿ ಭಾಗಿಯಾಗಲಾಗದೆ ಪರಿತಪಿಸಬೇಕಾಗುತ್ತದೆ.

ಬೆಂಗಳೂರು– ಮೈಸೂರು ಹಾಗೂ ಬೆಂಗಳೂರು– ತುಮಕೂರು ರಸ್ತೆಗಳಲ್ಲಿ ವಾಹನ ಸಂಚಾರ ನಿಂತರೆ ಆಗುವ ತೊಂದರೆ ಅಷ್ಟಿಷ್ಟಲ್ಲ.
ದಯಮಾಡಿ ಈ ರೀತಿ ರಸ್ತೆ ಬಂದ್‌–ಮೆರವಣಿಗೆ ಮಾಡಲು ಪ್ರೇರೇಪಿಸುವವರು ಜನರಿಗೆ ಯಾವ ರೀತಿಯ ತೊಂದರೆಯೂ ಆಗದಂತೆ, ಒಂದು ನಿರ್ದಿಷ್ಟ ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿ ಸಂಬಂಧಿಸಿದವರ ಗಮನ ಸೆಳೆದು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲಿ.
–ಎ.ಕೆ.ಅನಂತಮೂರ್ತಿ, ಬೆಂಗಳೂರು

ತಂಗುದಾಣ ನಿರ್ಮಾಣವಾಗಲಿ
ಬಿಎಂಟಿಸಿ ಬಸ್‌ಗಳ ನಿಲುಗಡೆಗಾಗಿ ನಗರದ ಹಲವೆಡೆ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಬಿಬಿಎಂಪಿ ಈ ತಂಗುದಾಣಗಳಿಗೆ ಜಾಹೀರಾತಿನ ಮೆರುಗು ನೀಡಿದೆ. ಆದರೆ ಹಲವು ಬಸ್‌ ನಿಲ್ದಾಣದಲ್ಲಿ ಜನರು ತಂಗುದಾಣಗಳಿಲ್ಲದೆ ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇಂಥ ಸ್ಥಳಗಳನ್ನು ಗುರುತಿಸಿ ಶೀಘ್ರ ತಂಗುದಾಣಗಳನ್ನು ನಿರ್ಮಿಸಬೇಕು.
–ಎಚ್‌.ಬಿ. ವಿಜಯಕುಮಾರ್‌
*
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಫೀಡರ್ ಸೇವೆ ಅಗತ್ಯ
ರಾಮಮೂರ್ತಿನಗರದಿಂದ ಬೈಯಪ್ಪನಹಳ್ಳಿ ಮೆಟ್ರೊ ರೈಲು ನಿಲ್ದಾಣಕ್ಕೆ ಬಸ್ ಸಂಪರ್ಕ ಸರಿಯಾಗಿಲ್ಲ. ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಪ್ರಯಾಣಿಕರು ಅನಿವಾರ್ಯವಾಗಿ ಆಟೊಗಳಲ್ಲಿ ಹೋಗಬೇಕಾಗಿದೆ. ಘಟಕ 24 ಹಾಗೂ 29ರಿಂದ ಫೀಡರ್ ಬಸ್ ಸೌಕರ್ಯ ಕಲ್ಪಿಸಲು ಬಿಎಂಟಿಸಿ ಅಧಿಕಾರಿಗಳು ಗಮನ ಹರಿಸಬೇಕು.
- ಡಿ.ಎಸ್‌.ಚಂದ್ರಕುಮಾರ್‌

*
ಬೀದಿ ಕಾಮಣ್ಣರ ಕಾಟ
ಜೆ.ಪಿ.ನಗರ 4ನೇ ಹಂತ 16ನೇ ಅಡ್ಡರಸ್ತೆಯ ಮೆಡಿಕಲ್ ಸೆಂಟರ್ ಮತ್ತು ಬೇಕರಿ ಸಮೀಪ ಬೀದಿ ಕಾಮಣ್ಣರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ. ಗಾಂಜಾ ಸೇದಿ ಅದರ ಹೊಗೆಯನ್ನು ರಸ್ತೆಯಲ್ಲಿ ಓಡಾಡುವ ಯುವತಿಯರ ಮುಖದ ಹತ್ತಿರಕ್ಕೆ ಬಂದು ಬಿಡುತ್ತಾರೆ. ಕೇಳಿದರೆ ಮೈ ಮುಟ್ಟಲು ಬರುತ್ತಾರೆ, ಕೊಲೆ ಬೆದರಿಕೆ ಹಾಕುತ್ತಾರೆ.

ಜೆ.ಪಿ.ನಗರ 4ನೇ ಹಂತದಲ್ಲಿ ಮೀಟರ್‌ ಬಡ್ಡಿ ದಂಧೆ ಜಾಸ್ತಿಯಾಗಿದೆ. ರಿಯಲ್‌ ಎಸ್ಟೇಟ್‌ ಏಜೆಂಟರು  ಎಂದು ಹೇಳಿಕೊಳ್ಳುವ ಅನೇಕರು ಮನೆ ಮಾಲೀಕರು ಮತ್ತು ಬಾಡಿಗೆದಾರರನ್ನು ವಂಚಿಸುತ್ತಿದ್ದಾರೆ. ಕಮಿಷನ್ ನೆಪದಲ್ಲಿ ಹೊರ ರಾಜ್ಯಗಳಿಂದ ಬರುವವರನ್ನು ಸುಲಿಗೆ ಮಾಡುತ್ತಿದ್ದಾರೆ.
ಬಡಾವಣೆಯಲ್ಲಿ ಪುಂಡರ ಹಾವಳಿಗೆ ಕಡಿವಾಣ ಹಾಕಬೇಕು.
–ಆರ್‌.ಹಶ್ಮಿಕಾ ಕೋದಂಡರಾಮು

*
ವೆಂಕಟೇಶ್ವರ ಲೇಔಟ್‌ಗೆ ಬಸ್‌ ಸಂಪರ್ಕ ಕಲ್ಪಿಸಿ
ಜಂಬೂ ಸವಾರಿ ದಿಣ್ಣೆಯಿಂದ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌.ಮಾರುಕಟ್ಟೆ, ಶಿವಾಜಿನಗರ ಕಡೆಗೆ ಪುಟ್ಟೇನಹಳ್ಳಿ ಮಾರ್ಗವಾಗಿ ಜೆ.ಪಿ.ನಗರ, ಜಯನಗರದ ಕಡೆಗೆ ಬಸ್ಸುಗಳು ಸಂಚರಿಸುತ್ತವೆ.

ಆದರೆ ಜಂಬೂ ಸವಾರಿ ದಿಣ್ಣೆ, ಸುರಭಿನಗರ, ನಾಯಕ್‌ ಲೇಔಟ್‌, ಶ್ರೀಮಾತಾ ಲೇಔಟ್‌, ವೆಂಕಟೇಶ್ವರ ಲೇಔಟ್‌ನ ನಿವಾಸಿಗಳು ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಟೆಂಪಲ್‌, ಹುಳಿಮಾವು ಹಾಗೂ ಕಾಳೇನ ಅಗ್ರಹಾರ, ಗೊಟ್ಟಿಗೆರೆ, ವೀವರ್‍ಸ್ ಕಾಲೋನಿ, ಬನ್ನೇರುಘಟ್ಟ ಕಡೆಗೆ ಹೋಗುವ ಉದ್ಯೋಗಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಸ್‌ನ ಸಂಪರ್ಕವೇ ಇಲ್ಲದಂತೆ ಆಗಿದೆ.

ದಿಣ್ಣೆಯಿಂದ ಹೊರಡುವ ಕೆಲವು ಬಸ್‌ಗಳನ್ನಾದರೂ ಬಿ.ಕೆ.ಸರ್ಕಲ್‌– ವೆಂಕಟೇಶ್ವರ ಲೇಔಟ್‌– ಲೊಯೊಲೊ ಶಾಲೆ ಮಾರ್ಗವಾಗಿ ಬನ್ನೇರುಘಟ್ಟ ರಸ್ತೆಗೆ ತಲುಪುವಂತೆ ಮಾರ್ಗ ಬದಲಿಸಬೇಕು.
– ವಿ.ಹೇಮಂತ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT