ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಹೊಂಡದ ಒಳಗೊ, ರಸ್ತೆಯಲ್ಲಿ ಹೊಂಡವೊ

Last Updated 1 ಅಕ್ಟೋಬರ್ 2012, 7:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸುಮಾರು ಮೂರು ವಾರಗಳ ನಂತರ ಬೆಳಿಗ್ಗೆ ಮತ್ತು ಸಂಜೆ ವೇಳೆ ಮತ್ತೆ ಮಳೆ ಸುರಿಯತೊಡಗಿದ್ದು, ನಗರ ನಿವಾಸಿಗಳಿಗೆ ಖುಷಿ ಉಂಟು ಮಾಡಿದೆ. ಬಿಸಿಲಿನ ಬವಣೆಯಿಂದ ತಪ್ಪಿಸಿಕೊಂಡು ತಂಪಾದ ವಾತಾವರಣ ಅನುಭವಿಸುತ್ತಿದ್ದಾರೆ.
 
ಆದರೆ ರಸ್ತೆಯಲ್ಲಿ ಮತ್ತು ರಸ್ತೆಬದಿ ಪಾದಚಾರಿ ಮಾರ್ಗಗಳಲ್ಲಿ ನಡೆಯುವಾಗ ಮಾತ್ರ ಪಡಿಪಾಟಲು ಪಡುತ್ತಿದ್ದಾರೆ. ಸಣ್ಣಪುಟ್ಟ ಹೊಂಡಗಳಾಗಿ ರೂಪುಗೊಂಡಿರುವ ಹದಗೆಟ್ಟ ರಸ್ತೆಗಳಲ್ಲಿ ಓಡಾಡಿ ಮೈಯೆಲ್ಲ ಕೆಸರು ಮಾಡಿಕೊಳ್ಳುತ್ತಿದ್ದಾರೆ.

ಸಂತೆ ಮಾರುಕಟ್ಟೆ ಬೀದಿ, ಜಿಲ್ಲಾ ಕ್ರೀಡಾಂಗಣ ರಸ್ತೆ, ವಾಪಸಂದ್ರ, ಹೊಸ ಬಸ್ ನಿಲ್ದಾಣ ಬಡಾವಣೆ ಮುಂತಾದ ಕಡೆ ಓಡಾಡಲು ಭಯಪಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಇರುವ ಹೊಂಡಗಳು, ತಗ್ಗು- ದಿಣ್ಣೆಗಳು ಕಂಡು ಆತಂಕ ವ್ಯಕ್ತಪಡಿಸುವ ಅವರು, ಕೆಸರಾದ ರಸ್ತೆಯಲ್ಲಿ ಒಂದೊಂದೇ ಹೆಜ್ಜೆಯಿಟ್ಟುಕೊಂಡು ಜಾಗರೂಕತೆಯಿಂದ ನಡೆಯಬಹುದು. ಆದರೆ ವಾಹನಗಳಲ್ಲಿ ಪ್ರಯಾಣಿಸಿದರೆ ಮಾತ್ರ ಪರಿಸ್ಥಿತಿ ದುಸ್ತರವಾಗುತ್ತದೆ. ದ್ವಿಚಕ್ರ ವಾಹನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಜಾರಿ ಬೀಳುವುದಷ್ಟೆ ಬಾಕಿ~ ಎನ್ನುತ್ತಾರೆ.

`ಹದಗೆಟ್ಟ ರಸ್ತೆಗಳ ದುಃಸ್ಥಿತಿ ಬಗ್ಗೆ ಸಂಬಂಧಪಟ್ಟವರಿಗೆ ದೂರುಗಳನ್ನು ನೀಡಿ ಸಾಕಾಗಿದೆ. ಒಬ್ಬರ ಮೇಲೊಬ್ಬರು ಜವಾಬ್ದಾರಿ ವರ್ಗಾಯಿಸುವ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆ ಹೊರತು ಜನರ ಬಗ್ಗೆ ಮಾತ್ರ ಕಾಳಜಿ ತೋರುವುದಿಲ್ಲ. ಈ ಪರಿಸ್ಥಿತಿ ಹಲವು ವರ್ಷಗಳಿಂದ ಇದ್ದು, ಯಥಾಸ್ಥಿತಿ ಮುಂದುವರಿದಿದೆ. ಹಲವು ಸಂದರ್ಭಗಳಲ್ಲಿ ಇದು ಜಿಲ್ಲಾ ಕೇಂದ್ರವೋ ಅಥವಾ ಸೌಕರ್ಯವಂಚಿತ ಪಟ್ಟಣವೊ ಎಂಬಂತೆ ಭಾಸವಾಗುತ್ತದೆ~ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

`ಬಿ.ಬಿ.ರಸ್ತೆಯಿಂದ ಜಿಲ್ಲಾ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹಲವು ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಇತರ ಸಂದರ್ಭಗಳಲ್ಲಿ ಸಚಿವರು, ಶಾಸಕರು ಮತ್ತು ಗಣ್ಯರು ಬರುತ್ತಾರೆ ಎಂಬ ಏಕೈಕ ಕಾರಣಕ್ಕೆ ಜೆಲ್ಲಿಕಲ್ಲುಗಳ ಪುಡಿ ಸುರಿದು ರಸ್ತೆಯನ್ನು ತಾತ್ಕಾಲಿಕವಾಗಿ ಸಿದ್ಧಪಡಿಸಲಾಗುತ್ತದೆ. ಮಾರನೇ ದಿನವೇ ಆ ರಸ್ತೆ ಮತ್ತೆ ದುಃಸ್ಥಿತಿಗೆ ಮರಳಿರುತ್ತದೆ~ ಎಂದು ರಸ್ತೆ ಬದಿಯ ಮಳಿಗೆದಾರ ವೆಂಕಟೇಶ್ `ಪ್ರಜಾವಾಣಿ~ಗೆ ತಿಳಿಸಿದರು.

`ರಸ್ತೆ ಅವ್ಯವಸ್ಥೆ ಮತ್ತು ಸೌಕರ್ಯಗಳ ಕೊರತೆ ಬಗ್ಗೆ ಜಿಲ್ಲಾಧಿಕಾರಿಯನ್ನು ದೂರಿದರೆ, ಇದಕ್ಕೆ ನಗರಸಭೆ ಹೊಣೆ ಎಂಬ ಉತ್ತರ ಸಿಗುತ್ತದೆ. ಶಾಸಕರಿಗೆ ಅಹವಾಲು ಸಲ್ಲಿಸಿದರೆ, ದುರಸ್ತಿ ಕಾಮಗಾರಿ ಮಾಡಬೇಕಿರುವ ನಗರಸಭೆ ನರಕಸಭೆಯಾಗಿ ಮಾರ್ಪಟ್ಟಿದೆ ಎಂಬ ವ್ಯಂಗ್ಯಭರಿತ ಉತ್ತರ ದೊರೆಯುತ್ತದೆ. ನಗರಸಭೆ ಕಚೇರಿಯಲ್ಲಿ ನಮ್ಮ ಸಮಸ್ಯೆಗಳನ್ನು ಆಲಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಕಾಲಕ್ಕೆ ಸಿಗುವುದಿಲ್ಲ. ನಾವು ನೆಮ್ಮದಿಯಿಂದ ಬದುಕುವುದಾದರೂ ಹೇಗೆ~ ಎಂದು ಅವರು ಪ್ರಶ್ನಿಸಿದರು.

`ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನಗರಸಭೆ ವಿರುದ್ಧ ಕ್ರಮ ಜರುಗಿಸಿ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಂತೆ ಯಾಕೆ ಸೂಚಿಸುತ್ತಿಲ್ಲ. ನಗರಸಭೆ ಕಾರ್ಯನಿರ್ವಹಣೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು. ನಗರಸಭೆ ಯೋಜನೆ, ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಅವುಗಳ ಸಮರ್ಪಕ ಜಾರಿಗೆ ಯಾಕೆ ಕಠಿಣ ಕ್ರಮ ಜರುಗಿಸಬಾರದು~ ಎಂದು ಹಿರಿಯ ನಾಗರಿಕ ರಂಗಸ್ವಾಮಿ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT