ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳ ತುರ್ತು ದುರಸ್ತಿಗಾಗಿ ಜಿಲ್ಲೆಗೆ ರೂ 1.80 ಕೋಟಿ ಬಿಡುಗಡೆ

Last Updated 18 ಜನವರಿ 2012, 8:00 IST
ಅಕ್ಷರ ಗಾತ್ರ

ಶಿವಮೊಗ್ಗ: ಮಳೆಯಿಂದಾಗಿ ಹಾಳಾಗಿರುವ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗ್ರಾಮೀಣ ರಸ್ತೆಗಳ ತುರ್ತು ದುರಸ್ತಿಗೆ ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡಿದ ್ಙ 1.80 ಕೋಟಿ ಅನುದಾನವನ್ನು ಕಿಲೋಮೀಟರ್‌ವಾರು ಹಂಚಿಕೆ ಮಾಡಲು ಮಂಗಳವಾರ ನಡೆದ ಜಿ.ಪಂ. ವಿಶೇಷ ಸಭೆ ತೀರ್ಮಾನಿಸಿತು.

ಬಿಡುಗಡೆಯಾದ ಒಟ್ಟಾರೆ ಅನುದಾನದಲ್ಲಿ ನಕ್ಸಲ್‌ಬಾಧಿತ ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕುಗಳಿಗೆ ತಲಾ ಶೇ. 10ರಷ್ಟು ಹಣ ಮೀಸಲಿರಿಸಿ ಉಳಿಕೆ ್ಙ 162.08 ಲಕ್ಷ ಅನುದಾನವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ತುಂಬಾ ಹಾಳಾಗಿರುವ ಗ್ರಾಮೀಣ ಸಂಪರ್ಕ ರಸ್ತೆ, ಸೇತುವೆ, ಮೋರಿ ಇತ್ಯಾದಿಗಳ ತುರ್ತು ದುರಸ್ತಿಗಾಗಿ ಹಂಚಿಕೆ ಮಾಡಲಾಗಿದ್ದ ಪ್ರಸ್ತಾವನೆಗೆ ವಿಶೇಷ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾದ ಶುಭಾ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅನುದಾನ ಹಂಚಿಕೆ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಜಿ.ಪಂ. ಪ್ರತಿಪಕ್ಷದ ನಾಯಕ ಕಲಗೋಡು ರತ್ನಾಕರ್, ಅನುದಾನ ಹಂಚಿಕೆ ಕುರಿತು ಮಾತನಾಡುತ್ತಾ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಈ ವರ್ಷ ಬಾರಿ ಮಳೆಯಾಗಿದ್ದು, ರಸ್ತೆಗಳು ತುಂಬಾ ಹಾಳಾಗಿರುವುದರಿಂದ ಈ ತಾಲ್ಲೂಕುಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಬಂದಿರುವ ಹಣವನ್ನು ತಾಲ್ಲೂಕುವಾರು ವಿತರಣೆ ಮಾಡುವುದು ನ್ಯಾಯಸಮ್ಮತವಲ್ಲ.
 
ಶಿಕಾರಿಪುರ ಹಾಗೂ ಸೊರಬ ತಾಲ್ಲೂಕುಗಳಿಗೆ ನಂಜುಂಡಪ್ಪ ವರದಿ ಅನ್ವಯ ಈಗಾಗಲೇ ವಿಶೇಷ ಅನುದಾನ ಬಂದಿದೆ. ಜತೆಗೆ, ವಿಶೇಷ ಘಟಕ ಯೋಜನೆಯಡಿ ಅನುದಾನ ಬಂದಿದೆ. ಇದಲ್ಲದೇ,ಎರಡು ತಾಲ್ಲೂಕಿನಿಂದಲೇ ಮುಖ್ಯಮಂತ್ರಿ ಆಗಿದ್ದಾರೆ. ಸಂಸದರಾಗಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಈ ಎರಡು ತಾಲ್ಲೂಕಿಗೆ ಬೇರೆ ಬೇರೆ ಮೂಲಗಳಿಂದ ವಿಶೇಷ ಅನುದಾನ ಬಂದಿರುವುದರಿಂದ ಈ ಎರಡು ತಾಲ್ಲೂಕನ್ನು ಹೊರತುಪಡಿಸಿ, ಉಳಿದ ತಾಲ್ಲೂಕುಗಳಿಗೆ ಮಾತ್ರ ಅನುದಾನ ನೀಡಬೇಕು ಎಂದು ಒತ್ತಾಯಿಸಿದಾಗ ತೀರ್ಥಹಳ್ಳಿ ಭಾಗದ ಸದಸ್ಯರಾದ ಹಾರೋಗುಳಿಗೆ ಪದ್ಮನಾಭ, ಸುಂದರೇಶ್, ಯಲ್ಲಪ್ಪ ಬೆಂಬಲಿಸಿದರು.

ಕಲಗೋಡು ರತ್ನಾಕರ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿದ ಶಿಕಾರಿಪುರ ಹಾಗೂ ಸೊರಬ ತಾಲ್ಲೂಕಿನ ಸದಸ್ಯರಾದ ರುದ್ರಪ್ಪ ದಾನೇರಿ, ಈಶ್ವರಪ್ಪ, ಬಂಗಾರಿನಾಯ್ಕ, ಗೀತಾ ಮಲ್ಲಿಕಾರ್ಜುನ್ ಅವರು ನಂಜುಂಡಪ್ಪ ವರದಿ ಅನ್ವಯ ಈ ಎರಡು ತಾಲ್ಲೂಕುಗಳು ಹಿಂದುಳಿದವೆಂದು ಗುರುತಿಸಿರುವುದರಿಂದ ಅನುದಾನ ಬಂದಿದೆ.

ಅದಕ್ಕೂ ಈ ಅನುದಾನಕ್ಕೂ ಹೋಲಿಕೆ ಬೇಡ. ಎಲ್ಲ ಸದಸ್ಯರಿಗೂ ಸಮಾನವಾಗಿ ಹಂಚಿಕೆ ಮಾಡಿ ಎಂದು ಒತ್ತಾಯಿಸಿದರು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್‌ನಾಯ್ಕ ಇದಕ್ಕೆ ದನಿಗೂಡಿಸಿದರು.

ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯರಾದ ಷಡಾಕ್ಷರಿ, ಉಷಾ ಸತೀಶ್‌ಗೌಡ ಮಾತನಾಡಿ, ಭದ್ರಾವತಿ ತಾಲ್ಲೂಕಿಗೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ಈವರೆಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲವಾದ್ದರಿಂದ ಭದ್ರಾವತಿ ತಾಲ್ಲೂಕಿಗೆ ಹೆಚ್ಚಿನ ಅನುದಾನ ಕೊಡಿ. ಇಲ್ಲವೇ ತಾಲ್ಲೂಕುವಾರು ಸಮಾನವಾಗಿ ಹಂಚಿಕೆಮಾಡಿ ಎಂದು ಸಲಹೆ ನೀಡಿದರು.          
                                      
ಸದಸ್ಯರ ಎಲ್ಲಾ ವಾದ- ವಿವಾದಗಳನ್ನು ಆಲಿಸಿದ ಅಧ್ಯಕ್ಷೆ ಮಲೆನಾಡು ತಾಲ್ಲೂಕುಗಳಾದ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೋರಿದರು. ಆದರೆ, ಸದಸ್ಯರ ಸಮ್ಮತಿ ದೊರೆಯದ ಕಾರಣ ನಕ್ಸಲ್ ಬಾಧಿತ ತಾಲ್ಲೂಕುಗಳಿಗೆ ತಲಾ ಶೇ. 10ರಷ್ಟು ಹಣವನ್ನು ಕಾದಿರಿಸಿ ಉಳಿಕೆ ಹಣವನ್ನು ಕಿಲೋ ಮೀಟರ್ ರಸ್ತೆವಾರು ಹಂಚಿಕೆ ಮಾಡಲು ಪ್ರಸ್ತಾವನೆ ಮಂಡಿಸಿದಾಗ ಸಭೆ ಸರ್ವಾನುಮತದಿಂದ ಅನುಮೋದಿಸಿತು.

ತಾಲ್ಲೂಕುವಾರು ಹಂಚಿಕೆ ಅನ್ವಯ ಸಾಗರ ತಾಲ್ಲೂಕಿಗೆ ್ಙ 36 ಲಕ್ಷ, ಹೊಸನಗರಕ್ಕೆ ್ಙ 30 ಲಕ್ಷ, ಸೊರಬಕ್ಕ್ಙೆ 15 ಲಕ್ಷ, ಶಿಕಾರಿಪುರಕ್ಕೆ ್ಙ 12 ಲಕ್ಷ, ಶಿವಮೊಗ್ಗಕ್ಕೆ ್ಙ 16.08 ಲಕ್ಷ, ಭದ್ರಾವತಿಗೆ ್ಙ 22 ಲಕ್ಷ, ತೀರ್ಥಹಳ್ಳಿಗೆ ್ಙ 31 ಲಕ್ಷ ಅನುದಾನ ಮಂಜೂರಾಗಿದೆ. ಈ ಹಣವನ್ನು ತುಂಬಾ ಹಾಳಾಗಿರುವ ಗ್ರಾಮೀಣ ಸಂಪರ್ಕ ರಸ್ತೆ, ಮೋರಿ ಇತ್ಯಾದಿಗಳ ದುರಸ್ತಿಗಾಗಿ ವೆಚ್ಚ ಮಾಡಲು ಸರ್ಕಾರ ಸೂಚಿಸಿದೆ ಎಂದು ಸಿಇಒ ಡಾ.ಸಂಜಯ್ ಬಿಜ್ಜೂರು ತಿಳಿಸಿದರು.

 ಸಭೆಯಲ್ಲಿ ಉಪಾಧ್ಯಕ್ಷ ಹುಣಸವಳ್ಳಿ ಗಂಗಾಧರಪ್ಪ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿಗಳಾದ ಹನುಮನರಸಯ್ಯ, ರಾಜ್‌ಗೋಪಾಲ್, ಮುಖ್ಯ ಯೋಜನಾಧಿಕಾರಿ ಶಂಕರಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT